Thursday, 19th September 2024

Actor Darshan: ದರ್ಶನ್‌ ಗ್ಯಾಂಗ್‌ ಮುಂದೆ ಅಂಗಲಾಚುತ್ತಿರುವ ರೇಣುಕಾಸ್ವಾಮಿ ಕೊನೆ ಕ್ಷಣದ ಫೋಟೋ ವೈರಲ್‌

renukaswamy murder actor darshan

ಬೆಂಗಳೂರು: ನಟ ದರ್ಶನ್ (Actor Darshan) ಮತ್ತು ಗ್ಯಾಂಗ್‌ನಿಂದ ಪಟ್ಟಣಗೆರೆ ಶೆಡ್‌ನಲ್ಲಿ ದಾರುಣವಾಗಿ ಚಿತ್ರಹಿಂಸೆ ಅನುಭವಿಸಿ ಮೃತಪಟ್ಟ ರೇಣುಕಾಸ್ವಾಮಿಯ (Renukaswamy murder) ಅಂತಿಮ ಕ್ಷಣದ ಫೋಟೋಗಳನ್ನು ಆರೋಪಿಗಳ ಮೊಬೈಲ್‌ನಿಂದ ಪೊಲೀಸರು ರಿಟ್ರೀವ್‌ ಮಾಡಿದ್ದು, ಇದೀಗ ಮಾಧ್ಯಮಗಳಲ್ಲಿ ವೈರಲ್‌ (Viral photo) ಆಗುತ್ತಿದೆ.

ದರ್ಶನ್‌ ಆಂಡ್‌ ಗ್ಯಾಂಗ್‌ನಿಂದ ಕ್ರೂರವಾಗಿ ಹಲ್ಲೆಗೀಡಾಗಿ ಮೃತಪಟ್ಟ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಕೊನೆ ಕ್ಷಣದ ಫೋಟೋಗಳು ಪೊಲೀಸರಿಗೆ ಲಭ್ಯವಾಗಿವೆ. ಆರೋಪಿಗಳ ಮೊಬೈಲ್‌ನಿಂದ ರಿಟ್ರೀವ್ ಮಾಡಿದಾಗ ಫೋಟೋಗಳು ಸಿಕ್ಕಿದ್ದು, ಅದರಲ್ಲಿ ರೇಣುಕಾಸ್ವಾಮಿ ಕೈಮುಗಿದು ಕಣ್ಣೀರು ಸುರಿಸಿ ಅಂಗಲಾಚುತ್ತಿರುವ ಫೋಟೋ ಮತ್ತು ಆರೋಪಿಗಳಿಂದ ಹಲ್ಲೆಗೀಡಾಗಿ ಜೀವ ಬಿಡುವ ಹೊತ್ತಿನಲ್ಲಿ ಅನಾಥವಾಗಿ ಬಿದ್ದಿರುವ ಫೋಟೋಗಳು ಪೊಲೀಸರಿಗೆ ಸಿಕ್ಕಿದೆ. ಪಟ್ಟಣಗೆರೆ ಶೆಡ್​ನಲ್ಲಿ ಹಲ್ಲೆ ನಡೆದ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.

ಕೊಲೆಯಾದ ರೇಣುಕಾಸ್ವಾಮಿ ಫೋಟೋಗಳನ್ನು ಪ್ರಕರಣದಲ್ಲಿ A10 ಆರೋಪಿಯಾಗಿರುವ ವಿನಯ್ ಮೊಬೈಲ್​ನಲ್ಲಿ ಸೆರೆಹಿಡಿದಿದ್ದ. ಫೋಟೋ ಕ್ಲಿಕ್ಕಿಸಿ ಬಳಿಕ ಸ್ಮಾರ್ಟ್​ಫೋನ್​ನಿಂದ ಡಿಲೀಟ್ ಮಾಡಿದ್ದ. ಆದರೆ ವಿಧಿ ವಿಜ್ಞಾನ ತಂಡ (FSL) ಟೀಂ ಡಿಲೀಟ್ ಆದ ಫೋಟೋಗಳನ್ನ ​ರಿಟ್ರೀವ್ ಮಾಡಿದೆ. ವಿನಯ್ ಫೋನ್​​ನಲ್ಲಿದ್ದ 10ಕ್ಕೂ ಹೆಚ್ಚು ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ.

