Friday, 20th September 2024

Sheetal Devi: ಚೊಚ್ಚಲ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದು ಭಾವುಕರಾದ ಶೀತಲ್ ದೇವಿ

ಪ್ಯಾರಿಸ್‌: ಸೋಮವಾರ ನಡೆದಿದ್ದ ಪ್ಯಾರಾಲಿಂಪಿಕ್ಸ್‌ ಮಿಶ್ರ ತಂಡ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತದ ಶೀತಲ್ ದೇವಿ(Sheetal Devi) ಮತ್ತು ರಾಕೇಶ್ ಕುಮಾರ್(Rakesh Kumar) ಜೋಡಿ ಇಟಲಿಯ ಎಲಿಯೊನೊರಾ ಸರ್ತಿ ಮತ್ತು ಮ್ಯಾಟಿಯೊ ಬೊನಾಸಿನಾ ವಿರುದ್ಧ 156-155 ಅಂಕಗಳ ಅಂತರದಲ್ಲಿ ಜಯಗಳಿಸುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಚೊಚ್ಚಲ ಪ್ಯಾರಾಲಿಂಪಿಕ್ಸ್‌ ಪ್ರಯತ್ನದಲ್ಲೇ ಪದಕ ಜಯಿಸಿದ ಸಂತಸದಲ್ಲಿ ಭಾವುಕರಾದ 17 ವರ್ಷದ ಶೀತಲ್ ದೇವಿ ಕಣ್ಣೀರು ಸುರಿದರು. ಈ ವಿಡಿಯೊ ವೈರಲ್‌ ಆಗಿದೆ.

ಆರ್ಚರಿಯಲ್ಲಿ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ 2ನೇ ದಕ ಇದಾಗಿದೆ. ಮೂರು ವರ್ಷಗಳ ಹಿಂದೆ ಟೋಕಿಯೊ ಆವೃತ್ತಿಯ ಗೇಮ್ಸ್‌ನಲ್ಲಿ ಹರ್ವಿಂದರ್ ಸಿಂಗ್ ವೈಯಕ್ತಿಕ ಕಂಚಿನ ಪದಕ ಗೆದ್ದಿದ್ದರು. ಶೀತಲ್ ಅವರು ಚತುರ್ವಾರ್ಷಿಕ ಪ್ರದರ್ಶನದಲ್ಲಿ ಬಿಲ್ಲುಗಾರಿಕೆ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅರ್ಹತಾ ಸುತ್ತಿನಲ್ಲಿ ವಿಶ್ವ ದಾಖಲೆಯ ಅಂಕ ಗಳಿಸಿ ಅಗ್ರ ಶ್ರೇಯಾಂಕ ಪಡಿದಿದ್ದ ಶೀತಲ್‌-ರಾಕೇಶ್‌ ಜೋಡಿ ಸೆಮಿಫೈನಲ್‌ನಲ್ಲಿ ಇರಾನ್‌ನ ಹೆಮ್ಮೆಟಿ ಫತೇಮೆ ಮತ್ತು ನೋರಿ ಹಾಡಿ ಜೋಡಿಯ ಎದುರು ಶೂಟ್‌ ಆಫ್‌ನಲ್ಲಿ ಸೋಲು ಕಂಡಿದ್ದರು. ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಶೀತಲ್ ದೇವಿ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೇವಲ ಒಂದು ಅಂಕದ ಅಂತರದಿಂದ ಸೋಲು ಕಂಡಿದ್ದರು.

