ಬೋಧಿವೃಕ್ಷ
ಪ್ರೊ.ಸಿ.ಶಿವರಾಜು
ಆಸೆಯೇ ದುಃಖಕ್ಕೆ ಮೂಲ ಎಂದಾದರೆ ಆಸೆಯನ್ನು ತ್ಯಜಿಸಿದವರು ಮಹಾತ್ಮರಾಗುತ್ತಾರೆ. ಅಂತಹವರೇ ಮನುಕುಲದ ಒಳಿತಿಗೆ ಕಾರಣರಾಗುತ್ತಾರೆ. ಆಸೆಯಿಂದಲೇ ಸೃಷ್ಟಿ, ಆಸೆಯಿಂದಲೇ ಸ್ಥಿತಿ ಮತ್ತು ಆಸೆ ಯಿಂದಲೇ ವಿನಾಶ. ಮಾನವನಿಗೆ ದುರಾಸೆಯಾದರೆ ಮಾನವೇತರ ಜೀವಿಗಳದ್ದು ಹಾಗಲ್ಲ. ತಾನು ಬದುಕಿ ಇತರರನ್ನೂ ಬದುಕಲು ಅನುವು ಮಾಡಿಕೊಡುವ ಸಹೃದಯದಿಂದ ಕೂಡಿವೆ.
ಆಸೆ ಯಾರಿಗಿಲ್ಲ ಹೇಳಿ: ಈ ಜಗತ್ತಿನಲ್ಲಿ ಆಸೆ ಇಲ್ಲದ ಮನುಷ್ಯನಿಲ್ಲ, ಆಸೆ ಎಂಬ ಎರಡಕ್ಷರ ಮನುಷ್ಯನನ್ನು ವಿಚಲಿತನನ್ನಾಗಿ ಮಾಡುತ್ತದೆ. ಸ್ವಾರ್ಥದಿಂದ ಆಸೆಯೇ ಅಥವಾ ಆಸೆಯಿಂದ ಸ್ವಾರ್ಥವೇ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕುವ ಒಂದು ಸಣ್ಣ ಪ್ರಯತ್ನ ಮಾಡಲಾಗಿದೆ. ‘ಆಸೆ ಇರಬೇಕು, ದುರಾಸೆ ಇರಬಾರದು’ ಎಂದು ನಮ್ಮ ಹಿರಿಯರು ಹೇಳಿರುವ ಮಾತು ಪ್ರಚಲಿತವಾಗಿದೆ.
ಗೌತಮ ಬುದ್ಧ ಆಸೆಯನ್ನು ಕುರಿತು ‘ಆಸೆಯೇ ದುಃಖಕ್ಕೆ ಕಾರಣ’ ಎಂಬ ವಿಶ್ವ ಸಂದೇಶವನ್ನು ಸಾರಿದ್ದಾರೆ. ‘ಆಸೆಯ ಮಿತಿಯೇ ಸುಖದ ಮೂಲ’ ಭೂಮಿಯ ಮೇಲೆ ವಾಸಿಸುವ ಪಶು, ಪಕ್ಷಿ, ಪ್ರಾಣಿ, ಮನುಷ್ಯ ಹಾಗೂ ಜಲಚರಾದಿ ಗಳಿಗೂ ಆಸೆ ಇದ್ದೇ ಇರುತ್ತದೆ. ಆಸೆ ಇಲ್ಲದಿದ್ದರೆ ಬದುಕುವುದಕ್ಕೆ ಆಗುವುದಿಲ್ಲ ಅಥವಾ ಬದುಕಿಗೆ ಅರ್ಥವಿರುವು ದಿಲ್ಲ. ಆಸೆ ಎಂಬ ಕನಸು ಮುಂದೊಂದು ದಿನ ಈಡೇರುತ್ತದೆ ಎಂಬ ನಂಬಿಕೆಯಿಂದ ಮನುಷ್ಯ ಜೀವನ ಸಾಗಿಸು ತ್ತಿರುತ್ತಾನೆ. ಆಸೆಗೆ ಯಾವಾಗಲೂ ಕೊನೆ ಎನ್ನುವುದಿಲ್ಲ.
