ರಾಷ್ಟ್ರೀಯ ಪೌಷ್ಟಿಕಾಂಶ ತಿಂಗಳ (National Nutrition Month) ಪ್ರಯುಕ್ತ ಕೇಂದ್ರ ಆರೋಗ್ಯ ಸಚಿವಾಲಯವು (Union Health Ministry) ಅತೀ ಹೆಚ್ಚು ಕಬ್ಬಿನಾಂಶ ಹೊಂದಿರುವ ಆಹಾರ (Iron Rich Foods) ಪದಾರ್ಥಗಳನ್ನು ಹೆಸರಿಸಿದೆ. ದೇಶಾದ್ಯಂತ ಸೆಪ್ಟೆಂಬರ್ ತಿಂಗಳನ್ನು ಪೌಷ್ಠಿಕಾಂಶ ತಿಂಗಳಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೈನಂದಿನ ಆಹಾರದಲ್ಲಿ ಕಬ್ಬಿನಾಂಶ ಭರಿತ ಆಹಾರಗಳನ್ನು ಸೇರಿಸಲು ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.
ರಾಷ್ಟ್ರೀಯ ಪೌಷ್ಟಿಕಾಂಶ ತಿಂಗಳಿನಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯನ್ನು ನಿವಾರಿಸಲು ಮತ್ತು ವಿಶೇಷವಾಗಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಅತಿ ಹೆಚ್ಚು ಕಬ್ಬಿನಾಂಶ ಹೊಂದಿರುವ ಆಹಾರಗಳಾದ ಹರಿವೆ ಸೊಪ್ಪು, ಮೊಟ್ಟೆ , ಒಣ ದ್ರಾಕ್ಷಿ , ಕೆಂಪು ಮಾಂಸ, ಉರಿ ಕಡಲೆ ಮತ್ತು ರಾಗಿಯನ್ನು ಆಹಾರದಲ್ಲಿ ಸೇರಿಸಬೇಕು. ಈ ಮೂಲಕ ರಾಷ್ಟ್ರೀಯ ಪೌಷ್ಟಿಕಾಂಶ ತಿಂಗಳಿನಲ್ಲಿ ಕಬ್ಬಿಣದ ಕೊರತೆಯಿಂದಾಗುವ ರಕ್ತಹೀನತೆ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಭಾರತವನ್ನು ಉತ್ತಮ ಪೋಷಣೆ, ಸಾಕ್ಷರ ಮತ್ತು ಸಬಲೀಕರಣಗೊಳಿಸುವಂತೆ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.
ಹರಿವೆ ಸೊಪ್ಪು
ಅಮರನಾಥ ಎಲೆಗಳು ಎಂದೇ ಕರೆಯಲ್ಪಡುವ ಹರಿವೆ ಸೊಪ್ಪಿನಲ್ಲಿ ಪೋಷಕಾಂಶ ಹೇರಳವಾಗಿದೆ. ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಈ ಸೊಪ್ಪುಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಎ, ಇ, ಸಿ ಮತ್ತು ಫೋಲಿಕ್ ಆಮ್ಲ ಸಮೃದ್ಧವಾಗಿದೆ. ಇದು ರಕ್ತಹೀನತೆಗೆ ಪ್ರಯೋಜನಕಾರಿಯಾಗಿದ್ದು, ಮೂಳೆಯ ಆರೋಗ್ಯವನ್ನೂ ಸುಧಾರಿಸುತ್ತದೆ.
ಮೊಟ್ಟೆ
ಮೊಟ್ಟೆಯಲ್ಲಿರುವ ವಿಟಮಿನ್ ಡಿ ಮೂಳೆಗಳ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕ್ಯಾಲ್ಸಿಯಮ್ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಒಂದು ಮೊಟ್ಟೆ ಸುಮಾರು 77 ಕ್ಯಾಲೋರಿ ಗಳನ್ನು ಹೊಂದಿದ್ದು ಅದರಲ್ಲಿ 6 ಗ್ರಾಂ ಪ್ರೊಟೀನ್, 5 ಗ್ರಾಂ ಆರೋಗ್ಯಕರ ಕೊಬ್ಬು, ವಿಟಮಿನ್ ಎ, ಡಿ, ಇ ಮತ್ತು ಬಿ12 ಅನ್ನು ಒಳಗೊಂಡಿದೆ. ಇದು ಮೆದುಳು, ಕಣ್ಣಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.
ಒಣ ದ್ರಾಕ್ಷಿ
ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಇತರ ಅಗತ್ಯ ಪೋಷಕಾಂಶಗಳ ಸಮೃದ್ಧ ಮೂಲ ವಾಗಿರುವ ಒಣ ದ್ರಾಕ್ಷಿ ಕೂದಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಮಾತ್ರವಲ್ಲ, ರಕ್ತ ಹೀನತೆಯನ್ನು ನಿವಾರಿಸುತ್ತದೆ.
ಕೆಂಪು ಮಾಂಸ
ಕೆಂಪು ಮಾಂಸದಲ್ಲಿ ಕಬ್ಬಿಣವು ಸಮೃದ್ಧವಾಗಿದೆ. ಇದು ದೇಹದ ಇತರ ಭಾಗಗಳಿಗೆ ಆಮ್ಲಜನಕ ಸಾಗಿಸುತ್ತದೆ. ರಕ್ತದ ಕೊರತೆಯನ್ನು ನೀಗಿಸಲು ಕೆಂಪು ಮಾಂಸವು ವಿಟಮಿನ್ ಬಿ 12 ಹೊಂದಿದೆ. ಆಯಾಸ, ಖಿನ್ನತೆ ಹೋಗಲಾಡಿಸಿ, ನರಗಳನ್ನು ಬಲಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಉರಿ ಕಡಲೆ
ಹುರಿ ಗಡಲೆ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫೇಟ್, ಮೆಗ್ನೀಸಿಯಮ್, ಸತು, ಮ್ಯಾಂಗನೀಸ್ ಮತ್ತು ವಿಟಮಿನ್ ಹೇರಳವಾಗಿದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಿ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ.
http://Union Budget 2024: ಬಜೆಟ್‌ಗೂ ಮೊದಲು, ನಂತರ ಹೂಡಿಕೆ ಮಾಡುವುದು ಲಾಭವೇ? ತಜ್ಞರು ಹೇಳೋದಿಷ್ಟು
ರಾಗಿ
ರಕ್ತಹೀನತೆಯಿಂದ ಬಳಲುವವರಿಗೆ ರಾಗಿ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ದೇಹಕ್ಕೆ ಸಾಕಷ್ಟು ಕಬ್ಬಿಣಾಂಶ ಸಿಗದಿದ್ದಾಗ ರಕ್ತಹೀನತೆಯ ಸಮಸ್ಯೆ ಉಂಟಾಗುತ್ತದೆ. ಇಂತಹ ವೇಳೆ ರಾಗಿಯನ್ನು ತಿನ್ನುವುದು ಉತ್ತಮ ಆಯ್ಕೆ. ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಿದ್ದರೆ ರಾಗಿಯನ್ನು ಸೇವಿಸಬಹುದು. ರಾಗಿ ತಿನ್ನುವುದರಿಂದ ಆತಂಕ, ಖಿನ್ನತೆ ಅಥವಾ ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ.