Friday, 20th September 2024

Guinness World Record : ಒಂದು ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ; ಮರ್ಸಿಡೀಸ್‌ ಕಾರಿನ ಹೊಸ ದಾಖಲೆ

ಬೆಂಗಳೂರು : ಆಟೋಕಾರ್ ಇಂಡಿಯಾ ಮತ್ತು ಮರ್ಸಿಡಿಸ್ ಬೆಂಝ್ ಇಂಡಿಯಾ ಜಂಟಿಯಾಗಿ ಗಿನ್ನೆಸ್‌ ದಾಖಲೆ ಬರೆದಿವೆ (Guinness World Record) . ಮರ್ಸಿಡಿಸ್ ಇಕ್ಯೂಎಸ್ 580 ಕಾರನ್ನು ಒಂದು ಬಾರಿ ಚಾರ್ಜ್ ಮಾಡಿ ಬೆಂಗಳೂರಿನಿಂದ ನವೀ ಮುಂಬೈ ನಡುವೆ 949.0 ಕಿ.ಮೀ ದೂರ ಚಲಾಯಿಸುವ ಮೂಲಕ ವಿನೂತನ ದಾಖಲೆ ನಿರ್ಮಿಸಲಾಗಿದೆ. ಈ ಹಿಂದೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಫೋರ್ಡ್‌ ಮಸ್ಟಂಗ್‌ ಮ್ಯಾಚ್‌ ಇ ನಿರ್ಮಿಸಿದ್ದ 916.74 ಕಿಲೋಮೀಟರ್‌ಗಳ ದಾಖಲೆಯನ್ನು ಆಟೊಕಾರ್ ಇಂಡಿಯಾ ಮುರಿದಿದೆ.

ಗಿನ್ನೆಸ್ ದಾಖಲೆ ಸೃಷ್ಟಿಸಿರುವುದು ಆಟೋಕಾರ್ ಪಾಲಿಗೆ ಪ್ರಭಾವಶಾಲಿ ಸಾಧನೆಯಾಗಿದ್ದರೂ, ಚಾಲನೆಯ ಅವಧಿಯಲ್ಲಿ ಎದುರಿಸಿರುವ ಅಡೆತಡೆಗಳು ಅದನ್ನು ಇನ್ನೂ ದೊಡ್ಡ ಹೆಗ್ಗಳಿಕೆ.. ಬೆಂಗಳೂರಿನಿಂದ ನವೀ ಮುಂಬೈಗೆ ಹೋಗುವ ಮಾರ್ಗದುದ್ದಕ್ಕೂ ಮಳೆಗಾಲ ತೀವ್ರಗತಿಯಲ್ಲಿತ್ತು. ನಿರಂತರವಾಗಿ ಸುರಿಯುತ್ತಿದ್ದ ಭಾರಿ ಮಾನ್ಸೂನ್ ಮಳೆಯಿಂದಾಗಿ ಮಾರ್ಗದುದ್ದಕ್ಕೂ ಅನೇಕ ಕಡೆ ರಸ್ತೆ ಬದಲಾವಣೆ ಅನಿವಾರ್ಯವಾಗಿದ್ದವು. ಅಲ್ಲಲ್ಲಿ ನಡೆಯತ್ತಿದ್ದ ರಸ್ತೆ ಕಾಮಗಾರಿಗಳು ಮತ್ತು ದುರಸ್ತಿ ಕೆಲಸಗಳಿಂದಾಗಿ ಹೆಚ್ಚಿನ ತಿರುವುಗಳ ಮೂಲಕ ಕಾರು ಸಂಚರಿಸಬೇಕಾಯಿತು. ಡ್ರೈವ್‌ನ ಕೊನೇ ಹಂತದಲ್ಲಿ ಆಘಾತಕಾರಿ ಎಂಬಂತೆ ಕಾರಿನ ಟಯರ್ ಕೂಡ ಪಂಚರ್ ಆಗಿತ್ತು. ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿ ಪ್ರಯಾಣ ಮುಂದುವರಿಸಿ ನಿರೀಕ್ಷಿತ ದಾಖಲೆ ಮಾಡಲಾಗಿದೆ.

