ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
vbhat@me.com
ಅವರು ಒಡಹುಟ್ಟಿದವರಲ್ಲ, ನೆರೆ-ಹೊರೆಯವರೂ ಅಲ್ಲ, ಪ್ರೇಮಿಗಳೂ ಅಲ್ಲ. ಬಾಯ್ ಫ್ರೆಂಡ್ -ಗರ್ಲ್ ಫ್ರೆಂಡ್ ಸಹ ಅಲ್ಲ. ಗಂಡ-ಹೆಂಡತಿಯೂ ಅಲ್ಲ. ಬಾಸ್-ಸೆಕ್ರೆಟರಿಯೂ ಅಲ್ಲ. ಆದರೆ ಆಕೆ ಹಾಗೂ ಆತ ಮೂವತ್ತು ವರ್ಷ ಗಳಿಂದ ಒಟ್ಟಿಗೇ ಇದ್ದಾರೆ. ಆಕೆ ಕಿವುಡಿ. ಆತ ಅವಳ ಪಾಲಿಗೆ ಕಿವಿ, ಹೊರ ಜಗತ್ತಿನೊಂದಿಗೆ ಸಂಪರ್ಕ ಬೆಸೆಯುವ ಸೇತು. ಆತನಿಲ್ಲದಿದ್ದರೆ ಅವಳ ಪಾಲಿಗೆ ಜಗತ್ತೇ ಶೂನ್ಯ. ಹೊರ ಜಗತ್ತಿನ ಸಂಪರ್ಕವೇ ಕಟ್.
ಹಾಗಂತ ಆಕೆ ಸಾಮಾನ್ಯಳಲ್ಲ. ಅನಾಮಧೇಯಳೂ ಅಲ್ಲ. ಅವಳದು ಲೋಕಖ್ಯಾತಿ. ಆಕೆ ಹಾಲಿವುಡ್ನ ಖ್ಯಾತ
ಅಭಿನೇತ್ರಿ. ಆದರೆ ಹುಟ್ಟಾ ಕಿವುಡಿ. ಈತ ಅವಳ ಸಂಜ್ಞಾ ದುಭಾಷಿ. ಅಂದರೆ ಸನ್ನೆ ಅಥವಾ ಸಂಜ್ಞೆ ಮೂಲಕ (sign
language) ಮಾತು, ಶಬ್ದಗಳನ್ನು ಅವಳಿಗೆ ತಿಳಿಸುವವ. ಒಂದರ್ಥದಲ್ಲಿ ಅವಳ ಪಾಲಿಗೆ ಕಿವಿ, ಕಣ್ಣು, ಬಾಯಿ.
ಆಕೆಯ ಹೆಸರು ಮಾರ್ಲಿ ಮಾಟ್ಲಿನ್. ಆತನ ಹೆಸರು ಜಾಕ್ ಜೆಸೊನ್. ಮಾರ್ಲಿ ಮಾಟ್ಲಿನ್ ಒಂದೂವರೆ ವರ್ಷದ ಮಗುವಾಗಿದ್ದಾಗ ಒಂದು ಕಿವಿ ಕೇಳಿಸದಂತಾಯಿತು. ಮತ್ತೊಂದು ಕಿವಿ ಶೇಕಡಾ ನಲವತ್ತರಷ್ಟೇ ಕೇಳಿಸುತ್ತಿತ್ತು. ತಂದೆ-ತಾಯಿ ಏನೇ ಹೇಳಿದರೂ ಬೇಗ ಪ್ರತಿಕ್ರಿಯಿಸುತ್ತಿರಲಿಲ್ಲ. ಜೋರಾಗಿ ಕಿರುಚಿಕೊಂಡರೆ ಮಾತ್ರ ಥಟ್ಟನೆ ಏನೋ ಕೇಳಿಸಿದಂತಾಗಿ ಅದಕ್ಕೆ react ಮಾಡುತ್ತಿತ್ತು. ಮಗುವಿಗೆ ಶ್ರವಣ ದೋಷವಿದ್ದಿರಬಹುದೆಂಬುದನ್ನು ತಿಳಿಯಲು ಪಾಲಕರಿಗೆ ತಡವಾಗಲಿಲ್ಲ.