ಪ್ರಕರಣದ ಭೀಕರತೆಯನ್ನು ಒಂದೊಂದು ಫೋಟೋ ಕೂಡ ಬಿಚ್ಚಿಟ್ಟಿದೆ. ಘಟನೆ ನಡೆದ ದಿನದ ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ತೆಗೆದ ಫೋಟೋ ಇದಾಗಿದೆ. ದರ್ಶನ್ ಬರುವುದಕ್ಕೂ ಮುನ್ನ ಗ್ಯಾಂಗ್ ಒಂದು ಸುತ್ತು ಹಲ್ಲೆ ನಡೆಸಿತ್ತು. ಪಟ್ಟಣಗೆರೆ ಶೆಡ್​ನ ನೆಲದ ಮೇಲೆ ಬಿದ್ದಿರುವ ರೇಣುಕಾಸ್ವಾಮಿಯ ಒಂದು ಫೋಟೋ ಕೂಡ ಇದೆ. ಇದನ್ನು ಶೆಡ್​​ನ ನೌಕರನೊಬ್ಬ ತೆಗೆದಿದ್ದು, ವಿನಯ್‌ನ ಮೊಬೈಲ್‌ಗೆ ಕಳಿಸಿದ್ದಾನೆ. ಆ ವ್ಯಕ್ತಿಯನ್ನು ಪೊಲೀಸರು ಪ್ರತ್ಯಕ್ಷ ಸಾಕ್ಷಿ ಮಾಡಿಕೊಂಡಿದ್ದಾರೆ. ಪಕ್ಕದಲ್ಲಿ ನಿಂತ KA 51 AF 0454 ನಂಬರಿನ ಲಾರಿ ಕೂಡ ಇದಕ್ಕೆ ಸಾಕ್ಷಿಯಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ ಸೇರಿ 17 ಮಂದಿ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ 3,991 ಪುಟಗಳ ಆರೋಪ ಪಟ್ಟಿಯನ್ನು ನಿನ್ನೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ, ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು, ಫೋಟೋಗಳನ್ನು ಹಲವು ತಿಂಗಳುಗಳಿಂದ ಕಳುಹಿಸುತ್ತಿದ್ದ. ಈ ಕಾರಣಕ್ಕೆ ದರ್ಶನ್ ಸಿಟ್ಟಾಗಿ ಅವರ ನಿರ್ದೇಶನದಂತೆ ರೇಣುಕಾಸ್ವಾಮಿಯನ್ನು ಪುಸಲಾಯಿಸಿ ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತಂದು ಕ್ರೂರವಾಗಿ ಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದೋಷಾರೋಪಣ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬೆನ್ನಲ್ಲೇ ಈ ಪ್ರಕರಣದ ತ್ವರಿತ ವಿಚಾರಣೆಗೆ ಪೊಲೀಸರು ಪ್ರತ್ಯೇಕ ಕೋರ್ಟ್ ರಚಿಸಲು, ಸ್ಪೆಷಲ್ ಕೋರ್ಟ್ ಅಥವಾ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆಗೆ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌; ದರ್ಶನ್‌ ಆ್ಯಂಡ್‌ ಗ್ಯಾಂಗ್‌ ವಿರುದ್ಧ ಸಲ್ಲಿಕೆಯಾದ ಚಾರ್ಜ್‌ ಶೀಟ್‌ನಲ್ಲಿನ ಪ್ರಮುಖ ಅಂಶಗಳೇನು?