ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಗೌರಿ ಗಣೇಶ ಹಬ್ಬ (Ganesh Chaturthi) ಆಚರಿಸಲು ಊರಿಗೆ ಹೊರಟವರಿಗೆ ಖಾಸಗಿ ಬಸ್ಗಳು ದರ ಏರಿಕೆ (Bus Ticket prices) ಶಾಕ್ ನೀಡಿವೆ. ಸರ್ಕಾರಿ ಬಸ್ಗಳ ಸಂಖ್ಯೆ ಏರಿಸಿದ್ದರೂ ಅದು ಸಾಕಾಗುತ್ತಿಲ್ಲ. ಅಷ್ಟೊಂದು ರಶ್ ಇದೆ. ರೈಲುಗಳ ಟಿಕೆಟ್ಗಳು ತಿಂಗಳುಗಳ ಮೊದಲೇ ಬುಕ್ ಆಗಿವೆ. ಹೀಗಾಗಿ ಖಾಸಗಿ ಬಸ್ಸುಗಳ ಟಿಕೆಟ್ಗಳಿಗೂ ಹೇರಳವಾದ ಬೇಡಿಕೆ ಸೃಷ್ಟಿಯಾಗಿದೆ. ಇದೇ ಸಂದರ್ಭ ನೋಡಿಕೊಂಡು ಖಾಸಗಿ ಬಸ್ ಕಂಪನಿಗಳು ಬಸ್ ಟಿಕೆಟ್ ದರ ಒಂದಕ್ಕೆ ಎರಡು ಪಟ್ಟು ಏರಿಕೆ ಮಾಡಿವೆ.
ಗಣೇಶ ಚೌತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 1500 ಹೆಚ್ಚುವರಿ ಬಸ್ಸುಗಳನ್ನು ಬಿಟ್ಟಿದೆ. ಆದರೆ ಇದು ಎಲ್ಲಿಗೂ ಸಾಕಾಗದು. ಲಕ್ಷಾಂತರ ಮಂದಿ ಗಣೇಶ ಚೌತಿಯ ಸಂದರ್ಭದಲ್ಲಿ ಬೆಂಗಳೂರಿನಿಂದ ತಮ್ಮ ಊರಿಗೆ ಹಾಗೂ ಹಬ್ಬದ ನಂತರ ಮರಳಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ದೀಪಾವಳಿಯಂತೆ ಗಣೇಶ ಚೌತಿ ಕೂಡ ಇದೀಗ ಖಾಸಗಿ ಬಸ್ ಕಂಪನಿಗಳಿಗೆ ಹಣ ದುಡಿಯುವ ಸಮಯ ಎನಿಸಿಕೊಂಡಿದೆ.
ಸೆಪ್ಟೆಂಬರ್ 5ರಿಂದ 8ರ ವರೆಗೆ ಖಾಸಗಿ ಬಸ್ಗಳ ಟಿಕೆಟ್ ದರಗಳು ಹೀಗಿವೆ:
ಬೆಂಗಳೂರು-ಹಾವೇರಿ: 1550-1600 ರೂ.
ಬೆಂಗಳೂರು-ಗುಲ್ಬರ್ಗ: 1200-1800 ರೂ.
ಬೆಂಗಳೂರು-ಯಾದಗಿರಿ: 1100-1750 ರೂ.
ಬೆಂಗಳೂರು-ಹಾಸನ: 899-1800 ರೂ.
ಬೆಂಗಳೂರು-ಧಾರವಾಡ: 1200-3000 ರೂ.
ಬೆಂಗಳೂರು-ಚಿಕ್ಕಮಗಳೂರು: 900-1500 ರೂ.
ಬೆಂಗಳೂರು – ಯಲ್ಲಾಪುರ: 700 – 1600 ರೂ.
ಬೆಂಗಳೂರು-ದಾವಣಗೆರೆ: 900-2000 ರೂ.
ಹೆಚ್ಚಿನ ಕಡೆ ಬಸ್ ಟಿಕೆಟ್ ದರ ದುಪ್ಪಟ್ಟಾಗಿದೆ. ಬೇಡಿಕೆ ಹೆಚ್ಚು ಇದ್ದಲ್ಲಿ ಅದನ್ನೂ ಸಹ ಮೀರಿದೆ. ದರ ಏರಿಕೆ ಖಾಸಗಿ ಬಸ್ಗಳಿಗೆ ಸೀಮಿತವಾಗಿಲ್ಲ. ಸರ್ಕಾರಿ ಬಸ್ಗಳಲ್ಲೂ ಟಿಕೆಟ್ ದರ ಏರಿಸಲಾಗಿದೆ. ಸಾಮಾನ್ಯ ದಿನಗಳಿಗಿಂತ 300-400 ರೂಪಾಯಿ ದರವನ್ನು ಕೆಲ ಬಸ್ಗಳಿಗೆ ಏರಿಕೆ ಮಾಡಲಾಗಿದೆ.
KSRTC ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಸಾವಿರದ ಐನೂರಕ್ಕೂ ಹೆಚ್ಚುವರಿ ಬಸ್ಗಳನ್ನು ಬೇರೆ ಬೇರೆ ಊರುಗಳಿಗೆ ಬಿಟ್ಟಿದೆ. ರಾಜಧಾನಿಯ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ ತಿರುಪತಿ, ವಿಜಯವಾಡ, ಹೈದಾರಬಾದ್ಗೆ ಹೆಚ್ಚುವರಿ ಬಸ್ಗಳನ್ನು ಹಾಕಲಾಗಿದೆ.
ಈ ಸುದ್ದಿಯನ್ನೂ ಓದಿ: KSRTC Special Bus: ಗಣೇಶ ಚೌತಿಗೆ ಕೆಎಸ್ಆರ್ಟಿಸಿ ಗಿಫ್ಟ್, 1500 ಹೆಚ್ಚುವರಿ ಬಸ್