Monday, 28th October 2024

Rangaswamy Mookanahalli column: ಮನಿ-ಮ್ಯಾಟರ್‌: ಹೆಣ್‌ ಮಕ್ಳೇ ಸ್ಟ್ರಾಂಗು ಗುರು!

money guide

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಜಗತ್ತಿನಾದ್ಯಂತ ಹೆಣ್ಣು ಮತ್ತು ಗಂಡಿನ ನಡುವಿನ ಅಂತರ, ತಾರತಮ್ಯ ಬಹಳವಿದೆ. ಹೀಗೆ ಹೆಣ್ಣು ಮತ್ತು ಗಂಡಿನ ನಡುವಿನ ವರ್ಗೀಕರಣವಿರುವುದು ಭಾರತದಲ್ಲಿ ಅಥವಾ ಮುಂದುವರಿಯುತ್ತಿರುವ ಅಥವಾ ಹಿಂದುಳಿದ ದೇಶ ಗಳಲ್ಲಿ ಮಾತ್ರ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪುಗ್ರಹಿಕೆ. ಅಮೆರಿಕ, ಯುರೋಪ್, ಜಪಾನ್, ಸ್ವಿಸ್ ಹೀಗೆ ಎಲ್ಲಾ ದೇಶಗಳಲ್ಲಿ ಇಂದಿಗೂ ಅಸಮಾನತೆ ಇದೆ. ಕೆಲವೊಂದು ಹುದ್ದೆಗೆ ಕೇವಲ ಗಂಡಸರೇ ನೇಮಕವಾಗುತ್ತಾರೆ, ಆ ಕೆಲಸ ವನ್ನ ಹೆಣ್ಣು ಕೂಡ ಅಷ್ಟೇ ದಕ್ಷತೆಯಿಂದ ನಿರ್ವಹಿಸುವ ಕ್ಷಮತೆ ಹೊಂದಿದ್ದರೂ ಅಲ್ಲಿಗೆ ಆಕೆ ನೇಮಕ ವಾಗುತ್ತಿಲ್ಲ.

ಇದರ ಜತೆಗೆ ವೇತನ ತಾರತಮ್ಯ ಕೂಡ ಜಾಗತಿಕ. ಇವತ್ತಿನ ಬರಹದಲ್ಲಿ, ಹೂಡಿಕೆಯ ಜಗತ್ತಿನಲ್ಲಿ ಮಹಿಳೆಯರು ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದಾರೆ ಎನ್ನುವುದರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಮೊದಲಿನ ಸಾಲುಗಳಲ್ಲಿ ಹೇಳಿದಂತೆ ಇಂದು ಮಹಿಳೆ ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ ಪುರುಷನಿಗೆ ಸಮವಾಗಿ, ಭುಜಕ್ಕೆ ಭುಜ ಕೊಟ್ಟು ದುಡಿಯಲು ಶುರುಮಾಡಿದ್ದಾಳೆ.

ಶತಮಾನಗಳಿಂದ ತನ್ನ ಹಿಡಿತದಲ್ಲಿರುವ ಹಣಕಾಸು ಪ್ರಪಂಚಕ್ಕೂ ಮಹಿಳೆ ಕಾಲಿಟ್ಟಿರುವುದನ್ನು ಪುರುಷ ಸಮಾಜ ಸುಲಭವಾಗಿ ಅರಗಿಸಿಕೊಳ್ಳುವುದಿಲ್ಲ. ಆದರೆ ನಿಮಗೊಂದು ರಹಸ್ಯವನ್ನ ಹೇಳಬೇಕಿದೆ- ಪುರುಷನಿಗಿಂತ ಮಹಿಳೆಯೇ ಉತ್ತಮ ಹೂಡಿಕೆದಾರಳು ಎನ್ನುವುದೇ ಆ ರಹಸ್ಯ. ಹೂಡಿಕೆಯಲ್ಲಿ ಪುರುಷನಿಗಿಂತ ಮಹಿಳೆ ಅದೇಕೆ ಉತ್ತಮ ಎನ್ನುವುದಕ್ಕೆ ಒಂದಷ್ಟು ಕಾರಣಗಳಿವೆ, ಅವುಗಳನ್ನ ತಿಳಿದುಕೊಳ್ಳೋಣ; ಅವನ್ನ ಪುರುಷರು ಅಳವಡಿಸಿ ಕೊಂಡು ತಮ್ಮ ತಪ್ಪನ್ನ ತಿದ್ದಿಕೊಂಡು ಉತ್ತಮ ಹೂಡಿಕೆದಾರರಾಗುವ ಅವಕಾಶವಿದೆ.