ಗಿನ್ನೆಸ್ ದಾಖಲೆಗಾಗಿ ಮರ್ಸಿಡಿಸ್ ಇಕ್ಯೂಎಸ್ ಆಯ್ಕೆಯಾಗಿತ್ತು. ಬೃಹತ್ 107.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಇಕ್ಯೂಎಸ್ 580, ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅಧಿಕೃತ ರೇಂಜ್ ನೀಡುವ ಕಾರು, ಇದು ಎಆರ್‌ಎಐ ಪ್ರಕಾರ 857 ಕಿ.ಮೀ. ದಾಖಲೆಯ ರೇಂಜ್ ನೀಡುತ್ತದೆ. ಹೀಗಾಗಿ ಪ್ರಮಾಣೀಕೃತ ರೇಂಜ್‌ಗಿಂತಲೂ ಶೇಕಡಾ 10ಕ್ಕಿಂತ ಹೆಚ್ಚು ಮೈಲೇಜ್‌ ಅನ್ನು ಗಿನ್ನೆಸ್‌ ದಾಖಲೆಯ ಸಮಯದಲ್ಲಿ ಪಡೆಯಲಾಗಿದೆ. ಮರ್ಸಿಡಿಸ್ ಇಕ್ಯೂಎಸ್‌ ಕಾರಿನ ಡ್ರ್ಯಾಗ್ ಕೊಎಫಿಷಿಯೆಂಟ್‌ ಕೇವಲ 0.20 ಆಗಿದ್ದು, ಇದು ಭಾರತದಲ್ಲೇ ಅತ್ಯಂತ ಹೆಚ್ಚು ಏರೋಡೈನಾಕ್ಸ್‌ ದಕ್ಷತೆ ಹೊಂದಿದೆ.

ಸರಾಸರಿ ವೇಗದಲ್ಲಿ ಪ್ರಯಾಣ

ಪ್ರಯಾಣದ ರೇಂಜ್ ಹೆಚ್ಚಿಸುವ ಉದ್ದೇಶದಿಂದ ಹೆದ್ದಾರಿಯಲ್ಲಿ ಸರಾಸರಿ 50ರಿಂದ60 ಕಿ.ಮೀ ವೇಗ ಕಾಯ್ದುಕೊಳ್ಳಲಾಯಿತು. ಅದೇ ರೀತಿ ಬ್ಯಾಟರಿ ಪ್ಯಾಕ್‌ ನೆರವಿನಿಂದ ಕೊನೆಯ ಕಿಲೋಮೀಟರ್ ತನಕ ಪ್ರಯಾಣಿಸಲು ಕಾರಿನಲ್ಲಿರುವ ಎಲ್ಲಾ ಮೂರು ಹಂತದ ರೀಜೆನ್ ಅನ್ನು ಬಳಸಲಾಗಿದೆ.