ವೈದ್ಯರಲ್ಲಿಗೆ ಕರೆದುಕೊಂಡು ಹೋದರು. ಮಗುವಿನ ಕಿವುಡುತನವನ್ನು ಅವರು ಖಾತ್ರಿ ಪಡಿಸಿದರು. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ. ಮಗುವಿನ ಶ್ರವಣದೋಷ ಸರಿಪಡಿಸಿ ಎಂದು ವೈದ್ಯರಿಗೆ ದುಂಬಾಲು ಬಿದ್ದರು. ಅವರು ಸಾಕಷ್ಟು ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಹತ್ತಾರು ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಮಾಡಿಸಿದ ನಂತರ ಅದು ಸರಿ ಹೋಗುವಂಥದ್ದಲ್ಲ ಎಂಬುದು ಗೊತ್ತಾಯಿತು. ಮುದ್ದಾದ ಮಗು, ಸದಾ ನಗುಮುಖ, ಕ್ರಿಯಾಶೀಲ, ಎಂಥವ ರನ್ನೂ ಆಕರ್ಷಿಸುವ ಚೂಟಿತನ. ಮಾತು ಕೇಳಿಸುವುದಿಲ್ಲ ಎಂಬುದನ್ನು ಬಿಟ್ಟರೆ ಅವಳ ವ್ಯಕ್ತಿತ್ವದಲ್ಲಿ ಯಾವ ದೋಷವನ್ನೂ ಕಂಡುಹಿಡಿಯಲಾಗದು.
ಆ ದೋಷವನ್ನೂ ಮರೆಮಾಚುವ ಚಾಲಾಕಿತನ. ಮನೆಯಲ್ಲಿ ಮತ್ಯಾರಿಗೂ ಕಿವುಡುತನವಿಲ್ಲ. ಆಕೆಯ ಶ್ರವಣ ಸಮಸ್ಯೆ ಕ್ರಮೇಣ ಉಲ್ಬಣಗೊಳ್ಳಬಹುದೇ ಹೊರತು ಗುಣವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಎಲ್ಲ ಆಸೆಗಳನ್ನು ಬಿಟ್ಟರು. ಹಾಗೆಂದು ಮಗುವನ್ನು ನಿರ್ಲಕ್ಷಿಸುವಂತಿರಲಿಲ್ಲ. ತಂದೆ-ತಾಯಿ ಅವಳನ್ನು ಸಂಜ್ಞೆ ಭಾಷೆ ಮೂಲಕ ಕಲಿಸುವ ಶಾಲೆಗೆ ಸೇರಿಸಿದರು. ಹುಟ್ಟಾ ಕಿವುಡರು, ಮೂಕರೂ ಹೌದು. ಆದರೆ ಮಾಟ್ಲಿನ್ಗೆ ಸ್ವಲ್ಪ ಸ್ವಲ್ಪ ಕೇಳಿಸುತ್ತಿದ್ದರಿಂದ ಅವಳಿಗೆ ಧ್ವನಿ ಪರಿಚಯಿಸುವ ಪ್ರಯತ್ನವನ್ನು ಶಾಲೆಯಲ್ಲಿ ಮಾಡಿಸಿದರೂ ಅದು ಪ್ರಯೋಜನ ವಾಗಲಿಲ್ಲ. ಹನ್ನೊಂದು ವರ್ಷವಾಗಿದ್ದಾಗ ಬೇಬಿಸಿಟರ್ನಲ್ಲಿದ್ದಾಗ ಮಾಟ್ಲಿನ್ ಮೇಲೆ ಅತ್ಯಾಚಾರ ಪ್ರಯತ್ನ ನಡೆಯಿತು. ಮರುವರ್ಷ ಸ್ಕೂಲ್ ಟೀಚರ್ ಸಹ ಅವಳನ್ನು ರೇಪ್ ಮಾಡಲು ಪ್ರಯತ್ನಿಸಿದ.
ಮಾಟ್ಲಿನ್ಗೆ ಏಳು ತುಂಬಿದಾಗ ಚಿಲ್ಡ್ರನ್ ಥಿಯೇಟರ್ ಉತ್ಸವದಲ್ಲಿ ಪಾಲ್ಗೊಂಡಳು. ಅವಳ ಚೊಚ್ಚಲ ಅಭಿನಯ
ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಅದರಲ್ಲೂ ಅವಳದು ಮೂಕಿಯ ಪಾತ್ರ. ಆದರೆ ಆಕೆ ಮೂಲತಃ ಮೂಕಿ ಅಥವಾ ಕಿವುಡಿ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಅಲ್ಲಿಂದ ಮುಂದೆ ನಾಟಕದಲ್ಲಿ ಅಭಿನಯಿಸುವ ಯಾವ ಅವಕಾಶವನ್ನೂ ಅವಳು ತಪ್ಪಿಸಿಕೊಳ್ಳುತ್ತಿರಲಿಲ್ಲ. ಕಾಲೇಜು ಮುಗಿಸುವ ಹೊತ್ತಿಗೆ ಅವಳು ಮುನ್ನೂರಕ್ಕೂ ಹೆಚ್ಚು ನಾಟಕ ಹಾಗೂ ಬೇರೆ ಬೇರೆ ಪ್ರದರ್ಶನಗಳಲ್ಲಿ ಅಭಿನಯಿಸುತ್ತಿದ್ದಳು.
