ರಾವಲ್ಪಿಂಡಿ: ಬಾಂಗ್ಲಾದೇಶ ಕ್ರಿಕೆಟ್ ತಂಡ (Bangladesh Cricket Team) ಇತಿಹಾಸ ಬರೆದಿದೆ. ಇಲ್ಲಿನ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾನವನ್ನು 6 ವಿಕೆಟ್ ಗಳಿಂದ ಮಣಿಸಿ ದಾಖಲೆ ನಿರ್ಮಿಸಿದೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಪ್ರವಾಸಿ ತಂಡಕ್ಕೆ 185 ರನ್ಗಳ ಗುರಿಯನ್ನು ಪಾಕಿಸ್ತಾನ ನಿಗದಿಪಡಿಸಿತ್ತು. ಆ ಸವಾಲು ಮೀರಿ ದಾಖಲೆ ವಿಜಯೋತ್ಸವ ಆಚರಿಸಿತು. ಮೊದಲ ಟೆಸ್ಟ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧದ ಗೆಲುವಿನ ಉತ್ಸಾಹದಲ್ಲಿದ್ದ ಬಾಂಗ್ಲಾ ತಂಡವು ಈ ಪಂದ್ಯ ಗೆಲ್ಲುವ ಮೂಲಕ ಪಾಕಿಸ್ತಾನದ ನೆಲದಲ್ಲಿ ಅಸಾಮಾನ್ಯ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.
ಝಾಕಿರ್ ಹಸನ್ (40), ನಜ್ಮುಲ್ ಹುಸೇನ್ ಶಾಂಟೊ (38) ಮತ್ತು ಮೊಮಿನುಲ್ ಹಕ್ (34) ಪಾಕಿಸ್ತಾನ ನೆಲದಲ್ಲಿ ಅಭೂತಪೂರ್ವ ಗೆಲುವಿನ ಸವಿ ಸವಿಯಲು ಬಾಂಗ್ಲಾದೇಶ ತಂಡಕ್ಕೆ ನೆರವಾದರು. ಈ ಗೆಲುವಿನೊಂದಿಗೆ ಬಾಂಗ್ಲಾದೇಶವು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಟೆಸ್ಟ್ ಸರಣಿ ಗೆದ್ದುಕೊಂಡಂತಾಗಿದೆ. ಮಳೆಯಿಂದಾಗಿ ಮೊದಲ ದಿನ ಆಟ ಸಂಪೂರ್ಣ ರದ್ದಾದ ಹಿನ್ನೆಲೆಯಲ್ಲಿ ಪಂದ್ಯವು ಫಲಿತಾಂಶ ನೀಡುತ್ತದೆ ಎಂದು ಅನೇಕರು ನಿರೀಕ್ಷಿಸಿರಲಿಲ್ಲ. ಆದಾಗ್ಯೂ, ನಾಲ್ಕು ದಿನಗಳ ಅವಧಿಯಲ್ಲಿ ಅತ್ಯುತ್ತಮ ಪಂದ್ಯ ನಡೆದು ಬಾಂಗ್ಲಾ ಗೆಲುವಿನ ನಗೆ ಬೀರಿತು.
ಐದನೇ ದಿನದಂದು ಆರಂಭಿಕ ಆಟಗಾರರಾದ ಝಾಕಿರ್ ಹಸನ್ (31*) ಮತ್ತು ಶದ್ನಮ್ ಇಸ್ಲಾಂ (9*) ಕ್ರೀಸ್ ನಲ್ಲಿದ್ದರು. ನಾಲ್ಕನೇ ದಿನ , ಬಾಂಗ್ಲಾದೇಶ ಏಳು ಓವರ್ ಗಳಲ್ಲಿ 42 ರನ್ ಬಾರಿಸಿ ವಿಕೆಟ್ ಕಳೆದುಕೊಂಡಿರಲಿಲ್ಲ. ಅವರಿಬ್ಬರೂ ಗೆಲುವಿಗೆ ಮುನ್ನುಡಿ ಬರೆದರು. ಬಾಂಗ್ಲಾದೇಶದ ಆರಂಭಿಕರು ಹತ್ತು ಓವರ್ ಗಳಲ್ಲಿ 50 ರನ್ ಗಳ ಜೊತೆಯಾಟ ಆಡಿದರು. ಇದು ಪಾಕಿಸ್ತಾನದ ಡ್ರೆಸ್ಸಿಂಗ್ ಕೋಣೆಯಲ್ಲಿ ತಲ್ಲಣ ಉಂಟುಮಾಡಿತು. ಅಂತೆಯೇ ಪ್ರವಾಸಿ ತಂಡಕ್ಕೆ ಗೆಲ್ಲಲು ಕೇವಲ 127 ರನ್‌ಗಳ ಅವಶ್ಯಕತೆಯಿತ್ತು. ಪಾಕಿಸ್ತಾನ ನಾಯಕ ಶಾನ್ ಮಸೂದ್ ವಿಕೆಟ್ ಪಡೆಯಲು ಯತ್ನಿಸಿದರೂ ಅದರಿಂದ ಉಪಯೋಗ ಆಗಲಿಲ್.
