Thursday, 19th September 2024

Ban For Phone Use: ಸ್ವೀಡನ್‌ನಲ್ಲಿ ಮಕ್ಕಳ ಮೊಬೈಲ್ ವೀಕ್ಷಣೆಗೆ ಕಾಲಮಿತಿ! ಉಳಿದ ದೇಶಗಳಲ್ಲೂ ಮೊಬೈಲ್‌ ಪರಿಣಾಮದ ಕಳವಳ

Ban For Phone Use

ಪುಟ್ಟ ಮಕ್ಕಳನ್ನು ಮೊಬೈಲ್‌ನಿಂದ (Ban For Phone Use) ಸಂಪೂರ್ಣವಾಗಿ ದೂರವಿಡಬೇಕು. ಯಾಕೆಂದರೆ ಮೊಬೈಲ್‌ ಪರದೆಯ ಬಳಕೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ (mental health) ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸ್ವೀಡನ್ ನ ಆರೋಗ್ಯ ಸಂಸ್ಥೆ (Swedish Health Institution) ಎಚ್ಚರಿಸಿದೆ.

ಸ್ವೀಡನ್‌ನಲ್ಲಿ ಈಗ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊಬೈಲ್‌ ಮುಟ್ಟದಂತೆ ಕ್ರಮ ಕೈಗೊಳ್ಳಬೇಕು ಎಂಬ ಜನಾಭಿಪ್ರಾಯ ಕೇಳಿ ಬರುತ್ತಿದೆ. ಆನ್ ಸ್ಕ್ರೀನ್ ಸಮಯವನ್ನು ಕಡಿತಗೊಳಿಸಬೇಕು ಎನ್ನವ ಶಿಫಾರಸ್ಸುಗಳು ಅಂಬೆಗಾಲಿಡುವ ಮಕ್ಕಳಿಗೆ ಮಾತ್ರವಲ್ಲ, ದೊಡ್ಡ ಮಕ್ಕಳು ಮತ್ತು ಹದಿಹರೆಯದವರಿಗೂ ಅನ್ವಯವಾಗುತ್ತದೆ. ಹೀಗಾಗಿ 1ರಿಂದ 18ರ ವಯೋಮಾನದ ಎಲ್ಲರಿಗೂ ಸ್ಕ್ರೀನ್ ಸಮಯವನ್ನು ನಿಗದಿಪಡಿಸಲು ಸ್ವೀಡಿಷ್ ಸರ್ಕಾರ ನಿರ್ಧರಿಸಿದೆ.

ಶಿಶುಗಳು, ಅಂಬೆಗಾಲಿಡುವ ಮಕ್ಕಳಿಗೆ ಮೊಬೈಲ್ ತೋರಿಸಲೇಬಾರದು. ಹದಿಹರೆಯದ ಮಕ್ಕಳು ದಿನದಲ್ಲಿ ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ಮೊಬೈಲ್ ಬಳಸಬಾರದು ಎಂದು ಸ್ವೀಡನ್‌ನ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ನೀಡಿದ್ದು, ಈ ಬಗ್ಗೆ ಪೋಷಕರು ಗಮನ ನೀಡುವಂತೆ ಹೇಳಿದೆ.

ಸ್ವೀಡನ್‌ನಲ್ಲಿ ಪ್ರಸ್ತುತ ಮಕ್ಕಳಿಗೆ ಮೊಬೈಲ್ ಸ್ಕ್ರೀನ್ ಸಮಯದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಎರಡರಿಂದ ಐದು ವರ್ಷ ವಯೋಮಾನದವರಲ್ಲಿ ದೈನಂದಿನ ಮೊಬೈಲ್‌ ಅಥವಾ ಟಿವಿ ಸ್ಕ್ರೀನ್‌ ಬಳಕೆಯನ್ನು ಗರಿಷ್ಠ ಒಂದು ಗಂಟೆ, ಆರರಿಂದ 12ರ ನಡುವಿನ ಮಕ್ಕಳಿಗೆ ಎರಡು ಗಂಟೆ ಮತ್ತು ಅನಂತರ 18 ವರ್ಷ ವಯಸ್ಸಿನವರೆಗೆ ಇದು ಮೂರು ಗಂಟೆಗಳನ್ನು ನಿಗದಿಪಡಿಸಲಾಗಿದೆ. ಸ್ವೀಡನ್‌ನಲ್ಲಿ ಪ್ರಸ್ತುತ ಸ್ಕ್ರೀನ್ ಬಳಕೆಯು 9ರಿಂದ 12 ವಯಸ್ಸಿನವರಿಗೆ ದಿನಕ್ಕೆ ನಾಲ್ಕು ಗಂಟೆ ಮತ್ತು 17- 18 ವರ್ಷ ವಯಸ್ಸಿನವರಿಗೆ ದಿನಕ್ಕೆ ಏಳು ಗಂಟೆಗಳಿಗಿಂತ ಹೆಚ್ಚಿದೆ.

