ಇಂಫಾಲ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ (Manipur Violence). ಮಣಿಪುರದ ಜಿರಿಬಾಮ್ (Jiribam) ಜಿಲ್ಲೆಯಲ್ಲಿ ನಡೆದ ಈ ಹಿಂಸಾಚಾರದಲ್ಲಿ ಸಾವು ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯೆ ಇದೆ ಎಂದು ಮೂಲಗಳು ತಿಳಿಸಿವೆ. ಮಣಿಪುರದ ಬಿಷ್ಣುಪುರದ ಎರಡು ಸ್ಥಳಗಳಲ್ಲಿ ಉಗ್ರರು ರಾಕೆಟ್ ದಾಳಿ ನಡೆಸಿದ ಒಂದು ದಿನದ ನಂತರ ಘಟನೆ ವರದಿಯಾಗಿದೆ. ಸೆಪ್ಟೆಂಬರ್ 6ರಂದು ಶಂಕಿತ ಉಗ್ರರು ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ನಲ್ಲಿ ನಡೆಸಿದ ರಾಕೆಟ್ ದಾಳಿಯಲ್ಲಿ ವೃದ್ಧರೊಬ್ಬರು ಸಾವಿಗೀಡಾಗಿ, ಐವರು ಗಾಯಗೊಂಡಿದ್ದರು.
“ಉಗ್ರರು ಗ್ರಾಮವೊಂದಕ್ಕೆ ನುಗ್ಗಿ ಒಬ್ಬ ವ್ಯಕ್ತಿಯನ್ನು ಕೊಂದ ನಂತರ ಶನಿವಾರ ಬೆಳಿಗ್ಗೆ ಗುಂಡಿನ ಚಕಮಕಿ ಪ್ರಾರಂಭವಾಯಿತು. ಜನಾಂಗೀಯ ಘರ್ಷಣೆಯ ಭಾಗವಾಗಿ ಈ ಹತ್ಯೆ ನಡೆದಿದೆ. ಗುಂಡಿನ ಚಕಮಕಿ ಮುಂದುವರಿದಿದೆ. ಮೃತಪಟ್ಟವರು ಕುಕಿ ಮತ್ತು ಮೈಟಿ ಸಮುದಾಯಗಳಿಗೆ ಸೇರಿದವರುʼʼ ಎಂದು ಭದ್ರತಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
No end to violence in Manipur.
— Sachin (@Sachin54620442) September 6, 2024
3rd attack in 5 days in Manipur. A rocket attack Moirang area of Bishnupur district killed one and injured many. Rocket hit the former CM's house. pic.twitter.com/0ClHgedlWf
ರಾಕೆಟ್ ದಾಳಿ
ಶುಕ್ರವಾರ ಬೆಳಗ್ಗೆ ಶಂಕಿತ ಉಗ್ರರು ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ದಾಳಿ ನಡೆಸಿದ್ದರು. ಗುಡ್ಡ ಪ್ರದೇಶದಿಂದ ಜನವಸತಿ ಇರುವ ಟ್ರೋಂಗ್ಲಾವೋಬಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಈ ರಾಕೆಟ್ ದಾಳಿ ನಡೆಸಿದ್ದು, ಇದಕ್ಕಾಗಿ 3 ಕಿ.ಮೀ. ದೂರ ಹಾರಬರಲ್ಲ ಸಾಮರ್ಥ್ಯದ ಲಾಂಚರ್ ಬಳಸಲಾಗಿತ್ತು. ʼʼಕುಕಿ ಉಗ್ರರು ದಾಳಿಗೆ ದೂರಗಾಮಿ ರಾಕೆಟ್ ಬಳಸಿದ್ದಾರೆʼʼ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ. ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನಲೆಯಲ್ಲಿ ಮಣಿಪುರ ಆಡಳಿತವನ್ನು ರಾಜ್ಯದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಶನಿವಾರ ರಜೆ ಸಾರಿದೆ.
ಕಳೆದ ವರ್ಷ ಮೇ 3ರಿಂದ ಕುಕಿ ಮತ್ತು ಮೈಟಿ ಸಮುದಾಯಗಳ ನಡುವೆ ಘರ್ಷಣೆ ನಡೆಯುತ್ತಿದೆ. ಶಾಂತವಾಗಿದ್ದ ಪರಿಸ್ಥಿತಿ ಕೆಲವು ದಿನಗಳಿಂದ ಮತ್ತೆ ಉದ್ವಿಗ್ನವಾಗಿದ್ದು, ಉಗ್ರಗಾಮಿಗಳು ಡ್ರೋನ್ಗಳು ಮತ್ತು ರಾಕೆಟ್ಗಳಂತಹ ಹೊಸ ತಂತ್ರಜ್ಞಾನ ಬಳಸುತ್ತಿದ್ದಾರೆ. ರೈಫಲ್ಗಳು ಮತ್ತು ಗ್ರೆನೇಡ್ಗಳ ಬಳಕೆ ಅಡೆತಡೆಯಿಲ್ಲದೆ ಮುಂದುವರಿದಿದೆ. ಶುಕ್ರವಾರ ಅಪ್ಪಳಿಸಿದ್ದ ರಾಕೆಟ್ ಸುಮಾರು 4 ಅಡಿ ಉದ್ದವಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆಂಜಮ್ ಚಿರಾಂಗ್ ಗ್ರಾಮದಲ್ಲಿ ನಡೆದ ಡ್ರೋನ್ ದಾಳಿಯಿಂದ ಮೂವರು ಗಾಯಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Agni-4 Launch: ಪರಮಾಣು ಬಾಂಬ್ ಹೊತ್ತೊಯ್ಯಬಲ್ಲ ಅಗ್ನಿ-4 ಕ್ಷಿಪಣಿ ಪರೀಕ್ಷೆ ಯಶಸ್ವಿ
ಬಿಗಿ ಭದ್ರತೆ
ಶುಕ್ರವಾರದ ದಾಳಿಯ ನಂತರ ಭದ್ರತೆಯನ್ನು ಇನ್ನಷು ಹೆಚ್ಚಿಸಲಾಗಿದೆ. ಬಿಷ್ಣುಪುರ ಮತ್ತು ಚುರಾಚಂದ್ಪುರದ ಗಡಿಗಳಲ್ಲಿ ಹಾಗೂ ಇಂಫಾಲದ ಪಶ್ಚಿಮ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳ ಸಮೀಪವಿರುವ ಪ್ರದೇಶಗಳಲ್ಲಿ ಸೈನ್ಯವನ್ನು ನಿಯೋಜಿಸಲಾಗುತ್ತಿದೆ. ಈ ಮಧ್ಯೆ ಉಗ್ರರು ದಾಳಿ ಪ್ರಮಾಣವನ್ನು ಹೆಚ್ಚಿಸಲು ಸ್ಫೋಟಕ ವಸ್ತುಗಳನ್ನು ಬಳಸುತ್ತಿರುವುದು ಭದ್ರತಾ ಪಡೆಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇತ್ತ ಮೈಟಿ ಸಮುದಾಯದ ಸಿಒಸಿಒಎಂಐ ಸಂಸ್ಥೆಇಂಫಾಲ್ ಕಣಿವೆಯ ಐದು ಜಿಲ್ಲೆಗಳಲ್ಲಿ ʼಸಾರ್ವಜನಿಕ ತುರ್ತು ಪರಿಸ್ಥಿತಿʼ ಘೋಷಿಸಿದ್ದು, ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದೆ.