Thursday, 19th September 2024

ಶುಂಠಿ, ಕಾಳುಮೆಣಸು ಬೆಲೆ ಕುಸಿತ

ಹೂವಪ್ಪ ಐ. ಎಚ್. ಬೆಂಗಳೂರು

ಆಮದಿನಿಂದ ಇಳಿದ ಕಾಳುಮೆಣಸಿನ ದರ

ಇಳುವರಿ ಇಲ್ಲದಿದ್ದರೂ ಬೆಲೆ ಕಾಣದ ಶುಂಠಿ

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಡಕೆ ಮತ್ತು ಕಾಫಿ ಜೊತೆಗೆ ಪ್ರಮುಖ ಉಪಬೆಳೆಯಾಗಿ ಬೆಳೆಯುತ್ತಿರುವ ಕಾಳುಮೆಣಸು ಇಲ್ಲಿಯವರೆಗೂ ರೈತರ ಕೈಹಿಡಿದಿತ್ತು. ಆದರೆ ಕಳೆದೊಂದು ತಿಂಗಳಿಂದ ಕಾಳು ಮೆಣಸು ದರ ನಿರಂತರವಾಗಿ ಇಳಿಮುಖ ವಾಗುತ್ತಾ ಹೋಗಿರುವುದು ಬೆಳೆಗಾರರಲ್ಲಿ ಆತಂಕ ಕ್ಕೀಡುಮಾಡಿದೆ.

ಶ್ರೀಲಂಕಾ, ವಿಯೆಟ್ನಾಂ, ಬ್ರೆಜಿಲ್ ಮೊದ ಲಾದ ದೇಶಗಳಿಂದ ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಕಾಳುಮೆಣಸು ಆಮದಾಗಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲಿ ಕರಿಮೆಣಸು ದರ ಕುಸಿಯಲು ಕಾರಣವಾಗಿದೆ. ಜುಲೈ ತಿಂಗಳಲ್ಲಿ ಶ್ರೀಲಂಕಾದಿಂದ ೪,೩೫೦ ಟನ್ ಹಾಗೂ ವಿಯೆಟ್ನಾಂ ಮತ್ತು ಬ್ರೆಜಿಲ್‌ನಿಂದ ಸುಮಾರು ೬೦೦ ಟನ್ ಕಾಳುಮೆಣಸನ್ನು ದೇಶಕ್ಕೆ ಆಮದು ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಆಮದು ಆದೇಶ ಮಾಡಲಾಗಿದ್ದು, ಒಂದು ತಿಂಗಳ ಬೆಲೆ ಕುಸಿದಿದೆ.

ವಿದೇಶಗಳಿಂದ ಮುಖ್ಯವಾಗಿ ನವಸೇವಾ, ತೂತ್ತುಕುಡಿ, ಚೆನ್ನೈ, ಮುಂದ್ರಾ, ತುಘಲಕಾಬಾದ್ ಮತ್ತು ಕೊಚ್ಚಿ ಬಂದರುಗಳ ಮೂಲಕ ಕಾಳುಮೆಣಸು ಆಮದು ಮಾಡಿಕೊಳ್ಳಲಾಗುತ್ತದೆ. ಇಥಿಯೋಪಿಯಾ ಮತ್ತು ವಿಯೆಟ್ನಾಂ
ಕಾಳುಮೆಣಸಿನಲ್ಲಿ ವಿಶ್ವದ ಅತಿ ದೊಡ್ಡ ಉತ್ಪಾದಕ ರಾಷ್ಟ್ರಗಳಾಗಿವೆ.

ಕಾಸರಗೋಡಿನಲ್ಲಿ ಒಂದೇ ತಿಂಗಳಲ್ಲಿ ಪ್ರತಿ ಕೆಜಿ ಕಾಳುಮೆಣಸು ಬೆಲೆ ೫೫ ರು. ಕುಸಿದು ಶುಕ್ರವಾರ ೬೧೫ ರು.ಗೆ ಭಿಕರಿಯಾಗಿದೆ. ಗುರುವಾರ ಇದೇ ಕಾಳುಮೆಣಸಿಗೆ ಕೆಜಿಗೆ ೬೨೦ ರು. ಇತ್ತು. ಹೀಗೆ ಒಂದೇ ದಿನದಲ್ಲಿ ೫ ರು. ಕುಸಿದಿದೆ. ಮುಂದಿನ ದಿನಗಳಲ್ಲಿ ಕಾಳುಮೆಣಸು ದರ ೫೫೦ ರು.ಗೆ ಆಗಬಹುದೆಂಬ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಕಾಳುಮೆಣಸು ಉತ್ಪಾದನೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಕಾಳುಮೆಣಸು ಉತ್ಪಾದಿಸಲಾಗುತ್ತಿದೆ. ಇಡುಕ್ಕಿ ಕೇರಳದ ಪ್ರಮುಖ ಕಾಳುಮೆಣಸು ಉತ್ಪಾದನಾ ಕೇಂದ್ರವಾಗಿದ್ದು, ವಯನಾಡು ಎರಡನೇ ಸ್ಥಾನದಲ್ಲಿದೆ.

