Friday, 22nd November 2024

Brides Skin Glowing Juice: ಮದುವೆಯ ದಿನ ಸುಂದರವಾಗಿ ಕಾಣಬೇಕೆ? ಹಾಗಾದ್ರೆ ತಪ್ಪದೇ ಕುಡಿಯಿರಿ ಈ ಡ್ರಿಂಕ್ಸ್‌!

Brides skin glowing juice

ಬೆಂಗಳೂರು : ಮದುವೆ ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದ ದಿನ. ಮದುವೆಯ ಸಮಾರಂಭಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಅದರಲ್ಲೂ ಮದುಮಗಳು ಅಂದು ಕೇಂದ್ರಬಿಂದುವಾಗಿರುವ ಕಾರಣ ತಾನು ಸುಂದರವಾಗಿ ಕಾಣಬೇಕು ಎಂಬ ಆಸೆ ಎಲ್ಲಾ ವಧುವಿಗೂ ಇರುತ್ತದೆ. ಇನ್ನು ಮದುವೆಯ ಆಚರಣೆಗಳು, ಖುಷಿಯ ಜೊತೆಗೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಚರ್ಮದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮದುವೆಯ ದಿನ ಸುಂದರವಾಗಿ ಕಾಣಲು ಮದುಮಗಳು (Brides skin glowing juice) ಮೊದಲೇ ಚರ್ಮದ ಆರೈಕೆಯ ಬಗ್ಗೆ ಗಮನ ಕೊಡಬೇಕು. ಇದರಿಂದ ಹೊಳೆಯುವಂತಹ ಆಕರ್ಷಕ ಸೌಂದರ್ಯವನ್ನು ಹೊಂದಬಹುದು.

ಚರ್ಮದ ಮೇಲೆ ಹೊಳಪು ಬರುವಂತಹ ಪದಾರ್ಥಗಳನ್ನು ಬಳಸುವುದರ ಜೊತೆಗೆ ಚರ್ಮ ಒಳಗಿನಿಂದ ಹೊಳಪನ್ನು ಪಡೆಯಲು, ನೀವು ಸರಿಯಾದ ರೀತಿಯ ಆಹಾರ ಮತ್ತು ಜೀವನಶೈಲಿಯನ್ನು ಹೊಂದಿರಬೇಕು. ನೀರು ಕುಡಿಯುವುದು, ಸರಿಯಾದ ರೀತಿಯ ಊಟ ಮತ್ತು ನಿಯಮಿತ ವ್ಯಾಯಾಮವು ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮದುವೆಯ ದಿನ ಸುಂದರವಾಗಿ ಕಾಣಲು ಮದುಮಗಳು ಈ ಒಂದು ಅದ್ಭುತವಾದ ಪಾನೀಯವನ್ನು ಪ್ರಯತ್ನಿಸಿ ನೋಡಬಹುದು. ಇದರಿಂದ ಹೊಳೆಯುವ ಮೈಕಾಂತಿ ನಿಮ್ಮದಾಗುತ್ತದೆ.

ಇದರ ಪಾಕವಿಧಾನವನ್ನು ಪೌಷ್ಟಿಕತಜ್ಞೆ ರಿಚಾ ಗಂಗನಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್‍ನಲ್ಲಿ ಹಂಚಿಕೊಂಡಿದ್ದಾರೆ. “ಕೇವಲ 21 ದಿನಗಳಲ್ಲಿ ಸ್ಪಷ್ಟ ಮತ್ತು ಹೊಳೆಯುವ ಗ್ಲಾಸ್‌ ಸ್ಕಿನ್‌ಗೆ ಹಲೋ ಹೇಳಿ” ಎಂದು ಅವರು ಬರೆದಿದ್ದಾರೆ. ಈ ಪಾನೀಯವು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಅಧಿಕವಾಗಿರುವ ನಾಲ್ಕು ಮೂಲಭೂತ ಪದಾರ್ಥಗಳನ್ನು ಒಳಗೊಂಡಿದೆ. ಬೀಟ್ರೂಟ್, ಕ್ಯಾರೆಟ್, ಕರಿಬೇವಿನ ಎಲೆಗಳು ಮತ್ತು ಆಮ್ಲಾವನ್ನು ಮಿಶ್ರಣ ಮಾಡಿ ತಯಾರಿಸಿದ  ಪಾನೀಯವನ್ನು ಪ್ರತಿದಿನ ಒಂದು ಲೋಟ ಕುಡಿದರೆ ಸಾಕಷ್ಟು ಪ್ರಯೋಜನ ನಿಮ್ಮದಾಗಲಿದೆ ಎಂದು ಹೇಳಿದ್ದಾರೆ.

