Friday, 22nd November 2024

DJ Music: ಡಿಜೆ ಬಳಕೆ ಅವಕಾಶ ಗಣೇಶ ಚತುರ್ಥಿಗೂ ಇಲ್ಲ, ಈದ್ ಮಿಲಾದ್‌ಗೂ ಇಲ್ಲ

dj music

ಬೆಂಗಳೂರು : ರಾಜ್ಯದಲ್ಲಿ ಗೌರಿ ಗಣೇಶ ಹಬ್ಬ (Ganesh Chaturthi) ಹಾಗೂ ಈದ್ ಮಿಲಾದ್ (Eid milad) ಆಚರಣೆ ಪೂರ್ಣಗೊಳ್ಳುವವರೆಗೆ ರಾಜ್ಯದಲ್ಲಿ ಡಿಜೆ ಮ್ಯೂಸಿಕ್‌ ಸಿಸ್ಟಂ (DJ Music) ಬಳಕೆ ನಿಷೇಧಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ದಿನಾಂಕ: 07.09.2024 ರಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ನಂತರ, ವಿವಿಧ ದಿನಗಳಂದು ವಿಸರ್ಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಹಾಗೂ ದಿನಾಂಕ: 16.09.2024 ರಂದು ರಾಜ್ಯಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಆಚರಿಸಲಿದ್ದು, ಈ ಸಂಬಂಧ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ಸಂದರ್ಭಗಳಲ್ಲಿ ಡಿಜೆ ಸೌಂಡ್‌ ಸಿಸ್ಟಂಗಳನ್ನು ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರೊಂದಿಗೆ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ, ಸೌಹಾರ್ದತೆ & ಶಾಂತಿ ಕಾಪಾಡುವ ಸಲುವಾಗಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆಗಳು ಪೂರ್ಣಗೊಳ್ಳುವವರೆಗೆ ಡಿಜೆ ಸಿಸ್ಟಂ ನಿಷೇಧಿಸುವಂತೆ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಲು ರಾಜ್ಯ ಸರ್ಕಾರ ಸೂಚಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ ನಗರಗಳಲ್ಲಿ ಪೈಪೋಟಿಯಿಂದ ಡಿಜೆ ಸಿಸ್ಟಂ ಅಳವಡಿಸಿ ತಡರಾತ್ರಿಯವರೆಗೂ ಸಂಗೀತ ಹಾಕುವುದು ರೂಢಿಯಾಗಿಬಿಟ್ಟಿದೆ. ಗಣೇಶ ಚತುರ್ಥಿಯ ಸಂದರ್ಭದ ವಿಸರ್ಜನಾ ಮೆರವಣಿಗೆಗಳಲ್ಲಿ ಡಿಜೆ ಶಬ್ದದಿಂದಾಗಿ ಹಲವರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆಗಳು ಕೂಡ ವರದಿಯಾಗಿವೆ. ರೋಗಿಗಳು, ವಯಸ್ಕರು ಹಾಗೂ ಪುಟ್ಟ ಮಕ್ಕಳು ಈ ಭಯಾನಕ ಶಬ್ದ ಪರಿಣಾಮ ಸಂಕಷ್ಟ ಅನುಭವಿಸುವುದು ಕಂಡುಬಂದಿದೆ. ಇದೆಲ್ಲದರ ಹಿನ್ನೆಲೆಯಲ್ಲಿ, ಡಿಜೆ ಬಳಕೆಯನ್ನು ನಿಷೇಧಿಸಲು ಸಾರ್ವಜನಿಕರು ಒತ್ತಾಯಿಸಿದ್ದರು. ಕಳೆದ ಬಾರಿಯೇ ಹಲವು ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿದ್ದರು. ಇದನ್ನು ಉಲ್ಲಂಘಿಸಿದ ಸಂಘಟನೆಗಳ ಮೇಲೆ ಕಾನೂನು ಕ್ರಮ ಕೂಡ ಕೈಗೊಳ್ಳಲಾಗಿತ್ತು.

ಈ ಸುದ್ದಿ ಓದಿ: CM Siddaramaiah: ಸಿಎಂ ಸಿದ್ದರಾಮಯ್ಯಗೆ ಕ್ಷಮೆ ಕೋರಿದ ಶಾಸಕ ಅರವಿಂದ ಬೆಲ್ಲದ