Thursday, 19th September 2024

GST Council Meeting: ಮುಂದಿನ ವಾರ 54ನೇ ಜಿಎಸ್‌ಟಿ ಕೌನ್ಸಿಲ್‌ ಸಭೆ-ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ?

GST Council Meeting

ನವದೆಹಲಿ: ಮುಂದಿನ ವಾರ 54ನೇ ಜಿಎಸ್‌ಟಿ ಕೌನ್ಸಿಲ್ ಸಭೆ(GST Council Meeting) ನಡೆಯಲಿದ್ದು, ನಕಲಿ ಸರಕು ಮತ್ತು ಸೇವಾ ತೆರಿಗೆ ನೋಂದಣಿ ವಿರುದ್ಧ ಕ್ರಮ, ಆನ್‌ಲೈನ್‌ ಗೇಮಿಂಗ್‌ ಮೇಲೆ ತೆರಿಗೆ ಸೇರಿದಂತೆ ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಸೆ. 9ರಂದು 54ನೇ ಜಿಎಸ್‌ಟಿ ಸಭೆ ನಡೆಯಲಿದೆ. ಸಭೆಯಲ್ಲಿ ಎರಡು ಗುಂಪಿನ ಮಂತ್ರಿಗಳ (GoM) ವರದಿ ಬಗ್ಗೆ ಚರ್ಚಿಸಲಾಗುತ್ತದೆ. ಒಂದು ದರ ನಿಗದಿಪಡಿಸುದು, ಇನ್ನೊಂದು ರಿಯಲ್ ಎಸ್ಟೇಟ್. ಇನ್ನು ಈ ಸಭೆಯಲ್ಲಿ ವಲಯಗಳ ಮೇಲೆ ವಿಧಿಸಲಾಗುವ ತೆರಿಗೆ ಸ್ಥಿತಿಗತಿ ಮತ್ತು ತೆರಿಗೆ ದರದಲ್ಲಿ ಬದಲಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಅದೂ ಅಲ್ಲದೇ ಹಣಕಾಸು ಕಾಯ್ದೆ 2024ರ ಭಾಗವಾಗಿರುವ  ಜಿಎಸ್‌ಟಿ ಕಾನೂನು ತಿದ್ದುಪಡಿ ಬಗ್ಗೆ ಕೌನ್ಸಿಲ್‌ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಇನ್ನು ಇದೇ ವೇಳೆ ಕಾರು ಮತ್ತು ದ್ವಿಚಕ್ರ ಸೀಟ್‌ಗಳ ಮೇಲಿನ ಜಿಎಸ್ಟಿ ಬಗ್ಗೆ ಸ್ಪಷ್ಟನೆ ಸಿಗಲಿದೆ.

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಫ್ಲೆಕ್ಸ್-ಇಂಧನ ವಾಹನಗಳ ಮೇಲಿನ ಜಿಎಸ್‌ಟಿಯನ್ನು 12% ಕ್ಕೆ ಇಳಿಸುವ ಬಗ್ಗೆ ರಾಜ್ಯ ಹಣಕಾಸು ಸಚಿವರು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ. ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದಂತೆ, ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳು ಜಿಎಸ್‌ಟಿ ಕೌನ್ಸಿಲ್ ಮುಂದೆ ವರದಿಯನ್ನು ಪ್ರಸ್ತುತಪಡಿಸುತ್ತಾರೆ. ವರದಿಯು ಅಕ್ಟೋಬರ್ 1, 2023 ರ ಮೊದಲು ಮತ್ತು ನಂತರ ಆನ್‌ಲೈನ್ ಗೇಮಿಂಗ್ ವಲಯದಿಂದ GST ಆದಾಯ ಸಂಗ್ರಹವನ್ನು ಒಳಗೊಂಡಿರುತ್ತದೆ.

