ಚಿಕ್ಕಬಳ್ಳಾಪುರ : ತಾಲೂಕು ಇನಮಿಂಚೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಸುಶೀಲಾ ಮಂಜುನಾಥ್೨೦೨೪-೨೫ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಸಾಧನೆಯನ್ನು ಜಿಲ್ಲಾ ಶಿಕ್ಷಕರ ಸಂಘವು ಮುಕ್ತಕಂಠದಿAದ ಶ್ಲಾಘಿಸಿದೆ.
೨೦೦೪ರಲ್ಲಿ ಸರಕಾರಿ ಶಾಲೆಯ ಶಿಕ್ಷಕಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸೇವೆಗೆ ಸೇರ್ಪಡೆಗೊಂಡ ಸುಶೀಲಾ ಮಂಜುನಾಥ್ ತಮ್ಮ ಪ್ರತಿಭೆ ಮತ್ತು ಸಮಾಜದ ಬಗೆಗಿನ ಕಾಳಜಿ, ೨೦ ವರ್ಷಗಳ ಧಣಿವಿರದ ನಿಷ್ಕಾಮ ಕಾಯಕಕ್ಕೆ ಸರಕಾರ ಪ್ರಶಸ್ತಿಯ ಮೂಲಕ ಗೌರವ ನೀಡಿದೆ ಎನ್ನುವುದು ಪತಿ ಮಂಜುನಾಥ್ ಅವರ ಮನದಾಳದ ಮಾತು.
ಪ್ರಸ್ತುತ ಚಿಕ್ಕಬಳ್ಳಾಪುರ ತಾಲೂಕು ಇನಮಿಂಚೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಶೀಲಾ ಮಂಜುನಾಥ್ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶಾಲೆಯಲ್ಲಿ ಇಕೋ ಕ್ಲಬ್ ಸ್ಥಾಪಿಸಿ ಆ ಮೂಲಕ ಶಾಲೆಯ ಆವರಣವನ್ನು ಹಸಿರೀಕರಣ ಮಾಡಿದ್ದಾರೆ.
ಪರಿಸರ ಜಾಗೃತಿ,ಪ್ಲಾಸ್ಟಿಕ್ ನಿಷೇಧ, ಫಲಪುಷ್ಪ ಪ್ರದರ್ಶನ,ಹಸಿರೀಕರಣದ ಮಹತ್ವ,ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ, ಸ್ವಚ್ಚತಾ ಅಭಿಯಾನ,ಮಕ್ಕಳಿಗೆ ಅರಣ್ಯ ಭೇಟಿ ಮಾಡಿಸಿ ಇಲಾಖೆಯ ಗಮನ ಸೆಳೆದಿದ್ದಾರೆ.೨೦ ವರ್ಷಗಳಲ್ಲಿ ನೂರಾರು ಬೀದಿನಾಟಕ,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮಕ್ಕಳನ್ನು ಸಜ್ಜುಗೊಳಿಸಿ ಅವರಲ್ಲಿ ಸಾಮಾಜಿಕ ಪ್ರಜ್ನೆ ಮೂಡುವಂತೆ ಮಾಡಿದ್ದಾರೆ.
ಪ್ರತಿಭಾ ಕಾರಂಜಿಯಲ್ಲಿ ಇವರ ಶಾಲೆಯ ಮಕ್ಕಳಿಗೆ ಪ್ರಶಸ್ತಿ ಕಟ್ಟಿಟ್ಟ ಬುತ್ತಿ ಎನ್ನುವ ಹಾಗೆ ಮಕ್ಕಳನ್ನು ತರಬೇತು ಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗೆ ಗುರುತಿಸಿಕೊಂಡು ಕವಿಯಾಗಿ, ಸಂಘಟಕಿಯಾಗಿ,ಲೇಖಕಿಯಾಗಿ ,ಕಾರ್ಯಕ್ರಮ ನಿರೂಪಕಿಯಾಗಿ, ಗಾಯಕಿಯಾಗಿ ಬಹುಮುಖ ಪ್ರತಿಭೆಯನ್ನು ಹೊಂದಿರುವ ಸುಶೀಲಾ ಮಂಜು ನಾಥ್ ಅವರನ್ನು ಪ್ರಶಸ್ತಿ ಅರಸಿ ಬಂದಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
ಬೆಂಗಳೂರಿನಲ್ಲಿ ಗುರುವಾರ ನಡೆಯುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವ ಸುಶೀಲಾ ಮಂಜುನಾಥ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ, ಮತ್ತಷ್ಟು ಪ್ರಶಸ್ತಿಗಳು ಒಲಿದು ಬರಲಿ ಎಂದು ಪತ್ರಿಕೆ ಹಾರೈಸುತ್ತದೆ.
*
ನನಗೆ ೨೦೨೪-೨೫ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಒಲಿದು ಬಂದಿರುವುದು ತುಂಬಾ ಸಂತೋಷ ನೀಡಿದೆ. ತಂದೆ ತಾಯಿಯ ಪುಣ್ಯ,ಗಂಡನ ಸಹಕಾರ, ಶಾಲೆಯ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ಸಿಆರ್‌ಪಿ, ಬಿಇಒ, ಉಪನಿರ್ದೇಶಕರು, ತಾಲೂಕು ಆಡಳಿತ ಜಿಲ್ಲಾಡಳಿತ, ಕಸಾಪ ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದ್ದು ಅವರೆಲ್ಲರಿಗೂ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇವರೆಲ್ಲರ ಪ್ರೀತಿ ವಿಶ್ವಾಸ ಪ್ರೋತ್ಸಾಹವೇ ನನ್ನ ಸಾಧನೆಗೆ ಮೆಟ್ಟಿಲು.ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚುವಂತೆ ಮಾಡಿದೆ. ಮುಖ್ಯಮಂತ್ರಿಗಳು, ರಾಜ್ಯ ಸರಕಾರ,ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವರಿಗೂ, ಅಧಿಕಾರಿ ವರ್ಗಕ್ಕೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಸುಶೀಲಾ ಮಂಜುನಾಥ್ ಇನಮಿಂಚೇನಹಳ್ಳಿ ಶಾಲೆ ಚಿಕ್ಕಬಳ್ಳಾಪುರ