ಅಭಿಮತ
ಎಸ್.ಶ್ರೀನಿವಾಸ್
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರು ಹೇಳಿದರೆನ್ನಲಾದ ‘ಸಂಸ್ಕೃತ ಕಲಿಕೆಯು ಸ್ವರ್ಗಾ ರೋಹಣಕ್ಕೆ ರಹದಾರಿ’ ಎಂಬರ್ಥದ ಮಾತಿನ ಕುರಿತಾಗಿ ಪರ-ವಿರೋಧದ ಚರ್ಚೆಗಳೇನೋ ನಡೆಯುತ್ತಿವೆ. ಆದರೆ ಇದಕ್ಕೂ ಮೊದಲು ವಸ್ತುಸ್ಥಿತಿಯನ್ನೊಮ್ಮೆ ಅವಲೋಕಿಸೋಣ. ಸಂಸ್ಕೃತ ಕಲಿತವರು ಸ್ವರ್ಗಕ್ಕೆ ಹೋಗುವ ಸಾಧ್ಯಾ ಸಾಧ್ಯತೆಗಳು ಒತ್ತಟ್ಟಿಗಿರಲಿ, ನಮ್ಮ ಶಾಲಾ ಕಾಲೇಜುಗಳಲ್ಲಿ ಸಂಸ್ಕೃತವನ್ನು ಸರಿಯಾಗಿ ಕಲಿಸಿಕೊಡುವುದಕ್ಕೆ
ಮೊದಲು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಪ್ರಸ್ತುತ, ಅನಕ್ಷರಸ್ಥ ತಂದೆ-ತಾಯಿಗೆ ಹುಟ್ಟಿದ ಒಂದು ಮಗುವು ಕೂಡ ೨-೩ ವರ್ಷಗಳಲ್ಲಿ ತನ್ನ ಮಾತೃಭಾಷೆಯಲ್ಲಿ ಮಾತಾಡಲು ಕಲಿಯುತ್ತದೆ. ಆದರೆ, ಒಂದೋ ಎರಡೋ ಭಾಷೆಗಳನ್ನು ತಿಳಿದಿರುವ, ಪ್ರತಿಷ್ಠಿತ ಶಾಲೆ- ಕಾಲೇಜು ಗಳಲ್ಲಿ ಓದಿರುವ ವಿದ್ಯಾರ್ಥಿಗಳು ಐದು ವರ್ಷದವರೆಗೂ (ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ) ಸಂಸ್ಕೃತವನ್ನು ೧೨೫ ಅಂಕಗಳಿಗೆ ಪ್ರಥಮ ಭಾಷೆಯಾಗಿ ತೆಗೆದುಕೊಂಡಿದ್ದರೂ, ಇಂಥವರಲ್ಲಿ ಅನೇಕರು ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರಿಂದ ಕಲಿತ ನಂತರವೂ ಒಂದು ಸಣ್ಣ ವಾಕ್ಯ ರಚಿಸಲು, ಮಾತಾಡಲು ಅಸಮರ್ಥರಾಗುವ ನಿದರ್ಶನಗಳಿವೆ. ಸಂಸ್ಕೃತವನ್ನು ಕಲಿಸುವ ಕ್ರಮದಲ್ಲಿನ ನ್ಯೂನತೆಯನ್ನು ಇದು ಪ್ರದರ್ಶಿಸುತ್ತದೆ.
ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡ ವಿದ್ಯಾರ್ಥಿಗಳು ಪದವಿಯನ್ನು ಪಡೆದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಇಂಥವರಲ್ಲಿ ಕೆಲವರು (ಕನಿಷ್ಠ ಐದು ವರ್ಷದ ವರೆಗೆ ಸಂಸ್ಕೃತವನ್ನು ಓದಿದ ನಂತರವೂ) ಒಂದು ಸಣ್ಣ ವಾಕ್ಯವನ್ನು ರಚಿಸಲಾರರು ಎಂದರೆ, ಅಷ್ಟು ವರ್ಷ ಅವರು ಸಂಸ್ಕೃತ ಓದಿದ್ದು
ನೀರಿನಲ್ಲಿ ಹೋಮ ಮಾಡಿದಂತೆ ಅಲ್ಲವೇ? ಇದು ಕೇವಲ ಒಬ್ಬಿಬ್ಬರ ಕುರಿತಾದ ಪ್ರಶ್ನೆಯಲ್ಲ, ವರ್ಷಾನುವರ್ಷ ಉತ್ತೀರ್ಣರಾಗುವ ಲಕ್ಷಾಂತರ ವಿದ್ಯಾರ್ಥಿಗಳ ಕಥೆ. ಇವರಲ್ಲಿ ದೊಡ್ಡವರು, ಚಿಕ್ಕವರು ಸೇರಿದ್ದಾರೆ. ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳವೊಂದರ ಹಿಂದಿನ ಆಡಳಿತಗಾರರೊಬ್ಬರು ಒಮ್ಮೆ ಭಾಷಣ ಮಾಡುವಾಗ, ‘ನಾನು ಕೂಡ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡಿದ್ದೆ; ಆದರೆ ಸಂಸ್ಕೃತದಲ್ಲಿ ನನಗೆ ಮಾತನಾಡಲು ಬರುವು ದಿಲ್ಲ’ ಎಂದಿದ್ದರು.
ಸ್ವಲ್ಪ ಮಟ್ಟಿಗೆ ಸಾಮಾನ್ಯಜ್ಞಾನ ಉಳ್ಳವರು ಕೂಡಾ ತಿಳಿದಿರುವ ವಿಷಯವೇನೆಂದರೆ, ಯಾರಿಗಾದರೂ ಒಂದು ಭಾಷೆಯನ್ನು ಕಲಿಸಬೇಕಾದರೆ ಮೊದಲು ಅವರಿಗೆ ಮಾತನಾಡಲು ಅನುವು ಮಾಡಿ ಕೊಡಬೇಕು, ನಂತರ ಓದುವ-ಬರೆಯುವ ಅಭ್ಯಾಸಕ್ಕೆ ಅವರನ್ನು ಒಡ್ಡಬೇಕು. ಆದರೆ ನಮ್ಮಲ್ಲಿ ಸಂಸ್ಕೃತವನ್ನು ಹೇಳಿಕೊಡುವ ರೀತಿಯೇ
ಅವೈಜ್ಞಾನಿಕವಾಗಿದೆ. ಸಂಸ್ಕೃತ ಶಿಕ್ಷಕರು ಪಠ್ಯಪುಸ್ತಕವನ್ನು ಓದಿ ಅದನ್ನು ಕನ್ನಡ ಅಥವಾ ಇಂಗ್ಲಿಷ್‌ಗೆ ಭಾಷಾಂ ತರಿಸುತ್ತಾರೆ. ಮೊದಲೆಲ್ಲ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ಪ್ರಶ್ನೆಯನ್ನು ಕೇಳುತ್ತಿದ್ದರು ಹಾಗೂ ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಉತ್ತರಿಸುತ್ತಿದ್ದರು.