ಸ್ವೀಡಿಷ್ ಸರ್ಕಾರದ ಪ್ರಕಾರ, ಹೊಸ ಮಾರ್ಗಸೂಚಿಗಳು ಯುವ ಜನರಲ್ಲಿ ಸ್ಕ್ರೀನ್ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನಗಳಿಗೆ ಅನುಗುಣವಾಗಿವೆ. ಆರೋಗ್ಯ ಸಂಸ್ಥೆಯು ಮಲಗುವ ಮುನ್ನ ಸ್ಕ್ರೀನ್ ಬಳಕೆಯನ್ನು ನಿಯಂತ್ರಿಸಲು ಪೋಷಕರಿಗೆ ಸಲಹೆ ನೀಡುತ್ತಿದೆ. ಉತ್ತಮ ನಿದ್ರೆಯನ್ನು ಉತ್ತೇಜಿಸಲು ರಾತ್ರಿ ತಮ್ಮ ಮಕ್ಕಳು ಮಲಗುವ ಕೋಣೆಗಳಿಂದ ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಹೊರಗಿಡಲು ಶಿಫಾರಸು ಮಾಡುತ್ತಿದೆ.

ಸ್ವೀಡನ್‌ನ ಆರೋಗ್ಯ ಅಧಿಕಾರಿಗಳು ಹದಿಹರೆಯದವರಲ್ಲಿ ಹೆಚ್ಚುತ್ತಿರುವ ನಿದ್ರಾ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 15 ವರ್ಷ ವಯಸ್ಸಿನ ಅರ್ಧಕ್ಕಿಂತ ಹೆಚ್ಚು ಜನರು ಸಾಕಷ್ಟು ನಿದ್ರೆ ಪಡೆಯುತ್ತಿಲ್ಲ. ಹೆಚ್ಚಿನ ಸ್ಕ್ರೀನ್ ಸಮಯವು ನಿದ್ರೆ ಕೊರತೆ, ಖಿನ್ನತೆ ಮತ್ತು ದೇಹದ ಆಲಸ್ಯ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

Ban For Phone Use

ಮಕ್ಕಳಲ್ಲಿ ಕಾಡುತ್ತಿದೆ ಮೆದುಳು ನಿಷ್ಕ್ರಿಯ ಸಮಸ್ಯೆ

ಮಗುವಿನ ಮೆದುಳಿನಲ್ಲಿ ಲಕ್ಷಾಂತರ ನರಗಳು ಬೆಳೆಯುತ್ತಿರುತ್ತವೆ. ಸಂವಹನಕ್ಕೆ ಇದು ಪ್ರಚೋದನೆ ನೀಡುತ್ತಿರುವಾಗ ಹೆಚ್ಚು ಹೊತ್ತು ಸ್ಕ್ರೀನ್ ವೀಕ್ಷಿಸುವುದರಿಂದ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮೆದುಳು ಹೆಚ್ಚು ಬಳಲುತ್ತದೆ, ಮೆದುಳು ನಿಷ್ಕ್ರಿಯ ಸಮಸ್ಯೆ ಕಾಡುತ್ತದೆ ಎಂದು ಹಿರಿಯ ಮನೋವೈದ್ಯರಾದ ಡಾ. ಜೈ. ರಂಜನ್ ರಾಮ್ ಅಭಿಪ್ರಾಯಪಟ್ಟಿದ್ದಾರೆ.

