Monday, 25th November 2024

Vasant Nadiger: ಚುರುಕಾದ ಶೀರ್ಷಿಕೆಯ ಮೋಡಿಗಾರ, ಹಿರಿಯ ಪತ್ರಕರ್ತ ʼನಾಡಿʼ ವಸಂತ ನಾಡಿಗೇರ ಇನ್ನಿಲ್ಲ

vasant nadiger

ಬೆಂಗಳೂರು: ನಾಡಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕದ ಸಂಪಾದಕರಾದ ವಸಂತ ನಾಡಿಗೇರ ಅವರು ಸೋಮವಾರ ಬೆಳಗಿನ ಜಾವ 3.13ರ ಹೊತ್ತಿಗೆ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ವಸಂತ ನಾಡಿಗೇರ್‌ ಅವರು ʼವಿಶ್ವವಾಣಿʼ ಪತ್ರಿಕೆಯ ಹಿರಿಯ ಸುದ್ದಿ ಸಂಪಾದಕ, ಅಂಕಣಕಾರರೂ ಆಗಿದ್ದರು. ʼನಾಡಿಮಿಡಿತʼ ಎಂಬುದು ಅವರ ಜನಪ್ರಿಯ ಅಂಕಣವಾಗಿತ್ತು.

ಸಂಯುಕ್ತ ಕರ್ನಾಟಕದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದ ವಸಂತ ನಾಡಿಗೇರ್‌, ಕನ್ನಡಪ್ರಭ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ್ದರು. ಆನಂತರ ವಿಜಯ ಕರ್ನಾಟಕದಲ್ಲಿ ದಶಕಗಳ ಕಾಲ ಸುದ್ದಿ ಸಂಪಾದಕ ಸೇರಿದಂತೆ ನಾನಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಧ್ಯೆ ಕೆಲವು ಕಾಲ ಪತ್ರಿಕೆಯ ಸಂಪಾದಕರೂ ಆಗಿದ್ದರು.

ವಸಂತ ನಾಡಿಗೇರ್‌ ತಮ್ಮ Punಭರಿತ, ಮೊನಚಾದ ಶೀರ್ಷಿಕೆಗಳಿಗಾಗಿ ಖ್ಯಾತರಾಗಿದ್ದರು. ಅವರು ನೀಡಿದ ಅನೇಕ ಚುರುಕಾದ ಶೀರ್ಷಿಕೆಗಳನ್ನು ಪತ್ರಕರ್ತರು ಇಂದಿಗೂ ನೆನೆಯುತ್ತಾರೆ. ಸುದ್ದಿಮನೆಯ ನಾನಾ ವಿಭಾಗಗಳ ಕಾರ್ಯನಿರ್ವಹಣೆಯನ್ನು ಬಲ್ಲವರಾಗಿದ್ದ ಅವರು, ಭಾಷೆಯ ಸರಿಯಾದ ಬಳಕೆ ಹಾಗೂ ಸುದ್ದಿಗಳ ಚುರುಕಾದ ವಿನ್ಯಾಸಕ್ಕೆ ಒತ್ತು ನೀಡುತ್ತಿದ್ದರು. ವಿಶ್ವವಾಣಿಯಲ್ಲಿ ಅವರು ʼನಾಡಿಮಿಡಿತʼ ಎಂಬ ಹೆಸರಿನ ಅಂಕಣವನ್ನು ಬಹುಕಾಲ ಬರೆದಿದ್ದರು.

ವಸಂತ ನಾಡಿಗೇರ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಪಡೆದು ಧಾರವಾಡದಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದವರು. ರಸಾಯನ ಶಾಸ್ತ್ರ ಪದವೀಧರರಾದ ವಸಂತ ನಾಡಿಗೇರ ಎಂಬತ್ತರ ದಶಕದಲ್ಲಿ ಸಂಯುಕ್ತ ಕರ್ನಾಟದಿಂದ ವೃತ್ತಿ ಜೀವನ ಆರಂಭಿಸಿದವರು. ಆನಂತರ ಕನ್ನಡ ಪ್ರಭ ಸೇರಿ ಅಲ್ಲಿ ಒಂದೂವರೆ ದಶಕ ಕಾಲ ಕೆಲಸ ಮಾಡಿದರು. ಬಳಿಕ ವಿಜಯಕರ್ನಾಟಕ ಪತ್ರಿಕೆಯ ಆರಂಭದಿಂದಲೂ ಮುಖ್ಯ ಉಪಸಂಪಾದಕರಾಗಿ ಸೇರಿ ಅಲ್ಲಿಯೇ ಬಹುಕಾಲ ಸುದ್ದಿಸಂಪಾದಕರಾಗಿದ್ದರು. ಬಳಿಕ ಸಂಪಾದಕರೂ ಆದರು. ವಿಶ್ವವಾಣಿ ಪತ್ರಿಕೆಯ ಸಂಪಾದಕರಾಗಿ ಸದ್ಯ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು.

ಉತ್ತಮ ಬರಹಗಾರರೂ ಆಗಿದ್ದ ವಸಂತ ನಾಡಿಗೇರ ಅವರು ಕನ್ನಡ ಪ್ರಭದಲ್ಲಿ ಆರ್ಥಿಕ ವಿಶ್ಲೇಷಣೆ ಬರೆಯುತ್ತಿದ್ದರು. ಲತಾ ಮಂಗೇಶ್ಕರ್‌ ಕುರಿತಾದ ಕೃತಿಯನ್ನು ಕನ್ನಡದಲ್ಲಿ ಬರೆದಿದ್ದರು. ವಿಜಯಕರ್ನಾಟಕದಲ್ಲಿ ಅವರ ʼಬಡಿಗೇರ್‌ ಹಾಗೂ ನಾಡಿಗೇರ್‌ʼ ಎನ್ನುವ ಕಾಮಿಕ್‌ ಅಂಕಣವೂ ಜನಪ್ರಿಯವಾಗಿತ್ತು. ಕರ್ನಾಟಕ ಮಾಧ್ಯಮ ಅಕಾಡೆಮಿ, ಖಾದ್ರಿ ಶಾಮಣ್ಣ ಪ್ರಶಸ್ತಿಯೂ ಅವರಿಗೆ ಲಭಿಸಿತ್ತು.

ವಸಂತ ಅವರ ಪಾರ್ಥಿವ ಶರೀರವನ್ನು ಇದೀಗ ಬೆಂಗಳೂರಿನ ಮಣಿಪಾಲ್ (ಹಿಂದಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ) ಯಿಂದ ಅವರ ಮನೆಗೆ ಒಯ್ಯಲಾಗುತ್ತಿದೆ. ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಅವರ ಸಹೋದರ ವಿನಾಯಕ ನಾಡಿಗೇರ ತಿಳಿಸಿದ್ದಾರೆ.

ಈ ಸುದ್ದಿ ಓದಿ: Raja Chendur: ಖ್ಯಾತ ಕಾದಂಬರಿಕಾರ, ಅನುವಾದಕ ರಾಜಾ ಚೆಂಡೂರ್ ಅನಾರೋಗ್ಯದಿಂದ ನಿಧನ