ತುಮಕೂರು: ಜಿಲ್ಲೆಯಲ್ಲಿ ಯಾವುದೇ ಬೆಳೆ ಕಟಾವು ಪ್ರಯೋಗಗಳು ನಷ್ಟಗೊಳ್ಳದಂತೆ ನಿಯಮಾನುಸಾರ ಸಂಬಂಧಿಸಿದ ರೈತರು, ವಿಮಾ ಪ್ರತಿನಿಧಿಗಳು ಮತ್ತು ಮೇಲ್ವಿಚಾರಕರ ಸಮ್ಮುಖದಲ್ಲಿ ಬೆಳೆ ಕಟಾವು ಪ್ರಯೋಗ ಗಳನ್ನು ಕೈಗೊಂಡು ಇಳುವರಿ ಮಾಹಿತಿಯನ್ನು ನಿಖರವಾಗಿ ದಾಖಲಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಗರಿಕ ನೋಂದಣ ಪದ್ಧತಿಯಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಗ್ರಾಮ ಪಂಚಾಯತಿವಾರು 682 ಹಾಗೂ ಹೋಬಳಿ ವಾರು 208 ವಿಮಾ ಘಟಕಗಳಲ್ಲಿ ಒಟ್ಟು 5674 ಬೆಳೆ ಕಟಾವು ಪ್ರಯೋಗಗಳು ಅಧಿಸೂಚನೆಯಾಗಿದ್ದು, ಅಧಿಸೂಚನೆಯಾಗಿರುವ ಯಾವುದೇ ಬೆಳೆ ಕಟಾವು ಪ್ರಯೋಗಗಳು ನಷ್ಟಗೊಳ್ಳದಂತೆ ನಿಯಮಾನುಸಾರ ಬೆಳೆ ಕಟಾವು ಪ್ರಯೋಗ ಕೈಗೊಂಡು ಇಳುವರಿ ಮಾಹಿತಿಯನ್ನು ದಾಖಲಿಸಬೇಕು ಎಂದು ನಿರ್ದೇಶಿಸಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನಡೆಯುವ ಬೆಳೆ ಕಟಾವು ಪ್ರಯೋಗ ಗಳ ಪರಿಣಾಮಕಾರಿ ಅನುಷ್ಟಾನ ಮತ್ತು ಕೃಷಿ ಅಂಕಿ- ಅಂಶಗಳು ಹಾಗೂ ನಾಗರಿಕ ನೋಂದಣಿ ಪದ್ಧತಿಯನ್ನು ಉತ್ತಮಪಡಿಸುವ ಸಲುವಾಗಿ ನಿಖರ ಮಾಹಿತಿ ದಾಖಲಿಸುವುದು ಅತ್ಯವಶ್ಯಕವಾಗಿದೆ ಎಂದು ಮಾಹಿತಿ ದಾಖಲಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವ ಮೂಲ ಕಾರ್ಯಕರ್ತರಾದ ಗ್ರಾಮ ಆಡಳಿತಾಧಿಕಾರಿ, ಪಂಚಾಯತಿ ಪಿಡಿಓ/ಕಾರ್ಯದರ್ಶಿ, ಕೃಷಿ ಮತ್ತು ತೋಟಗಾರಿಕೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸಂಭವಿಸುವ ಜನನ/ಮರಣ ಘಟನೆಗಳನ್ನು ಶೇ.100ರಷ್ಟು ನೋಂದಾಯಿಸಬೇಕೆಂದರಲ್ಲದೆ, ಜುಲೈ ಮಾಹೆಯಿಂದ ಗ್ರಾಮ ಪಂಚಾಯತಿಗಳಲ್ಲಿಯೇ ಜನನ/ಮರಣ ನೋಂದಣ ಕಾರ್ಯ ಕೈಗೊಳ್ಳುತ್ತಿದ್ದು, ಈ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಂಗಸ್ವಾಮಿ ಸೇರಿದಂತೆ ಕಂದಾಯ, ಕೃಷಿ, ತೋಟಗಾರಿಕೆ, ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.