‘ಹಾಸಿಗೆ ಇದ್ದಷ್ಟು ಕಾಲ ಚಾಚು’ ಎಂಬ ಗಾದೆ ಮಾತನ್ನು ನಾವು ಕೇಳಿದ್ದೇವೆ. ಆಸೆಗೆ ಅಂಕುಶವನ್ನು ಹಾಕದಿದ್ದಲ್ಲಿ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ. ಆಸೆಯೇ ದುಃಖಕ್ಕೆ ಮೂಲ ಎಂದಾದರೆ ಆಸೆಯನ್ನು ತ್ಯಜಿಸಿ ದವರು ಮಹಾತ್ಮರಾಗುತ್ತಾರೆ. ಅಂತಹವರೇ ಮನುಕುಲದ ಒಳಿತಿಗೆ ಕಾರಣರಾಗುತ್ತಾರೆ. ಆಸೆಯಿಂದಲೇ ಸೃಷ್ಟಿ, ಆಸೆಯಿಂದಲೇ ಸ್ಥಿತಿ ಮತ್ತು ಆಸೆಯಿಂದಲೇ ವಿನಾಶ. ಮಾನವನಿಗೆ ದುರಾಸೆಯಾದರೆ ಮಾನವೇತರ ಜೀವಿಗಳದ್ದು ಹಾಗಲ್ಲ. ತಾನು ಬದುಕಿ ಇತರರನ್ನೂ ಬದುಕಲು ಅನುವು ಮಾಡಿಕೊಡುವ ಸಹೃದಯದಿಂದ ಕೂಡಿವೆ. ಆ
ಬಗೆಯ ಆಸೆಯನ್ನೇ ಬಹುಶಃ ಮಹಾಪುರುಷರು ಮನುಷ್ಯರಾದ ನಮ್ಮಿಂದ ಅಪೇಕ್ಷಿಸುವುದು. ಆಸೆಯೆಂದರೆ ಸಾಮಾನ್ಯ ಮನುಷ್ಯರಿಗಿರುವ ಹೆಬ್ಬಯಕೆ.
ದುರಾಸೆಯನ್ನು ಮನುಷ್ಯರಾದ ನಾವು ತ್ಯಜಿಸಿ ಹೃದಯ ವೈಶಾಲ್ಯತೆಯನ್ನು ಮೆರೆಯಬೇಕಾಗಿದೆ. ಆಸೆ ಮತ್ತು ಅವಶ್ಯಕತೆಗಳನ್ನು ಮಿತಿಯಲ್ಲಿಟ್ಟುಕೊಳ್ಳುವ ಮೂಲಕ ಅನಾವಶ್ಯಕ ಗೊಂದಲಗಳನ್ನು ನಾವು ಕಡಿಮೆ ಮಾಡಿ ಕೊಳ್ಳಬಹುದು. ನಮ್ಮ ಆಸೆ ಮಿತಿಯಲ್ಲಿದ್ದರೆ, ನಿರಾಶೆಗೆ ಆಸ್ಪದವಿರುವುದಿಲ್ಲ. ನಮ್ಮಲ್ಲಿ ಬಂಗಾರವಿದ್ದ ಮಾತ್ರಕ್ಕೆ ನಮ್ಮ ಬದುಕು ಬಂಗಾರವಾಗುವುದಿಲ್ಲ.
‘ನಮ್ಮ ಮನಸ್ಸಿಗೆ ನೆಮ್ಮದಿ ಇದ್ದರೆ ಮಾತ್ರ ನಮ್ಮ ಬಾಳು ಅಪ್ಪಟ ಬಂಗಾರವಾಗುತ್ತದೆ’ ಎಂಬುದು ಪ್ರಕೃತಿಯಷ್ಟೇ
ಸತ್ಯವಾಗಿದೆ. ದುರಾಸೆಗೆ ಕಡಿವಾಣ ಹಾಕಿ ಕಟ್ಟಿ ಹಾಕಬೇಕಾಗಿದೆ. ಕಡಿವಾಣ ಹಾಕುವ ಮನಸ್ಸು ಮಾಡಬೇಕಾದರೆ, ದುರಾಸೆ ಹಿಡಿತಕ್ಕಾಗಿ ನಾನು ಮೊದಲು ಬದಲಾಗಬೇಕು ನಂತರ ಇತರರನ್ನು ಬದಲಾಗುವಂತೆ ಪ್ರೇರೇಪಿಸಬೇಕು, ನಾನು ಬದಲಾಗದೆ, ಬೇರೆಯವರನ್ನು ನೀ ಬದಲಾಗು ಎನ್ನುವುದರಲ್ಲಿ ಅರ್ಥವಿರುವುದಿಲ್ಲ. ಹೀಗೆ ಮೊದಲು ನಾನು
ಬದಲಾಗಿ ನಂತರ ಇತರರನ್ನು ಬದಲಾಯಿಸುವ ಕಾರ್ಯದಲ್ಲಿ ಮುನ್ನುಗ್ಗಬೇಕು.
ಬುದ್ಧರು ಉಪದೇಶಿಸುತ್ತಾ, ಮನುಷ್ಯನ ದುಃಖಕ್ಕೆ ಅಂದರೆ ಜೀವನದಲ್ಲಿ ಬರುವ ನಿರಾಸೆ, ಹತಾಸೆ, ಸಂಕಟ, ಕಷ್ಟ ಗಳಿಗೆ ಸಮಾಜದಲ್ಲಿರುವ ಶೋಷಣೆ, ಕ್ರೌರ್ಯ ಹಾಗೂ ಹಿಂಸಾಚಾರಗಳಿಗೆ ಮನಸ್ಸೇ ಕಾರಣ ಎಂಬುದನ್ನು ತಮ್ಮ ಧಮ್ಮ ಪದದಲ್ಲಿ ಉಪದೇಶಿಸಿದ್ದಾರೆ. ಹುಟ್ಟುವ (ಜನ್ಮತಾಳುವ) ಸ್ವಭಾವ ಹೊಂದಿದ ಎಲ್ಲವೂ ನಶಿಸುವ
ನಿಬಂಧನೆಗೆ ಒಳಪಟ್ಟಿದೆ. ‘ಆಸೆಯ ಮಿತಿಯೇ ಸುಖದ ಮೂಲ’ ಎಂದಿದ್ದಾರೆ. ಇಂದು ಮಾನವ ಭೋಗ ವಸ್ತುಗಳನ್ನು ಪಡೆಯುವುದು ಅದನ್ನು ಅನುಭವಿಸುವುದೇ ಪರಮ ಸುಖ ಎಂದು ಭಾವಿಸಿದ್ದಾನೆ. ಆಸೆಯ ಮಿತಿಯಿಂದ ಅವನಿಗೆ ಶಾಂತಿ, ನೆಮ್ಮದಿ, ತೃಪ್ತಿ ಹಾಗೂ ಸುಖಗಳನ್ನು ಕಾಣಲು ಸಾಧ್ಯ ಎನ್ನುವುದನ್ನು ಮರೆತಿದ್ದಾನೆ. ಜೀವನ ನಡೆಸಲು ಹಲವಾರು ಮಾರ್ಗಗಳನ್ನು ಬುದ್ಧರು ಉಪದೇಶಿಸಿದ್ದಾರೆ.
