ಮುಂಬೈ: ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಬಡ್ಡಿದರ ಕಡಿತವು ಸನ್ನಿಹಿತವಾಗಿದೆ ಎಂದು ಸೂಚಿಸಿದ ನಂತರ ಬಲವಾದ ಜಾಗತಿಕ ಸೂಚನೆಗಳ ನಡುವೆ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ಏರಿಕೆ ಕಂಡವು.
ಬಿಎಸ್‌ಇ ಸೆನ್ಸೆಕ್ಸ್ 631.97 ಪಾಯಿಂಟ್ಸ್ ಏರಿಕೆಗೊಂಡು 81,718.18 ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 50 186.10 ಪಾಯಿಂಟ್ಸ್ ಏರಿಕೆ ಕಂಡು 25,000 ಗಡಿ ದಾಟಿದೆ. ನಿಫ್ಟಿ 50 ಕಳೆದ ಏಳು ಸೆಷನುಗಳಲ್ಲಿ ಸುಮಾರು 3% ಏರಿಕೆಯಾಗಿದೆ. ಇದು ಸೆಪ್ಟೆಂಬರಿನಲ್ಲಿ ಯುಎಸ್ ದರ ಕಡಿತದ ಬಗ್ಗೆ ಹೆಚ್ಚುತ್ತಿರುವ ಊಹಾಪೋಹಗಳು ಮತ್ತು ಬಲವಾದ ದೇಶೀಯ ಒಳಹರಿವಿನಿಂದ ಪ್ರೇರಿತವಾಗಿದೆ.
ಶುಕ್ರವಾರ ಜಾಕ್ಸನ್ ಹೋಲ್ ಆರ್ಥಿಕ ವಿಚಾರ ಸಂಕಿರಣದಲ್ಲಿ ಮಾತನಾಡಿದ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್, “ನೀತಿಯನ್ನು ಸರಿಹೊಂದಿಸುವ ಸಮಯ ಬಂದಿದೆ” ಎಂದು ಹೇಳಿದರು.
ಯುಎಸ್ ದರ ಕಡಿತವು ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಗೆ ಹಣವನ್ನು ಹರಿಸಬಹುದು. ಇದು ಭಾರತೀಯ ಷೇರುಗಳಲ್ಲಿ ಪ್ರಸ್ತುತ ರ್ಯಾಲಿಯನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಸೂಚಿಸುತ್ತಾರೆ.