ಪಾಕ್ ತಂಡಕ್ಕೆ ನಿರಾಸೆ
ಮೊದಲ ಟೆಸ್ಟ್‌ನಲ್ಲಿ 10 ವಿಕೆಟ್‌ಗಳಿಂದ ಸೋಲನುಭವಿಸಿದ ನಂತರ ಬಲವಾದ ಪುನರಾಗಮನಕ್ಕೆ ಉತ್ಸುಕರಾಗಿದ್ದ ಪಾಕಿಸ್ತಾನ, ಸರಣಿಯ ಎರಡನೇ ಪಂದ್ಯದಲ್ಲಿ ನಿರೀಕ್ಷೆಗಳಿಗೆ ತಕ್ಕಂತೆ ಆಡಲು ವಿಫಲವಾಯಿತು. ಅದೇ ರೀತಿಯ ಬ್ಯಾಟಿಂಗ್ ಮತ್ತು ಬೌಲಿಂಗ್ ಸಮಸ್ಯೆಗಳು ಆತಿಥೇಯರ ಅವಕಾಶಗಳನ್ನು ಹಾನಿಗೊಳಿಸಿತು. ಮೂರು ವರ್ಷಗಳಲ್ಲಿ ತವರು ನೆಲದಲ್ಲಿ ಎರಡನೇ ಟೆಸ್ಟ್ ಸರಣಿ ವೈಟ್‌ವಾಶ್ ಮುಖಭಂಗ ಅನುಭವಿಸಿದರು. ಈ ಹಿಂದೆ 2022ರಲ್ಲಿ ಇಂಗ್ಲೆಂಡ್ ತಂಡದ ಪ್ರವಾಸ ಸರಣಿಯಲ್ಲಿ ಪಾಕಿಸ್ತಾನ ತಂಡ ತವರು ನೆಲದಲ್ಲಿ 0-3 ಅಂತರದ ಮುಖಭಂಗ ಅನುಭವಿಸಿತ್ತು.
ಎರಡನೇ ಟೆಸ್ಟ್‌ನಲ್ಲಿ ಸೈಮ್ ಅಯ್ಯೂಬ್, ಶಾನ್ ಮಸೂದ್ ಮತ್ತು ಆಘಾ ಸಲ್ಮಾನ್ ಅರ್ಧಶತಕಗಳನ್ನು ಗಳಿಸುವುದರೊಂದಿಗೆ ಪಾಕಿಸ್ತಾನವು ಮೊದಲ ಇನ್ನಿಂಗ್ಸ್ನಲ್ಲಿ 274 ರನ್‌ಗೆ ಆಲ್‌ಔಟ್ ಆಯಿತು. ಬಾಬರ್ ಅಜಮ್ (31), ಅಬ್ದುಲ್ಲಾ ಶಫೀಕ್ (0), ಸೌದ್ ಶಕೀಲ್ (16) ಮತ್ತು ಮೊಹಮ್ಮದ್ ರಿಜ್ವಾನ್ (29) ರನ್ ಗಳಿಸಲು ವಿಫಲರಾದರು.
ಈ ಸುದ್ದಿಯನ್ನೂ ಓದಿ: Virat Kohli : ಆರು ಎಸೆತಕ್ಕೆ 6 ಸಿಕ್ಸರ್ ಬಾರಿಸಿದ ಈ ಆಟಗಾರ ಕೊಹ್ಲಿಯ ಬಿಗ್ ಫ್ಯಾನ್
ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕೇವಲ 26 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದಾಗ್ಯೂ ಲಿಟನ್ ದಾಸ್ ಶತಕ ಬಾರಿಸುವುದರೊಂದಿಗೆ ಚೇತರಿಸಿಕೊಂಡಿಡಿತು. ಆಲ್‌ಔಟ್ ಆಗುವ ಮೊದಲು 262 ರನ್ ಗಳಿಸಿತು. ಬಳಿಕ ಪಾಕಿಸ್ತಾನ ತಂಡವನ್ನು ಬಾಂಗ್ಲಾದೇಶ 172 ರನ್‌ಗಳಿಗೆ ಆಲ್‌ಔಟ್ ಆಯಿತು.
ಪಾಕಿಸ್ತಾನ ನಿಜವಾಗಿಯೂ ತಮ್ಮ ಪ್ರಮುಖ ವೇಗಿ ಶಾಹೀನ್ ಶಾ ಅಫ್ರಿದಿ ಅವರನ್ನು ಈ ಪಂದ್ಯದಲ್ಲಿ ಕಳೆದುಕೊಂಡು ಸೋಲಿಗೆ ಒಳಗಾಯಿತು. ಮಗನ ಜನನದ ಕಾರಣ ಅವರು ಎರಡನೇ ಟೆಸ್ಟ್ ಗೆ ಆಯ್ಕೆಯಿಂದ ಹಿಂದೆ ಸರಿದ್ದರು. ಬಾಂಗ್ಲಾದೇಶದ ವಿರುದ್ಧದ ಸೋಲು ರಾಷ್ಟ್ರದ ಕ್ರಿಕೆಟ್ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ಉಳಿಯುತ್ತದೆ. ಪಾಕಿಸ್ತಾನಕ್ಕೆ ತವರು ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಬಾಂಗ್ಲಾದೇಶ ಪಾತ್ರವಾಗಿದೆ.