ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಮೆರಿಕದಲ್ಲಿದ್ದು, ಮೀಸಲಾತಿ ರದ್ದು ಮಾಡುವ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ದೇಶಾದ್ಯಂತ ವಿರೋಧ ಪಕ್ಷಗಳು, ದಲಿತ ಸಮುದಾಯಗಳು ಕುಪಿತಗೊಂಡಿವೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಈಗ ರಾಹುಲ್ ಅವರ ಹೇಳಿಕೆಗೆ ಉತ್ತರ ಕೊಡಲಾಗದೆ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಥಮ ಪ್ರಧಾನಿ ನೆಹರೂ ಅವರು ಆ ಕಾಲದಲ್ಲೇ ಇದನ್ನು ಹೇಳಿದ್ದರು. ಮೀಸಲಾತಿ ಸರಿಯಾದ ಕ್ರಮ ಅಲ್ಲ; ಇದೊಂದು ಅನಿಷ್ಟ. ಇದರಿಂದ ದೇಶ ಉದ್ಧಾರವಾಗದು. ಇದರ ಬಗ್ಗೆ ನನಗೆ ಒಲವಿಲ್ಲ ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಎಂದು ವಿವರಿಸಿದರು. ಈ ಪತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸದನದಲ್ಲಿ ಪ್ರಸ್ತಾಪ ಮಾಡಿ ಪತ್ರ ಪ್ರದರ್ಶನ ಮಾಡಿದ್ದರು ಎಂದರು.
ಈ ಸುದ್ದಿಯನ್ನೂ ಓದಿ | Apple Intelligence: ಐಫೋನ್, ಐಪ್ಯಾಡ್, ಮ್ಯಾಕ್‌ನಲ್ಲಿ ಶೀಘ್ರವೇ ಲಭ್ಯವಾಗಲಿದೆ ಆಪಲ್ ಇಂಟೆಲಿಜೆನ್ಸ್!
ಮೀಸಲಾತಿ ವಿಚಾರದಲ್ಲಿ ನೆಹರೂ ಅವರ ಮನೋಭಾವವನ್ನೇ ರಾಹುಲ್ ಅವರೂ ಪ್ರಸ್ತಾಪ ಮಾಡಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ. ಕಾಂಗ್ರೆಸ್ಸಿಗರು ಹೇಳೋದೊಂದು ಮಾಡೋದೊಂದು. ಮೀಸಲಾತಿಗೆ ವಿರುದ್ಧವಾಗಿಯೇ ಇದ್ದಾರೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಇವರು ಓಲೈಕೆ ಮಾಡಿ ಈ ರೀತಿ ಮಾಡುತ್ತಿದ್ದರು ಎಂದು ಟೀಕಿಸಿದರು.
ದಲಿತ ವಿರೋಧಿ, ಮೀಸಲಾತಿ ವಿರೋಧಿ ಮನಸ್ಥಿತಿ
ಕರ್ನಾಟಕದಲ್ಲಿ ದಲಿತರ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ದಲಿತರ ಹಣ ಲೂಟಿ ಮಾಡಿದ್ದು ದೊಡ್ಡ ಸುದ್ದಿಯಾಗಿ ಇವತ್ತು ಜನರ ಮಧ್ಯದಲ್ಲಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ಸಿನ ದಲಿತ ವಿರೋಧಿ, ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು.
ರಾಹುಲ್ ಗಾಂಧಿಯವರಿಗೆ ಸರಿಯಾದ ಪಾಠ ಕಲಿಸಬೇಕಿದೆ. ಈ ಕಾಂಗ್ರೆಸ್ಸಿಗೂ ಬುದ್ಧಿ ಕಲಿಸಬೇಕಾಗಿದೆ ಎಂದ ಅವರು, ರಾಹುಲ್ ಗಾಂಧಿಯವರು ಮಾನಸಿಕ ಅಸ್ವಸ್ಥರಂತೆ ಭಾರತ ದೇಶದ ಮಾನಹಾನಿ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆಗಿಂದಾಗ್ಗೆ ಭಾರತ ದೇಶದ ಮಾನಹಾನಿ ಮಾಡುವುದನ್ನು ನಾವು ಗಮನಿಸುತ್ತಿದ್ದೇವೆ ಎಂದು ಹೇಳಿದರು.