ಅವಳಿಗೆ ಇಪ್ಪತ್ತೊಂದು ತುಂಬಿದ್ದಾಗ ’Children of a Lesser God’ ಎಂಬ ಚಿತ್ರದಲ್ಲಿ ಅಭಿನಯಿಸುವ ಮೂಲಕ ಅವಳು ಹಾಲಿವುಡ್ಗೆ ಕಾಲಿಟ್ಟಳು. ಈ ಚಿತ್ರದಲ್ಲಿನ ಅಭಿನಯಕ್ಕೆ ಅವಳಿಗೆ ಅತ್ಯುತ್ತಮ ನಟಿಗೆ ನೀಡುವ ಅಕಾಡೆಮಿ ಪ್ರಶಸ್ತಿ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂತು. ಸಿನಿಮಾ ಸೆಟ್ನಲ್ಲಿ ಮಾಟ್ಲಿನ್ಗೆ ಸಂಜ್ಞೆ ಮೂಲಕ ಸಂಭಾ ಷಣೆಯನ್ನೂ ಹೇಳಬೇಕಾಗುತ್ತಿತ್ತು. ನಿರ್ದೇಶಕರಿಗೆ ಸ್ವಲ್ಪವೂ ಕಷ್ಟವಾಗದಂತೆ ಬಹು ಬೇಗನೆ ಕಲಿತುಕೊಳ್ಳುತ್ತಿದ್ದಳು. ತನ್ನ ಪಾತ್ರಕ್ಕೆ ಬೇಕಾಗುವ ಭಾವಾಭಿನಯವನ್ನೂ ಬಹಳ ಪ್ರಾಕ್ಟೀಸ್ ಮಾಡುತ್ತಿದ್ದಳು.
‘Picket Fences’ ಎಂಬ ಚಿತ್ರದಲ್ಲಿ ಮನೋಜ್ಞ ಅಭಿನಯಕ್ಕೆ ಎಮ್ಮಿ ಪ್ರಶಸ್ತಿ ಬಂದಾಗ, ಹಾಲಿವುಡ್ನಲ್ಲಿ ಬಹುಕಾಲ ನೆಲೆ ನಿಲ್ಲುವ ತಾರೆ ಎಂಬ ಭರವಸೆಯನ್ನು ಮೂಡಿಸಿದಳು. ಅದಾದ ಬಳಿಕ ಮಾಟ್ಲಿನ್ ಹತ್ತಾರು ಸಿನಿಮಾ, ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದಳು. ಇಷ್ಟಾದರೂ ಮಾಟ್ಲಿನ್ ಕಿವುಡಿ ಹಾಗೂ ಮೂಕಿ ಎಂಬುದು ಬಹಳ ಜನರಿಗೆ ಗೊತ್ತಿರಲಿಲ್ಲ. ಹೀಗಾಗಿ ಅವಳು ಅನುಕಂಪ ಆಧರಿತ ನಟಿಯಾ ಗಿರಲಿಲ್ಲ. ಶ್ರೇಷ್ಠತೆ ಹಾಗೂ ಅರ್ಹತೆಯೇ ಅವಳ ಉನ್ನತಿಗೆ ಮಾನದಂಡವಾಗಿತ್ತು. ಇಲ್ಲದಿದ್ದರೆ ಆಕೆಗೆ The West Wing, Blue’s Clues, What the Bleep Do you know?!, Desperate Housewives, The L Word, The Blind side ಮುಂತಾದ ಸಿನಿಮಾ ಗಳಲ್ಲಿ ಅವಕಾಶ ಸಿಗುತ್ತಿರಲಿಲ್ಲ.
