Wednesday, 27th November 2024

Puneet G Kudlur Column: ಹಿಂದೂ ಪುರಾಣದಲ್ಲಿ ಗಣಪತಿ ವ್ರತದ ಆಚರಣೆ

ಪ್ರಸ್ತುತ

ಪುನೀತ್‌ ಜಿ.ಕೂಡ್ಲೂರು

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಬಂದರೆ ಭಾರತೀಯರಿಗೆ ಅತ್ಯಂತ ಸಂಭ್ರಮ ಸಡಗರ. ಮನೆ ಮನೆ ಯಲ್ಲಿ ಬೀದಿ ಬೀದಿಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಎಲ್ಲಿ ನೋಡಿದರು ಗಣಪತಿ. ಆಸ್ತಿಕ ಮಹಾಜನತೆಗೆ ಆನಂದ ಪರಮಾನಂದ.

ಮನೆ ಮನೆಯ ಗಣಪತಿ ವ್ರತವನ್ನು ಪುರಾಣಗಳಿಂದ ಅರಿತರೆ ಸಾರ್ವಜನಿಕ ಗಣಪತಿಗಳು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಹೆಚ್ಚಿಸಲು ಹಿಂದೂ ಗಳನ್ನು ಬ್ರಿಟೀಷರ ವಿರುದ್ಧ ಒಗ್ಗೂಡಿಸಲು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದರು. ಗಣಪತಿ ಭಾರತೀಯರಿಗೆ ಕೇವಲ ದೇವರಲ್ಲ, ಆತ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೂ ಹೌದು. ಭಾರತದ ಶ್ರೇಷ್ಠ ಗ್ರಂಥಗಳಾದ ರಾಮಯಣ, ಮಹಾಭಾರತದಲ್ಲಿ ಗಣಪತಿ ಪೂಜೆಯ ಮಹತ್ವ ತಿಳಿಸಿದ್ದಾರೆ.

ಆದ್ದರಿಂದ ನಾವು ಗಣಪತಿ ಹಬ್ಬವನ್ನು ಮಹಾಭಾರತದ ಕಾಲದಿಂದ ಇಂದಿನ ವರೆಗೂ ಹಾಗೂ ಮುಂದೆಯೂ ಮಹಾಗಣಪತಿಯ ಪೂಜೆಯನ್ನು ಹಿಂದು ಗಳು ಶ್ರದ್ಧಾ ಭಕ್ತಿಯಿಂದ ಮಾಡುತ್ತೇವೆ. ಮಹಾಭಾರತದ ಕತೆಯಲ್ಲಿ
ನಾವು ಕೇಳಿದ್ದೇವೆ ಪಾಂಡವರ ಹಿರಿಯಣ್ಣ ಧರ್ಮಪಾಲಕ ಧರ್ಮರಾಯನು ಗ್ರಹಚಾರ ಪ್ರಾಪ್ತಿಯಾಗಿ ದುರ್ಯೋ ಧನನ ಮೋಸದ ದ್ಯೂತಕ್ರೀಡೆಯಲ್ಲಿ ತಮ್ಮಂದಿರು, ಪತ್ನಿ, ರಾಜ್ಯವೆಲ್ಲವನ್ನು ಸೋತನು. ಎಲ್ಲವನ್ನು ಕಳೆದುಕೊಂಡು ಹೋದ ಧರ್ಮರಾಯನು ಬ್ರಹ್ಮವೆತ್ತರಾದ ಮಹಾಋಷಿಗಳು ತಪಸ್ಸು ಮಾಡುತ್ತಿದ್ದ ಮಹಾರಣ್ಯಕ್ಕೆ ತಮ್ಮಂದಿರು ಹಾಗೂ ಪತ್ನಿಯ ಸಹಿತವಾಗಿ ಹೋದನು. ಋಷಿಗಳನ್ನು ನೋಡಿದ ಧರ್ಮರಾಯನು ಅತ್ಯಂತ ವಿನಯದಿಂದ ನಮಸ್ಕರಿಸಿದನು.