ಹೆಣ್ಣು ಮತ್ತು ಗಂಡು ಇಬ್ಬರೂ ಕುಟುಂಬ ವ್ಯವಸ್ಥೆಯ ಎರಡು ಚಕ್ರಗಳು. ಇಲ್ಲಿ ‘ನಾನು-ನೀನು’ ಎನ್ನುವುದಕ್ಕಿಂತ ಯಾರು ಯಾವುದರಲ್ಲಿ ಉತ್ತಮರೋ ಅದರ ನಾಯಕತ್ವವನ್ನು ಅವರಿಗೆ ನೀಡುವುದು ಜಾಣತನ, ಇರಲಿ.

ಅಪಾಯದ ವಾಸನೆ ಹೆಂಗಸರಿಗೆ ಬೇಗ ತಿಳಿಯುತ್ತದೆ

ನೀವು ಇದನ್ನ ಪ್ರಕೃತಿ ಎನ್ನಿ ಅಥವಾ ಅವರ ಹುಟ್ಟುಗುಣ ಎನ್ನಿ, ಮಹಿಳೆಯರಿಗೆ ಅಪಾಯದ ವಾಸನೆ ಬೇಗ ತಿಳಿಯುತ್ತದೆ. ಮನೆಯ ಹಣಕಾಸು ನಿರ್ವಹಣೆ ಇರಬಹುದು ಅಥವಾ ಹೊರಗಿನ ಪ್ರಪಂಚದಲ್ಲಿ ಮಾಡಬೇಕಾದ ಹೂಡಿಕೆ ಇರಬಹುದು, ಯಾವುದು ಹೆಚ್ಚು ಅಪಾಯಕಾರಿ ಅಥವಾ ಅಲ್ಲ ಎನ್ನುವುದು ಮಹಿಳೆಗೆ ಸಹಜವಾಗೇ, ಹೆಚ್ಚಿನ ಶ್ರಮವಿಲ್ಲದೆ ಗೊತ್ತಾಗುತ್ತದೆ. ಈ ಮಾತುಗಳನ್ನ ಸುಮ್ಮನೆ ಹೇಳುತ್ತಿಲ್ಲ, ಇದಕ್ಕೆ ಸಾಕಷ್ಟು ಪುರಾವೆಗಳಿವೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಹೆಣ್ಣು ಮತ್ತು ಗಂಡು ಹೂಡಿಕೆದಾರರ ಪೋರ್ಟ್ ಪೋಲಿಯೋಗಳನ್ನ ಅಧ್ಯಯನ ಮಾಡಿ ಈ ಒಂದು ಮಾತನ್ನ ಹೇಳಲಾಗಿದೆ. ಇಂದು ಭಾರತದಲ್ಲಿ 100 ಜನ ಕ್ರಿಪ್ಟೋ ಹೂಡಿಕೆದಾರ ರಿದ್ದರೆ ಅದರಲ್ಲಿ ೮೫ ಜನ ಗಂಡಸರು, ಉಳಿದ ೧೫ ಜನ ಮಹಿಳೆಯರು! ಹೆಚ್ಚು ಅಪಾಯ ಎನ್ನಿಸಿದ ಯಾವುದೇ ಕ್ಷೇತ್ರದಲ್ಲೂ ಮಹಿಳೆ ಹೂಡಿಕೆ ಮಾಡುವುದಿಲ್ಲ.