ಸ್ಕ್ರೀನ್ ಟೈಮ್ ಮಾರ್ಗಸೂಚಿ

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಕೆಲವು ವರ್ಷಗಳ ಹಿಂದೆ ಪೋಷಕರಿಗೆ ಸ್ಕ್ರೀನ್ ಟೈಮ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಎರಡು ವರ್ಷದೊಳಗಿನ ಮಕ್ಕಳು ಸಂಬಂಧಿಗಳೊಂದಿಗೆ ಸಾಂದರ್ಭಿಕ ವಿಡಿಯೋ ಕರೆಯನ್ನು ಹೊರತುಪಡಿಸಿ ಯಾವುದೇ ರೀತಿಯ ಡಿಜಿಟಲ್‌ ಪರದೆಗೆ ಒಡ್ಡಿಕೊಳ್ಳಬಾರದು. ಎರಡರಿಂದ ಐದು ವಯಸ್ಸಿನವರಿಗೆ ಇದು ಒಂದು ಗಂಟೆ ಮೀರಬಾರದು ಎಂದು ಶಿಫಾರಸು ಮಾಡಿದೆ.

ಮಕ್ಕಳ ಒಟ್ಟಾರೆ ಅಭಿವೃದ್ಧಿಗೆ ಅಗತ್ಯವಿರುವ ಇತರ ಚಟುವಟಿಕೆಗಳೊಂದಿಗೆ ಸ್ಕ್ರೀನಿಂಗ್‌ ಸಮಯವನ್ನು ಸಮತೋಲನಗೊಳಿಸುವುದು ಮುಖ್ಯವಾಗಿದೆ. ಈ ಚಟುವಟಿಕೆಗಳಲ್ಲಿ ದೈಹಿಕ ಚಟುವಟಿಕೆ, ಸಾಕಷ್ಟು ನಿದ್ರೆಯ ಅವಧಿ, ಶಾಲಾ ಚಟುವಟಿಕೆ, ಊಟ, ಹವ್ಯಾಸಗಳು ಮತ್ತು ಕುಟುಂಬದ ಸಮಯವನ್ನು ಒಳಗೊಂಡಿರುತ್ತದೆ.

ಭಾರತದಲ್ಲೂ ಹೆಚ್ಚುತ್ತಿದೆ ಕಾಳಜಿ

ಭಾರತದಲ್ಲಿಯೂ ಮಕ್ಕಳ ಸ್ಕ್ರೀನಿಂಗ್‌ ಸಮಯವು ಪೋಷಕರು ಮತ್ತು ಆರೋಗ್ಯ ವೃತ್ತಿಪರರಲ್ಲಿ ಆತಂಕ ಉಂಟು ಮಾಡಿದೆ. ಮನಶ್ಶಾಸ್ತ್ರಜ್ಞ ಡಾ. ಆರಿಕ್ ಸಿಗ್ಮನ್ ಅವರು, ಈ ವ್ಯಸನವು ಭಾರತದಲ್ಲಿ ಹಲವಾರು ಅಸ್ವಸ್ಥತೆಗಳಿಗೆ ಕಾರಣವಾಗುತ್ತಿದೆ ಎಂದಿದ್ದಾರೆ. ಮಕ್ಕಳಲ್ಲಿ ಸ್ಕ್ರೀನಿಂಗ್‌ ಸಮಯವನ್ನು ಸೀಮಿತಗೊಳಿಸುವುದು ಅವರ ಬೆಳವಣಿಗೆಗೆ ನಿರ್ಣಾಯಕವಾಗಿದೆ. ಅತಿಯಾದ ಸ್ಕ್ರೀನಿಂಗ್‌ ಬಳಕೆಯು ಚಿಕ್ಕ ಮಕ್ಕಳಲ್ಲಿ ಅರಿವಿನ ಬೆಳವಣಿಗೆಯನ್ನು ವಿಳಂಬಗೊಳಿಸುತ್ತದೆ. ಚಂಚಲತೆ ಹೆಚ್ಚಿಸುತ್ತದೆ. ಸ್ಥೂಲಕಾಯತೆಯ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.

ಚೀನಾದಲ್ಲೂ ಪ್ರಸ್ತಾಪ

1.1 ಶತಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಚೀನಾ, ಹದಿಹರೆಯದವರನ್ನು ಸ್ಮಾರ್ಟ್‌ಫೋನ್‌ಗಳಿಂದ ಪ್ರತ್ಯೇಕಿಸಲು ನಿಯಮಗಳನ್ನು ಪ್ರಸ್ತಾಪಿಸಲು ಮುಂದಾಗಿತ್ತು. ಚೀನಾದ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಷನ್ (ಸಿಎಸಿ) ಬಿಡುಗಡೆ ಮಾಡಿದ ಕರಡು ನಿಯಮಗಳ ಅಡಿಯಲ್ಲಿ, “ಮೈನರ್ ಮೋಡ್” ವೈಶಿಷ್ಟ್ಯವು 16 ಮತ್ತು 17 ವರ್ಷ ವಯಸ್ಸಿನವರನ್ನು ದಿನಕ್ಕೆ ಎರಡು ಗಂಟೆಗಳ ಇಂಟರ್ನೆಟ್ ಬಳಕೆಗೆ ಸೀಮಿತಗೊಳಿಸುತ್ತದೆ.

