Friday, 22nd November 2024

ರುಬಿಯಾ ಸಯೀದ್ ಪ್ರಕರಣದಲ್ಲಿ ಉಗ್ರರನ್ನು ಬಿಡದಿದ್ದರೆ ಕಂದಹಾರ್ ವಿಮಾನ ಅಪಹರಣ ನಡೆಯುತ್ತಿರಲಿಲ್ಲ; ಒಮರ್ ಅಬ್ದುಲ್ಲಾ

Omar Abdullah

ಶ್ರೀನಗರ: ರುಬಿಯಾ ಸಯೀದ್ (Rubaiya Syed) ಅಪಹರಣ ಪ್ರಕರಣದಲ್ಲಿ ಉಗ್ರರನ್ನು ಬಿಡದಿದ್ದರೆ ಕಂದಹಾರ್ ವಿಮಾನ ಹೈಜಾಕ್‌ ನಡೆಯುತ್ತಿರಲಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಅಭಿಪ್ರಾಯ ಪಟ್ಟಿದ್ದಾರೆ. ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. 1999ರ ಐಸಿ 814 ವಿಮಾನ ಅಪಹರಣ ಘಟನೆಯ ಸಂದರ್ಭದಲ್ಲಿ ತಮ್ಮ ತಂದೆ ಫಾರೂಕ್ ಅಬ್ದುಲ್ಲಾ (Farooq Abdullah) ಎದುರಿಸಿದ ಕಠಿಣ ಪರಿಸ್ಥಿತಿಗಳ ಬಗ್ಗೆಯೂ ಅವರು ಈ ವೇಳೆ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಒಮರ್ ಅಬ್ದುಲ್ಲಾ1989ರಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿಗಳಿಂದ ಅಪಹರಣಕ್ಕೊಳಗಾದ ಮಾಜಿ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಪ್ರಕರಣವನ್ನು ಅವರು ಉಲ್ಲೇಖಿಸಿದ್ದಾರೆ. ರುಬಿಯಾ ಅವರ ಸುರಕ್ಷಿತ ಬಿಡುಗಡೆಗಾಗಿ ವಿ.ಪಿ.ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ಜೈಲಿನಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‌ನ ಐವರು ಭಯೋತ್ಪಾದಕರನ್ನು ಬಿಡುಗಡೆ ಮಾಡಿತ್ತು.

ಒಮರ್ ಅಬ್ದುಲ್ಲಾ ಹೇಳಿದ್ದೇನು?

ಈ ಬಗ್ಗೆ ಮಾತನಾಡಿದ ಒಮರ್ ಅಬ್ದುಲ್ಲಾ, “ಐಸಿ 814 ವಿಮಾನ ಅಪಹರಣ ಮತ್ತು ರುಬಿಯಾ ಸಯೀದ್ ಅಪಹರಣ ಪ್ರಕರಣ ಸೇರಿ ತಂದೆ ಎರಡೆರಡು ಬಾರಿ ಉಗ್ರರನ್ನು ಬಿಡುಗಡೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದರು. ಐಸಿ 814 ವಿಮಾನ ಹೈಜಾಕ್‌ ಮಾಡಿದ ಅಪಹರಣಕಾರರು ಬಂಧನದಲ್ಲಿದ್ದ ಉಗ್ರರ ಬಿಡುಗಡೆಯ ಬೇಡಿಕೆ ಸಲ್ಲಿಸಿದ್ದರು. ಆಗ ಒತ್ತೆಯಾಳುಗಳಾಗಿದ್ದವರ ಕುಟುಂಬಸ್ಥರು, ಗೃಹ ಸಚಿವರ ಮಗಳಿಗಾಗಿ ನೀವು ಭಯೋತ್ಪಾದಕರನ್ನು ಬಿಡುಗಡೆ ಮಾಡಬಹುದಾದಾಗ, ನಮ್ಮ ಕುಟುಂಬ ಅಮೂಲ್ಯವಲ್ಲವೇ? ಎಂದು ಪ್ರಶ್ನಿಸಿದ್ದರು. ರುಬಿಯಾ ಸಯೀದ್ ನಿಮಗೆ ಅಮೂಲ್ಯವಾಗಿದ್ದರೆ, ನಮ್ಮ ಕುಟುಂಬವು ನಮಗೆ ಅಮೂಲ್ಯ ಎಂದು ಹೇಳಿದ್ದರು” ಎಂದು ವಿವರಿಸಿದ್ದಾರೆ.

ಇತ್ತೀಚೆಗೆ ನೆಟ್‌ಫ್ಲಿಕ್‌ನಲ್ಲಿ ಪ್ರಸಾರ ಆರಂಭಿಸಿದ 1999ರ ಐಸಿ 814 ವಿಮಾನ ಅಪಹರಣವನ್ನು ಆಧರಿಸಿದ ʼಐಸಿ 814: ದಿ ಕಂದಾಹಾರ್‌ ಹೈಜಾಕ್‌ʼ ವೆಬ್‌ ಸಿರೀಸ್‌ನಲ್ಲಿ ಮುಸ್ಲಿಂ ಭಯೋತ್ಪಾದಕರಿಗೆ ಹಿಂದೂಗಳ ಹೆಸರನ್ನಿಟ್ಟಿರುವುದು ವಿವಾದಕ್ಕೆ ಕಾರಣವಾಗಿದ್ದು, ಈ ಹಿನ್ನಲೆಯಲ್ಲಿ ಘಟನೆ ಮತ್ತೆ ಚರ್ಚೆ ನಡೆಯುತ್ತಿದೆ.

ಮಾತುಕತೆ ನಡೆಸಬಾರದಿತ್ತು

“ರುಬಿಯಾ ಸಯೀದ್ ಅಪಹರಣದ ವೇಳೆ ಭಾರತ ಸರ್ಕಾರಕ್ಕೆ ಒಂದು ಅವಕಾಶವಿತ್ತು. ಈ ವೇಳೆ ಕೇಂದ್ರ ಸರ್ಕಾರ ಭಯೋತ್ಪಾದಕರೊಂದಿಗೆ ಮಾತುಕತೆ ನಡೆಸಬಾರದಿತ್ತು ಎನ್ನುವುದು ನನ್ನ ಅಭಿಪ್ರಾಯ. ಆದರೆ ಸರ್ಕಾರ ಉಗ್ರರೊಂದಿಗೆ ಮಾತುಕತೆ ನಡೆಸಿತ್ತು. ಒಮ್ಮೆ ನೀವು ಆ ನಿರ್ಧಾರ ಕೈಗೊಂಡರೆ ಮತ್ತೆ ಅದೇ ದಾರಿಯಲ್ಲಿ ಸಾಗಬೇಕಾಗುತ್ತದೆ. ಅದಕ್ಕೆ 1999ರ ಐಸಿ 814 ವಿಮಾನ ಅಪಹರಣ ಘಟನೆಯೇ ಸಾಕ್ಷಿ” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: IC-814 The Kandahar Hijack: ಮಸೂದ್‌ ಅಜರ್‌ ಬಿಡುಗಡೆ ಹಿಂದಿನ ಚಿತ್ರಣ ಬಹಿರಂಗಪಡಿಸಿದ ಮಾಜಿ ಪೊಲೀಸ್‌ ಅಧಿಕಾರಿ

ಅಫ್ಜಲ್ ಗುರುವಿನ ಮರಣದಂಡನೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಈ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದೂ ಒಮರ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ. ಒಂದುವೇಳೆ ರಾಜ್ಯದ ಅನುಮತಿ ಅಗತ್ಯವಿದ್ದರೆ ನೀಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.