Friday, 22nd November 2024

Sandalwood News : ಆರ್.ರವೀಂದ್ರ ನಿರ್ದೇಶನದ “ಗೋಪಿಲೋಲ” ಚಿತ್ರದ ಟೈಟಲ್‌ ಸಾಂಗ್‌ ರಿಲೀಸ್‌

Sandalwood News

ಬೆಂಗಳೂರು: ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್.ಆರ್. ಸನತ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿರುವ ಹಾಗೂ ಆರ್. ರವೀಂದ್ರ ನಿರ್ದೇಶನದ “ಗೋಪಿಲೋಲ” ಚಿತ್ರದ (Sandalwood News) “ಗೋಪಿಲೋಲ ಓ ಶೋಕಿವಾಲ” ಎಂಬ ಶೀರ್ಷಿಕೆ ಗೀತೆ ಗೌರಿ ಹಬ್ಬದ ಶುಭದಿನದಂದು ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.

ಕೇಶವ ಚಂದ್ರ ಅವರು ಬರೆದಿರುವ ಈ ಹಾಡನ್ನು ಹೇಮಂತ್ ಕುಮಾರ್ ಹಾಗೂ ವಾರಿಜಶ್ರೀ ಹಾಡಿದ್ದಾರೆ. ಮಿಥುನ್ ಅಶೋಕನ್ ಚೆನ್ನೈ ಸಂಗೀತ ನೀಡಿದ್ದಾರೆ. ಸದಾಚಾರ್ಯ ನೃತ್ಯ ನಿರ್ದೇಶನದಲ್ಲಿ ಮಂಜುನಾಥ್ ಅರಸು ಹಾಗೂ ನಿಮಿಷ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ‌. ಸುಕೃತಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.

“ಗೋಪಿಲೋಲ” ನೈಸರ್ಗಿಕ ಕೃಷಿಯೇ ಶ್ರೇಷ್ಠ ಎಂಬ ಮಂತ್ರವನ್ನು ಬಲವಾಗಿ ನಂಬಿರುವ ರೈತನೊಬ್ಬನ ಕಥೆ. ” ಭೂಮಿಯನ್ನು ನಂಬಿದ ರೈತನ್ನು ಎಂದು ಹಾಳಾಗುವುದಿಲ್ಲ” ಎಂದು ಅರಿತಿರುವ ಧರ್ಮೇಗೌಡ ಎಂಬ ರೈತನ‌ ಕಥೆಯೂ ಹೌದು‌. ರಾಸಾಯನಿಕ ಆಹಾರ ಪೂರೈಕೆಯ ವಿರುದ್ದವಾಗಿ, ನೈಸರ್ಗಿಕ ಕೃಷಿಯನ್ನೇ ನಂಬಿಕೊಂಡು ಆತ ಜೀವನ ಸಾಗಿಸುತ್ತಿರುತ್ತಾನೆ‌.

ರಾಸಾಯನಿಕ ಆಹಾರ ಪೂರೈಕೆ ಹಾಗೂ ನೈಸರ್ಗಿಕ ಕೃಷಿಕರ ನಡುವೆ ನಡೆಯವ ಸಂಘರ್ಷದ ನಡುವೆ ಗೋಪಿ ಮತ್ತು ಲೀಲಾ ನಡುವೆ ಅರಳುವ ಪ್ರೇಮ.‌ ಲೀಲಾ, ಗೋಪಿಯ ಮೇಲೆ ಮೋಹಿತಳಾಗುತ್ತಾಳೆ. ಹೀಗಿರುವಾಗ ಘಟಿಸುವ ಘಟನೆಯೊಂದರಿಂದ ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ಮೂಡುತ್ತದೆ.‌ “ಗೋಪಿ – ಲೀಲಾ” ರ ಪ್ರೇಮಕಥೆಯ ಹಿನ್ನೆಲೆಯಲ್ಲಿ ನೈಸರ್ಗಿಕ ಕೃಷಿಯ ಮಹತ್ವವನ್ನು ಸಾರುವ “ಗೋಪಿಲೋಲ” ಚಿತ್ರ ಅಕ್ಟೋಬರ್ 4 ರಂದು ಬಿಡುಗಡೆಯಾಗಲಿದೆ.

ಆರ್. ರವೀಂದ್ರ ನಿರ್ದೇಶನದ “ಗೋಪಿಲೋಲ” ಚಿತ್ರಕ್ಕೆ ನಿರ್ಮಾಪಕ ಎಸ್.ಆರ್. ಸನತ್ ಕುಮಾರ್ ಅವರೆ ಕಥೆ ಬರೆದಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಕೇಶವಚಂದ್ರ ಅವರದು. ಸೂರ್ಯಕಾಂತ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಮಿಥುನ್ ಅಶೋಕನ್ ಚೆನ್ನೈ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಕೇಶ್ ಆಚಾರ್ಯ ಅವರದು.

ಈ ಸುದ್ದಿಯನ್ನೂ ಓದಿ | Reliance Foundation: ʼರಿಲಯನ್ಸ್ ಫೌಂಡೇಷನ್ ಕೌಶಲ ಸಂಸ್ಥೆʼಗೆ ಚಾಲನೆ ನೀಡಿದ ಕೇಂದ್ರ ಸಚಿವ ಜಯಂತ್ ಚೌಧರಿ

ಸಹ ನಿರ್ಮಾಪಕರಾಗಿರುವ ಮಂಜುನಾಥ್ ಅರಸು ಅವರೆ ನಾಯಕರಾಗಿ ನಟಿಸಿದ್ದು, ನಾಯಕಿಯಾಗಿ ನಿಮಿಷ ಕೆ ಅಭಿನಯಿಸಿದ್ದಾರೆ. ಎಸ್. ನಾರಾಯಣ್, ಸಪ್ತಗಿರಿ (ತೆಲುಗು, ತಮಿಳು ಖ್ಯಾತ ನಟ), ಜಾಹ್ನವಿ, ಜೋಸೈಮನ್, ನಾಗೇಶ್ ಯಾದವ್, ಪದ್ಮಾ ವಾಸಂತಿ, ಸ್ವಾತಿ, ಹನುಮಂತೇ ಗೌಡ, ಡಿಂಗ್ರಿ ನಾಗರಾಜ್, ಕೆಂಪೇಗೌಡ, ಸಚಿನ್, ರಾಧ ರಾಮಚಂದ್ರ, ರೇಖಾದಾಸ್, ಸತೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.