Friday, 22nd November 2024

US Open: ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಅರೀನಾ ಸಬಲೆಂಕಾ

US Open

ವಾಷಿಂಗ್ಟನ್‌: ಮಹಿಳಾ ಟೆನ್ನಿಸ್‌ನ 2ನೇ ಶ್ರೇಯಾಂಕಿತೆ ಬೆಲಾರಸ್‌ನ ಅರೀನಾ ಸಬಲೆಂಕಾ (Aryna Sabalenka) ಯುಎಸ್ ಓಪನ್ (US Open) 2024ರ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ. ಶನಿವಾರ ತಡರಾತ್ರಿ ನಡೆದ ಫೈನಲ್‌ (US Open final) ಪಂದ್ಯದಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ (Jessica Pegula) ವಿರುದ್ಧ ಅರೀನಾ 7-5, 7-5 ನೇರ ಸೆಟ್‌ಗಳ ಅಂತರದಿಂದ ಗೆದ್ದು ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದು ಅವರ ಮೂರನೇ ಗ್ರ್ಯಾಂಡ್‌ ಸ್ಲಾಮ್‌ ಕಿರೀಟ ಎನ್ನುವುದು ವಿಶೇಷ.

ಕಳೆದ ವರ್ಷ ರನ್ನರ್‌ ಅಪ್‌ ಮತ್ತು 2022ರಲ್ಲಿ ಸೆಮಿಫೈನಲಿಸ್ಟ್‌ ಆಗಿದ್ದ ಅರೀನಾ ಅವರು ಈ ಬಾರಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ. “ನಾನು ಈಗ ಮೂಕಳಾಗಿದ್ದೇನೆ. ಯುಎಸ್ ಓಪನ್ ನನ್ನ ಕನಸಾಗಿತ್ತು ಮತ್ತು ಅಂತಿಮವಾಗಿ ಇದು ನನಸಾಗಿದೆ. ನನ್ನ ತಂಡದ ಬಗ್ಗೆಯೂ ನನಗೆ ತುಂಬಾ ಹೆಮ್ಮೆ ಇದೆʼʼ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಅರೀನಾ ಪ್ರತಿಕ್ರಿಯಿಸಿದ್ದಾರೆ. ನ್ಯೂಯಾರ್ಕ್‌ನ ಆರ್ಥರ್ ಆಶೆ ಕ್ರೀಡಾಂಗಣದಲ್ಲಿ 1 ಗಂಟೆ 53 ನಿಮಿಷಗಳ ಕಾಲ ಈ ಹೈವೋಲ್ಟೇಜ್‌ ಪಂದ್ಯ ನಡೆಯಿತು. ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯ್‌ ಓಪನ್‌ ಗೆದ್ದಿದ್ದ ಅರೀನಾ ಸಬಲೆಂಕಾ ಇದೀಗ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಅರೀನಾ ಸಬಲೆಂಕಾ ಸಾಗಿ ಬಂದ ಹಾದಿ

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಸೆಮಿ ಫೈನಲ್‌ನ ಅತ್ಯಂತ ಜಿದ್ದಾಜಿದ್ದಿನ ಪಂದ್ಯದಲ್ಲಿ ಸಬಲೆಂಕಾ ಸ್ಥಳೀಯ ಆಟಗಾರ್ತಿ ಎಮ್ಮಾ ನವಾರೊ ಅವರನ್ನು 6-3, 7-6 (7-2) ಅಂತರದಿಂದ ಸೋಲಿಸಿದ್ದರು. ಈ ಮೂಲಕ ಸತತವಾಗಿ ಎರಡು ವರ್ಷ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದರು. ಕಳೆದ ವರ್ಷವೂ ಸಬಲೆಂಕಾ ಫೈನಲ್‌ ಪ್ರವೇಶಿಸಿದ್ದರು. ಆದರೆ ಕೋಕೊ ಗಾಫ್ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು. ಈ ಹಿಂದೆ ಎರಡು ಬಾರಿ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ್ದ ಅವರಿಗೆ ಇದು ಚೊಚ್ಚಲ ಯುಎಸ್ ಓಪನ್ ಪ್ರಸಸ್ತಿ.

ಜೆಸ್ಸಿಕಾ ಪೆಗುಲಾ ಫೈನಲ್‌ ಹಾದಿ

ಸಬಲೆಂಕಾ ಎದುರಾಳಿಯಾಗಿದ್ದ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರು ವಿಶ್ವದ ನಂಬರ್‌ 1 ಖ್ಯಾತಿಯ ಇಗಾ ಸ್ವಿಯಾಟೆಕ್‌ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ ಹಂತಕ್ಕೇರಿದ್ದರು. ಸೆಮಿಯಲ್ಲಿ ಕರೋಲಿನಾ ಮುಚೋವಾ ವಿರುದ್ಧ ಮೂರು ಸೆಟ್‌ಗಳ ಹೋರಾಟದ ಬಳಿಕ ಗೆಲುವಿನ ನಿಟ್ಟುಸಿರುಬಿಟ್ಟು ಫೈನಲ್‌ ಪ್ರವೇಶಿಸಿದ್ದರು. ಗೆಲುವಿನ ಅಂತರ 1-6, 6-4, 6-2. ಕಳೆದ ವರ್ಷ ಕೂಡ ಕರೋಲಿನಾ ಮುಚೋವಾ ಈ ಕೂಟದಲ್ಲಿ ಸೆಮಿಫೈನಲ್‌ ತಲುಪಿದ್ದರು. ಈ ಬಾರಿಯೂ ಸೆಮಿ ಹರ್ಡಲ್ಸ್‌ ದಾಟುವಲ್ಲಿ ವಿಫಲರಾಗಿದ್ದರು.

ಈ ಸುದ್ದಯನ್ನೂ ಓದಿ: US Open: ಸಬಲೆಂಕಾ-ಪೆಗುಲಾ ಫೈನಲ್‌ ಫೈಟ್‌

ಇಂದು ಪುರುಷರ ಫೈನಲ್‌

ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯ ಇಂದು (ಸೆಪ್ಟೆಂಬರ್‌ 8) ನಡೆಯಲಿದೆ. ವಿಶ್ವದ ನಂ.1 ಆಟಗಾರ ಜಾನಿಕ್‌ ಸಿನ್ನರ್‌ (Jannik Sinner) ಮತ್ತು 12ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ (Taylor Fritz) ನಡುವೆ ಅಂತಿಮ ಹಣಾಹಣಿ ನಡೆಯಲಿದೆ.