Friday, 20th September 2024

Bajrang Punia: ನಿಷೇಧ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋದ ಬಜರಂಗ್‌

Bajrang Punia

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್‌ ಸೇರ್ಪಡೆಗೊಂಡ ಒಲಿಂಪಿಯನ್‌ ಕುಸ್ತಿಪಟು ಬಜರಂಗ್‌ ಪೂನಿಯಾ(Bajrang Punia) ದೆಹಲಿ ಹೈಕೋರ್ಟ್‌ನ(Delhi High Court) ಮೊರೆ ಹೋಗಿದ್ದಾರೆ. ರಾಷ್ಟ್ರೀಯ ಉದ್ದೀಪನಾ ನಿಗ್ರಹ ಸಂಸ್ಥೆ (ನಾಡಾ)(NADA) ತನ್ನ ಮೇಲೆ ಅನಿರ್ಧಿಷ್ಟಾವಧಿ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ನಿಷೇಧದ ವಿರುದ್ಧ ಅರ್ಜಿ ಸಲ್ಲಿಸಿರುವ ಬಜರಂಗ್‌, ʼನನ್ನನ್ನು ನಿಷೇಧಿಸುವ ಮೂಲಕ ನಾಡಾ, ನಾನು ವೃತ್ತಿಪರ ಅಭ್ಯಾಸ ನಡೆಸುವ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದೆ’ ಎಂದು ಆರೋಪಿಸಿದ್ದಾರೆ. ಉದ್ದೀಪನ ಪರೀಕ್ಷೆಗೆ ಮಾದರಿ ನೀಡಲು ನಿರಾಕರಿಸಿದರು ಎಂದು ಕಳೆದ ಏಪ್ರಿಲ್‌ನಲ್ಲಿ ನಾಡಾ, ಬಜರಂಗ್‌ ಅವರನ್ನು ಮೊದಲ ಬಾರಿ ನಿಷೇಧಿಸಿತ್ತು. ಬಳಿಕ ನಿಷೇಧವನ್ನು ತೆಗೆಯಲಾಗಿತ್ತು. ಬಳಿಕ ಜೂನ್‌ನಲ್ಲಿ ಮತ್ತೆ ನಿಷೇಧ ಹೇರಲಾಯಿತು. ಇದನ್ನು ಪ್ರಶ್ನಿಸಿ ಪೂನಿಯಾ ದೆಹಲಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.

ನಾಡಾ ವಿರುದ್ಧವೇ ಗಂಭೀರ ಆರೋಪ ಮಾಡಿದ್ದ ಬಜರಂಗ್

ಕೆಲವು ತಿಂಗಳ ಹಿಂದೆ ಪುನಿಯಾ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ)) ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದರು. ಅಥ್ಲೀಟ್‌ಗಳ ಮೇಲೆ ಡೋಪ್ ಪರೀಕ್ಷೆ ನಡೆಸುವಾಗ ಅವಧಿ ಮೀರಿದ ಮತ್ತು ಹಳೆಯ ಉಪಕರಣಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದರು. ಜತೆಗೆ ಸಾಕ್ಷ್ಯ ಸಮೇತವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದರು.

ಇದನ್ನೂ ಓದಿ Champions Trophy : ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಹೋಗಲು ಬಿಡೆನು; ಅಮಿತ್ ಶಾ

ನಾಡಾದ ಅಧಿಕಾರಿಗಳು ಬಜರಂಗ್ ಪುನಿಯಾ ಅವರ ಪರೀಕ್ಷೆಗಾಗಿ ಬಂದ ವೇಳೆ ಅವರ ಬಳಿಯಿದ್ದ ಉಪಕರಣಗಳು ಸಿರಿಂಜ್ ಮತ್ತು ಬಾಟಲಿಗಳನ್ನು ಬಜರಂಗ್ ಪರೀಕ್ಷಿಸಿದ್ದರು. ಈ ವೇಳೆ ಇವುಗಳೆಲ್ಲ ಅವಧಿ ಮೀರಿದ ಮತ್ತು ಹಳೆಯ ಉಪಕರಣ ಎನ್ನುವುದು ಬೆಳಕಿಗೆ ಬಂದಿತ್ತು. ತಕ್ಷಣ ಬಜರಂಗ್ ಇದನ್ನೆಲ್ಲ ವಿಡಿಯೊ ಮಾಡಿ ತಮ್ಮ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಜತೆಗೆ ಕಳವಳ ಕೂಡ ವ್ಯಕ್ತಪಡಿಸಿದ್ದರು.

ಬಜರಂಗ್ ಪೂನಿಯಾ ಕಾಂಗ್ರೆಸ್‌ ಸೇರಿದ ಕಾರಣ ಅವರಿಗೆ ಕೊಲೆ ಬೆದರಿಕೆ ಬಂದಿದ್ದು, ಕಾಂಗ್ರೆಸ್‌ ತೊರೆಯುವಂತೆ ಒತ್ತಡ ಹಾಕಲಾಗಿದೆ. ಕಾಂಗ್ರೆಸ್‌ ಸೇರ್ಪಡೆ ಬೆನ್ನಲ್ಲೆ ಈ ಬೆದರಿಕೆ ಬಂದಿದ್ದು, ಪೊಲೀಸ್‌ ಪ್ರಕರಣ ದಾಖಲಾಗಿದೆ. ಬಜರಂಗ್ ಪುನಿಯಾ ಅವರನ್ನು ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಬೆನ್ನಲ್ಲೆ ಭಾನುವಾರ ಬಜರಂಗ್ ಪುನಿಯಾ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಬೆದರಿಕೆ ಸಂದೇಶ ಬಂದಿದ್ದು, ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.