ಆಟೋಕಾರ್ ಇಂಡಿಯಾಗೆ ಗಿನ್ನೆಸ್ ದಾಖಲೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಆಟೋಕಾರ್ ಇಂಡಿಯಾದ ಚಾಲಕರಾದ ರಾಹುಲ್ ಕಾಕರ್ ಮಾತನಾಡಿ ನಾನು ಈ ಹಿಂದೆಯೂ ಆಂತರಿಕ ದಹನ ಮತ್ತು ಇವಿಗಳೆರಡರಲ್ಲೂ ಸಾಕಷ್ಟು ಬಾರಿ ಹೈಪರ್ಮಿಲ್ (ಕಡಿಮೆ ಸ್ಪೀಡ್‌ನಲ್ಲಿ ಸಾಗಿ ಅತಿ ಹೆಚ್ಚು ಮೈಲೇಜ್ ಪಡೆಯುವುದ) ಮಾಡಿದ್ದೇನೆ. ಆದರೆ ಐಷಾರಾಮಿ ಇವಿಯಲ್ಲಿ ಹೈಪರ್‌ಮೈಲಿಂಗ್‌ ಮಾಡಿರುವುದು ಇದೇ ಮೊದಲು. ಇದು ನಾನು ಕೈಗೊಂಡ ಅತ್ಯಂತ ಸವಾಲಿನ ಪರೀಕ್ಷೆ. ಏಕೆಂದರೆ ಈ ಹಿಂದೆ ನಾನು ಅಸ್ತಿತ್ವದಲ್ಲಿರುವ ದಾಖಲೆಯನ್ನು ಮುರಿಯಲು ಎಂದಿಗೂ ಚಾಲನೆ ಮಾಡಿರಲಿಲ್ಲ. ಭಾರಿ ಮಳೆಯ ನಡುವಿನ ಸಂಚಾರ ಇದಾಗಿತ್ತು. ಹಾಳಾದ ರಸ್ತೆಗಳು, ಸಂಚಾರ ದಟ್ಟಣೆ ಟೈರ್‌ಗಳು ಹೆಚ್ಚು ಹಾಳಾಗುವ ಸಾಧ್ಯತೆಗಳ ನಡುವೆ ಈ ಚಾಲನೆಯು ಹೆಚ್ಚು ಸವಾಲಿನಿಂದ ಕೂಡಿತ್ತು. ಮಾಡಿರುವ ಎಲ್ಲಾ ಪ್ರಯತ್ನಗಳು ಮತ್ತು ಅನುಭವಿಸಿರುವ ಒತ್ತಡವು ಗಿನ್ನೆಸ್ ವಿಶ್ವ ದಾಖಲೆ ಮಾಡುವುದರ ಮೂಲಕ ಖುಷಿಯೊಂದಿಗೆ ಕೊನೆಯಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Rashmika Mandanna : ಅಪಘಾತದಲ್ಲಿ ಗಾಯಗೊಂಡಿದ್ದಾರೆ ರಶ್ಮಿಕಾ ಮಂದಣ್ಣ; ಏನಾಯಿತು ಎಂದು ವಿವರಿಸಿದ ನಟಿ

ಈ ಸಂದರ್ಭದಲ್ಲಿ ಮಾತನಾಡಿದ ಆಟೋ ಕಾರ್ ಇಂಡಿಯಾದ ಸಂಪಾದಕ ಹಾರ್ಮಾಜ್ಡ್ ಸೊರಾಬ್ಜಿ, ಗಿನ್ನೆಸ್ ವಿಶ್ವ ದಾಖಲೆಯ ಹೆಗ್ಗಳಿಕೆಯೊಂದಿಗೆ ನಮ್ಮ 25ನೇ ವಾರ್ಷಿಕೋತ್ಸವ ಆಚರಿಸಲು ನಮಗೆ ಸಂತೋಷವಾಗುತ್ತಿದೆ. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಒಂದು ಬಾರಿ ಚಾರ್ಜ್ ಮಾಡಿಕೊಂಡು 949.0 ಕಿ.ಮೀ ರೇಂಜ್ ಪಡೆದು ಸೃಷ್ಟಿಸಿದ ದಾಖಲೆಯು ನಾವು ಕೈಗೊಂಡ ಅತ್ಯಂತ ಸವಾಲಿನ ಚಾಲನೆಯಾಗಿದೆ ಎಂದು ಹೇಳಿದರು.

ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್ ಮಾತನಾಡಿ, ಮಾನ್ಸೂನ್‌ ಸಮಯದಲ್ಲಿ ಬೆಂಗಳೂರಿನಿಂದ ನವೀ ಮುಂಬೈಗೆ ಪ್ರಯಾಸಕರ ಡ್ರೈವಿಂಗ್ ಪರಿಸ್ಥಿತಿಗಳಲ್ಲಿ ‘ಮೇಡ್ ಇನ್ ಇಂಡಿಯಾ’ ಇಕ್ಯೂಎಸ್ ಸೆಡಾನ್ ಅನ್ನು ಓಡಿಸಿ ಗಿನ್ನೆಸ್ ವಿಶ್ವ ದಾಖಲೆಯ ಸಾಧಿಸಿದ ಆಟೋಕಾರ್ ಇಂಡಿಯಾ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದರು.