Thursday, 12th December 2024

Diamond League final: ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ

Diamond League final

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್(Paris Olympics) ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಡೈಮಂಡ್ ಲೀಗ್ ಫೈನಲ್‌ಗೆ(Diamond League final) ಅರ್ಹತೆ ಪಡೆದಿದ್ದಾರೆ. ಎರಡು ದಿನಗಳ ಈವೆಂಟ್ ಬ್ರಸೆಲ್ಸ್‌ನಲ್ಲಿ ಸೆಪ್ಟೆಂಬರ್ 13 ಮತ್ತು 14 ರಂದು ನಡೆಯಲಿದೆ. ನೀರಜ್‌ ಜತೆಗೆ ಪ್ಯಾರಿಸ್ ಗೇಮ್ಸ್ ಕಂಚಿನ ಪದಕ ವಿಜೇತ ಆಂಡರ್ಸನ್ ಪೀಟರ್ಸ್, ಜೂಲಿಯನ್ ವೆಬ್ಬರ್, ಜಾಕುಬ್ ವಡ್ಲೆಜ್, ಆಂಡ್ರಿಯನ್ ಮರ್ಡೇರ್ ಮತ್ತು ರೋಡ್ರಿಕ್ ಗೆಂಕಿ ಡೀನ್ ಅರ್ಹತೆ ಪಡೆದ ಉಳಿದ ಜಾವೆಲಿನ್‌ ಪಟುಗಳು. ಒಟ್ಟು 6 ಮಂದಿ ನೇರವಾಗಿ ಫೈನಲ್‌ ಪ್ರವೇಶಿಸಿದರು. ಲೌಸನ್ನೆಯಲ್ಲಿ ಕಳೆದ ತಿಂಗಳು ನಡೆದಿದ್ದ ಡೈಮಂಡ್ ಲೀಗ್‌ ಸ್ಪರ್ಧೆಯಲ್ಲಿ ನೀರಜ್‌ ಈ ಋತುವಿನ ಅತ್ಯುತ್ತಮ 89.49 ಮೀಟರ್ ಎಸೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದರು.

ನೀರಜ್ ಚೋಪ್ರಾ ಡೈಮಂಡ್ ಲೀಗ್ ಸ್ಟ್ಯಾಂಡಿಂಗ್‌ನಲ್ಲಿ 15 ಅಂಕಗಳೊಂದಿಗೆ ವೆಬ್ಬರ್ ಜತೆಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಪೀಟರ್ಸ್ 21 ಅಂಕಗಳೊಂದಿಗೆ ಅಗ್ರಸ್ಥಾನ, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು.

ಇದನ್ನೂ ಓದಿ US Open: ಸಬಲೆಂಕಾ-ಪೆಗುಲಾ ಫೈನಲ್‌ ಫೈಟ್‌

ಹಲವು ವರ್ಷಗಳಿಂದ 90 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವುದಕ್ಕೆ ಸತತ ಪ್ರಯತ್ನ ನಡೆಸುತ್ತಿರುವ ನೀರಜ್​ ಇನ್ನು ಮುಂದೆ 90 ಮೀ. ಗುರಿಯನ್ನು ದೇವರಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ. ನೀರಜ್​ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು.

ಗಾಯದ ಮಧ್ಯೆಯೂ 26ರ ಹರೆಯದ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ನೀರಜ್​ ಅವರು ಜರ್ಮನಿಯಲ್ಲಿ ತೊಡೆಸಂಧು ನೋವಿಗೆ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಡೈಮಂಡ್‌ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಚಿಕಿತ್ಸೆಯನ್ನು ಮುಂದೂಡಿದ್ದರು. ಫೈನಲ್‌ ಮುಕ್ತಾಯದ ಬಳಿಕ ನೀರಜ್‌ ಮತ್ತೆ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.