ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ಬಳಿ ಸ್ಕೂಲ್ ಬಸ್ ಮತ್ತು ಸಾರಿಗೆ ಬಸ್ ನಡುವೆ ಭೀಕರ ಅಪಘಾತ (Road Accident) ಸಂಭವಿಸಿದ್ದು, ಸ್ಕೂಲ್ ಬಸ್ಸಿನಲ್ಲಿದ್ದ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಈ ದುರ್ಘಟನೆ ನಡೆದಿದೆ. ಒಂದನೇ ತರಗತಿ ವಿದ್ಯಾರ್ಥಿ ಸಮರ್ಥ, ಏಳನೇ ತರಗತಿ ವಿದ್ಯಾರ್ಥಿ ಶ್ರೀಕಾಂತ್ ಮೃತ ನತದೃಷ್ಟರು. ಸ್ಕೂಲ್ ಬಸ್ನೊಳಗೆ ಇದ್ದ ಮೂವರು ಮಕ್ಕಳ ಕಾಲುಗಳು ತುಂಡಾಗಿವೆ.
ಕಪಗಲ್ನಿಂದ ಮಾನ್ವಿ ಕಡೆ ಹೊರಟಿ ಖಾಸಗಿ ಶಾಲೆಯ ಬಸ್ ಹಾಗೂ ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಹೊರಟಿದ್ದ ಸಾರಿಗೆ ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿ ರಭಸಕ್ಕೆ ಮಕ್ಕಳಿಬ್ಬರ ಕಾಲು ತುಂಡಾಗಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಶಾಲಾ ಬಸ್ನಲ್ಲಿ ಒಟ್ಟು 32 ಮಕ್ಕಳಿದ್ದರು. ಎಲ್ಲರಿಗೂ ಗಾಯಗಳಾಗಿವೆ. ಈ ಪೈಕಿ ಮೂವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಈ ಪೈಕಿ 18 ಜನರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ 14 ಮಕ್ಕಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮೃತ ಬಾಲಕ ಮತ್ತು ಬಾಲಕಿ ಕುಡಿ ಗ್ರಾಮದವರು ಎಂದು ತಿಳಿದುಬಂದಿದೆ. ರಿಮ್ಸ್ ಆಸ್ಪತ್ರೆಗೆ ಎಸ್ಪಿ ಮತ್ತು ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಿಮ್ಸ್ ಆಸ್ಪತ್ರೆ ಮುಂಭಾಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಎರಡು ಬಸ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದ ಪರಿಣಾಮ ಸಿಂಧನೂರು- ರಾಯಚೂರು ರಸ್ತೆ ಬಂದ್ ಆಗಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.
ಈ ಸುದ್ದಿ ಓದಿ: Multi-Car Crash: ಅಮೆರಿಕದಲ್ಲಿ ಸರಣಿ ಅಪಘಾತ; ಭಾರತ ಮೂಲದ ನಾಲ್ವರ ದುರ್ಮರಣ