ಬೀಟ್ರೂಟ್ -ವಿಟಮಿನ್ ಸಿ ಸಮೃದ್ಧವಾಗಿದೆ:

ಬೀಟ್ರೂಟ್ ವಿಟಮಿನ್ ಸಿಯಿಂದ ಸಮೃದ್ಧವಾಗಿದೆ. ಇದು ನೆರಿಗೆ ಮತ್ತು ಒಣ ಚರ್ಮವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಸ್ವಲ್ಪ ಪ್ರಮಾಣದ ಲೈಕೋಪೀನ್ ಮತ್ತು ಸ್ಕ್ವಾಲೀನ್ ಅನ್ನು ಸಹ ಹೊಂದಿರುತ್ತದೆ, ಇದು ಚರ್ಮದ ವಯಸ್ಸಾಗುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ನಿಮಗೆ ಆಂತರಿಕ ಹೊಳಪನ್ನು ನೀಡುತ್ತದೆ.

ಕ್ಯಾರೆಟ್ -ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಿಸುತ್ತದೆ:

ಕ್ಯಾರೆಟ್‌ನಲ್ಲಿ ಬೀಟಾ ಕ್ಯಾರೋಟಿನ್, ವಿಟಮಿನ್ ಸಿ ಮತ್ತು ವಿಟಮಿನ್ ಇ ಇದ್ದು, ಇದು ನಿಮ್ಮ ಚರ್ಮವನ್ನು ನಿರ್ವಿಷಗೊಳಿಸಲು, ಸನ್‌ಟ್ಯಾನ್ ತಡೆಗಟ್ಟಲು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳಿಗಾಗಿ ಕರಿಬೇವಿನ ಎಲೆಗಳು:

ಕರಿಬೇವಿನ ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಆರೋಗ್ಯಕರ ಮೈಬಣ್ಣ ಹೊಂದಲು ಸಹಾಯ ಮಾಡುತ್ತದೆ. ಇದಲ್ಲದೆ ಎಲೆಗಳು ಜೈವಿಕ ಸಕ್ರಿಯ ಸಂಯುಕ್ತಗಳನ್ನು ಸಹ ಹೊಂದಿರುತ್ತವೆ, ಅದು ನಿಮ್ಮ ಚರ್ಮವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ, ಜೀವಕೋಶಗಳು ಪುನರುಜ್ಜೀವನಗೊಳಿಸಲು  ಉತ್ತೇಜಿಸುತ್ತದೆ.

ಆಮ್ಲಾ: ಕೊಲಾಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ:

ಆಮ್ಲಾದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಕೊಲಾಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ನೆರಿಗೆಗಳು, ಸೂಕ್ಷ್ಮ ಗೆರೆ ಮತ್ತು ವಯಸ್ಸಾದ ಕಲೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನೀವು  ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಈ ನಾಲ್ಕು ಪದಾರ್ಥಗಳನ್ನು ಹೊಂದಿರುವಂತಹ ಪಾನೀಯವನ್ನು ನಿಮ್ಮ ಮದುವೆಗೂ ಮುನ್ನ ಪ್ರತಿದಿನ ಸೇವಿಸಿ.  ಇದು ಆರೋಗ್ಯಕರ ಚರ್ಮ ಮತ್ತು ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಇದನ್ನು ಮಿತವಾಗಿ ಬಳಸಿ.