‘ಮನುಷ್ಯನ ಬೆಳವಣಿಗೆಗೆ ಬೇಕಾದ ಶಕ್ತಿ ಹುಟ್ಟುವುದೇ ಮನಸ್ಸಿನಲ್ಲಿ’ ಆದ್ದರಿಂದ ಆಸೆ ಎಂಬ ಮನಸ್ಸನ್ನು ನಿಯಂತ್ರಿಸಿ ಎಂದಿದ್ದಾರೆ. ಮಾನಸಿಕವಾದ ನೆಮ್ಮದಿಗಿಂತ ದೊಡ್ಡದಾದ ಶ್ರೀಮಂತಿಕೆ ಈ ಜಗತ್ತಿನಲ್ಲಿ ಯಾವುದೊ ಇಲ್ಲ. ‘ಮನುಷ್ಯನಿಗೆ ಸುಖವಾಗಿರಬೇಕಾದರೆ, ಮಾನಸಿಕ ನೆಮ್ಮದಿ ಬಹಳ ಮುಖ್ಯ. ಅದಿಲ್ಲದಿದ್ದರೆ ಜೀವನ
ವ್ಯರ್ಥವೆನಿಸುತ್ತದೆ. ಆಸೆಯಿಂದ ಗಳಿಸಿದಂತಹ ಸಂಪತ್ತಿನಿಂದ ನೆಮ್ಮದಿ ಸಿಗುವುದಿಲ್ಲ. ಹಣದಿಂದ ಬರುವ ಗೌರವ ‘ದೀಪದ ಬೆಳಕಂತೆ, ದೀಪದ ಎಣ್ಣೆ ಇರುವವರೆಗೂ ಮಾತ್ರ ಉರಿಯುತ್ತದೆ.’ ಆದ್ದರಿಂದ ದುರಾಸೆಯಿಂದ ಗಳಿಸಿದ ಸಂಪತ್ತು ಸುಖ ಕೊಡುವುದಿಲ್ಲ. ಆ ಸಂಪತ್ತು ಇರುವವರೆಗೂ ಅಷ್ಟೇ ಅದು ನಶಿಸಿ ಹೋದ ಮೇಲೆ ದುಃಖ ಕಾಡಿ
ನೆಮ್ಮದಿಯ ಬದುಕು ದೂರವಾಗುತ್ತದೆ.
‘ಆಸೆ ಎಂಬ ನಿಮ್ಮ ಮನಸ್ಸನ್ನು ನಿಯಂತ್ರಿಸಿ ಇಲ್ಲವಾದರೆ ಅದು ನಿಮ್ಮನ್ನು ನಿಯಂತ್ರಿಸುತ್ತದೆ’. ‘ಬುದ್ಧನಂತೆ
ಮಹಾಮೌನಿ ಆಗಬೇಕೆಂಬ ಆಸೆ ಬೆಟ್ಟದಷ್ಟಿದ್ದರೂ ನನ್ನಲ್ಲಿರುವ ಅರ್ಥವಿಲ್ಲದ ದುರಾಸೆಗಳು ಕ್ಷುಲ್ಲಕ ಕನಸುಗಳು ಮತ್ತೆ ಮತ್ತೆ ಮಾತನಾಡುವಂತೆ ಮಾಡುತ್ತಿವೆ’ ಎಂಬುದು ಸತ್ಯ, ಆಸೆಗೆ ಕಡಿವಾಣ ಹಾಕಿ ಜೀವನ ನಡೆಸಿದ ಬುದ್ಧನೆಲ್ಲಿ? ಆಸೆ ಬುರುಕ ಮನಷ್ಯನೆಲ್ಲಿ? ‘ನಮ್ಮಲ್ಲಿರುವ ಸಂಪತ್ತನ್ನು ಗಮನಿಸಿದರೆ ನಾವೇ ಇತರರಿಗಿಂತಲೂ ಸಿರಿವಂತರು. ಇಲ್ಲದಿರುವುದನ್ನು ಕೆಣಕುತ್ತಾ ಕುಳಿತರೆ ನಾವೇ ಇತರರಿಗಿಂತಲೂ ಬಡವರು’ ಎಂಬುದನ್ನು ಅರಿತು
ನಮ್ಮಲ್ಲಿರುವ ಸಂಪತ್ತಿನ ಹಿತಿಮಿತಿಯಲ್ಲಿಯೇ ಸುಖ, ಆನಂದ, ನೆಮ್ಮದಿಯನ್ನು ಕಾಣುವ ಜೀವನ ಶೈಲಿಯನ್ನು ಬೆಳೆಸಿಕೊಳ್ಳಬೇಕು.
ಜೀವಿಯ ಬಯಕೆಗಳೇ ದುಃಖದ ಉದಯಕ್ಕೆ ಕಾರಣವಾಗುತ್ತವೆ. ಅರ್ಥಾತ್ ವ್ಯಕ್ತಿಯ ಯಾವುದೇ ಸ್ವಾರ್ಥಪರ, ಆಸೆ-ಆಕಾಂಕ್ಷೆಗಳು, ಅಂತಿಮವಾಗಿ ದುಃಖದ ಉದಯಕ್ಕೆ ಫಲವತ್ತಾದ ನೆಲೆಗಳಾಗಿಯೇ ಕಾರ್ಯನಿರ್ವಹಿಸುತ್ತವೆ. ಜೀವಿ
ತನ್ನ ಆಸೆ, ಬಯಕೆ, ಅಥವಾ ತೃಷ್ಣೆಗಳನ್ನು ಇಲ್ಲವಾಗಿಸಿಕೊಂಡಲ್ಲಿ ಜೀವನದಲ್ಲಿ ಪಡೆದುಕೊಳ್ಳುವುದೇನು? ಏನೂ ಇಲ್ಲವಾದ್ದರಿಂದ ಯಾವ ಸಂಕಷ್ಟಗಳಿಗೂ ಮನುಷ್ಯ ಸಿಕ್ಕಿಕೊಳ್ಳುವುದಿಲ್ಲ. ಮನುಷ್ಯ ಬಯಕೆಗಳ ಪೂರೈಕೆಗಾಗಿ ಅನ್ಯ ಮಾರ್ಗವನ್ನು ಹಿಡಿಯಬೇಕಾಗುತ್ತದೆ. ಅದರ ಪರಿಣಾಮವೇ ಆಸೆಯಿಂದ ಬರುವ ದುಃಖ ಹೀಗೆ ಜೀವಿ ಹುಟ್ಟು-
ಸಾವುಗಳ ಭವಚಕ್ರದಲ್ಲಿ ಸಿಲುಕಬೇಕಾಗುತ್ತದೆ.
ಬುದ್ಧರ ಅಷ್ಟಾಂಗ ಮಾರ್ಗಗಳನ್ನು ಅನುಸರಿಸಿ ಮಧ್ಯಮ ಮಾರ್ಗದಲ್ಲಿ ನಡೆಯುವುದನ್ನು ಕಾರ್ಯಗತ ಮಾಡಿ ಕೊಂಡರೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ನಾವು ಜೀವನ ನಡೆಸಲು ಬೇಕಾಗಿರುವ ಮೂಲ ಭೂತ ಅವಶ್ಯಕತೆಗಳಿಗಿಂತ ಹೆಚ್ಚಾದುದ್ದನ್ನು ಪಡೆಯಲು ದುರಾಸೆ ಪಡುವುದೇ ಮನಷ್ಯನ ನೆಮ್ಮದಿಗೆ ಧಕ್ಕೆ ತರುತ್ತದೆ. ಆತಿಯಾದ ಆಸೆಯಿಂದ ಅಶಾಂತಿ ಅನಾರೋಗ್ಯ, ಅನಿಶ್ಚಿತತೆ, ದುಗುಡ, ಮನಸ್ಸಿನ ಚಂಚಲತೆ, ಉಂಟಾಗಿ ಇವು
ಜೀವದ ಮೇಲೆ ಪ್ರಭಾವ ಬೀರಿ, ನೆಮ್ಮದಿಯ ಜೀವನಕ್ಕೆ ಅಡ್ಡಿಯಾಗುತ್ತವೆ. ಆದುದರಿಂದ ನಮ್ಮಲ್ಲಿ ಎಷ್ಟಿದೆಯೋ ಅಷ್ಟರಲ್ಲಿ ತೃಪ್ತಿಪಡಬೇಕು. ಜೀವಿಯ ಅಂತಿಮ ಗುರಿಯೇ ಶಾಂತಿ, ನೆಮ್ಮದಿ, ಸಂತೋಷ, ಆನಂದ, ಹಾಗೂ ಆರೋಗ್ಯ, ಎಂಬುದೇ ಪ್ರಾಪಂಚಿಕ ಸತ್ಯ.
ಬಸವಣ್ಣನವರು ತಮ್ಮ ವಚನಗಳ ಮೂಲಕ ಅನೇಕ ಉಪದೇಶಗಳನ್ನು ನಮ್ಮ ಮುಂದಿಟ್ಟಿದ್ದಾರೆ, ಪ್ರಪಂಚ ದಲ್ಲಿ ದುರಾಸೆಯಿಂದ ಕೂಡಿದ ಜನರು ಅನ್ಯಾಯದಿಂದ ಸಂಪಾದಿಸಿದ ಹಣವು ಒಳ್ಳೆಯ ಕೆಲಸಕ್ಕೂ ಬಳಸಬಾರದು, ಅಂದರೆ ದೇವರಿಗೆ ದಕ್ಷಿಣೆ ಕೊಡುವುದಕ್ಕೆ ವ್ಯಯಿಸುತ್ತಾರೆ, ಅಂದರೆ ಹಾವನ್ನು ಹೊಡೆದು ಹದ್ದಿಗೆ ಹಾಕಿದಂತೆ. ಹಾಗಾಗಿ ಹಾವನ್ನು ಹೊಡೆಯುವುದು ಬೇಡ, ಹದ್ದಿಗೆ ಹಾಕುವುದು ಬೇಡ ಎಂಬ ನೀತಿಯನ್ನು ಇಲ್ಲಿ ಸ್ಮರಿಸಬಹುದು. ನಾಯಿಯ ಎದೆಯಲ್ಲಿ ನಾಗಂಡಿಗ ಅಂದರೆ ಕೆಚ್ಚಲು ತುಂಬಾ ಹಾಲಿದ್ದರೆ ಅದರ ಮರಿಗಳಿಗಲ್ಲದೆ ಶಿವಪೂಜೆಗೆ (ಪಂಚಾಮೃತ) ಸಲ್ಲುವುದಿಲ್ಲ. ಆದ್ದರಿಂದ ಪಾಪಿಯು ದುರಾಸೆಯಿಂದ ಸಂಪಾದಿಸಿದ ಹಣವನ್ನು ಶರಣರು ಸ್ವೀಕರಿಸುವುದಿಲ್ಲ. ಅಂದರೆ ನ್ಯಾಯಯುತವಾಗಿ (ಕಾಯಕದಿಂದ) ಸಂಪಾದಿಸಿದ ಹಣವನ್ನು ಸತ್ಪಾತ್ರಕ್ಕೆ ಸಲ್ಲಿಸ
ಬೇಕು. (ದಾಸೋಹಕ್ಕೆ) ಅಂಥವರೇ ಶ್ರೀಮಂತರು ಎಂಬ ಸತ್ಯ ಸಂಗತಿಯನ್ನು ನಮಗೆ ಭೋದಿಸಿದ್ದಾರೆ.