8 ರಿಂದ 15 ವರ್ಷ ವಯಸ್ಸಿನವರಿಗೆ ಇದು ಒಂದು ಗಂಟೆಗೆ ಸೀಮಿತವಾಗಿರುತ್ತದೆ. ಎಂಟು ವರ್ಷದೊಳಗಿನವರಿಗೆ ಬಳಕೆಯು ದಿನಕ್ಕೆ 40 ನಿಮಿಷಗಳಿಗೆ ಸೀಮಿತವಾಗಿರುತ್ತದೆ. ಇದು ಅಪ್ರಾಪ್ತ ವಯಸ್ಕರು ರಾತ್ರಿ 10 ರಿಂದ ಬೆಳಗ್ಗೆ 6 ರ ನಡುವೆ ಮೊಬೈಲ್ ಬಳಕೆಯನ್ನು ನಿಯಂತ್ರಿಸುತ್ತದೆ ಎಂದು ಕರಡು ಹೇಳಿದೆ.

ಅಮೆರಿಕದಲ್ಲಿ ಅನುಮತಿ ಇಲ್ಲ

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹದಿಹರೆಯದವರು ಶಾಲೆಯ ಹೊರಗೆ ದಿನಕ್ಕೆ ಸರಾಸರಿ ಎಂಟು ಗಂಟೆಗಳ ಕಾಲ ಡಿಜಿಟಲ್‌ ಪರದೆಯಲ್ಲಿ ಸಮಯವನ್ನು ಕಳೆಯುತ್ತಾರೆ ಎಂದು ವರದಿಯಾಗಿದೆ. ದೈನಂದಿನ ಜೀವನದಲ್ಲಿ ಡಿಜಿಟಲ್‌ ಪರದೆಗಳ ಅಬ್ಬರವು ಅನೇಕ ಪೋಷಕರಲ್ಲಿ ತಲ್ಲಣವನ್ನು ಉಂಟು ಮಾಡಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಸ್ಮಾರ್ಟ್‌ಫೋನ್‌ ನಿಷೇಧಕ್ಕೆ ಪ್ರಯತ್ನಿಸಲಾಗುತ್ತಿದೆ. ಸೈಬರ್ ಬೆದರಿಕೆ, ಸ್ಮಾರ್ಟ್‌ಫೋನ್‌, ಸಾಮಾಜಿಕ ಮಾಧ್ಯಮಗಳಿಂದ ಮಕ್ಕಳಿಗೆ ಉಂಟಾಗುತ್ತಿರುವ ಹಾನಿಯನ್ನು ತಪ್ಪಿಸಲು ಪೋಷಕರಿಂದಲೇ ಈ ಒತ್ತಾಯ ಕೇಳಿ ಬಂದಿದೆ.

ಯುಎಸ್ ಸೆನೆಟ್ ಮಕ್ಕಳ ಆನ್‌ಲೈನ್ ಸುರಕ್ಷತಾ ಕಾಯಿದೆ (KOSA) ಮತ್ತು ಮಕ್ಕಳು ಮತ್ತು ಹದಿಹರೆಯದವರ ಆನ್‌ಲೈನ್ ಗೌಪ್ಯತೆ ಸಂರಕ್ಷಣಾ ಕಾಯ್ದೆಯನ್ನು ಅಂಗೀಕರಿಸಿತು. ಇದು ಮಕ್ಕಳನ್ನು ರಕ್ಷಿಸುವ ಮೊದಲ ಪ್ರಮುಖ ಇಂಟರ್ನೆಟ್ ಕಾನೂನುಗಳಾಗಿವೆ.

MB Patil: ಕೈಗಾರಿಕೆ ಪ್ರದೇಶಕ್ಕೆ ಪ್ರತ್ಯೇಕ ನೀರು ಸರಬರಾಜು ಮಾಡಲು ಸರ್ಕಾರದಿಂದ 5 ಸಾವಿರ ಕೋಟಿ ರೂ. ಸಾಲ