ಕೊಚ್ಚಿ: ಭಾನುವಾರ (ಸೆಪ್ಟೆಂಬರ್ 8) ನಿರ್ಮಾಣ ಕಾಮಗಾರಿ ಆರಂಭವಾಗಲಿರುವ ತಿರುವನಾಯ-ತವನೂರು ಸೇತುವೆ (Thiruvanaya-Thavanur Bridge)ಯ ವಿರುದ್ಧ ʼಮೆಟ್ರೋ ಮ್ಯಾನ್ʼ (Metro Man) ಖ್ಯಾತಿಯ ಇ.ಶ್ರೀಧರನ್ (E Sreedharan) ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಭಾರತಪುಳ (Bharathapuzha) ನದಿಗೆ ಅಡ್ಡಲಾಗಿ ನಿರ್ಮಿಸುವ ಸೇತುವೆಯ ಮರು ವಿನ್ಯಾಸಗೊಳಿಸಬಹುದಾದ ಸಾಧ್ಯತೆಗಳನ್ನು ಪರಿಗಣಿಸದಿರುವ ಸರ್ಕಾರದ ನಡೆಯನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Public Interest Litigation)ಯನ್ನು ಸಲ್ಲಿಸಿದ್ದಾರೆ. ಭಾರತಪುಳ ನದಿ ದಡದಲ್ಲಿರುವ ದೇವಾಲಯಗಳ ಪಾವಿತ್ರ್ಯ ಮತ್ತು ಅಸ್ತಿತ್ವಕ್ಕೆ ಧಕ್ಕೆ ತರದ ರೀತಿಯಲ್ಲಿ ಸೇತುವೆ ನಿರ್ಮಾಣ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸದ್ಯ ಸರ್ಕಾರ ಯೋಜನೆ ಹಾಕಿಕೊಂಡಿರುವ ಕಾಮಗಾರಿ ಪ್ರಕಾರ ಧಾರ್ಮಿಕ ಮಹತ್ವ ಹೊಂದಿರುವ ದೇವಸ್ಥಾನಗಳಿಗೆ ಧಕ್ಕೆ ಉಂಟಾಗುತ್ತದೆ. ಈ ವಿನ್ಯಾಸವನ್ನು ಬದಲಾಯಿಸಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಸೇತುವೆಯ ಮರುವಿನ್ಯಾಸವನ್ನು ಉಚಿತವಾಗಿ ಮಾಡಿಕೊಡುವುದಾಗಿಯೂ ಅವರು ಸರ್ಕಾರಕ್ಕೆ ತಿಳಿಸಿದ್ದಾರೆ.
ಖರ್ಚೂ ಕಡಿಮೆ
ತಾವು ರಚಿಸಿದ ವಿನ್ಯಾಸದಲ್ಲಿ ಸೇತುವೆ ನಿರ್ಮಿಸಿದರೆ ಖರ್ಚೂ ಕಡಿಮೆಯಾಗುತ್ತದೆ ಎಂದು ಇ.ಶ್ರೀಧರನ್ ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯ ಲೋಕೋಪಯೋಗಿ ಸಚಿವ ಪಿ.ಎ.ಮೊಹಮ್ಮದ್ ರಿಯಾಸ್ ಅವರಿಗೆ ಬರೆದ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಲಭಿಸದ ಹಿನ್ನಲೆಯಲ್ಲಿ ಮೆಟ್ರೋ ಮ್ಯಾನ್ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
92 ವರ್ಷದ ಇ.ಶ್ರೀಧರನ್ ಸಲ್ಲಿಸಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ.ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್.ಮನು ಅವರನ್ನೊಳಗೊಂಡ ವಿಭಾಗೀಯ ಪೀಠ ಸ್ವೀಕರಿಸಿದ್ದು, ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪ್ರಸ್ತಾವಿತ ಸೇತುವೆಯು ಭಾರತಪುಳ ನದಿಯ ಉತ್ತರ ದಂಡೆಯಲ್ಲಿರುವ ಮಲಪ್ಪುರಂ ಜಿಲ್ಲೆಯ ತಿರುನವಾಯದ ವಿಷ್ಣು ದೇವಾಲಯವನ್ನು ನದಿಯ ದಕ್ಷಿಣ ದಂಡೆಯಲ್ಲಿರುವ ತವನೂರಿನ ಬ್ರಹ್ಮ ಮತ್ತು ಶಿವ ದೇವಾಲಯಗಳಿಂದ ಬೇರ್ಪಡಿಸುತ್ತದೆ ಎಂದು ಹೇಳಿರುವ ಇ.ಶ್ರೀಧರನ್ ಅವರು ಇದರಿಂದ ಅಸಂಖ್ಯಾತ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
ಅಲ್ಲದೆ ಉದ್ದೇಶಿತ ಸೇತುವೆ ನಿರ್ಮಾಣ ಕಾಮಗಾರಿ ‘ಕೇರಳ ಗಾಂಧಿ’ ಎಂದು ಕರೆಯಲ್ಪಡುವ ದಿವಂಗತ ಕೆ.ಕೇಲಪ್ಪನ್ ಅವರ ಸಮಾಧಿಯನ್ನು ಅತಿಕ್ರಮಿಸಲಿದೆ ಎಂದೂ ತಿಳಿಸಿದ್ದಾರೆ. ಹೀಗಾಗಿ ಸೇತುವೆಗೆ ಪರ್ಯಾಯ ಮಾರ್ಗ ಪರಿಗಣಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಇ.ಶ್ರೀಧರನ್ ಮನವಿ ಮಾಡಿದ್ದಾರೆ. ನಿರ್ಮಾಣವು ಭಾನುವಾರ ಪ್ರಾರಂಭವಾಗಲಿದೆ ಎಂಬುದನ್ನು ಅವರು ಅರ್ಜಿಯಲ್ಲಿ ನೆನಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Haryana Polls: ಕುಸ್ತಿಪಟು ವಿನೇಶ್ ಪೋಗಟ್ ಜೂಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ
ʼಮೆಟ್ರೋ ಮ್ಯಾನ್ʼ ಖ್ಯಾತಿಯ ಇ.ಶ್ರೀಧರನ್ 2021ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಪಾಲಕ್ಕಾಡಿನಿಂದ ಕಣಕ್ಕಿಳಿದ್ದಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿ ಶಫಿ ಪರಂಬಿಲ್ ಎದುರು ವಿರುದ್ಧ ಸೋತಿದ್ದರು. 1995ರಿಂದ 2012ರ ನಡುವೆ ದಿಲ್ಲಿ ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಕೊಂಕಣ ರೈಲ್ವೆ ಮತ್ತು ದಿಲ್ಲಿ ಮೆಟ್ರೋವನ್ನು ನಿರ್ಮಿಸಿದ ನಂತರ ಭಾರತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬದಲಾಯಿಸಿದ ಕೀರ್ತಿ ಅವರದ್ದು.