Friday, 22nd November 2024

ನಟ ದರ್ಶನ್​ಗೆ ಕಾರಾಗೃಹದಲ್ಲಿ ರಾಜ್ಯಾತಿಥ್ಯ: 7 ಅಧಿಕಾರಿಗಳ ಅಮಾನತು

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​ಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ದಲ್ಲಿ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಗೃಹ ಇಲಾಖೆಯಿಂದ 7 ಅಧಿಕಾರಿ ಗಳನ್ನು ಅಮಾನತು ಮಾಡಲಾಗಿದೆ.

ದರ್ಶನ್​ಗೆ ರಾಜ್ಯಾತಿಥ್ಯ ನೀಡಿರುವ ಸಂಬಂಧ ಫೋಟೋ ವೈರಲ್​ ಆದ ಬೆನ್ನಲ್ಲೇ ಎಲ್ಲೆಡೆ ಪೊಲೀಸ್​ ಇಲಾಖೆ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್,​ ಈ ಘಟನೆ ಸಂಬಂಧ 7 ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ನನಗೆ ನಿನ್ನ ಸುದ್ದಿ ಬಂತು. ಆಗ ಫೋಟೋ ವೈರಲ್ ಆಗ್ತಿತ್ತು. ತಕ್ಷಣ ಡಿಜಿಯವರ ಜೊತೆ ಮಾತನಾಡಿದೆ ಮತ್ತು ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿಕೊಟ್ಟಿ ದ್ದೆವು. ಸದ್ಯ ಈ ಪ್ರಕರಣದಲ್ಲಿ ಏಳು ಜನ ಅಧಿಕಾರಿಗಳನ್ನು ಸಸ್ಪೆಂಟ್ ಮಾಡಿದ್ದೇವೆ. ಶರವಣ, ಶರಣಬಸವ, ಪ್ರಭು ಎಸ್, ಎಲ್.ಎಸ್.ತಿಪ್ಪೇಸ್ವಾಮಿ, ಶ್ರೀಕಾಂತ್ ತಳವಾರ್, ಹೆಡ್ ವಾರ್ಡರ್ಸ್ ವೆಂಕಪ್ಪ, ಸಂತೋಷ್ ಕುಮಾರ್ ನರಸಪ್ಪ ಅವರನ್ನು ಅಮಾನತು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಘಟನೆಯ ಬಗ್ಗೆ ವರದಿ ಕೇಳಿದ್ದೇನೆ. ಡಿಜಿಯವರು ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಇಂತಹ ಘಟನೆ ನಡೆಯಬಾರದು. ಯಾರು ಅವಕಾಶ ಕೊಟ್ಟಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಹಿರಿಯ ಅಧಿಕಾರಿಗಳನ್ನು ಅಲ್ಲಿಂದ ಸ್ಥಳಾಂತರ ಮಾಡುತ್ತೇವೆ. ಆ ಜಾಗಕ್ಕೆ ಬೇರೆ ಹಿರಿಯ ಅಧಿಕಾರಿಗಳನ್ನು ಹಾಕುತ್ತೇವೆ. ಆಂತರಿಕ ವರದಿ ಬಂದ ಮೇಲೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ.

ಒಂದು ಕೈಯಲ್ಲಿ ಕಾಫಿ ಕಪ್​ ಹಾಗೂ ಇನ್ನೊಂದು ಕೈಯಲ್ಲಿ ಸಿಗರೇಟ್​ ಹಿಡಿದುಕೊಂಡು, ಕುರ್ಚಿಯ ಮೇಲೆ ಆರಾಮಾಗಿ ಕುಳಿತು ರೌಡಿ ವಿಲ್ಸನ್‌ ಗಾರ್ಡನ್‌ ಜತೆ ದರ್ಶನ್​ ಮಾತನಾಡುತ್ತಿರುವ ದೃಶ್ಯ ವೈರಲ್​ ಆಗಿರುವ ಫೋಟೋದಲ್ಲಿದೆ. ಇದರ ಬೆನ್ನಲ್ಲೇ ದರ್ಶನ್​, ರೌಡಿಶೀಟರ್​ ಮಗನ ಜತೆ ಜೈಲಿನಿಂದಲೇ ದರ್ಶನ್​ ವಿಡಿಯೋ ಕಾಲ್​ ಮೂಲಕ ಮಾತನಾಡಿರುವ ವಿಡಿಯೋ ಸಹ ಲೀಕ್​ ಆಗಿದ್ದು, ಎಲ್ಲೆಡೆ ವೈರಲ್​ ಆಗುತ್ತಿದೆ. ದರ್ಶನ್​ ಜೈಲು ಸೇರಿ ಎರಡು ತಿಂಗಳಿಗೂ ಹೆಚ್ಚು ಸಮಯ ಆಗಿದೆ. ಆಗಿನಿಂದಲೂ ಜೈಲಿನಲ್ಲಿ ದರ್ಶನ್​ಗೆ ಎಲ್ಲವೂ ಆರಾಮಾಗಿ ಸಿಗುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು.

ವೇಲು ಎಂಬ ಕೈದಿ ಈ ಫೋಟೋವನ್ನು ಜೈಲಿನಿಂದ ತೆಗೆದು, ತನ್ನ ಪತ್ನಿಗೆ ಕಳುಹಿಸಿದ್ದ. ಆ ಬಳಿಕ ವೈರಲ್​ ಆಗಿದೆ ಎಂದು ಮಾಧ್ಯಮ ತಿಳಿಸಿದೆ.