Friday, 22nd November 2024

Ganesh Chaturthi: ಗಣೇಶ ಚೌತಿಗೆ ಮಾತ್ರ ಯಾಕೆ, ಇಪ್ತಾರ್‌ ಕೂಟಕ್ಕೂ ನಿಯಮ ಮಾಡಲಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತರಾಟೆ

prahlad joshi

ಹುಬ್ಬಳ್ಳಿ: ಗಣೇಶ ಚತುರ್ಥಿಯ (Ganesh Chaturthi) ಸಂದರ್ಭದ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪ್ರಸಾದ ಸಿದ್ಧಪಡಿಸಲು ಆಹಾರ ಸುರಕ್ಷತಾ ಇಲಾಖೆ ಪರವಾನಿಗೆ (ಎಫ್‌ಎಸ್‌ಎಸ್‌ಎಐ – FSSAI) ಪಡೆದವರೇ ಆಗಬೇಕು ಎಂದಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಆಹಾರ ಇಲಾಖೆ ಹುಚ್ಚರ ರೀತಿಯಲ್ಲಿ ಇಂಥ ಆದೇಶ ಹೊರಡಿಸಿದೆ ಅಷ್ಟೇ ಎಂದು ಟೀಕಿಸಿದರು. ಎಂಪ್ಯಾನಲ್ ಅದವರಿಂದಲೇ ಪ್ರಸಾದ ತಯಾರಿಸಬೇಕು ಎಂದಿರುವ ರಾಜ್ಯ ಸರ್ಕಾರದ ಈ ಸೂಚನೆ ಸರಿಯಲ್ಲ ಎಂದು ಖಂಡಿಸಿದರು

ಗಣೇಶ ಹಬ್ಬದ ವೇಳೆ ದೇಶಾದ್ಯಂತ, ರಾಜ್ಯಾದ್ಯಂತ ಬಹಳ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆಹಾರ ಸುರಕ್ಷಾ ಕ್ರಮ ಕೈಗೊಳ್ಳುವುದು ಸರಿ. ಆದರೆ, ಹೀಗೆ ಹುಚ್ಚರ ರೀತಿ ಅಲ್ಲ ಎಂದು ರಾಜ್ಯ ಸರ್ಕಾರವನ್ನು ತಿವಿದರು.

ರಾಜ್ಯದಲ್ಲಿ ಹಿಂದೂ ಹಬ್ಬಕ್ಕೆ ತೊಂದರೆ ಕೊಡಲೆಂದೇ ರಾಜ್ಯ ಸರ್ಕಾರದಿಂದ ಇಂಥ ಆದೇಶ ಹೊರ ಬಿದ್ದಿದೆ. ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘಟಕರು ಇದಕ್ಕೆ ಕಿವಿಗೊಡಬೇಕಿಲ್ಲ ಎಂದು ಹೇಳಿದರು. ಎಲ್ಲಾದರೂ ದುರುದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸುವಂತ ಪ್ರಕರಣ ನಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಿ. ಆದರೆ ಸರ್ಕಾರವೇ ಹೀಗೆ ದುರುದ್ದೇಶ ಇಟ್ಟುಕೊಂಡು ಆದೇಶ ಹೊರಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಹಿಂದೂಗಳ ಹಬ್ಬ ಬಂದಾಗ ಮಾತ್ರ ಆಹಾರ ಸುರಕ್ಷತಾ ನಿಯಮ ಇರೋದು ನೆನಪಾಗುತ್ತದೆಯೇ? ಎಂದ ಸಚಿವ ಜೋಶಿ, ಇಫ್ತಿಯಾರ್ ಕೂಟ ಇದ್ದಾಗ ಇಂಥ ಆದೇಶ ಹೊರಡಿಸಿ ನೋಡೋಣ ಎಂದು ಸವಾಲು ಹಾಕಿದರು.

ಗಣೇಶ ಪೆಂಡಾಲ್ ಗಳಲ್ಲಿ ಪ್ರಸಾದ ತಯಾರಿಕೆ ವೇಳೆ ಸ್ವಚ್ಛತೆ, ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಸಚಿವರು, ಅಗತ್ಯ ಬಿದ್ದರೆ ರಾಜ್ಯ ಸರ್ಕಾರದ ಈ ಆದೇಶ ಧಿಕ್ಕರಿಸಿ ಎಂದು ಕರೆ ಕೊಟ್ಟರು.

ಈ ಸುದ್ದಿ ಓದಿ: Prahlad Joshi: ಲೋಕಸಭೆ, ವಿಧಾನಸಭೆ ನಮಾಜ್ ಮಾಡುವ ಸ್ಥಳವೇ? ಪ್ರಹ್ಲಾದ್‌ ಜೋಶಿ ಕಿಡಿ