ಸೂತ ಮಹಾಮುನಿಗಳನ್ನು ನೋಡಿ ನಮಸ್ಕರಿಸಿ ಅವರ ಬಳಿ ಧರ್ಮರಾಯನು ಹೀಗೆಂದು ಪ್ರಾರ್ಥಿಸಿದನು, ಸರ್ವ ಶಾಸ್ತ್ರಗಳನ್ನು ತಿಳಿದಿರುವ ಮಹಾಮುನಿಗಳೆ ನಮ್ಮ ಜ್ಞಾತಿಗಳಾದ ಕೌರವರು ನಮ್ಮೊಡನೆ ಮಹಾದ್ಯೂತವನ್ನು ಕಲ್ಪಿಸಿ ನಮ್ಮ ರಾಜ್ಯಾದಿ ಸಕಲೈಶ್ವರ್ಯಗಳನ್ನು ಅಪಹರಿಸಿದರು. ಅಷ್ಟೇ ಅಲ್ಲದೆ ಅನುಜರೊಡನೆಯೂ, ಭಾರ್ಯೆ ಯೊಡನೆಯೂ ನನ್ನನ್ನುಅನೇಕ ವಿಧವಾಗಿ ಅವಮಾನಿಸಿ ಈ ಅರಣ್ಯಕ್ಕೆ ಕಳುಹಿಸಿದರು.

ಇಷ್ಟೆಲ್ಲ ಕಷ್ಟಗಳೊ ಡನೆಯೂ ನಿಮ್ಮ ದರ್ಶನಮಾತ್ರದಿಂದ ನನಗೆ ಪರಿಹಾರ ಸಿಗುವುದು ಎಂದನ್ನು ತಮ್ಮನ್ನು ಬೇಟಿಯಾದೆ ಎಂದು ತಿಳಿಸಿದನು. ನಮಗೆ ರಾಜ್ಯವನ್ನು ಮರಳಿ ಪಡೆಯಲು, ನಮ್ಮ ಕಷ್ಟಗಳೆಲ್ಲವೂ ನಶಿಸಿ ಹೋಗುವಂತೆ ಒಂದು ವ್ರತ ಮಾಡಿಸಿಕೊಡಬೇಕೆಂದು ಸೂತ ಮಹಾಮುನಿಗಳನ್ನು ಧರ್ಮರಾಯ ಕೇಳಿದನು. ಆಗ ಸೂತ ಮಹಾಮುನಿಗಳು ಪಾಂಡುನಂದನನೇ ಆದಿಯಲ್ಲಿ ಸ್ವತಃ ಪರಶಿವನು ಕುಮಾರಸ್ವಾಮಿಗೆ ತಿಳಿಸಿದ ರೀತಿಯಲ್ಲಿ ನಿನಗೆ ಮಹಾಗಣಪತಿ ವ್ರತವನ್ನು ಮಾಡಿಸುತ್ತೇನೆಂದು ಹೇಳಿ ಗಣಪತಿಯ ವ್ರತ ಮಾಡಿಸಿದರು ಎಂಬುದು ಮಹಾ ಭಾರತದ ಉಲ್ಲೇಖ.

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಸೂರ್ಯೋದಯಕ್ಕೆ ಎದ್ದು ತನ್ನ ನೈಮಿತ್ತಿಕ ಕರ್ಮಗಳನ್ನು ಮುಗಿಸಿ ಸ್ನಾನ, ಜಪ, ತಪಾನುಷ್ಠಾನಗಳನ್ನು ಮುಗಿಸಿ ದ್ರವ್ಯ ಲೋಭವಿಲ್ಲದಂತೆ ಬೆಳ್ಳಿಯಿಂದಾಗಲಿ, ಮಣ್ಣಿ ನಿಂದಾಗಲಿ, ಬಂಗಾರದಿಂದಾಗಲಿ ವಿನಾಯಕನ ಪ್ರತಿಮೆಯನ್ನು ಮಾಡಿ ತನ್ನ ಮನೆಯ ಉತ್ತರ ಭಾಗದಲ್ಲಿ ಒಂದು ಮಂಟಪವನ್ನು ನಿರ್ಮಿಸಿ ಅದರ ಮೇಲೆ ಎಂಟು ದಳಗಳಿಂದ ಕೂಡಿದ ಪದ್ಮವನ್ನು ಗೋದಿಯಿಂದಾಗಲಿ ಅಥವಾ ಅಕ್ಕಿಯಿಂದಾಗಲಿ ಮಧ್ಯಭಾಗದಲ್ಲಿ ರಚಿಸಿ ಅದರ ಮೇಲೆ ಭಕ್ತಿಭಾವದಿಂದ ವಿನಾಯಕನ ಪ್ರತಿಮೆಯನ್ನು ಇಡಬೇಕು.

