Tuesday, 26th November 2024

ಹಾಥರಸ್​ ಪ್ರಕರಣ: ಸಿಬಿಐ ತನಿಖೆ ಮೇಲೆ ಅಲಹಾಬಾದ್ ಹೈಕೋರ್ಟ್ ನಿಗಾ- ಸುಪ್ರೀಂ

ನವದೆಹಲಿ: ಉತ್ತರ ಪ್ರದೇಶದ ಹಾಥರಸ್​ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಸಿಬಿಐ ನಡೆಸುವ ತನಿಖೆಯ ಮೇಲೆ ಅಲಹಾಬಾದ್ ಹೈಕೋರ್ಟ್ ನಿಗಾವಹಿಸಲಿದೆ ಎಂದು ಸುಪ್ರೀಂ ಕೋರ್ಟ್​ ಮಂಗಳವಾರ ಹೇಳಿದೆ.

ಕೇಸ್​ಗೆ ಸಂಬಂಧಿಸಿ ಸಂತ್ರಸ್ತೆಯ ಕುಟುಂಬದವರಿಗೆ ಮತ್ತು ಸಾಕ್ಷಿಗಳಿಗೆ ಭದ್ರತೆ ಒದಗಿಸುವುದರಿಂದ ಹಿಡಿದು ತನಿಖೆಯ ಪ್ರತಿ ಹಂತವನ್ನೂ ಕೋರ್ಟ್​ ಗಮನಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ಸಲ್ಲಿಸಲಾದ ಅರ್ಜಿಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಅದರ ವಿಚಾರಣೆ ಉತ್ತರ ಪ್ರದೇಶದಲ್ಲೇ ನಡೆಸಬೇಕೋ ಅಥವಾ ಹೊರಗೆ ನಡೆಸಬೇಕೋ ಎಂಬು ದನ್ನು ತೀರ್ಮಾನಿಸಲಾಗುವುದು ಎಂದು ಕೋರ್ಟ್ ಹೇಳಿದೆ.

ಉತ್ತರ ಪ್ರದೇಶದಲ್ಲಿ ನ್ಯಾಯೋಚಿತ ವಿಚಾರಣೆ ಸಾಧ್ಯವಿಲ್ಲ ಮತ್ತು ಸಿಬಿಐ ತನಿಖೆಯ ಸ್ಥಿತಿಗತಿ ವರದಿಯನ್ನೂ ಅಲಹಾಬಾದ್ ಹೈಕೋರ್ಟ್​ಗೆ ಸಲ್ಲಿಸುವ ಕಾರಣ ಪ್ರಕರಣದ ವಿಚಾರಣೆಯಲ್ಲಿ ವಿಶ್ವಾಸ ಮೂಡದೆಂದು ಪಿಐಎಲ್​ಗಳು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಲ್ಪಟ್ಟಿದ್ದವು.

ಹಾಥರಸ್​ನಲ್ಲಿ ಸೆಪ್ಟೆಂಬರ್ 14ರಂದು 19 ವರ್ಷದ ದಲಿತ ಯುವತಿಯ ಮೇಲೆ ಮೇಲ್ವರ್ಗದ ನಾಲ್ವರು ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 29ರಂದು ದೆಹಲಿಯ ಸಫ್ದರ್​ಜಂಗ್​ ಹಾಸ್ಪಿಟಲ್​ನಲ್ಲಿ ಮೃತಪಟ್ಟಿದ್ದಳು. ಸೆಪ್ಟೆಂಬರ್ 30ರ ರಾತ್ರಿ ಆಕೆಯ ಮನೆಯ ಸಮೀಪವೇ ಅಂತ್ಯಸಂಸ್ಕಾರ ನಡೆದಿತ್ತು.