ಈಗ ಸಂಸ್ಕೃತದಲ್ಲಿಯೇ ಉತ್ತರ ಬರೆಯಬೇಕೆಂದು ನಿರ್ದೇಶಿಸಲಾಗಿದೆ. ಆದರೂ, ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಅನೇಕರಿಗೆ ಸಂಸ್ಕೃತದಲ್ಲಿ ಒಂದೆರಡು ವಾಕ್ಯಗಳನ್ನು ಮಾತನಾಡಲಿಕ್ಕೆ ಆಗುವು ದಿಲ್ಲ. ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಬೇಕು. ಬಹುತೇಕ ವಿದ್ಯಾರ್ಥಿಗಳು ಎಂಟನೇ ತರಗತಿಯಲ್ಲಿ
ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಲು ಮುಖ್ಯ ಕಾರಣ ಆ ಭಾಷೆಯ ಮೇಲಿನ ಪ್ರೀತಿಯೋ ಅಥವಾ ಸಂಸ್ಕೃತವನ್ನು ಕಲಿಯಬೇಕೆಂಬ ಆಸೆಯೋ ಅಲ್ಲ; ಸಂಸ್ಕೃತವನ್ನು ತೆಗೆದುಕೊಂಡರೆ ಹೆಚ್ಚು ಅಂಕವನ್ನು ಪಡೆಯಬಹುದು ಎಂಬ ಉದ್ದೇಶವೇ ಇದಕ್ಕೆ ಕಾರಣ.
ವಿಷಾದಕರ ಸಂಗತಿಯೆಂದರೆ, ವಿದ್ಯಾವಂತ ಪೋಷಕರು ಕೂಡ ಐದು ವರ್ಷ ಸಂಸ್ಕೃತವನ್ನು ಓದಿರುವ ತಮ್ಮ ಮಕ್ಕಳನ್ನು, ‘ಎಲ್ಲಿ, ಒಂದೆರಡು ಸಾಲು ಸಂಸ್ಕೃತದಲ್ಲಿ ಮಾತನಾಡು ನೋಡೋಣ?’ ಎಂದು ಕೇಳುವುದಿಲ್ಲ, ಅದಕ್ಕೆ ಬಯಸುವುದಿಲ್ಲ; ಅವರಿಗೆ ಬೇಕಾಗಿರುವುದು ತಮ್ಮ ಮಕ್ಕಳು ಸಂಸ್ಕೃತದಲ್ಲಿ ಎಷ್ಟು ಅಂಕಗಳನ್ನು ಪಡೆದಿದ್ದಾರೆ ಎಂಬುದು ಮಾತ್ರ. ಜರ್ಮನ್, ಫ್ರೆಂಚ್ ಮುಂತಾದ ವಿದೇಶಿ ಭಾಷೆಗಳನ್ನು ಸಾಧಾರಣವಾಗಿ ಮಾತನಾಡಲು ಕೆಲ ತಿಂಗಳಲ್ಲಿ ಕಲಿಸಿ ಕೊಡಲಾಗುವುದು. ಆದರೆ ಸಂಸ್ಕೃತದ ವಿಷಯದಲ್ಲಿ ಹೀಗಾಗುತ್ತಿಲ್ಲ- ವಿದ್ಯಾರ್ಥಿಗಳು ಐದು ವರ್ಷದವರೆಗೆ ಸಂಸ್ಕೃತವನ್ನು ಕಲಿತರು ಕೂಡ!
ಇಲ್ಲಿ ದೋಷವಿರುವುದು ಸಂಸ್ಕೃತ ಪಠ್ಯಕ್ರಮವನ್ನು ರೂಪಿಸಿದ ಘನ ವಿದ್ವಾಂಸರದ್ದು. ನನ್ನ ಸಹೋದ್ಯೋಗಿ ಸಂಸ್ಕೃತ ಉಪನ್ಯಾಸಕರೊಬ್ಬರು ಹೇಳಿದ ವಿಷಯವನ್ನು ಈ ಸಂದರ್ಭದಲ್ಲಿ ಸ್ಮರಿಸಲು ಬಯಸುತ್ತೇನೆ. ‘ಒಂದು ವಾಕ್ಯವನ್ನೂ ಸ್ವತಂತ್ರವಾಗಿ ರಚಿಸಲಾಗದ ವಿದ್ಯಾರ್ಥಿಗಳಿಗೂ ನೀವು ನಲವತ್ತು ಅಂಕಗಳನ್ನು ನೀಡಿ ತೇರ್ಗಡೆ
ಮಾಡುವುದೇಕೆ?’ ಎಂದು ಅವರನ್ನು ಪ್ರಶ್ನಿಸಿದಾಗ, ‘ವಿದ್ಯಾರ್ಥಿಗಳಿಗೆ ನಾವು ಹಾಗೆ ಉದಾರವಾಗಿ ಅಂಕಗಳನ್ನು ನೀಡದಿದ್ದರೆ, ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುವುದನ್ನು ವಿದ್ಯಾರ್ಥಿಗಳು ನಿಲ್ಲಿಸುತ್ತಾರೆ. ಆಗ ಶಾಲಾ-ಕಾಲೇಜಿನಲ್ಲಿ ಸಂಸ್ಕೃತ ವಿಭಾಗವನ್ನು ತೆಗೆದುಹಾಕುತ್ತಾರೆ ಹಾಗೂ ನಾವು ನಿರುದ್ಯೋಗಿಗಳಾಗುತ್ತೇವೆ’
ಎಂಬ ಉತ್ತರ ಅವರಿಂದ ಹೊಮ್ಮಿತು. ಇಂಥ ನಿಲುವಿನಿಂದಾಗಿ ಸಂಸ್ಕೃತ ಶಿಕ್ಷಕರು ಆತ್ಮವಂಚನೆ ಮಾಡಿಕೊಂಡಂತೆ ಆಗುವುದಿಲ್ಲವೇ?
‘ನಾವು ನಮ್ಮ ಯುವಜನರಿಗೆ ದೇಶದ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ತಿಳಿವಳಿಕೆ ನೀಡಬೇಕು’ ಎಂಬ ಕೂಗು ಪ್ರಸ್ತುತ ಕೇಳಿಬರುತ್ತಿದೆ. ರಾಷ್ಟ್ರಕವಿ ಕುವೆಂಪು ಅವರ ಪ್ರಕಾರ, ಸಂಸ್ಕೃತಿ ಪ್ರಸಾರ ಮಾಡುವುದು ಎಂದರೆ ನಮ್ಮ ಪ್ರಾಚೀನ ಗ್ರಂಥಗಳನ್ನು ವಿಮರ್ಶಿಸಿ, ಯಾವುದು ವಿಚಾರಪೂರಕವಾದುದು ಮತ್ತು ಯಾವುದು ಅಲ್ಲ ಎಂಬುದನ್ನು ಬೇರ್ಪಡಿಸಿ ಜನರಿಗೆ ತಿಳಿಸುವುದು. ಇದನ್ನು ಮಾಡಬೇಕಾದರೆ ಮೊದಲು ನಮಗೆ ಭಾಷೆಯ ಜ್ಞಾನ ಬೇಕು. ವೇದ, ಪುರಾಣ, ವೇದಾಂತ, ಆಗಮಶಾಸ, ಮಹಾಕಾವ್ಯಗಳು, ಆಯುರ್ವೇದ ಸೇರಿದಂತೆ ವಿವಿಧ ಪ್ರಕಾರದ ನಮ್ಮ ಪ್ರಾಚೀನ ಬರಹಗಳು ಸಂಸ್ಕೃತದಲ್ಲಿವೆ.
ವಿದೇಶಿಯರು ಸೇರಿದಂತೆ ಕೆಲವೇ ವ್ಯಕ್ತಿಗಳು ಈ ಬರಹಗಳ ಭಾಷಾಂತರ ಹಾಗೂ ವ್ಯಾಖ್ಯಾನವನ್ನು ಮಾಡಿದ್ದು,
ಪ್ರಸ್ತುತ ಅಧ್ಯಯನ ಮಾಡುವಾಗ ಅವನ್ನೇ ನಾವು ಬಳಸಬೇಕಾದ ಅನಿವಾರ್ಯತೆಯಿದೆ. ಸಂಸ್ಕೃತ ಗೊತ್ತಿಲ್ಲದ ಕಾರಣ ಸಮಾಜಶಾಸ್ತ್ರದ ವಿದಾರ್ಥಿಗಳಿಗೆ ಮೂಲಗ್ರಂಥವನ್ನು ಓದಲಾಗುತ್ತಿಲ್ಲ ಹಾಗೂ ಪ್ರಾಚೀನ ಭಾರತದ ಗ್ರಂಥಗಳನ್ನು ಅಧ್ಯಯನ ಮಾಡಬೇಕಾದರೆ ಅವುಗಳ ಆಂಗ್ಲ ಆವೃತ್ತಿಗೇ ಅವರು ಮೊರೆಹೋಗಬೇಕಾಗಿದೆ.
ಮೌಲ್ಯಗಳು ಕಾಲಕಾಲಕ್ಕೆ ಬದಲಾಗುತ್ತವೆ. ಆದ್ದರಿಂದ, ಆಯಾ ಕಾಲಘಟ್ಟದ ಪೀಳಿಗೆಯವರು ನಮ್ಮ ಪ್ರಾಚೀನ ಗ್ರಂಥಗಳನ್ನು ವಸ್ತುನಿಷ್ಠತೆಯಿಂದ ವಿಮರ್ಶಿಸಬೇಕಾದರೆ, ಅವರಿಗೆ ಸಂಸ್ಕೃತದ ಜ್ಞಾನ ಅತ್ಯವಶ್ಯಕವಾಗುತ್ತದೆ. ಅಲ್ಲದೆ, ಭಾಷೆಯನ್ನು ಮಾತಾಡಲು ಕಲಿತಾಗಲೇ ಇವತ್ತಿನ ಸಮಾಜದಲ್ಲಿ ವ್ಯವಹಾರ ಮಾಡಲು ಸಾಧ್ಯ. ಹಾಗೆಯೇ, ಯಾವ ಯಾವ ಕ್ಷೇತ್ರಗಳಲ್ಲಿ ಸಂಸ್ಕೃತದ ಪದಗಳ ಕೊರತೆ ಇದೆ ಎಂದು ತಿಳಿದಾಗಲೇ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡು ಕೊಳ್ಳಬಹುದು. ಒಂದು ಭಾಷೆ ಜೀವಂತವಾಗಿರಬೇಕಾದರೆ, ದಿನ ನಿತ್ಯದ ವ್ಯವಹಾರದಲ್ಲಿ ನಾವು ಆ ಭಾಷೆ ಯನ್ನು ಬಳಸಬೇಕು.
ಇಸ್ರೇಲ್ ದೇಶದವರು ತಮ್ಮ ಪ್ರಾಚೀನ ಭಾಷೆಯಾದ ‘ಹಿಬ್ರೂ’ವನ್ನು ಜನಸಾಮಾನ್ಯರ ಭಾಷೆಯಾಗಿ ಮಾಡಿದ ಮಾದರಿ ನಮಗೆ ಮೇಲ್ಪಂಕ್ತಿ ಯಾಗಬೇಕು; ಸಂಸ್ಕೃತವನ್ನು ಅಧ್ಯಯನ ಭಾಷೆಯಾಗಿ ತೆಗೆದು ಕೊಂಡ ನಮ್ಮ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಸರಾಗವಾಗಿ ಮಾತನಾಡುವಂತಾಗಬೇಕು ಮತ್ತು ಅದು ಸುಗಮವಾಗಿ ನೆರವೇ ರುವುದಕ್ಕೆ ಅನುವು ಮಾಡಿಕೊಡುವ ಪಠ್ಯಕ್ರಮವನ್ನು ರೂಪಿಸಲು ನಮ್ಮ ಪಂಡಿತರು ಪ್ರಯತ್ನಿಸಬೇಕು.
(ಲೇಖಕರು ಇತಿಹಾಸಕಾರರು ಹಾಗೂ ಸಂಶೋಧಕರು)