ಸುರಕ್ಷತೆಗೆ ಹೆಚ್ಚಿನ ಆದ್ಯತೆ
ಕ್ರಿಪ್ಟೋ ಮಾತ್ರವಲ್ಲ, ಈಕ್ವಿಟಿ ಮಾರುಕಟ್ಟೆಯಲ್ಲಿ ಕೂಡ ಇಂಟ್ರಾ ಡೇ ಟ್ರೇಡಿಂಗ್‌ನಂಥ ಕ್ಷೇತ್ರದಲ್ಲಿ ಬೆರಳೆಣಿಕೆ ಯಷ್ಟು ಮಹಿಳೆಯರು ಸಿಕ್ಕಬಹುದು; ದಿನನಿತ್ಯ ಅಥವಾ ಪುರುಷರು ಕೊಂಡು ಮಾರುವಷ್ಟು ವೇಗವಾಗಿ ಮಹಿಳೆ ಕೊಳ್ಳುವುದು ಮತ್ತು ಮಾರುವುದು ಮಾಡುವುದಿಲ್ಲ. ಅಂದರೆ ಆಕೆ ನಿಜವಾದ ಹೂಡಿಕೆದಾರಳು. ಪುರುಷರಲ್ಲಿ ಬಹಳಷ್ಟು ಜನ ಟ್ರೇಡರ್ಸ್ ಸಿಗುತ್ತಾರೆ. ಮಹಿಳೆಯರಲ್ಲಿ ಟ್ರೇಡರ್ಸ್ ಕಡಿಮೆ. ಕುಟುಂಬದ ರಕ್ಷಣೆ ಮತ್ತು ಸುರಕ್ಷತೆ ಬಗ್ಗೆ ಮಹಿಳೆಯರಲ್ಲಿ ಸಹಜವಾಗಿ ಇರುವ ಪ್ರೊಟೆಕ್ಟಿವ್ ಭಾವನೆ ಇಲ್ಲಿಯೂ ಕೆಲಸ ಮಾಡುತ್ತದೆ. ಹೀಗಾಗಿ ಮಹಿಳೆ ಯರು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಕೂಡ ಕಡಿಮೆ.

ನಿರ್ಧಾರಗಳನ್ನ ತೆಗೆದುಕೊಳ್ಳುವುದರಲ್ಲಿ ನಿಧಾನ ಮಾಡುತ್ತಾರೆ

ಮಹಿಳೆಯರು ಹೂಡಿಕೆಯ ನಿರ್ಧಾರದಲ್ಲಿ ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಒಂದೇ ವಿಷಯವನ್ನ ಹತ್ತಾರು ರೀತಿಯಲ್ಲಿ ಗುಣಿಸಿ ಭಾಗಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಿರ್ಧಾರ ತೆಗೆದುಕೊಳ್ಳುವುದು ನಿಧಾನವಾದರೂ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಇದಕ್ಕೂ ಪುರಾವೆಗಳಿವೆ. ‘ಸಿಪ್’ ಅಂದರೆ ‘ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ ಮೆಂಟ್ ಪ್ಲಾನ್’ನಲ್ಲಿ ಹೂಡಿಕೆ ಮಾಡುವ ಹೆಣ್ಣು-ಗಂಡುಗಳಲ್ಲಿ ಒಂದಷ್ಟು ತಿಂಗಳು ಕಟ್ಟಿ ನಂತರ ಬಿಟ್ಟುಬಿಡುವ ಹೆಂಗಸರಿಗಿಂತ ಗಂಡಸರ ಸಂಖ್ಯೆ ಹೆಚ್ಚು. ಒಟ್ಟಾರೆ ಈಕ್ವಿಟಿ ಮಾರುಕಟ್ಟೆಯಲ್ಲಿ ಶೇ.೧೬ರಷ್ಟು ಇದ್ದ ಮಹಿಳೆಯರ ಸಂಖ್ಯೆ ಕಳೆದೆರಡು ವರ್ಷದಲ್ಲಿ ಶೇ.25ಕ್ಕೆ ಏರಿಕೆ ಕಂಡಿದೆ. ಪುರುಷರ ಸಂಖ್ಯೆಗಿಂತ ಇದು ಬಹಳ ಕಡಿಮೆ. ಮಹಿಳೆ ಯರು ಹೂಡಿಕೆಯಲ್ಲಿ ಸಂಖ್ಯೆಯ ದೃಷ್ಟಿಯಲ್ಲಿ ಕಡಿಮೆಯಿದ್ದಾರೆ ಎನ್ನುವುದು ವೇದ್ಯ. ಆದರೆ ಇದ್ದವರಲ್ಲಿ, ಹೋಲಿಕೆಯಲ್ಲಿ ಅವರು ಉತ್ತಮ ಹೂಡಿಕೆದಾರರು ಎನ್ನುವುದು ಕೂಡ ಅಷ್ಟೇ ಸತ್ಯ.

