ಬೆಂಗಳೂರು: ದಶಕಗಳ ಕಾಲ ಸ್ಯಾಂಡಲ್ವುಡ್ ಆಳಿದ ನಟಿ, ಮೋಹಕ ತಾರೆ ರಮ್ಯಾ (Actress Ramya) ಅವರು ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದರೂ ಅವರಿಗಿರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ರಮ್ಯಾ ನಟನೆ ಜೊತೆಗೆ ರಾಜಕೀಯದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮ್ಮ ಸಿನಿಮಾ, ರಾಜಕೀಯ ಚಟುವಟಿಕೆ ಜೊತೆ ಜೊತೆಗೆ ರಮ್ಯಾ ಅವರ ಮದುವೆ ಸುದ್ದಿಯೂ ಆಗಾಗ ಸದ್ದು ಮಾಡುತ್ತಿರುತ್ತದೆ.
ಸದ್ಯ ರಮ್ಯಾ ಅವರ ಮದುವೆ ವಿಷಯ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಈ ಬಾರಿ ರಮ್ಯಾ ಮದುವೆ ಆಗೋದು ಪಕ್ಕಾ. ಸ್ಯಾಂಡಲ್ವುಡ್ ಕ್ವೀನ್ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರೆ. ಶೀಘ್ರದಲ್ಲೇ ನಿಶ್ಚಿತಾರ್ಥ ನಡೆಯಲಿದ್ದು, ನವೆಂಬರ್ನಲ್ಲಿ ಹಸೆಮಣೆಗೇರಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇದೀಗ ಈ ಬಗ್ಗೆ ಮೌನ ಮುರಿದಿರುವ ರಮ್ಯಾ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಮ್ಯಾ ಹೇಳಿದ್ದೇನು?
ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ರಮ್ಯಾ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ನಟಿಯ ವಿವಾಹದ ಬಗ್ಗೆ ಕನಸು ಕಾಣುತ್ತಿದ್ದ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. 41 ವರ್ಷದ ರಮ್ಯಾ ಈ ಬಾರಿಯಾದರೂ ವಿವಾಹಿತರಾಗುತ್ತಾರೆ ಎನ್ನುವ ಹಲವರ ನಿರೀಕ್ಷೆ ತಲೆ ಕೆಳಗಾಗಿದೆ.
ʼʼಮಾಧ್ಯಮದ ಲೆಕ್ಕಚಾರದ ಪ್ರಕಾರ ಈಗಾಗಲೇ ನನಗೆ ಹಲವು ಬಾರಿ ಮದುವೆಯಾಗಿದೆ. ಮದುವೆಯಾಗುವುದಿದ್ದರೆ ನಿಮಗೆಲ್ಲ ತಿಳಿಸುತ್ತೇನೆ. ಗಾಳಿಸುದ್ದಿಯನ್ನು ಹರಡುವುದನ್ನು ದಯವಿಟ್ಟು ನಿಲ್ಲಿಸಿʼʼ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲಿಗೆ ರಮ್ಯಾ ವಿವಾಹ ವಿಚಾರದಲ್ಲಿ ಇದೊಂದು ಕಪೋಕಲ್ಪಿತ ವರದಿ ಎನ್ನುವುದು ಮತ್ತೊಮ್ಮೆ ಸ್ಪಷ್ಟವಾದಂತಾಗಿದೆ. ಆ ಮೂಲಕ ʼಪದ್ಮಾವತಿʼ ಕಲ್ಯಾಣ ಕಣ್ತುಂಬಿಕೊಳ್ಳಬೇಕು ಎಂದುಕೊಂಡಿದ್ದವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ.
2003ರಲ್ಲಿ ಪುನೀತ್ ರಾಜ್ಕುಮಾರ್ ಅವರ ʼಅಭಿʼ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ರಮ್ಯಾ (Ramya) ಬಳಿಕ ಕನ್ನಡದ ಟಾಪ್ ನಟಿಯಾಗಿದ್ದರು. ಹಲವು ವರ್ಷಗಳ ಕಾಲ ನಂ. 1 ಸ್ಥಾನದಲ್ಲಿದ್ದರು. ಪುನೀತ್ ರಾಜ್ಕುಮಾರ್, ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಉಪೇಂದ್ರ ಮುಂತಾದ ಸ್ಟಾರ್ ನಟರ ಜೊತೆಗೆ ನಟಿಸಿರುವ ಖ್ಯಾತಿ ಇವರದ್ದು. ಕನ್ನಡ ಜತೆಗೆ ತಮಿಳು, ತೆಲುಗಿನಲ್ಲಿಯೂ ಛಾಪು ಮೂಡಿಸಿದ್ದಾರೆ. ಸೂರ್ಯ, ಧನುಷ್ ಅವರಂತಹ ದಕ್ಷಿಣ ಭಾರತದ ಸ್ಟಾರ್ಗಳ ಜೊತೆಗೂ ಅಭಿನಯಿಸಿದ್ದ ರಮ್ಯಾ ಬೇಡಿಕೆಯಲ್ಲಿರುವಾಗಲೇ 2016ರಲ್ಲಿ ಚಿತ್ರರಂಗದಿಂದ ಬಿಡುವು ಪಡೆದು ಸಕ್ರಿಯ ರಾಜಕಾರಣಿಯಾಗಿದ್ದರು. ರಾಜಕೀಯದಲ್ಲಿಯೂ ಮಿಂಚು ಹರಿಸಿದ್ದ ಅವರು ಕಿರಿಯ ಸಂಸದೆಯಾಗಿ ಸಂಸತ್ನಲ್ಲಿ ಗಮನ ಸೆಳೆದಿದ್ದರು. ಬಳಿಕ ಕೆಲವು ವರ್ಷ ರಾಜಕೀಯದಿಂದಲೂ ಬ್ರೇಕ್ ಪಡೆದುಕೊಂಡಿದ್ದರು.
ಕಳೆದ ವರ್ಷ ರಮ್ಯಾ ಸ್ಯಾಂಡಲ್ವುಡ್ಗೆ ಮರಳುವ ಸೂಚನೆ ನೀಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಮ್ಯಾ ಅವರು ರಾಜ್ ಬಿ. ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಮೂಲಕ ಕಮ್ಬ್ಯಾಕ್ ಮಾಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ನಾಯಕಿ ಪಾತ್ರದಿಂದ ಹಿಂದೆ ಸರಿದು ಆ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ನಂತರ ರೋಹಿತ್ ಪದಕಿ ನಿರ್ದೇಶನದ ʼಉತ್ತರಕಾಂಡʼ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವುದಾಗಿ ತಿಳಿಸಿದ್ದರು. ಮುಹೂರ್ತದಲ್ಲಿಯೂ ಪಾಲ್ಗೊಂಡಿದ್ದ ಅವರು ಆ ಸಿನಿಮಾದಿಂದಲೂ ಹಿಂದೆ ಸರಿದಿದ್ದರು. ಆ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದ ಅವರು ಇದೀಗ ಮತ್ತೊಮ್ಮೆ ತಣ್ಣೀರೆರಚಿದ್ದಾರೆ.
ಈ ಸುದ್ದಿಯನ್ನೂ ಓದಿ: ʼಉತ್ತರಕಾಂಡʼ ಶೂಟಿಂಗ್: ರಮ್ಯಾ ಬದಲಿಗೆ ಐಶ್ವರ್ಯ ರಾಜೇಶ್ ಆಯ್ಕೆ