Monday, 25th November 2024

Road Accident: ಹಬ್ಬದ ಮರುದಿನ ಖುಷಿಯಿಂದ ಶಾಲೆಗೆ ಹೊರಟ ತಾಯಿ- ಮಗಳನ್ನು ಬಲಿ ಪಡೆದ ಬಸ್

road accident

ತುಮಕೂರು: ಗಣೇಶನ ಹಬ್ಬದ (Ganesh Chaturthi) ಮರುದಿನ ಖುಷಿಯಿಂದ ಶಾಲೆಗೆ ಹೊರಟಿದ್ದ ತಾಯಿ, ಮಗಳು ಗಾರ್ಮೆಂಟ್ಸ್ ಬಸ್ ಡಿಕ್ಕಿ ಹೊಡೆದ (Road Accident) ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು (Tumkur news) ಜಿಲ್ಲೆ ತಿಪಟೂರು ತಾಲೂಕಿನ ರಾಮಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೋಮವಾರ ಬೆಳಗ್ಗೆ ಅಪಘಾತ ನಡೆದಿದ್ದು, ಕಮಲಮ್ಮ (35) ಹಾಗೂ ವೀಣಾ (16) ಮೃತ ದುರ್ದೈವಿಗಳು. ಕಮಲಮ್ಮ ಇಂದು ಬೆಳಗ್ಗೆ ಮಗಳನ್ನು ಶಾಲೆಗೆ ಬಿಡಲು ಮಗಳ ಜೊತೆ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಗಾರ್ಮೆಂಟ್ಸ್ ಬಸ್ ಏಕಾಏಕಿ ತಾಯಿ ಮಗಳಿಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ವೀಣಾ 10 ನೇ ತರಗತಿ ಓದುತ್ತಿದ್ದಳು. ಘಟನೆಯಲ್ಲಿ ಮತ್ತೊಬ್ಬ ಬೈಕ್ ಸವಾರನಿಗೆ ಗಂಭೀರವಾದ ಗಾಯಗಳಾಗಿವೆ. ಮುದ್ದಪ್ಪ (50) ಗಾಯಾಳು. ಗಾಯಾಳುವನ್ನು ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳ ಬೇಜವ್ದಾರಿತನಕ್ಕೆ ಇವರಿಬ್ಬರ ಸಾವಾಗಿದೆ ಎಂದು ಗ್ರಾಮಸ್ಥರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹಗಳನ್ನು ರಸ್ತೆಯಲ್ಲಿಟ್ಟು ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದರು. ಇಲ್ಲಿ ವಾಹನ ದಟ್ಟಣೆಯಿದ್ದು, ಅಂಡರ್ ಪಾಸ್ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಶವವನ್ನ ಎತ್ತುವುದಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ಸುದ್ದಿ ಓದಿ: Road Accident: ಮಧುಗಿರಿ ಬಳಿ ಭೀಕರ ಅಪಘಾತ; ಎರಡು ಕಾರುಗಳು ಡಿಕ್ಕಿಯಾಗಿ ಐವರ ದುರ್ಮರಣ