Friday, 22nd November 2024

Viral Video: ಮತಾಂತರಕ್ಕೆ ಯತ್ನಿಸುತ್ತಿದ್ದಾನೆ… ತರಗತಿಗೆ ನಾನ್‌ವೆಜ್‌ ಊಟ ತಂದ ವಿದ್ಯಾರ್ಥಿ ಡಿಬಾರ್‌-ಪ್ರಿನ್ಸಿಪಾಲ್‌ ವಿಡಿಯೋ ವೈರಲ್‌

ಲಕ್ನೋ: ಹೆಚ್ಚು ಓದಿದವರೇ ಕೆಲವೊಮ್ಮೆ ಅಜ್ಞಾನಿಗಳಂತೆ ವರ್ತಿಸುವುದನ್ನು ನಾವು ಕಂಡಿರುತ್ತೇವೆ. ವಿದ್ಯಾರ್ಥಿಗಳ ತಿದ್ದಿ ಬುದ್ದಿ ಹೇಳಿ ಸರಿದಾರಿಗೆ ತರಬೇಕಾಗಿದ್ದ ಗುರುವೇ ಜಾತಿ ಧರ್ಮದ ವಿಷಬೀಜವನ್ನು ವಿದ್ಯಾರ್ಥಿಗಳ ತಲೆಯಲ್ಲಿ ಬಿತ್ತಿದರೆ ಹೇಗೆ? ಇದೀಗ ಅಂತಹದ್ದೇ ಒಂದು ಮೂರ್ಖತನದ ಕಾರ್ಯದಿಂದ ಶಾಲಾ ಮುಖ್ಯೋಪಾಧ್ಯಾಯರೊಬ್ಬ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ತರಗತಿಗೆ ಮಾಂಸಾಹಾರ ಊಟವನ್ನು ತಂದ ಕಾರಣಕ್ಕೆ ಆತನನ್ನು ಬೈದು ಶಾಲೆಯಿಂದಲೇ ಡಿಬಾರ್‌ ಮಾಡಿರುವ ಘಟನೆಯೊಂದು ಉತ್ತರಪ್ರದೇಶ(Uttarpredesh)ದಲ್ಲಿ ಬೆಳಕಿಗೆ ಬಂದಿದೆ. ಇನ್ನು ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ.

ಏನಿದು ಘಟನೆ?

ಅಮ್ರೋಹ ಜಿಲ್ಲೆಯಲ್ಲಿರುವ ಖಾಸಗಿ ಶಾಲೆ ಹಿಲ್ಟನ್‌ ಕಾನ್ವೆಂಟ್‌ನ ಮುಸ್ಲಿಂ ಬಾಲಕನೋರ್ವ ಮಧ್ಯಾಹ್ನದ ಊಟಕ್ಕೆಂದು ಮಾಂಸಾಹಾರವನ್ನು ಬುತ್ತಿಯಲ್ಲಿ ತಂದಿದ್ದ. ಈ ವಿಚಾರ ತಿಳಿದು ಶಾಲೆಯ ಪ್ರಿನ್ಸಿಪಾಲ್‌ ಬಾಲಕನನ್ನು ಬೈದು ಶಾಲೆಯಿಂದಲೇ ಡಿಬಾರ್‌ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಾಲಕ ಸಮೇತ ಆತನ ತಾಯಿ ಶಾಲೆಗೆ ಬಂದು ಪ್ರಾಂಶುಪಾಲರನ್ನು ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ನಿಮ್ಮ ಮಗ ನಿತ್ಯ ಮಾಂಸಾಹಾರವನ್ನೇ ಬುತ್ತಿಗೆ ತರುತ್ತಿದ್ದಾನೆ. ಅದನ್ನು ಪ್ರಶ್ನಿಸಿದಾಗ ಇತರ ಧರ್ಮದ ವಿದ್ಯಾರ್ಥಿಗಳಿಗೆ ಮಾಂಸಾಹಾರವನ್ನು ತಿನ್ನಿಸಿ ಅವರನ್ನು ಇಸ್ಲಾಂಗೆ ಮತಾಂತರ ಮಾಡುವುದಾಗಿ ಹೇಳುತ್ತಿದ್ದಾನೆ. ಅಲ್ಲದೇ ಹಿಂದೂ ದೇಗುಲಗಳನ್ನು ಧ್ವಂಸಗೊಳಿಸುವುದಾಗಿಯೂ ಹೇಳುತ್ತಾನೆ. ನಿಮ್ಮ ಮನೆಯಲ್ಲಿ ಇದೇನಾ ಕಲಿಸುತ್ತಿರುವುದು ಎಂದು ಪ್ರಿನ್ಸಿಪಾಲ್‌ ಮಹಿಳೆಯನ್ನು ಗದರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಹಿಳೆ, ಕಳೆದ ಮೂರು ತಿಂಗಳಿಂದ ತರಗತಿಯಲ್ಲಿರುವ ಇತರೇ ವಿದ್ಯಾರ್ಥಿಗಳು ಹಿಂದೂ ಮುಸ್ಲಿಂ ಎಂದು ಬೇಧ ಭಾವ ಮಾಡುತ್ತಿದ್ದಾರೆ ಎಂದು ಹೇಳಿದ್ದಾಳೆ. ಆಗ ಪ್ರಿನ್ಸಿಪಾಲ್‌ ಇದನ್ನೆಲ್ಲಾ ಅವನ ತಲೆಗೆ ತುಂಬುತ್ತಿರುವವರು ನೀವು. ಇನ್ನು ಮುಂದೆ ನಅನು ಅವನಿಗೆ ಕಲಿಸುವುದಿಲ್ಲ ಎಂದು ಹೇಳಿದ್ದಾರೆ.

ವೀಡಿಯೊ ವೈರಲ್ ಆಗುತ್ತಿದ್ದಂತೆ, ಅಮ್ರೋಹಿಯ ಮುಸ್ಲಿಂ ಸಮಿತಿಯು ಜಿಲ್ಲಾಧಿಕಾರಿಗೆ ಪತ್ರ ಬರೆದು, ಪ್ರಾಂಶುಪಾಲರನ್ನು ಬಂಧಿಸಬೇಕು ಮತ್ತು ಶಾಲೆಯ ಸಂಬಂಧವನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದೆ. ಅಮ್ರೋಹದ ಮೂಲ ಶಿಕ್ಷಣಾಧಿಕಾರಿ ಈ ವಿಷಯದ ಬಗ್ಗೆ ತನಿಖೆ ನಡೆಸಲು ಮೂರು ಸರ್ಕಾರಿ ಶಾಲೆಗಳ ಪ್ರಾಂಶುಪಾಲರ ತಂಡವನ್ನು ರಚಿಸಿ ಮೂರು ದಿನಗಳೊಳಗೆ ತಮ್ಮ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.

ಈ ಸುದ್ದಿಯನ್ನೂ ಓದಿ: Justin Trudeau: ಒಂದು ಕ್ಷಣಕ್ಕೂ ನಿಮ್ಮನ್ನು ನಂಬಲ್ಲ…ಜಸ್ಟಿನ್‌ ಟ್ರೂಡೊ ವಿರುದ್ಧ ಸಿಟ್ಟಿಗೆದ್ದ ಕಾರ್ಮಿಕ-ವಿಡಿಯೋ ವೈರಲ್‌