Friday, 22nd November 2024

Suicide: ಮೀಟರ್ ಬಡ್ಡಿದಂಧೆಗೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಶರಣು

ಗುಬ್ಬಿ: ಇತ್ತೀಚೆಗೆ ತಾಲ್ಲೂಕಿನಲ್ಲಿ ಮೀಟರ್ ಬಡ್ಡಿ ದಂಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ಮಂಗಳವಾರ ಸಂಜೆ ನಿಟ್ಟೂರಿನಲ್ಲಿ ರಾಮಸ್ವಾಮಿ 45 ವರ್ಷ ಎಂಬುವರು ಮೀಟರ್ ಬಡ್ಡಿ ದಂಧೆ ಯಿಂದಾಗಿ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ರಾಮಸ್ವಾಮಿ ಗ್ರಾಮದ ಯೋಗೀಶ್ ಎಂಬುವರ ಬಳಿ ಸಾಲ ಪಡೆದಿದ್ದು ಸುಮಾರು ಮೂರು ವರ್ಷಗಳ ಕಾಲ ಶೇ10ರಂತೆ ಬಡ್ಡಿಯನ್ನು ಕಟ್ಟಿದ್ದರು. ಆದರೂ ಇನ್ನೂ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿದ್ದರಿಂದ ಬೇಸತ್ತು ನೇಣಿಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.

 ಹಣಕ್ಕಾಗಿ ಒತ್ತಡ ಹೆಚ್ಚಿದ್ದರಿಂದ ಬಡ್ಡಿ ಹಣವನ್ನು ಕಟ್ಟಲಾಗದೆ, ವ್ಯವಹಾರವನ್ನೂ ಸರಿಯಾಗಿ ನಡೆಸಲಾಗದೆ ಮನನೊಂದಿದ್ದ ರಾಮಸ್ವಾಮಿ, ಮಂಗಳವಾರ ಮಧ್ಯಾಹ್ನ ಮನೆಗೆ ಬಂದು ಕೊಠಡಿಯಲ್ಲಿಯೇ ನೇಣಿಗೆ ಶರಣಾ ಗಿದ್ದಾರೆ.

ಸುಮಾರು ಹೊತ್ತಾದರೂ ಕೊಠಡಿಯ ಬಾಗಿಲನ್ನು ತೆರೆಯದಿರುವ ಕಾರಣ ಅನುಮಾನಗೊಂಡ ಮೃತರ ಪತ್ನಿ ಕೂಗಾಟ ನಡೆಸಿದ್ದಾರೆ. ಅಕ್ಕಪಕ್ಕದವರು ಬಂದು ಬಾಗಿಲನ್ನು ಒಡೆದಾಗ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.

ಅಕ್ಕಪಕ್ಕದವರ ನೆರವಿನೊಂದಿಗೆ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಯಾವುದೇ ಪ್ರಯೋಜನ ವಾಗಿಲ್ಲ. ಮೀಟರ್ ಬಡ್ಡಿಗಾಗಿ ಒತ್ತಾಯಿಸಿದ್ದರಿಂದಲೇ ಪತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೀಟರ್ ಬಡ್ಡಿಗಾಗಿ ಒತ್ತಾಯಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತರ ಪತ್ನಿ ಗುಬ್ಬಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಗುಬ್ಬಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಶವವನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.

ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿರುವ ಮೀಟರ್ ಬಡ್ಡಿದಂಧೆಗೆ ಕಡಿವಾಣ ಹಾಕದಿದ್ದರೆ, ಇನ್ನೂ ಅನೇಕರು ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತದೆ. ತಕ್ಷಣವೇ ಸಂಬಂಧಿಸಿದೆ ಅಧಿಕಾರಿಗಳು ತುರ್ತುಕ್ರಮ ಕೈಗೊಂಡು ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.