ಸಾಲ ಪಡೆಯುವಲ್ಲಿ, ಮರುಪಾವತಿಯಲ್ಲಿ ಕೂಡ ಮಹಿಳೆಯರೇ ಮುಂದು

‘ಸಿಬಿಲ್ ರೇಟಿಂಗ್’ ಎನ್ನುವುದು ನಿಮ್ಮ ಕ್ರೆಡಿಟ್ ವರ್ದಿನೆಸ್ ಏನು ಎನ್ನುವುದನ್ನ ಹೇಳುವ ಪಾಯಿಂಟ್ ಬೇ ಸಿಸ್ಟಮ. ಈ ರೇಟಿಂಗ್ 720 ಅಥವಾ 750ಕ್ಕೂ ಮೇಲಿದ್ದರೆ ಸಾಲವನ್ನ ಕೊಡುವುದಿಲ್ಲ ಎಂದು ಯಾರೂ ಹೇಳಲು ಬರುವು ದಿಲ್ಲ. ಹೀಗಾಗಿ 720 ಅಥವಾ ಅದಕ್ಕೂ ಹೆಚ್ಚಿನ ಪಾಯಿಂಟ್ ಹೊಂದಿದ್ದರೆ ಅದು ಉತ್ತಮ ರೇಟಿಂಗ್ ಎನ್ನಲು ಅಡ್ಡಿಯಿಲ್ಲ. ನೂರು ಮಹಿಳೆಯರಲ್ಲಿ 61 ಜನ 720ಕ್ಕೂ ಹೆಚ್ಚಿನ ರೇಟಿಂಗ್ ಹೊಂದಿದ್ದಾರೆ. ಪುರುಷರಲ್ಲಿ ಇದು 56 ಪ್ರತಿಶತ. ಹೀಗಾಗಿ ಸಾಲ ಮಾಡುವುದರಲ್ಲಿ ಮತ್ತು ಅದನ್ನ ಮರುಪಾವತಿ ಮಾಡುವುದರಲ್ಲೂ ಮಹಿಳೆಯರೇ ಬೆಸ್ಟ್ ಎನ್ನುತ್ತದೆ ಅಂಕಿ-ಅಂಶ.‌

ಕಾನೂನು ನಿಯಮಾವಳಿಗಳ ಪಾಲನೆಯಲ್ಲೂ ಮಹಿಳೆಯೇ ಉತ್ತಮ
ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಅಥವಾ‌ ಇನ್ನಾವುದೇ ರೀತಿಯ ಕಂಪ್ಲೇಯ ಇರಬಹುದು, ಅದನ್ನ ಮಹಿಳೆ ಕೊನೆಯ ದಿನದವರೆಗೆ ಉಳಿಸಿಕೊಳ್ಳುವುದಿಲ್ಲ. ಹೀಗೆ ಕಾನೂನು ನಿಯಮಾವಳಿಗಳನ್ನ ಕೊನೆಯ ದಿನದವರೆಗೆ ಎಳೆದು ಕೊಂಡು ಹೋಗುವ ಅಥವಾ ವಾಯಿದೆ ಮೀರಿದ ನಂತರ ಅದನ್ನ ಪಾಲಿಸಲು ದಂಡವನ್ನ ಕಟ್ಟುವ ಪುರುಷರ ಸಂಖ್ಯೆ 68 ಪ್ರತಿಶತ ಎನ್ನುತ್ತದೆ ಲೆಕ್ಕಾಚಾರ. ಹೀಗೆ ವಾಯಿದೆ ಮೀರುವ ಮಹಿಳೆಯರ ಸಂಖ್ಯೆ ಕೇವಲ 32 ಪ್ರತಿಶತ. ಅಂದರೆ ಎಷ್ಟು ಪ್ರತಿಶತ ಪುರುಷರು ಇದನ್ನ ಪಾಲಿಸುವುದಿಲ್ಲ ಅಷ್ಟೇ ಪ್ರತಿಶತ ಮಹಿಳೆಯರು ಇದನ್ನ ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಹೀಗಾಗಿ ಇವರು ಪುರುಷರಿಗಿಂತ ಉತ್ತಮ ಹೂಡಿಕೆದಾರರು ಎನ್ನಲು ಅಡ್ಡಿಯಿಲ್ಲ.

ಕೋವಿಡ್ ಕಲಿಸಿದ ಪಾಠವನ್ನ ಮಹಿಳೆಯರು ಚೆನ್ನಾಗಿ ಕಲಿತಿದ್ದಾರೆ

ಕೋವಿಡ್ ಸಾಂಕ್ರಾಮಿಕ ಜಗತ್ತಿನಾದ್ಯಂತ ಜನರಿಗೆ ಖರ್ಚು ವೆಚ್ಚದ, ಉಳಿಕೆಯ, ಹೂಡಿಕೆಯ ಮಹತ್ವವನ್ನ ತಿಳಿಸಿಕೊಟ್ಟಿದೆ. ಆದರೆ ಅದರಿಂದ ನಿಜವಾಗಿ ಕಲಿತವರೆಷ್ಟು ಎನ್ನುವುದು ಪ್ರಶ್ನೆ. ಐದು ಜನ ಮಹಿಳೆಯರಲ್ಲಿ ಒಬ್ಬರು ಹೂಡಿಕೆ ಮಾಡಲು ಶುರುಮಾಡಿದ್ದಾರೆ. 45 ಪ್ರತಿಶತ ಮಹಿಳೆಯರು ಖರ್ಚನ್ನ ಕಡಿಮೆ ಮಾಡಿದ್ದಾರೆ. ೩೦ಕ್ಕೂ ಹೆಚ್ಚು
ಪ್ರತಿಶತ ಮಹಿಳೆಯರು ವೈಯಕ್ತಿಕ ಹಣಕಾಸು ನಿರ್ವಹಣೆಯ ಬಗ್ಗೆ ಹೆಚ್ಚಿನ ಜ್ಞಾನವನ್ನ ಈ ಎರಡು ವರ್ಷದಲ್ಲಿ ಪಡೆದುಕೊಂಡಿzರೆ ಎನ್ನುತ್ತದೆ ಅಂಕಿ-ಅಂಶ. ಒಟ್ಟಾರೆ 70 ಪ್ರತಿಶತ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಹಣಕಾಸು ವ್ಯವಹಾರದ ನಿರ್ಧಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ತಿಳಿದುಬಂದಿದೆ. ಹತ್ತಿರತ್ತಿರ 20 ಪ್ರತಿಶತ ಮಹಿಳೆಯರು ಅಪ್ಪ ಅಥವಾ ಗಂಡನ ಮೇಲೆ ಅವಲಂಬಿಯಾಗಿದ್ದರೆ, 31 ಪ್ರತಿಶತ ಮಹಿಳೆಯರು
ಸ್ವತಃ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ; 38 ಪ್ರತಿಶತ ಮಹಿಳೆಯರು ಜತೆಯಾಗಿ ನಿರ್ಧಾರಗಳನ್ನ ತೆಗೆದು ಕೊಳುತ್ತಾರೆ, ಉಳಿದವರು ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಇದ್ದಾರೆ.

ಒಟ್ಟಿನಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಲಿತಿದ್ದಾರೆ, ಹೆಚ್ಚು ಜಾಗೃತರಾಗಿದ್ದಾರೆ. ನಿವೃತ್ತಿ, ಮಕ್ಕಳ ವಿದ್ಯಾಭ್ಯಾಸ ಮಹಿಳೆಯರ ಹೂಡಿಕೆಯ ಪ್ರಮುಖ ಅಂಶಗಳು ಪುರುಷನು ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಚಾ ತೆಗೆದುಕೊಳ್ಳುತ್ತಾನೆ. ಆದರೆ ಮಹಿಳೆಗೆ ತನಗೇನು ಬೇಕು ಎನ್ನುವುದು ಗೊತ್ತಿದೆ. ಆಕೆಯ ಹೂಡಿಕೆಯಲಿನಲ್ಲಿ ಪ್ರಮುಖವಾಗಿ ಅಲಂಕರಿಸುವ ಎರಡು ವಿಷಯಗಳು- ಒಂದನೆಯದು ನಿವೃತ್ತಿ, ಎರಡನೆಯದು ಮಕ್ಕಳ ವಿದ್ಯಾಭ್ಯಾಸ ಅಥವಾ ಮದುವೆ. ನೂರರಲ್ಲಿ 40ಕ್ಕೂ ಹೆಚ್ಚು ಮಹಿಳೆಯರ ಗುರಿ ಇದೇ ಆಗಿರುತ್ತದೆ. ೧೪ ಪ್ರತಿಶತ ಹೆಂಗಸರು ಮಾತ್ರ ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಹೂಡಿಕೆ ಮಾಡುತ್ತಾರೆ.

ಭಾರತದಲ್ಲಿಂದು ಹೂಡಿಕೆ ಕ್ಷೇತ್ರದಲ್ಲಿ ಕೂಡ ಮಹಿಳೆಯರ ಪಾಲುದಾರಿಕೆ ಹೆಚ್ಚಾಗಿದೆ ಎನ್ನುವುದು ಅಂಕಿ- ಅಂಶ ದಿಂದ ತಿಳಿದುಬರುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಹೀಗೆ ಫೈನಾನ್ಷಿಯಲ್ ಜ್ಞಾನವನ್ನ ಪಡೆಯಲು ಇರುವ ಪ್ರಮುಖ ಮೂಲ ಇಂಟರ್ನೆಟ್ ಎನ್ನುವುದೇ ಆ ಅಂಶವಾಗಿದೆ. ಹತ್ತಿರತ್ತಿರ 30 ಪ್ರತಿಶತ ಜನ ಇನ್ ವೆಸ್ಟ್‌ಮೆಂಟ್ ಪೋರ್ಟಲ್‌ಗಳು ಹೇಳುವುದನ್ನ ನಂಬುತ್ತಾರೆ. 20 ಪ್ರತಿಶತ ಜನ ಸ್ನೇಹಿತರು ಮತ್ತು ಬಂಧುಗಳು ಹೇಳಿದ್ದನ್ನ ನಿಜವೆಂದು ನಂಬುತ್ತಾರೆ.

ಹೀಗೆ ಹಲವಾರು ಇನ್ನಿತರ ಮಾರ್ಗಗಳ ಮೂಲಕ ಹೂಡಿಕೆಯ ಬಗ್ಗೆ ಜ್ಞಾನವನ್ನ ಪಡೆದುಕೊಳ್ಳುತ್ತಾರೆ. 13 ಪ್ರತಿಶತ ಜನ ಮಾತ್ರ ಕಲಿತ ಹಣಕಾಸು ಸಲಹೆಗಾರರ ಮಾರ್ಗದರ್ಶವನ್ನ ಪಡೆಯುತ್ತಾರೆ ಎನ್ನುತ್ತದೆ ಅಂಕಿ-ಅಂಶ. ಸ್ವಂತ ಕಲಿಕೆ ಎಂದಿಗೂ ಒಳ್ಳೆಯದು; ಆದರೆ ಮಾರುಕಟ್ಟೆ ಜ್ಞಾನವಿರುವ ಪರಿಣತರ ಸಲಹೆ ಕೂಡ ಅತ್ಯಂತ ಮುಖ್ಯವಾಗು ತ್ತದೆ. ಅದರಲ್ಲೂ ಹೂಡಿಕೆಯ ಹಣದ ಮೊತ್ತ ಹೆಚ್ಚಾಗಿದ್ದರೆ ಸಲಹೆ ಪಡೆಯುವುದು ಅತ್ಯಗತ್ಯ.

ಉದಾಹರಣೆಗೆ ತಲೆನೋವು, ನೆಗಡಿಗೆ ವೈದ್ಯರ ಬಳಿ ಹೋಗದೆ ಮಾತ್ರೆ ತೆಗೆದುಕೊಳ್ಳುವುದು ಅಷ್ಟೇನೂ ದೊಡ್ಡ ಅಪರಾಧ ಎನಿಸುವುದಿಲ್ಲ; ಆದರೆ ತಿಳಿಯದ ಕಾಯಿಲೆಗೆ ಕೂಡ ಸ್ವಯಂವೈದ್ಯ ಮಾಡಿಕೊಳ್ಳುವುದು ತಪ್ಪು. ಇದು ಅಷ್ಟೇ ಅಪಾಯಕಾರಿ. ಒಂದರಲ್ಲಿ ಜೀವ ಹೋಗುತ್ತದೆ, ಇನ್ನೊಂದರಲ್ಲಿ ಹಣ.