https://x.com/KirenRijiju/status/1830664056241594825

ಶೀತಲ್‌ ದೇವಿ (Sheetal Devi) ಪಾರಾ ಆರ್ಚರ್ ತನ್ನ ಒಂದು ಕಾಲಿಂದ ಬಿಲ್ಲು ಹಿಡಿದು ಇನ್ನೊಂದು ಕಾಲಿನ ಬೆರಳುಗಳ ನಡುವೆ ಬಾಣವನ್ನು ಫಿಕ್ಸ್ ಮಾಡಿ ಗುರಿಯೆಡೆಗೆ ದೃಷ್ಟಿ ನೆಟ್ಟು ಬಾಣ ಬಿಟ್ಟರು ಎಂದರೆ ಅದು ನೇರವಾಗಿ ಗುರಿ ಮುಟ್ಟುವುದನ್ನು ನೋಡುವುದೇ ಚೆಂದ. ಆರ್ಚರಿ ಕ್ರೀಡೆಯಲ್ಲಿ ಅಪ್ರತಿಮ ಸಾಧನೆಗೈದ ಸಾಧಕಿಯೆಂದೇ ಹೇಳಬಹುದು. ತನ್ನ ಅಚಲ, ದೃಢ ಮನಸ್ಸು ಮತ್ತು ಕಠಿನ ಅಭ್ಯಾಸದಿಂದ ಅದ್ಭುತ ನಿರ್ವಹಣೆ ತೋರುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ಬಿಲ್ಗಾರ್ತಿ ಶೀತಲ್ ದೇವಿ (17 ವರ್ಷ) ಈ ಬಾರಿಯ ಪ್ಯಾರಾಲಿಂಪಿಕ್ಸ್‌ ಭಾರತ ತಂಡದ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟು. 2 ಕೈಗಳಿಲ್ಲದ ಅವರು ಕಾಲಿನಿಂದಲೇ ಬಿಲ್ಲು–ಬಾಣ ಹಿಡಿದು ಸ್ಪರ್ಧಿಸುತ್ತಾರೆ.  ಹುಟ್ಟುವಾಗಲೇ ಫೊಕೊಮೀಲಿಯ ಕಾಯಿಲೆಗೆ ತುತ್ತಾಗಿದ್ದರು. ಈ ಕಾಯಿಲೆಯಿದ್ದವರಿಗೆ ಕೈ ಅಥವಾ ಕಾಲುಗಳ ಬೆಳವಣಿಗೆ ಇರುವುದಿಲ್ಲ. ಶೀತಲ್‌ ಅವರಿಗೆ ಎರಡೂ ಕೈಗಳು ಬೆಳೆಯದೇ ಹಾಗೇ ಜೀವನ ಸಾಗಬೇಕಾಯಿತು. 2019 ಅವರ ಬಾಳ್ವೆಯ ಮಹತ್ತರ ಘಟ್ಟವಾಗಿ ಪರಿಣಮಿಸಿತಲ್ಲದೇ ಕ್ರೀಡಾಕ್ಷೇತ್ರದಲ್ಲಿ ಬೆಳಗಲು ನಾಂದಿಯಾಯಿತು. ಭಾರತೀಯ ಸೇನೆ ಕಿಶ್‌ವಾರ್‌ನಲ್ಲಿ ಆಯೋಜಿಸಿದ ಯುವ ಕ್ರೀಡಾಕೂಟದ ವೇಳೆ ಶೀತಲ್‌ ಅವರ ಚುರುಕಿನ ಓಟ, ಕ್ರೀಡಾಸ್ಫೂರ್ತಿಯಿಂದ ಸೇನೆಯ ಅಧಿಕಾರಿಗಳು ಅಕರ್ಷಿತರಾದರಲ್ಲದೇ ಆಕೆಯ ಭವಿಷ್ಯದ ಬಗ್ಗೆ ಚಿಂತಿಸಿ ಶೈಕ್ಷಣಿಕ, ವೈದ್ಯಕೀಯ ನೆರವಿಗೆ ಸಹಾಯಹಸ್ತ ಚಾಚಿದರು. ಕಳೆದ ವರ್ಷ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ವೈಯಕ್ತಿಕ ಕಾಂಪೌಂಡ್‌ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿ ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದಿದ್ದರು.