ಶರಣೆ ಆಯ್ದಕ್ಕಿ ಲಕ್ಕಮ್ಮ ೮೦೦ ವರ್ಷಗಳ ಹಿಂದೆಯೇ ಆಸೆಯನ್ನು ಕುರಿತು ಉಲ್ಲೇಖಿಸುತ್ತಾ, ನಮ್ಮದು
ಹಂಚುವ ಸಂಸ್ಕೃತಿಯಾಗಬೇಕೆ ವಿನಾ ಕೊಡಿಡುವುದಾಗಬಾರದು ಎಂದಿದ್ದಾರೆ. ಅಂಬೇಡ್ಕರ್ ಅವರು ಈ ದೇಶದಲ್ಲಿ ವಾಸಿಸುವ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು, ಬಹುಜನ ಹಿತಾಯ ಬಹುಜನ ಸುಖಾಯ
ಎಂಬ ಬುದ್ಧರ ಹಾದಿಯಲ್ಲಿ ನಡೆದು ‘ಬದುಕಿನಲ್ಲಿ ನಾವು ಗೆಲ್ಲವುದು ನಿಜಕ್ಕೂ ಸಾಧನೆ, ಆದರೆ ಇನ್ನೊಬ್ಬ ರನ್ನು ಗೆಲ್ಲಿಸುವುದು ಮಹಾಸಾಧನೆ ಎಂಬ ಗುರಿಯನ್ನಿಟುಕೊಂಡಿದ್ದರು. ಕೆಟ್ಟ ಆಸೆಯನ್ನಿಟ್ಟುಕೊಂಡು ಸಾಧಿಸಲಾಗದೆ ಆ ನೋವು ಗಳನ್ನು ಮರೆಯಲಿಕ್ಕೆ ಸಣ್ಣ ಸಂತೋಷಗಳಿಗಾಗಿ ಜೀವಿಸುವುದೇ ನಿಜವಾದ ಜೀವನ ಎಂದಿದ್ದಾರೆ. ಹೀಗೆ ಬುದ್ಧ, ಬಸವ, ಅಂಬೇಡ್ಕರ್ ಅವರು ದುರಾಸೆಯ ಬಗ್ಗೆ ತಮ್ಮ ನಿಲುವುಗಳನ್ನು ಪ್ರತಿಪಾದಿಸಿದ್ದಾರೆ.
ಲಭ್ಯವಿರುವುದನ್ನು ಉಪಯೋಗಿಸಿಕೊಂಡು ಬಲಿಷ್ಠವಾಗಿ ಬೆಳೆದು ಅದರಲ್ಲಿಯೇ ಸಂತೋಷ ಕಾಣಬೇಕು, ಮನುಷ್ಯ ಸುಖವಾಗಿರಬೇಕಾದರೆ, ಮೊದಲು ಕಷ್ಟಗಳನ್ನು ಅನುಭವಿಸಬೇಕು, ಕಷ್ಟಗಳನ್ನು ಅನುಭವಿಸಿದ ಮೇಲೆ ಬರುವ ಸುಖವು ಬಹಳ ನೆಮ್ಮದಿಯಿಂದ ಕೂಡಿರುತ್ತದೆ. ಬಿಸಿಲಿನಲ್ಲಿ ನಡೆದು ಬಳಲಿದ ದಾರಿಗನಿಗೆ ಮರದ ನೆರಳು ಹೆಚ್ಚು
ಸಂತೋಷ ನೀಡುತ್ತದೆ. ಕೇವಲ ಆಸೆಗಳನ್ನು ಇಟ್ಟುಕೊಳ್ಳುವುದಿಂದ ಪ್ರಯೋಜನವಿಲ್ಲ. ಕಷ್ಟ, ನಷ್ಟ, ದುಃಖ, ದುಮ್ಮಾನ ಅವಮಾನಗಳ ನಂತರ ಸಿಗುವುದೇ ಆನಂದದ ಜೀವನ ಎಂಬುದನ್ನು ಅರಿಯಬೇಕು ‘ದುರಾಸೆಗೆ ಸಮಾನ ವಾದ ರೋಗವಿಲ್ಲ ದಯೆಗಿಂತ ಹೆಚ್ಚಿನ ಧರ್ಮವಿಲ್ಲ.’ ‘ಸುಂದರವಾದ ಶರೀರದೊಳಗಿನ ಕೆಟ್ಟ (ದುರಾಸೆ) ಮನಸ್ಸು ಬಂಗಾರದ ಪಾತ್ರೆಯಲ್ಲಿರುವ ಹಳಸಿದ ಅನ್ನವಿದ್ದಂತೆ’ ಆದ್ದರಿಂದ ಪರರ ವಿಚಾರದಲ್ಲಿ ಒಳ್ಳೆಯ ಭಾವನೆಯನ್ನು ಇಟ್ಟುಕೊಳ್ಳಬೇಕು ಆಸೆಗೆ ಮಿತಿಯಿಲ್ಲ, ಬೆಟ್ಟದಷ್ಟು ಸಂಪತ್ತಿದ್ದರೂ, ಜೀವನದಲ್ಲಿ ಸಂತೋಷವಿಲ್ಲ.
ದುರಾಸೆಯೇ ದುಃಖದ ಮೂಲ, ರುಚಿಯೇ ವ್ಯಾಧಿ(ರೋಗ)ಗಳ ಮೂಲ, ಬಯಕೆ (ದುರಾಸೆ) ಯೇ ಕಷ್ಟಗಳ ಮೂಲ, ಈ ಮೂರನ್ನು ಬಿಟ್ಟು ಸುಖವಂತರಾಗಿ ಬದುಕಬೇಕು. ಯಾವುದಾದರೂ ವಸ್ತುವಿಗೆ ಆಸೆಪಟ್ಟು ಅದು ಸಿಗದೇ ಹೋದರೆ ದುಃಖ ಉಂಟಾಗುತ್ತದೆ. ಅತಿಯಾದ ಲೋಭ ಇಲ್ಲದಿರುವವರು ಸುಖಿಗಳಾಗುತ್ತಾರೆ. ಸುಖಬೇಕು ಎನ್ನುವ ವರು ದುರಾಸೆ ಪಡಬಾರದು, ಸರಳ ಜೀವನ, ಹಾಗೂ ಇರುವಷ್ಟರಲ್ಲಿ ತೃಪ್ತಿ ಪಡುವುದು ಮನುಷ್ಯನಿಗೆ ಯಾವಾಗಲೂ ಕ್ಷೇಮ ಎಂಬುದನ್ನು ನಾವು ಅರಿಯಬೇಕಾಗಿದೆ. ಹೀಗೆ ಆಸೆಯನ್ನು ಮಿತಿಯಲ್ಲಿಟ್ಟುಕೊಂಡು, ಸುಖ, ಶಾಂತಿ, ನೆಮ್ಮದಿಯ ಜೀವನ ನಡೆಸೋಣ ಎಂಬುವುದೇ ನಮ್ಮೆಲ್ಲರ ಮಹದಾಸೆಯಾಗಬೇಕು. ಜಿವನದ ಅಂತಿಮ
ಬಯಕೆಯೇ ಆನಂದ, ಸಂತೋಷ, ತೃಪ್ತಿಯಬದುಕು ಇದಿಲ್ಲದಿದ್ದರೆ ನೀವು ಗಳಿಸಿರುವ ಸಂಪತ್ತಿಗೆ ಬೆಲೆಸಿಗುವುದಿಲ್ಲ. ನೆಮ್ಮದಿ ಇಲ್ಲದ ಜೀವನ ವ್ಯರ್ಥ.
ನಾಳೆಯ ಸಾಧನೆಗಾಗಿ ಈ ದಿನದ ಕ್ಷಣಗಳನ್ನು ವಿನಾಶಮಾಡುವುದರಲ್ಲಿ ಅರ್ಥವಿಲ್ಲ. ಹಿತ ಮಿತ ಸರಳತೆ, ಸಜ್ಜನಿಕೆ, ಆರೊಗ್ಯವೇ ಸುಖದ ಮೂಲ ಆದ್ದರಿಂದ ನಮ್ಮ ನೆರಳಿಗೆ ನಾವು ಹೆದರಬೇಕು. ಜೀವನದ ಪರಮಾನಂದವನ್ನು ಕಾಣಬೇಕು.
ಲೇಖಕರು ಸಂಸ್ಕೃತ ವಿಭಾಗದ ಅಧ್ಯಕ್ಷರು ಬೆಂಗಳೂರು ವಿಶ್ವವಿದ್ಯಾಲಯ