ವಿನಾಯಕನ ಪ್ರತಿಮೆಗೆ ಬಿಳಿಯದಾದ ಗಂಧದಿಂದಲೂ, ಅಕ್ಷತೆಯಿಂದಲೂ, ಪುಷ್ಪದಿಂದಲೂ, ಗರಿಕೆ ಹುಲ್ಲಿ ನಿಂದಲೂ, ಇಪ್ಪತ್ತೊಂದು ಬಗೆಯ ಪತ್ರೆಗಳಿಂದಲೂ ಪೂಜಿಸಿ ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸಿ, ತುಪ್ಪ ದಿಂದ ಮಾಡಿದ ಇಪ್ಪತ್ತೊಂದು ಭಕ್ಷ್ಯಗಳಿಂದಲೂ, ತೆಂಗಿನಕಾಯಿ, ಬಾಳೆಹಣ್ಣು, ನೇರಳೆ ಹಣ್ಣು, ಬೇಲದ ಹಣ್ಣು, ಕಬ್ಬು ಮತ್ತು ಅನೇಕ ವಿಧವಾದ ಭಕ್ಷ್ಯಗಳನ್ನು ಫಲಗಳನ್ನು ನಿವೇದನೆ ಮಾಡಿ, ವಿನಾಯಕನ ಎದುರು ನಾಟ್ಯವನ್ನು ಸಲ್ಲಿಸಿ, ಹಾಡುಗಳನ್ನು ಹಾಡಿ, ಪುರಾಣದ ಪಠನವನ್ನು ಮಾಡಿ ವಿನಾಯಕನನ್ನು ಸಂತೃಪ್ತಿಗೊಳಿಸಿ ವೇದಾಧ್ಯಯನ ಮಾಡಿದ ಯೋಗ್ಯ ವ್ಯಕ್ತಿಗೆ ತಾಂಬೂಲ ಸಹಿತವಾಗಿ ಗಣಪತಿಯನ್ನು ದಾನವಾಗಿ ನೀಡಿ ಉಪಾಯನ ದಾನವನ್ನು ನೀಡಿ ತನ್ನ ಇಷ್ಟದ ಬಂಧುಗಳೊಡನೆ ಊಟವನ್ನು ಮಾಡಬೇಕು.

ಈ ಪ್ರಕಾರ ವಿನಾಯಕನ ವ್ರತವನ್ನು ಮಾಡಿದವರಿಗೆ ಸಕಲ ಇಷ್ಟಾರ್ಥಗಳು ಸಿದ್ಧಿಸುವವು. ಮಾರನೆಯದಿನ ಸೂರ್ಯೋದಯಕ್ಕೆ ಎದ್ದು ವಿನಾಯಕನಿಗೆ ಪುನಃ ಪೂಜೆಯನ್ನು ಮಾಡಬೇಕು. ಈ ವ್ರತವನ್ನು ದೇವತೆಗಳೂ, ಮುನಿಗಳೂ, ಗಂಧರ್ವರೂ, ಕಿನ್ನರರೂ ಮೊದಲು ಆಚರಿಸಿ ಸಕಲ ಸಾಮ್ಯಗಳನ್ನು ಪಡೆದರು ಎಂದು ಸಾಂಬ ಮೂರ್ತಿಯು ಕುಮಾರಸ್ವಾಮಿಗೆ ಉಪದೇಶ ಮಾಡಿದರು. ಧರ್ಮರಾಯನೇ ನೀನು ಸಹ ಈ ವ್ರತವನ್ನು ಮಾಡು. ಈ ವ್ರತದ ಪ್ರಭಾವದಿಂದ ದಮಯಂತಿಗೆ ನಳನು ದೊರೆತನು, ಸ್ವತಃ ಶ್ರೀ ಕೃಷ್ಣ ಪರಮಾತ್ಮನು ಈ ವ್ರತವನ್ನು ಮಾಡಿ ಜಾಂಬವತಿಯನ್ನು, ಸ್ಯಮಂತಕಮಣಿಯನ್ನು ಹೊಂದಿದನು. ಇಂದ್ರನು ವಿನಾಯಕನ ಪೂಜೆಯನ್ನು ಮಾಡಿ ವೃತಾಸುರನನ್ನು ಸಂಹರಿಸಿದನು.