ಇಂದಿಗೂ ೩೦ಕ್ಕೂ ಹೆಚ್ಚು ಪ್ರತಿಶತ ಮಹಿಳೆಯರಿಗೆ ಫೈನಾನ್ಷಿಯಲ್ ವಿಷಯಗಳ ಬಗ್ಗೆ ಯಾವುದೇ ರೀತಿಯ ಜ್ಞಾನವಿಲ್ಲ ಎನ್ನುವುದು ಕೂಡ ಚಿಂತಿಸಬೇಕಾದ ಅಂಶ. 12 ಪ್ರತಿಶತ ಮಹಿಳೆಯರಿಗೆ ಪುರುಷ ಪ್ರಧಾನ ಸಮಾಜದಲ್ಲಿನ ರೀತಿನೀತಿಗಳನ್ನ ಮೀರಲು ಸಾಧ್ಯವಾಗುತ್ತಿಲ್ಲ, ಅವರಲ್ಲಿ ಅವರ ಬಗ್ಗೆಯೇ ನಂಬಿಕೆಯ ಕೊರತೆ ಕಾಣುತ್ತಿದೆ. 70 ಪ್ರತಿಶತ ಮಹಿಳೆಯರಿಗೆ ಎಲ್ಲಾ ಗೊತ್ತು ಎನ್ನುವಂತಿಲ್ಲ, ಆದರೆ ಒಮ್ಮೆ ಕಲಿತ ನಂತರ ಹೂಡಿಕೆ ಯಿರಲಿ ಅಥವಾ ಉಳಿತಾಯವಿರಲಿ, ಮಹಿಳೆಯು ಪುರುಷನಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾಳೆ ಎನ್ನುವುದನ್ನ ಸಾಧಿಸಿ ತೋರಿಸಿದ್ದಾಳೆ.

ಕೊನೇಮಾತು: ಮಹಿಳೆಯು ಮಾರುಕಟ್ಟೆಯಲ್ಲಿ ಹೇಗೆ ಪಾತ್ರವಹಿಸುತ್ತಾಳೆ ಎನ್ನುವುದರ ಬಗ್ಗೆ ಈ ಬರಹದ ಉದ್ದಕ್ಕೂ ಹೇಳಲಾಗಿದೆ. ಮಹಿಳೆಯರಲ್ಲಿ ಹೂಡಿಕೆದಾರಳಾಗಿ ಇರುವ ಕೊರತೆಗಳನ್ನ ಕೂಡ ಒಂದಷ್ಟು ಪಟ್ಟಿ ಮಾಡಲಾಗಿದೆ. ಅಂದ ಮಾತ್ರಕ್ಕೆ ಪುರುಷನಿಗೆ ಎಲ್ಲವೂ ಗೊತ್ತು ಎನ್ನುವಂತಿಲ್ಲ. ಅಲ್ಲದೆ ಕಲಿತ ಮಹಿಳೆ ಕಲಿತ
ಪುರುಷನಿಗಿಂತ ಉತ್ತಮವಾಗಿ ಹೂಡಿಕೆ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಬಲ್ಲಳು ಎನ್ನುವುದು ಸಾಬೀತಾಗಿದೆ. ಶತಮಾನಗಳಿಂದ ಬಂದ ‘ಸ್ಟೀರಿಯೊಟೈಪ್’ ಹೆಣ್ಣು ಅಡುಗೆ ಮನೆಗೆ ಸೀಮಿತ ಎನ್ನುವ ಮನಸ್ಥಿತಿಯಿಂದ ಹೊರ ಬರಬೇಕಾಗಿದೆ. ಹೆಣ್ಣು-ಗಂಡು ಇಬ್ಬರೂ ಇಂದಿನ ದಿನದಲ್ಲಿ ಒಟ್ಟಾಗಿ ದುಡಿದರೆ ಮಾತ್ರ ಬಾಳನೌಕೆ ಸಲೀಸಾಗಿ ಸಾಗುತ್ತದೆ. ಹೀಗಾಗಿ ಯಾರು ಯಾವುದರಲ್ಲಿ ಉತ್ತಮರೋ ಅವರಿಗೆ ಆ ಕ್ಷೇತ್ರದ ನಾಯಕತ್ವ, ಹೊಣೆಗಾರಿಕೆ
ನೀಡುವುದು ಎ ರೀತಿಯಿಂದ ಒಳ್ಳೆಯದು. ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತ ಬಂದರೆ ಅದು ದೇಶದ ಪ್ರಬಲ ಆರ್ಥಿಕತೆಗೂ ನಾಂದಿಯಾಗುತ್ತದೆ.