ಜೈಪುರ: ರಾಜಸ್ಥಾನದ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತೆ ಕೇಸರಿ ಬಣ್ಣದ ಸೈಕಲ್ ವಿತರಿಸಲು ಆರಂಭಿಸಿದೆ. ಈ ಮೂಲಕ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಸೆಡ್ಡು ನೀಡಿದೆ (Saffron Controversy). ಕಾಂಗ್ರೆಸ್ ಸರ್ಕಾರ ಬಣ್ಣ ಬದಲಾಯಿಸಿದ್ದ ಹಿನ್ನೆಲೆಯಲ್ಲಿ ಮತ್ತೆ ಅದನ್ನು ಕೇಸರಿ ಬಣ್ಣಕ್ಕೆ ಬಿಜೆಪಿ ಸರ್ಕಾರ ಬದಲಿಸಿದೆ. ಶಾಲಾ ಮಕ್ಕಳಿಗೆ ನೀಡಲಾಗುವ ಬೈಸಿಕಲ್ ಗಳು ಮತ್ತೆ ಕೇಸರಿ ಬಣ್ಣಕ್ಕೆ ತಿರುಗಲಿವೆ ಎಂದು ರಾಜ್ಯದ ಶಿಕ್ಷಣ ಸಚಿವರು ಬುಧವಾರ ಘೋಷಿಸಿದ್ದಾರೆ.
“ನಾವು ಕೇಸರಿ ಬಣ್ಣಕ್ಕೆ ಮರಳುತ್ತೇವೆ” ಎಂದು ಸಚಿವ ಮದನ್ ದಿಲಾವರ್ ಹೇಳಿಕೆ ನೀಡಿದ್ದಾರೆ. “ನಮ್ಮ ಹಿಂದಿನ ಅಧಿಕಾರಾವಧಿಯಲ್ಲಿ (ಹಿಂದಿನ ಕಾಂಗ್ರೆಸ್ ಸರ್ಕಾರ ಬರುವ ಮೊದಲು) ಬೈಸಿಕಲ್‌ಗಳಿಗೆ ಬಣ್ಣ ಕೇಸರಿಯಾಗಿತ್ತು, ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅದನ್ನು ಕಪ್ಪು ಬಣ್ಣಕ್ಕೆ ತಿರುಗಿಸಿತು. ನಾವು ಅದನ್ನು ಶೌರ್ಯದ ಬಣ್ಣವಾದ ಕೇಸರಿಗೆ ಮರಳಿಸುತ್ತಿದ್ದೇವೆ” ಎಂದು ದಿಲಾವರ್ ಹೇಳಿದ್ದಾರೆ. “ಇದು ದೇಶಭಕ್ತಿ ಮತ್ತು ಸೂರ್ಯೋದಯದ ಸಮಯದಲ್ಲಿ ಸೂರ್ಯನ ಬಣ್ಣ” ಎಂದು ಅವರು ಹೇಳಿದ್ದಾರೆ.
8 ಮತ್ತು 9 ನೇ ತರಗತಿಯ ಎಂಟು ಲಕ್ಷ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುವ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಗೊಂಡಿತ್ತು. ಶಾಲೆಯಿಂದ ಹೊರಗುಳಿಯುವುದನ್ನು ತಡೆಗಟ್ಟಲು ಈ ಯೋಜನೆ ಪ್ರಾರಂಭಿಸಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ವಿಶೇಷವಾಗಿ ದೂರದ ಪ್ರದೇಶಗಳಿಂದ ಬರುವ ಹುಡುಗಿಯರು ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಲಾಗಿತ್ತು. 133 ಕೋಟಿ ರೂಪಾಯಿ ಟೆಂಡರ್ ಕರೆದ ನಂತರ ಕಪ್ಪು ಬೈಸಿಕಲ್ ಗಳನ್ನು ಖರೀದಿಸಲಾಗಿತ್ತು. ಈಗ, ಕೇಸರಿ ಸೈಕಲ್‌ಗಳಿಗೆ ರಾಜ್ಯ 150 ಕೋಟಿ ರೂ. ವೆಚ್ಚ ಮಾಡುತ್ತಿದೆ.