ಬಿಡಿಒ ಇಂಡಿಯಾದ ಪರೋಕ್ಷ ತೆರಿಗೆಯ ಪಾಲುದಾರ ಮತ್ತು ನಾಯಕ ಗುಂಜನ್ ಪ್ರಭಾಕರನ್ ಮಾತನಾಡಿ, “ಆರು ತಿಂಗಳ ಅವಧಿಯ ನಂತರ ಗೇಮಿಂಗ್ ದರ ರಚನೆಯ ಪರಿಶೀಲನೆಯ ಬಗ್ಗೆ ಸರ್ಕಾರವು ಪ್ರಸ್ತಾಪಿಸಿದ್ದರೂ, ಅದರ ಕುರಿತ ನಿರ್ಧಾರವನ್ನು ಕಳೆದ ಸಭೆಯಲ್ಲೂ ತೆಗೆದುಕೊಂಡಿರಲಿಲ್ಲ ಎಂದಿದ್ದಾರೆ. ಮತ್ತೊಂದೆಡೆ ಆರೋಗ್ಯ ವಿಮೆಗಳ ಮೇಲಿನ ಜಿಎಸ್‌ಟಿ ದರ ವಿನಾಯಿಗೆ ಮೇಲಿಂದ ಮೇಲೆ ಆಗ್ರಹ ಕೇಳಿ ಬರುತ್ತಲೇ ಇದೆ. ಹೀಗಾಗಿ ಮುಂಬರುವ ಸಭೆಯಲ್ಲಿ ಜಿಎಸ್‌ಟಿ ಕೌನ್ಸಿಲ್ ಇದನ್ನು ಪರಿಗಣಿಸುವ ಸಾಧ್ಯತೆಯಿದೆ.

ಅಕ್ಟೋಬರ್ 1, 2023 ರಿಂದ, ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಕ್ಯಾಸಿನೊಗಳಿಗೆ ಶೇ. 28 GST ವಿಧಿಸಲಾಗಿತ್ತು. ಅದಕ್ಕೂ ಮೊದಲು, ಅನೇಕ ಆನ್‌ಲೈನ್ ಗೇಮಿಂಗ್ ಕಂಪನಿಗಳು 28% ಜಿಎಸ್‌ಟಿಯನ್ನು ಪಾವತಿಸುತ್ತಿರಲಿಲ್ಲ.  GST ಕೌನ್ಸಿಲ್ ಆಗಸ್ಟ್ 2023 ರಲ್ಲಿ ತನ್ನ ಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು 28% ತೆರಿಗೆಯನ್ನು ಪಾವತಿಸುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿತ್ತು ಮತ್ತು ತರುವಾಯ ತೆರಿಗೆ ನಿಬಂಧನೆಯನ್ನು ಸ್ಪಷ್ಟಪಡಿಸಲು ಕೇಂದ್ರ GST ಕಾನೂನಿಗೆ ತಿದ್ದುಪಡಿ ಮಾಡಲಾಯಿತು.

ನಕಲಿ ಜಿಎಸ್‌ಟಿ ನೋಂದಣಿ ಮೇಲೆ ನಿಗಾ

ನಕಲಿ ಜಿಎಸ್‌ಟಿ ನೋಂದಣಿ ಬಗ್ಗೆಯೂ ಕೌನ್ಸಿಲ್‌ ನಿಗಾ ಇರಿಸಿದ್ದು, ಈ ಬಾರಿ ಸಭೆಯಲ್ಲಿ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೆತ್ತಿಕೊಳ್ಳು ನಿರೀಕ್ಷೆ ಇದೆ. ಸಭೆಯಲ್ಲಿ ಜಿಎಸ್‌ಟಿ ವಂಚನೆಯ ಒಟ್ಟು ಮೊತ್ತವನ್ನು ಕೌನ್ಸಿಲ್ ಮುಂದೆ ಮಂಡಿಸಲಾಗುವುದು. ಆಗಸ್ಟ್ 16, 2024 ರಿಂದ ಅಕ್ಟೋಬರ್ 15, 2024 ರವರೆಗೆ ಅನುಮಾನಸ್ಪದ ಜಿಎಸ್‌ಟಿ ನೋಂದಣಿ ಪತ್ತೆಹಚ್ಚುವುದು ಮತ್ತು ಈ ನಕಲಿ ಬಿಲ್ಲರ್‌ಗಳನ್ನು ಹೊರಹಾಕಲು ಅಗತ್ಯವಾದ ಪರಿಶೀಲನೆ ಮತ್ತು ಹೆಚ್ಚಿನ ಪರಿಹಾರ ಕ್ರಮಗಳನ್ನು ನಡೆಸುವ ಗುರಿಯನ್ನು ಹೊಂದಿದೆ.

ಈ ಸುದ್ದಿಯನ್ನೂ ಓದಿ:GST collection: ಜಿಎಸ್‌ಟಿ ಸಂಗ್ರಹದಲ್ಲಿ 10% ಏರಿಕೆ, ಕರ್ನಾಟಕಕ್ಕೆ ದ್ವಿತೀಯ ಸ್ಥಾನ