Friday, 20th September 2024

Haryana Polls: ಮೈತ್ರಿ ಸ್ಪರ್ಧೆ ಇಲ್ಲ; ಹರಿಯಾಣದಲ್ಲಿ ಏಕಾಂಗಿ ಹೋರಾಟಕ್ಕೆ ಆಪ್‌ ಸಜ್ಜು-ಮೊದಲ ಅಭ್ಯರ್ಥಿ ಪಟ್ಟಿ ರಿಲೀಸ್‌

Haryana Poll

ಚಂಡೀಗಡ: ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ(Haryana Polls) ಗರಿಗೆದರಿದ್ದು, ಆಮ್‌ ಆದ್ಮಿ ಪಕ್ಷ (AAP) ಜತೆ ಮೈತ್ರಿ ಸ್ಪರ್ಧೆ ನಡೆಸಿದ ಪ್ರತಿಸ್ಪರ್ಧಿ ಬಿಜೆಪಿಗೆ ನೀರು ಕುಡಿಸಬೇಕೆಂಬ ಹಠಕ್ಕೆ ಬಿದ್ದಿದ್ದ ಕಾಂಗ್ರೆಸ್‌ಗೆ ಆರಂಭಿಕ ಸೋಲು ಎದುರಾಗಿದೆ. ಮೈತ್ರಿಯಿಂದ ದೂರ ಉಳಿದು ಆಪ್‌ ಏಕಾಂಗಿ ಸ್ಪರ್ಧೆಗೆ ಮುಂದಾಗಿದ್ದು, ಇಂದು ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ.

ಸೀಟು ಹಂಚಿಕೆ ವಿಚಾರದಲ್ಲಿ ಹೊಂದಾಣಿಕೆಯಾಗದ ಹಿನ್ನೆಲೆ ಆಪ್‌ ಏಕಾಂಗಿ ಸ್ಪರ್ಧೆಗೆ ಮುಂದಾಗಿದ್ದು, ಇಂದು 20ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಸಂಜೆ ವೇಳೆ ಎಲ್ಲಾ 90 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಆಪ್‌ ಹೇಳಿದೆ. ಅಧಿಕೃತ ಮಾಹಿತಿ ಪ್ರಕಾರ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿರುವ ಹರಿಯಾಣದಲ್ಲಿ 10 ಸೀಟುಗಳಿಗೆ ಆಪ್‌ ಬೇಡಿಕೆ ಇಟ್ಟಿತ್ತು. ಆದರೆ ಕೇವಲ ಮೂರರಿಂದ ನಾಲ್ಕು ‍ಸ್ಥಾನಗಳನ್ನು ನೀಡಲು ಕಾಂಗ್ರೆಸ್‌ ಒಪ್ಪಿತ್ತು. ಇದರಿಂದಾಗಿ ಆಪ್‌ ಮೈತ್ರಿಯಿಂದ ಹೊರನಡೆದಿದ್ದು, ಸ್ವತಂತ್ರ ಸ್ಪರ್ಧೆಗೆ ಮುಂದಾಗಿದೆ.

ಈಗಾಗಲೇ ಬಿಜೆಪಿ (BJP) ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಬಲವಾದ ಆಡಳಿತ ವಿರೋಧಿ ಅಲೆಗಳ ನಡುವೆಯೂ ಬಿಜೆಪಿ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಪಣ ತೊಟ್ಟಿದ್ದು, ಅದಕ್ಕಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ.

ಸೆಪ್ಟೆಂಬರ್‌ 4ರಂದು ಪ್ರಕಟಿಸಲಾದ 67 ಅಭ್ಯರ್ಥಿಗಳ ಪೈಕಿ 25 ಮಂದಿ ಹೊಸಬರು ಎನ್ನುವುದು ವಿಶೇಷ. ಇದೇ ವೇಳೆ ಕೆಲವು ಶಾಸಕರಿಗೆ ಬೇರೆ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಜತೆಗೆ ರಾಜ್ಯದಲ್ಲಿನ ತನ್ನ ಪ್ರಭಾವಿ ನಾಯಕರನ್ನು ಸಮಾಧಾನಪಡಿಸಲು ಮುಂದಾಗಿರುವ ಬಿಜೆಪಿ ವಂಶಪಾರಂಪರ್ಯ ವಿರುದ್ಧದ ನಿಲುವು ಮತ್ತು ಮತ್ತು 75ನೇ ವಯಸ್ಸಿನಲ್ಲಿ ನಿವೃತ್ತಿ ಎನ್ನುವ ಅಲಿಖಿತ ನಿಯಮವನ್ನು ಬದಿಗೊತ್ತಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕವನ್ನು ಅಕ್ಟೋಬರ್ 1 ರಿಂದ ಅಕ್ಟೋಬರ್ 5 ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇದೇ ವೇಲೆ ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನಾಂಕವನ್ನು ಅಕ್ಟೋಬರ್ 4 ರಿಂದ ಅಕ್ಟೋಬರ್ 8 ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಗುರು ಜಂಬೇಶ್ವರನ ಸ್ಮರಣಾರ್ಥ ಅಸೋಜ್ ಅಮಾವಾಸ್ಯೆ ಹಬ್ಬದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಆಚರಿಸುವ ಬಿಷ್ಣೋಯ್ ಸಮುದಾಯವನ್ನು ಗೌರವಿಸಲು ಮತದಾನದ ದಿನಾಂಕಗಳನ್ನು ಪರಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಈ ಸುದ್ದಿಯನ್ನೂ ಓದಿ: Haryana Polls: ಕುಸ್ತಿಪಟು ವಿನೇಶ್‌ ಪೋಗಟ್‌ ಜೂಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