ಸೈಕಲ್ ಗಳ ಬಣ್ಣದಿಂದ ಕಾಂಗ್ರೆಸ್‌ಗೆ ಯಾವುದೇ ಸಮಸ್ಯೆ ಇಲ್ಲ, ಆದರೆ ಅದನ್ನು ಬದಲಾಯಿಸುವುದರಿಂದ ಸರ್ಕಾರದ ಹಣ ಮತ್ತು ಸಮಯ ವ್ಯರ್ಥವಾಗುತ್ತದೆ ಎಂದು ಕಾಂಗ್ರೆಸ್ ನ ಪ್ರತಾಪ್ ಸಿಂಗ್ ಕಚಾರಿಯಾವಾಸ್ ಹೇಳಿದ್ದಾರೆ. ಸೈಕಲ್‌ಗಳನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲು ಸರ್ಕಾರ ಏಕೆ ಹಣ ಖರ್ಚು ಮಾಡುತ್ತಿದೆ? ಬಣ್ಣ ಇಲ್ಲಿ ಪ್ರಾಮುಖ್ಯವೇ ಅಲ್ಲ. ಉದ್ದೇಶವೇ ವಿದ್ಯಾರ್ಥಿಗಳಿಗೆ ನೀಡುವುದು. ನಾವು ಬಣ್ಣದಿಂದ ರಾಜಕೀಯ ಮಾಡುವುದಿಲ್ಲ. ನಮ್ಮ ಗಮನ ಅಭಿವೃದ್ಧಿ” ಎಂದು ಕಚಾರಿಯಾವಾಸ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Kolkata rape-murder case : ಆಸ್ಪತ್ರೆಗಳಿಗೆ ಕೊಟ್ಟಿರುವ ಭದ್ರತೆಗಳ ವರದಿ ಕೊಡಿ; ರಾಜ್ಯ ಸರ್ಕಾರಗಳಿಗೆ ಕೇಂದ್ರದ ನಿರ್ದೇಶನ
ಇದೇ ವೇಳೆ ಅಲ್ಲಿನ ಶಿಕ್ಷಣ ಇಲಾಖೆ ಮತ್ತೊಂದು ಕ್ರಮ ಕೈಗೊಂಡಿದೆ. ಅಕ್ಬರ್ ದಿ ಗ್ರೇಟ್” ಎಂದು ಕರೆಯುವ ಪುಸ್ತಕಗಳನ್ನು ಶಾಲೆಯಿಂದ ತೆಗೆಯಲು ನಿರ್ಧರಿಸಿದೆ. ಅಕ್ಬರ್ ಮಹಾರಾಣಾ ಪ್ರತಾಪ್ ಗಿಂತ ದೊಡ್ಡವನಾಗಿರಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ದಿಲಾವರ್ ಹೇಳಿದ್ದಾರೆ.
ಅಕ್ಬರ್ ಮತ್ತು ರಾಣಾ ಪ್ರತಾಪ್ ವಿವಾದವು ರಾಜಸ್ಥಾನದಲ್ಲಿ ಆಗಾಗ್ಗೆ ತಲೆ ಎತ್ತುತ್ತಿದೆ. ಮಹಾರಾಣಾ ಪ್ರತಾಪ್ ಅವರಿಗೆ ಇನ್ನಷ್ಟು ದೊಡ್ಡ ಬಿರುದು ನೀಡಬೇಕು. ಅಕ್ಬರ್‌ನನ್ನು “ದಿ ಗ್ರೇಟ್” ಎಂದು ಕರೆಯುವುದು ಸರಿಯಲ್ಲ ಎಂದು ಬಿಜೆಪಿ ಸರ್ಕಾರ ಒತ್ತಾಯಿಸಿದೆ. ಫೆಬ್ರವರಿ 15 ರಂದು ಸುಮಾರು 1.14 ಕೋಟಿ ಮಕ್ಕಳು ರಾಜಸ್ಥಾನದ ಶಾಲೆಗಳಲ್ಲಿ ಏಕಕಾಲದಲ್ಲಿ ಸೂರ್ಯ ನಮಸ್ಕಾರ ಮಾಡಿದ್ದರು. ಈ ವೇಳೆ ಶಿಕ್ಷಣ ಸಚಿವ ಮದನ್ ದಿಲಾವರ್ ಸುದ್ದಿಯಾಗಿದ್ದರು.