Saturday, 23rd November 2024

Russia-Ukraine War: ಉಕ್ರೇನ್‌ ಜತೆ ಮಾತುಕತೆಗೆ ಸಿದ್ಧ ಎಂದ ಪುಟಿನ್‌- ಮಧ್ಯಸ್ಥಿಕೆ ವಹಿಸುತ್ತಾ ಭಾರತ?

russia-ukraine war

ಮಾಸ್ಕೋ: ರಷ್ಯಾ-ಉಕ್ರೇನ್‌ ನಡುವಿನ ಯುದ್ಧ(Russia-Ukraine War) ಇಡೀ ಜಗತ್ತೇ ಕಳವಳ ವ್ಯಕ್ತವಾಗಿರುವ ಪ್ರಮುಖ ಸಂಗತಿಯಾಗಿದೆ. ಪೋಲೆಂಡ್‌ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ(Narendra Modi) ಕೂಡ ಸಂಧಾನದ ಮೂಲಕ ಯುದ್ಧವನ್ನು ಕೈಬಿಡುವಂತೆ ಊಭಯ ರಾಷ್ಟ್ರಗಳಿಗೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಉಕ್ರೇನ್‌(Ukraine) ಜತೆಗಿನ ತನ್ನ ಸಮರಕ್ಕೆ ಅಂತ್ಯ ಹಾಡುವತ್ತ ರಷ್ಯಾ ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅವರು ಉಕ್ರೇನ್‌ನೊಂದಿಗೆ ಮಾತುಕತೆಗೆ ಸಿದ್ಧ ಎಂದು ಗುರುವಾರ ಹೇಳಿದ್ದಾರೆ. ಭಾರತ, ಚೀನಾ ಮತ್ತು ಬ್ರೆಜಿಲ್ ಸಂಭಾವ್ಯ ಶಾಂತಿ ಸಂಧಾನದಲ್ಲಿ ಮಧ್ಯಸ್ಥಿಕೆ ವಹಿಸಬಹುದು ಎಂದು ಹೇಳಿದ್ದಾರೆ.

ಇಸ್ತಾನ್‌ಬುಲ್‌ನಲ್ಲಿ ನಡೆದ ಮಾತುಕತೆಯಲ್ಲಿ ಯುದ್ಧದ ಮೊದಲ ವಾರಗಳಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ಸಮಾಲೋಚಕರ ನಡುವಿನ ಪ್ರಾಥಮಿಕ ಒಪ್ಪಂದವನ್ನು ಎಂದಿಗೂ ಕಾರ್ಯಗತಗೊಳಿಸಲಾಗಿಲ್ಲ, ಇದು ಮಾತುಕತೆಗಳಿಗೆ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದರು.

ವ್ಲಾಡಿವೋಸ್ಟಾಕ್ ನಗರದಲ್ಲಿ ರಷ್ಯಾದ ಪೂರ್ವ ಆರ್ಥಿಕ ವೇದಿಕೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಪುಟಿನ್, ರಷ್ಯಾ ಮಾತುಕತೆಗೆ ಸಿದ್ಧವಾಗಿದೆ. ನಾವು ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿಯೇ ಇದ್ದೇವೆ. ನಾವು ಎಂದೂ ಮಾತುಕತೆಗೆ ನಿರಾಕರಿಸಿಲ್ಲ, ಆದರೆ ಕೆಲವು ಅಲ್ಪಕಾಲಿಕ ಬೇಡಿಕೆಗಳ ಆಧಾರದ ಮೇಲೆ ಮಾತುಕತೆ ಸಫಲವಾಗಲು ಸಾಧ್ಯವಿಲ್ಲ. ಮಾತುಕತೆಯ ಮಧ್ಯಸ್ಥಿಕೆಯನ್ನು ಭಾರತ, ಚೀನಾ ಮತ್ತು ಬ್ರೆಜಿಲ್‌ ವಹಿಸಿದರೆ ಉತ್ತಮ ಎಂದು ಅವರು ತಿಳಿಸಿದ್ದಾರೆ.