ಶ್ರೀರಾಮನು ಈ ವ್ರತವನ್ನು ಆಚರಿಸಿ ರಾವಣನ್ನು ಸಂಹರಿಸಿ ಸೀತೆಯನ್ನು ಪಡೆದನು. ಭಗೀರತನು ಗಂಗೆಯನ್ನು ತರುವಾಗಲೂ, ದೇವಾಸುರರು ಅಮೃತವನ್ನು ಸೃಜಿಸುವಾಗಲೂ, ಸಾಂಬನು ತನ್ನ ಕುಷ್ಠರೋಗ ಪರಿಹಾರ ಕಾಲ ದಲ್ಲಿಯೂ ಈ ವ್ರತವನ್ನೇ ಆಚರಿಸಿದರು ಎಂದು ಸುತ ಮಹಾಮುನಿಗಳು ಧರ್ಮರಾಯನಿಗೆ ಹೇಳಿದಾಗ. ಧರ್ಮ ರಾಯನು ಭಾದ್ರಪದ ಶುಕ್ಲ ಚೌತಿಯ ದಿನ ಬರುವುದನ್ನು ಎದುರು ನೋಡುತ್ತಾ ಸಕಾಲವು ಪ್ರಾಪ್ತವಾದ ಕೂಡಲೇ ವ್ರತಾಚರಣೆಯಿಂದ ಸಕಲ ಇಷ್ಟಾರ್ಥ ಸಿದ್ಧಿಗಳನ್ನು ಪಡೆದನು.

ಪ್ರಪಂಚದಲ್ಲಿ ಈ ಅಮೋಘವಾದ ವ್ರತವನ್ನು ಯಾರು ಬೇಕಾದರೂ ಮಾಡಬಹುದು. ಕ್ರಮ ಪ್ರಕಾರ ಮಾಡಿದರೆ ವಿದ್ಯಾರಂಭದಲ್ಲಿ ಪೂಜೆಯನ್ನಾಚರಿಸಿದವರಿಗೆ ವಿದ್ಯಾಲಾಭವು, ಧನಾಕಾಂಕ್ಷಿಗೆ ದ್ರವ್ಯವೂ, ಯಾವ ಅಪೇಕ್ಷೆಯಿಂದ ಅರ್ಚಿಸಿದರೆ ಆ ಕಾರ್ಯಗಳೆಲ್ಲವೂ ನಿಸ್ಸಂಶಯವಾಗಿ ಸಿದ್ಧಿಸುವುದರಿಂದ ಅಬಾಲವೃದ್ಧರೂ ಕಲಿಯುಗದಲ್ಲಿ ಮುಖ್ಯವಾಗಿ ಮಾಡತಕ್ಕ ವ್ರತಗಳಲ್ಲಿ ಇದು ಪರಮ ಶ್ರೇಷ್ಠವಾದುದೆಂದೂ, ಸಕಲ ಇಷ್ಟಾರ್ಥಗಳನ್ನು ಸಿದ್ಧಿಸುವ
ದೇವತೆಯಾದುದರಿಂದಲೇ ಈತನಿಗೆ ವರಸಿದ್ಧಿ ವಿನಾಯಕನೆಂಬ ಹೆಸರು ಬಂದಿತೆಂದೂ ಸೂತಪೂರಣಿಕರು ಹೇಳಿದರೆಂದು ಸ್ಕಂದ ಪುರಾಣದ ಉಮಾಮಹೇಶ್ವರ ಸಂವಾದದಲ್ಲಿ ತಿಳಿಸಲಾಗಿದೆ.

ಈ ಪುರಾಣಗಳಿಂದ ವಿನಾಯಕ ವ್ರತದ ಮಹತ್ವವನ್ನು ತಿಳಿದ ಸಮಸ್ತ ಭಾರತೀಯ ಹಿಂದುಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ವಿನಾಯಕವ್ರತವನ್ನು ಮಾಡುತ್ತಿದ್ದಾರೆ. ಆ ವಿನಾಯಕನು ಎಲ್ಲರನ್ನು ಅನುಗ್ರಹಿಸಲೂ ಸಹ ಇzನೆ ಎಂಬುದೇ ನಮ್ಮ ನಂಬಿಕೆ.

(ಲೇಖಕರು: ಸರಸ್ವತೀ ಭಾರತೀಯ ಸಂಸ್ಕಾರ ಕೇಂದ್ರದ
ಸಂಸ್ಥಾಪಕರು)