ಮತ್ತಷ್ಟು ಬೆಲೆ ಕುಸಿಯುವ ಸಾಧ್ಯತೆ
ಶ್ರೀಲಂಕಾದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ ಭಾರತಕ್ಕೆ ಈ ವರ್ಷ ೨,೦೦೦ ಟನ್ ಕಾಳು ಮೆಣಸನ್ನು ಸುಂಕ ರಹಿತ ಆಮದು ಮಾಡಿಕೊಳ್ಳಲು ಅವಕಾಶವಿದೆ. ಆಮದು ಮಾಡಿಕೊಳ್ಳಲಾದ ಕಾಳುಮೆಣಸನ್ನು ಮಾರು ಕಟ್ಟೆಯಲ್ಲಿ ತ್ವರಿತವಾಗಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರಕಾರ ಕಾಳುಮೆಣಸನ್ನು ಅಗತ್ಯ ವಸ್ತುಗಳ ವರ್ಗಕ್ಕೆ ಸೇರಿಸಿದ್ದರಿಂದ ಕಾಳುಮೆಣಸಿನ ಬೆಲೆ ಮತ್ತಷ್ಟು ಕುಸಿಯಲಿದೆ ಎಂದು ರೈತರು, ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕಾಳುಮೆಣಸಿನ ಬೆಲೆ ಕುಸಿತ ಹೆಚ್ಚಿನ ರೈತರಿಗೆ ಆರ್ಥಿಕ ಅಸ್ಥಿರತೆ ಉಂಟು ಮಾಡಲಿದೆ.

ಬಂಗಾರದಷ್ಟಾಗಿದ್ದ ಶುಂಠಿ ಬೆಲೆಯಲ್ಲಿ ಭಾರೀ ಕುಸಿತ; ರೈತರಿಗೆ ನಿರಾಯಾಸ

ಮೊನ್ನೆ ಜುಲೈ ತಿಂಗಳಲ್ಲಿ ಬಂಗಾರದ ಬೆಲೆ ಕಂಡಿದ್ದ ಹಸಿ ಶುಂಠಿ ದರ ದಿಢೀರ್ ಕುಸಿದಿದೆ. ಶುಂಠಿ ಬೆಳೆ ಜನಪ್ರಿಯ ವಾಗಿದ್ದರೂ, ಇಳುವರಿ ಕುಸಿದಿರುವುದು ಒಂದೆಡೆಯಾದರೆ. ಬೆಲೆ ಕುಸಿತ ರೈತರನ್ನು ಚಿಂತೆಗೀಡುಮಾಡಿದೆ.
ಮತ್ತೊಂದೆಡೆ ಮಹಾರಾಷ್ಟ್ರ ದಳಿಗಳ ಹಾವಳಿಯಿಂದ ಸ್ಥಳೀಯ ರೈತರು ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣ ವಾಗಿದೆ. ಜೂನ್ ೧೫ರವರೆಗೆ ಒಂದು ಕೆಜಿ ಹಸಿ ಶುಂಠಿ ಹೋಲ್ಸೇಲ್ ದರ ಸರಾಸರಿ ೪೦೦ ರು. ಇತ್ತು. ದೊಡ್ಡ ಬಳ್ಳಾಪುರ, ಶಿಕಾರಿಪುರ, ಸೊರಬ ಸೇರಿ ರಾಜ್ಯದ ಪ್ರಮುಖ ಶುಂಠಿ ಮಾರುಕಟ್ಟೆಗಳಲ್ಲಿ ಒಟ್ಟು ೫೩೮ ಕ್ವಿಂಟಾಲ್ ಶುಂಠಿ ಆವಕವಾಗಿತ್ತು. ಆದರೂ ಬೆಳೆಗಾರರಿಗೆ ಸಿಕ್ಕಿರುವುದು ಕೆಜಿಗೆ ೯೦ ರು. ಮಾತ್ರ!

ಜುಲೈ ಆರಂಭದಲ್ಲಿ ಕೆಜಿಗೆ ೪೦೦ ರೂ. ಇದ್ದ ಹಸಿ ಶುಂಠಿ ಹೋಲ್ಸೇಲ್ ಬೆಲೆ ಕೇವಲ ಒಂದೇ ತಿಂಗಳಲ್ಲಿ ಶೇ. ೯೦ ರಷ್ಟು ಕುಸಿದಿದೆ. ಪ್ರಸ್ತುತ ಒಂದು ಕೆ.ಜಿ ಶುಂಠಿ ಹೋಲ್ಸೇಲ್ ದರ ೨೫ರಿಂದ ೩೦ ರೂ.ಗೆ ಇಳಿಕೆಯಾಗಿದೆ. ಅತಿ ಹೆಚ್ಚು ಶುಂಠಿ ಬೆಳೆಯುವ ಕೇರಳದಲ್ಲಿ ಕ್ವಿಂಟಾಲ್ ಶುಂಠಿ ಬೆಲೆ ೯,೦೦೦ ರೂ. ಇದೆ.

ರೈತರಿಗೆ ‘ಮಹಾ’ ಮೋಸ
ರಾಜ್ಯದ ಮಾರುಕಟ್ಟೆಗಳಲ್ಲಿ ಸೂಕ್ತ ದರ ಸಿಗದಿದ್ದಾಗ ರೈತರು ಮಹಾರಾಷ್ಟ್ರದ ಲಾಥೂರ್ ಮತ್ತಿತರ ಮಂಡಿಗಳ
ದಳಿಗಳನ್ನು ಸಂಪರ್ಕಿಸುತ್ತಾರೆ. ಮೊದಲು ಶುಂಠಿ ತರಲು ಹೇಳುವ ದಳಿಗಳು, ರೈತರು ಅಲ್ಲಿಗೆ ಹೋದ ನಂತರ ‘ಕ್ವಾಲಿಟಿ’ ನೆಪ ಹೇಳಿ ಕಡಿಮೆ ದರಕ್ಕೆ ಕೇಳುತ್ತಾರೆ. ವಾಪಾಸ್ ತಂದರೆ ಸಾಗಣೆ ವೆಚ್ಚವೂ ದಕ್ಕುವುದಿಲ್ಲ ಎಂದು
ರೈತರು ಕೊಟ್ಟು ಬರುತ್ತಾರೆ.