Sunday, 15th December 2024

ʼಉತ್ತರಕಾಂಡʼ ಶೂಟಿಂಗ್‌: ರಮ್ಯಾ ಬದಲಿಗೆ ಐಶ್ವರ್ಯ ರಾಜೇಶ್ ಆಯ್ಕೆ

ಬೆಂಗಳೂರು: ʼಉತ್ತರಕಾಂಡʼ ಚಿತ್ರ ಬಹು ತಾರಾಗಣದ ಮೂಲಕ ಸದ್ದು ಮಾಡುತ್ತಿದೆ. ಡಾ. ಶಿವರಾಜ್ ಕುಮಾರ್ ಮತ್ತು ಡಾಲಿ‌ ಧನಂಜಯ ಅಭಿನಯದ ಈ ಚಿತ್ರಕ್ಕೆ ಕಾಲಿವುಡ್‌ನ ಐಶ್ವರ್ಯ ರಾಜೇಶ್  ‘ಉತ್ತರಕಾಂಡ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಹಿಂದೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ ಕ್ವೀನ್‌, ಮೋಹಕ ತಾರೆ ರಮ್ಯಾ ಆಯ್ಕೆಯಾಗಿದ್ದರು.

ನಟಿ ಐಶ್ವರ್ಯ ಈ ಚಿತ್ರದಲ್ಲಿ ಧನಂಜಯ ಅವರ‌ ಜೋಡಿಯಾಗಿ ʼದುರ್ಗಿʼ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪೋಸ್ಟರ್‌ ಅನ್ನೂ ಇದೀಗ ರಿಲೀಸ್‌ ಮಾಡಲಾಗಿದ್ದು ಗಮನ ಸೆಳೆಯುತ್ತಿದೆ. ತಮಿಳುನಾಡು ರಾಜ್ಯ ಚಲನಚಿತ್ರ ಪುರಸ್ಕೃತ ಐಶ್ವರ್ಯ ತಮಿಳಿನ ಜತೆಗೆ ತೆಲುಗು, ಮಲಯಾಳಂ ಮತ್ತು ಹಿಂದಿ ಯಲ್ಲೂ ನಟಿಸಿದ್ದಾರೆ. ಇದೀಗ ಕನ್ನಡಕ್ಕೂ ಕಾಲಿಟ್ಟು ಪಂಚಭಾಷಾ ತಾರೆ ಎನಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ʼದಿ ಗ್ರೇಟ್ ಇಂಡಿಯನ್ ಕಿಚನ್ʼ, ʼದಿ ವರ್ಲ್ಡ್ ಫೇಮಸ್ ಲವರ್ʼ, ʼವಡಾ‌ ಚೆನ್ನೈʼ, ʼಕಾಕ ಮುಟ್ಟೈʼ (ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ), ʼಜೋಮೋಂಟೆ ಸುವಿಶೇಷಂಗಳʼ, ʼಟಕ್ ಜಗದೀಶ್ʼ, ʼವಾನಂ ಕೊಟ್ಟಾಟುಂʼ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ 2017ರಲ್ಲಿ ತೆರೆಕಂಡ ಬಾಲಿವುಡ್‌ನ ʼಡ್ಯಾಡಿʼ ಸಿನಿಮಾದಲ್ಲಿಯೂ ಅವರು ಅಭಿನಯಿಸಿದ್ದಾರೆ.

ʼಕಾಕ ಮುಟ್ಟೈʼ ಸಿನಿಮಾದಲ್ಲಿನ ಅಭಿನಯಕ್ಕೆ ತಮಿಳುನಾಡಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ವೆಬ್‌ ಸೀರಿಸ್‌ನಲ್ಲಿಯೂ ಅಭಿನಯಿಸಿರುವ ಅವರು ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ.ರಾಜ್ ಕೆ.ಆರ್.ಜಿ. ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.