Thursday, 19th September 2024

JK election: ನಾಳೆ ಬಿಜೆಪಿ ಪ್ರಣಾಳಿಕೆ ರಿಲೀಸ್‌; ನಿರೀಕ್ಷೆಗಳೇನು?

jk election

ನವದೆಹಲಿ: ತೀವ್ರ ಹಣಾಹಣಿ ಇರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ(JK election) ಚುನಾವಣೆಯಲ್ಲಿ ಏಕಾಂಗಿ ಹೋರಾಟಕ್ಕೆ ಇಳಿದಿರುವ ಬಿಜೆಪಿ(BJP)ಗೆ ಪ್ರತಿಷ್ಠೆಯ ಸವಾಲಾಗಿದ್ದು, ಇದೀಗ ಬಿಜೆಪಿಯ ಪ್ರಣಾಳಿಕೆ(Manifesto) ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ನಾಳೆ ಜಮ್ಮು-ಕಾಶ್ಮೀರಕ್ಕೆ ಭೇಟಿ ಕೊಡುತ್ತಿರುವ ಕೇಂದ್ರ ಗೃಹಸಚಿವ ಅಮಿತ್‌ ಶಾ(Amit Shah) ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.

ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿರುವ ಅಮಿತ್‌ ಶಾ ಬಿಜೆಪಿಯ ಮಾಧ್ಯಮ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಇದಾದ ಬಳಿಕ ಅವರು ರಾಜ್ಯ ಬಿಜೆಪಿ ಕಾರ್ಯಕಾರಿ ಸದಸ್ಯರ ಜತೆ ಮಾತುಕತೆ ನಡೆಸಿ ಚುನಾವಣಾ ತಯಾರಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಈ ಬಾರಿ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಗೆಲುವಿಗೆ ನಡೆಸಬೇಕಾದ ತಂತ್ರಗಳ ಬಗ್ಗೆ ಸ್ಥಳೀಯ ಮುಖಂಡರ ಜತೆ ಚರ್ಚೆ ನಡೆಸಲಿದ್ದಾರೆ.

ಪ್ರಣಾಳಿಕೆ ಬಗ್ಗೆ ನಿರೀಕ್ಷೆಗಳೇನು?

ಕಾಶ್ಮೀರದಲ್ಲಿ ಉತ್ತಮ ಆಡಳಿತ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಪ್ರಮುಖ ಚುನಾವಣಾ ವಿಷಯವಾದ ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಯನ್ನು ನಿರೀಕ್ಷಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಕಾಶ್ಮೀರಿ ಪಂಡಿತ್ ಮತದಾರರಿಗೆ ಅವರು ಹಿಂದಿರುಗಲು ಮತ್ತು ಅವರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸುಭದ್ರ ಯೋಜನೆಯನ್ನು ರಚಿಸುತ್ತದೆ ಎಂದು ಭರವಸೆ ನೀಡುವ ಗುರಿಯನ್ನು ಹೊಂದಿದೆ. ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಕಾಶ್ಮೀರಿ ಪಂಡಿತರಿಗಾಗಿ ಒಂದು ಪ್ರಮುಖ ಘೋಷಣೆಯನ್ನು ಮಾಡಬಹುದು, ಜೊತೆಗೆ ಕಲ್ಲು ತೂರಾಟದ ಘಟನೆಗಳನ್ನು ತಡೆಯಲು ಅದರ ವಿರುದ್ಧ ಪ್ರಬಲವಾದ ಕಾನೂನು ಜಾರಿಗೊಳಿಸುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.

ಬಿಜೆಪಿ ಭವಿಷ್ಯ ಸಮೀಕ್ಷೆಯಲ್ಲಿ ಬಯಲು

ಬರೋಬ್ಬರಿ ಹತ್ತು ವರ್ಷಗಳ ನಂತರ ಚುನಾವಣೆ ನಡೆಯುತ್ತಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ(Assembly Election) ದೇಶದ ಗಮನ ಸೆಳೆದಿದೆ. ಇದೀಗ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದ್ದು, ಈ ಬಾರಿ ಬಿಜೆಪಿಗೆ ತೀರ ಮುಖಭಂಗವಾಗುವ ಸಾಧ್ಯತೆ ಇದೆ. ಅಲ್ಲದೇ ಕಾಂಗ್ರೆಸ್‌-ಎನ್‌ಸಿ(Congress-NC Alliance) ಮೈತ್ರಿಕೂಟ ಪರ ಜನರ ನಿಲುವು ಹೆಚ್ಚಿದೆ ಎಂಬುದು ಬಯಲಾಗಿದೆ.

90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದ ವಿಧಾಸಭೆ ಚುನಾವಣೆ ಕುರಿತು Election Tracker ಮತದಾರರ ಅಭಿಪ್ರಾಯ ಕಲೆ ಹಾಕಿದೆ. ಜಮ್ಮು-ಕಾಶ್ಮೀರದಲ್ಲಿ Election Tracker ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು, ಇಂಡಿಯಾ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ 45 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಈ ಬಾರಿ ಜಮ್ಮು ಮತ್ತು ಕಾಶ್ಮೀರದ ವಿಧಾಸಭೆ ಚುನಾವಣೆಗೆ ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಸೆ.18, ಸೆ.25 ಮತ್ತುಅ.1ರಂದು ದಿನಾಂಕ ನಿಗದಿಪಡಿಸಲಾಗಿದೆ.  ವಿಧಾನಸಭಾ ಚುನಾವಣೆಯ ದಿನಾಂಕಗಳಲ್ಲಿ ಚುನಾವಣಾ ಆಯೋಗವು ಕೆಲವು ಬದಲಾವಣೆಗಳನ್ನು ಮಾಡಿದೆ. ಚುನಾವಣಾ ಫಲಿತಾಂಶವನ್ನು ಅಕ್ಟೋಬರ್ 4 ರ ಬದಲು ಅಕ್ಟೋಬರ್ 8 ರಂದು ಪ್ರಕಟಿಸಲು ಇಸಿ ನಿರ್ಧರಿಸಿದೆ.

ಈ ಸುದ್ದಿಯನ್ನೂ ಓದಿ: JK Election: ʼಕಲ್ಲು ತೂರಾಟಗಾರರು ಜೈಲಿನಿಂದ ರಿಲೀಸ್‌ʼ- ಜೆಡಿಯು ಪ್ರಣಾಳಿಕೆಯಲ್ಲಿ ಅಚ್ಚರಿಯ ಭರವಸೆ; ಬಿಜೆಪಿಗೆ ಶಾಕ್‌!