Thursday, 19th September 2024

Kolkata Murder Case: ಕೋಲ್ಕತ್ತಾ ಆರ್‌.ಜಿ.ಕರ್‌ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ನಿವಾಸದ ಮನೆ ಮೇಲೆ ಇಡಿ ದಾಳಿ

Kolkata Murder Case

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (RG Kar Medical College and Hospital)ಯಲ್ಲಿ ಕಳೆದ ತಿಂಗಳು ನಡೆದ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Kolkata Murder Case)ದ ಬಳಿಕ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ (Sandip Ghosh) ಎಸಗಿರುವ ಅಪರಾಧ ಕೃತ್ಯ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಅವ್ಯವಹಾರದ ಆರೋಪದ ಹಿನ್ನಲೆಯಲ್ಲಿ ಸಂದೀಪ್ ಘೋಷ್ ನಿವಾಸ ಸೇರಿ 6 ಕಡೆ ಜಾರಿ ನಿರ್ದೇಶನಾಲಯ(Enforcement Directorate) ಶುಕ್ರವಾರ ದಾಳಿ ನಡೆಸಿದೆ.

ಸಂದೀಪ್ ಘೋಷ್ ಮತ್ತು ಆತನ ಸಹಾಯಕರಿಗೆ ಸೇರಿದ 6 ಕಡೆ ದಾಳಿ ನಡೆದಿದೆ. ಆಸ್ಪತ್ರೆಯ ಡೇಟಾ ಎಂಟ್ರಿ ಆಪರೇಟರ್‌ ಪ್ರಸೂನ್‌ ಚಟರ್ಜಿ ಅವರ ಮನೆಯಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಂದೀಪ್ ಘೋಷ್ ಅಧಿಕಾರಾವಧಿಯಲ್ಲಿ ಆಸ್ಪತ್ರೆಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಸೆಪ್ಟೆಂಬರ್‌ 3ರಂದು ಅವರನ್ನು ಬಂಧಿಸಿತ್ತು. ವೈದ್ಯೆಯ ಶವ ಪತ್ತೆಯಾದ ಬಳಿಕ ಪೊಲೀಸ್ ದೂರು ದಾಖಲಿಸಲು ವಿಫಲವಾಗಿರುವುದು ಸೇರಿದಂತೆ ಈ ವಿಷಯದಲ್ಲಿ ನಿರ್ಲಕ್ಷ್ಯದ ಆರೋಪದ ನಂತರ ಈಗಾಗಲೇ ಸಂದೀಪ್ ಘೋಷ್‌ನನ್ನು ಎರಡು ಸುತ್ತಿನ ಪಾಲಿಗ್ರಾಫ್ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ.

ವೈದ್ಯೆಯ ಹತ್ಯೆಗೆ ಸಂಬಂಧಿಸಿದಂತೆ ಸಂದೀಪ್ ಘೋಷ್‌ ಆರೋಪ ಎದುರಿಸದಿದ್ದರೂ ಭ್ರಷ್ಟಾಚಾರದ ಆರೋಪ ಅವರ ಮೇಲಿದೆ. ಭಾರತೀಯ ವೈದ್ಯಕೀಯ ಸಂಘ ಕೂಡ ಅವರ ಸದಸ್ಯತ್ವವನ್ನು ರದ್ದುಪಡಿಸಿದೆ. “ಶವ ಪತ್ತೆಯಾದ ಸುಮಾರು 14 ಗಂಟೆಗಳ ನಂತರ ಎಫ್ಐಆರ್ ದಾಖಲಿಸಲಾಗಿದೆ. ಆಗಿನ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಂದೀಪ್ ಘೋಷ್ ನೇರವಾಗಿ ಬಂದು ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದೇಕೆ?” ಎಂದು ನ್ಯಾಯಾಲಯ ಪ್ರಶ್ನಿಸಿದೆ. ಪ್ರಕರಣದ ಸಂಬಂಧ ಈಗಾಗಲೇ ಪ್ರಮುಖ ಆರೋಪಿ ಸಂಜಯ್‌ ರಾಯ್‌ನನ್ನು ಬಂಧಿಸಲಾಗಿದೆ.

ಪೊಲೀಸರ ವಿರುದ್ಧ ಗಂಭೀರ ಆರೋಪ

ಈ ಮಧ್ಯೆ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಲಂಚದ ಆಮಿಷ ಒಡ್ಡಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆರ್‌.ಜಿ.ಕರ್‌ ಆಸ್ಪತ್ರೆಯಲ್ಲಿ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದು, ಇದರಲ್ಲಿ ಭಾವಹಿಸಿದ ಸಂತ್ರಸ್ತೆಯ ತಂದೆ ಬುಧವಾರ (ಸೆಪ್ಟೆಂಬರ್‌ 4), ಕೋಲ್ಕತ್ತಾ ಪೊಲೀಸರು ಶವವನ್ನು ಅವಸರದಿಂದ ದಹನ ಮಾಡುವ ಮೂಲಕ ಪ್ರಕರಣವನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಆಗಸ್ಟ್ 9ರಂದು ತಮ್ಮ ಮಗಳ ಶವ ಪತ್ತೆಯಾದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ ಮತ್ತು ಘಟನೆ ಬೆಳಕಿಗೆ ಬಂದ ನಂತರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಲಂಚ ನೀಡಲು ಪ್ರಯತ್ನಿಸಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Kolkata rape-murder case : ಆಸ್ಪತ್ರೆಗಳಿಗೆ ಕೊಟ್ಟಿರುವ ಭದ್ರತೆಗಳ ವರದಿ ಕೊಡಿ; ರಾಜ್ಯ ಸರ್ಕಾರಗಳಿಗೆ ಕೇಂದ್ರದ ನಿರ್ದೇಶನ

“ಪೊಲೀಸರು ಮೊದಲಿನಿಂದಲೂ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಶವವನ್ನು ನೋಡಲು ಅವಕಾಶ ನೀಡಲಿಲ್ಲ ಮತ್ತು ಮಗಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯುವಾಗ ಪೊಲೀಸ್ ಠಾಣೆಯಲ್ಲಿ ತುಂಬಾ ಹೊತ್ತು ಕಾಯಿಸಿದ್ದಾರೆ. ನಂತರ ಶವವನ್ನು ನಮಗೆ ಹಸ್ತಾಂತರಿಸುವಾಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಮಗೆ ಹಣವನ್ನು ನೀಡಲು ಮುಂದೆ ಬಂದರು. ಅದನ್ನು ನಾವು ನಿರಾಕರಿಸಿದ್ದೇವೆ” ಎಂದು ಸಂತ್ರಸ್ತೆಯ ತಂದೆ ವಿವರಿಸಿದ್ದಾರೆ. ಈ ಪ್ರಕರಣವನ್ನು ಕೋಲ್ಕತ್ತಾ ಹೈಕೋರ್ಟ್‌ ಸಿಬಿಐಗೆ ಹಸ್ತಾಂತರಿಸಿದೆ. ತನಿಖೆ ಪ್ರಗತಿಯಲ್ಲಿದೆ.