ಉಕ್ರೇನ್‌ನ ಪೋಲ್ಟವಾ ನಗರದಲ್ಲಿ ಮಂಗಳವಾರ ನಡೆದ ರಷ್ಯಾದ  ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 51 ಜನರು ಸಾವನ್ನಪ್ಪಿದ್ದಾರೆ ಮತ್ತು 180 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಷ್ಯಾದ ಪಡೆಗಳು ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಯುದ್ಧಪೀಡಿತ ಉಕ್ರೇನ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ಸರ್ಕಾರದ ಪುನರ್‌ರಚನೆಯ ಮುಂಚಿತವಾಗಿ ಕ್ಯಾಬಿನೆಟ್‌ ಸಚಿವರು ಸೇರಿ ಕನಿಷ್ಠ 6 ಮಂದಿ ಉನ್ನತ ಮಟ್ಟದ ಅಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದುವರಿದಿರುವ ಹಿನ್ನಲೆಯಲ್ಲಿ ಈ ಬದಲಾವಣೆಗೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಸರ್ಕಾರದ ಪ್ರಮುಖ ಹುದ್ದೆಯಾದ ಶಸ್ತ್ರಾಸ್ತ್ರ ಉತ್ಪಾದನೆಯ ಉಸ್ತುವಾರಿ ಹೊಂದಿರುವ ಕೈಗಾರಿಕಾ ಸಚಿವರು ಸೇರಿ ಕೆಲವು ಉನ್ನತ ಸ್ಥಾನಮಾನಗಳನ್ನು ಹೊಂದಿರುವ ನಾಯಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ. ಆಡಳಿತಾರೂಢ ಸರ್ವೆಂಟ್ ಆಫ್ ದಿ ಪೀಪಲ್ ಪಕ್ಷ (Servant of the People party)ದ ಸಂಸದೀಯ ನಾಯಕ ಡೇವಿಡ್ ಅರಾಖಾಮಿಯಾ (David Arakhamia) ಇತ್ತೀಚೆಗೆ ಸರ್ಕಾರ ಪುನರ್‌ರಚನೆಯಾದ ಬಳಿಕ  ಕ್ಯಾಬಿನೆಟ್‌ ಅರ್ಧದಷ್ಟು ಬದಲಾಗಲಿದೆ ಎಂದು ಹೇಳಿಕೆ ನೀಡಿದ್ದರು. ಅದರಂತೆ ಇದೀಗ ಈ ಬೆಳವಣಿಗೆ ಕಂಡು ಬಂದಿದೆ. 

ರಾಜೀನಾಮೆ ನೀಡಿದವರು

ಮಂಗಳವಾರ ರಾಜೀನಾಮೆ ಸಲ್ಲಿಸಿದವರಲ್ಲಿ ಕೈಗಾರಿಕಾ ಸಚಿವ ಅಲೆಕ್ಸಾಂಡರ್ ಕಾಮಿಶಿನ್, ನ್ಯಾಯಾಂಗ ಸಚಿವ ಡೆನಿಸ್ ಮಾಲಿಯುಸ್ಕಾ, ಪರಿಸರ ಸಂರಕ್ಷಣಾ ಸಚಿವ ರುಸ್ಲಾನ್ ಸ್ಟ್ರೈಲೆಟ್ಸ್, ಉಪ ಪ್ರಧಾನಿಗಳಾದ ಓಲ್ಹಾ ಸ್ಟೆಫಾನಿಶಿನಾ ಮತ್ತು ಇರಿನಾ ವೆರೆಶ್ಚುಕ್ ಹಾಗೂ ಉಕ್ರೇನ್‌ನ ಸ್ಟೇಟ್‌ ಪ್ರಾಪರ್ಟಿ ಪಂಡ್‌ನ ಮುಖ್ಯಸ್ಥ ವಿಟಾಲಿ ಕೋವಲ್ ಸೇರಿದ್ದಾರೆ. ರಾಷ್ಟ್ರಾಧ್ಯಕ್ಷರ ಹಿರಿಯ ಸಹಾಯಕರಲ್ಲಿ ಒಬ್ಬರಾದ ರೊಸ್ಟಿಸ್ಲಾವ್ ಶುರ್ಮಾ ಅವರನ್ನೂ ವಜಾಗೊಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ರಷ್ಯಾ ಸೇನೆಯಿಂದ ಮತ್ತೆ ಕದನ ವಿರಾಮ ಘೋಷಣೆ