ಈ ದೇಶದ ಮಣ್ಣಿನಿಂದ ಹೊರಗಡೆ ಹೋದ ತಕ್ಷಣ ಭಾರತವನ್ನು ಅಪಮಾನ ಮಾಡುತ್ತ ಇರುತ್ತಾರೆ. ಇವತ್ತೂ ಅದನ್ನು ಮುಂದುವರೆಸಿದ್ದಾರೆ. ನಾವು ಈ ದೇಶವನ್ನು ತಾಯಿಗೆ ಹೋಲಿಸಿ ಭಾರತ್ ಮಾತಾ ಕೀ ಜೈ ಎನ್ನುತ್ತೇವೆ. ಭಾರತಾಂಬೆಯ ಕುರಿತ ರಾಹುಲ್ ಅವರ ಹೇಳಿಕೆ ಪೀಡಕ ಎಂದರೆ, ಸ್ಯಾಡಿಸ್ಟ್ ಮನೋಭಾವದಿಂದ ಕೂಡಿದೆ ಎಂದು ಟೀಕಿಸಿದರು.
ಮೀಸಲಾತಿ ಯಾವ ಕಾರಣಕ್ಕೆ ಬಂದಿದೆ? ಬಡತನ ಎಂದರೇನು ಎಂಬುದು ನಿಮಗೆ ಗೊತ್ತಿದೆಯೇ? ಎಂದು ಕೇಳಿದ ಅವರು, ನೀವೆಲ್ಲರೂ ಶ್ರೀಮಂತಿಕೆಯಿಂದ ಮೆರೆಯುತ್ತಿದ್ದೀರಿ. ಬಡವರ ಬಗ್ಗೆ ಚಿಂತನೆ ಬಿಟ್ಟು, ಅವರ ಶ್ರೇಯೋಭಿವೃದ್ಧಿ ಬಯಸುವುದು ಬಿಟ್ಟು ಮೀಸಲಾತಿ ತೆಗೆಯುವುದಾದರೆ ನಿಮ್ಮ ಕಾಂಗ್ರೆಸ್ ಪಕ್ಷವು ಈ ದೇಶದಿಂದಲೇ ಹೋಗಲಿದೆ ಎಂದು ಎಚ್ಚರಿಸಿದರು.
ಗುಲ್ಬರ್ಗದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಎಲ್ಲ ಕೆಟ್ಟ ಪರಂಪರೆಯ ಕಥೆಗಳೂ ಅಲ್ಲಿಂದ ಆರಂಭ ಆಗುತ್ತಿವೆ. ಜತೆಗೆ ನಿನ್ನೆ ಹನಿಟ್ರ್ಯಾಪ್ ಒಂದು ಕೇಳಿಬಂದಿದೆ. ಈಗ 6 ಜನರನ್ನು ಬಂಧಿಸಿದ್ದು, ಇದರ ಹಿಂದೆ ಬಹಳ ಜನರಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಕೆಟ್ಟ ಹೆಸರು ಬಾರದಂತೆ ಶರಣಾಗತಿ ಆಗುತ್ತಿರುವುದಾಗಿ ಹೇಳುತ್ತಿದ್ದಾರೆ. ನಾವ್ಯಾರೂ ಪ್ರಿಯಾಂಕ್ ಖರ್ಗೆಯವರ ಹೆಸರು ಹೇಳಿಲ್ಲ. ಆದರೆ, ನೀವ್ಯಾಕೆ ಅವರ ಹೆಸರು ಹೇಳುತ್ತೀರಿ? ಏನಿದೆ ಇದರ ಹಿಂದೆ? ಎಂದು ಕೇಳಿದರು.
ಈ ಸುದ್ದಿಯನ್ನೂ ಓದಿ | Reliance Retail: ಇಸ್ರೇಲ್‌ನ ಡೆಲ್ಟಾ ಗಲಿಲ್ ಜತೆ ಭಾರತದಲ್ಲಿ ಕಾರ್ಯತಂತ್ರ ಪಾಲುದಾರಿಕೆ ಘೋಷಿಸಿದ ರಿಲಯನ್ಸ್ ರೀಟೇಲ್
ಇದರ ಹಿಂದೆ ಏನೋ ಇದ್ದಂತೆ ಅನಿಸುತ್ತಿದೆ ಎಂದ ಅವರು, ಎಸ್‍ಐಟಿಗೆ ಕೊಟ್ಟರೆ ಇರಬೇಕಾದವರ ಹೆಸರು ಇರುವುದಿಲ್ಲ. ಆದ್ದರಿಂದ ಇದನ್ನು ಸಿಬಿಐಗೆ ಕೊಡಬೇಕೆಂದು ಎಲ್ಲರಿಗೂ ಅನಿಸುವಂತಾಗಿದೆ. ಸರ್ಕಾರ ಇದನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್ ಹಾಜರಿದ್ದರು.