ಕಿವುಡು ಮಕ್ಕಳ ಕಲ್ಯಾಣಕ್ಕಾಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಎರಡು ಗಂಟೆಗಳ ಕಾಲದ ಮಾಟ್ಲಿನ್ ಅಭಿನಯಕ್ಕೆ ಸುಮಾರು ಹತ್ತು ಲಕ್ಷಡಾಲರ್ ಹಣ ಸಂಗ್ರಹವಾಗಿದ್ದು ಅವಳ ಜನಪ್ರಿಯತೆಗೆ ಸಾಕ್ಷಿ. ಹಲವು ವಿಶ್ವವಿದ್ಯಾಲಯಗಳು ಆಕೆಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿವೆ. ಬಿಲ್ ಕ್ಲಿಂಟನ್ ಅಮೆರಿಕದ ಅಧ್ಯಕ್ಷರಾಗಿದ್ದಾಗ, ಕಾರ್ಪೊರೇಷನ್ ಫಾರ್ ನ್ಯಾಷನಲ್ ಸರ್ವೀಸ್ಗೆ ಮುಖ್ಯಸ್ಥಳನ್ನಾಗಿ ಆಕೆಯನ್ನು ನೇಮಿಸಿದ್ದರು. ಒಮ್ಮೆ ಆಸ್ಕರ್ ಪ್ರಶಸ್ತಿ ವಿತರಣಾ ಸಮಾ ರಂಭದಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಿಸುವ ಅವಕಾಶವನ್ನು ಮಾಟ್ಲಿನ್ಗೆ ನೀಡಲಾಗಿತ್ತು. ಎಲ್ಲರ ಹೆಸರುಗಳನ್ನು ಸಂಜ್ಞೆ ಮೂಲಕ ಹೇಳಿದ ಆಕೆ, ಅತ್ಯುತ್ತಮ ನಟ, ನಟಿಯರ ಹೆಸರುಗಳನ್ನು ಮಾತ್ರ ಜೋರಾಗಿ ಹೇಳಿ ರೋಮಾಂಚನ ಮೂಡಿಸಿದ್ದಳು.
ಮೂಕಿಯಾಗಿ, ಕಿವುಡಿಯಾಗಿ ಮಾಟ್ಲಿನ್ ಏರಿದ ಎತ್ತರ ಅಸಾಧಾರಣವಾದುದು. ಹಾಗೆ ನೋಡಿದರೆ, ಅವಳ ಅಭಿನ
ಯಕ್ಕೆ ಇವು ಅಡ್ಡಿಯಾಗಲೇ ಇಲ್ಲ. ಅವಳ ಅಭಿನಯವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಅವಳ ಈ ದೋಷಗಳು ಗಮನಕ್ಕೆ ಬರುವುದಿಲ್ಲ. ಹೇಳಿದರೂ ನಂಬುವುದು ಕಷ್ಟ. ನಿಜಕ್ಕೂ ತನ್ನ ಶಾರೀರಿಕ ದೋಷಗಳನ್ನು ಮೆಟ್ಟಿ ನಿಂತ ಧೀರೆ ಆಕೆ. ಇಂಥ ಮಾಟ್ಲಿನ್, ಜಾಕ್ ಜೆಸೊನ್ನನ್ನು ಭೇಟಿಯಾಗಿದ್ದು ಆಕಸ್ಮಿಕ. ಸುಮಾರು ಮೂವತ್ತು ವರ್ಷಗಳ ಹಿಂದೆ, ಅಂದರೆ Children of a Lesser God ಸಿನಿಮಾ ಬಿಡುಗಡೆ ಯಾದ ಸಂದರ್ಭದಲ್ಲಿ ಮಾಟ್ಲಿನ್ ಏಕಾಏಕಿ ಜನಪ್ರಿಯತೆಯ ಉತ್ತುಂಗಕ್ಕೇರಿದ ಸಮಯದಲ್ಲಿ, ವಿಶ್ವದೆಲ್ಲೆಡೆಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಮಂತ್ರಣ ಬರಲಾರಂಭಿಸಿತ್ತು.
ಆ ಪ್ರಯುಕ್ತ ಆಕೆ ಲಂಡನ್ನ ಒಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡಾಗ, ಅವಳಿಗೆ ಒಬ್ಬ ಸಮರ್ಥ ಹಾಗೂ
ಚಾಲಾಕಿ ಇಂಟರ್ಪ್ರಿಟರ್ ಅಗತ್ಯವಿತ್ತು. ಆಗ ಮಾಟ್ಲಿನ್ ಬಾಯ್ ಫ್ರೆಂಡ್ ಆಗಿದ್ದ ನಟ ವಿಲಿಯಂ ಹರ್ಟ್ನ
ಸಹಾಯಕ ಜೆಸೂನ್ನನ್ನು ಸಂಪರ್ಕಿಸಿದ. ಜೆಸೊನ್ ಹರ್ಟ್ ನನ್ನು ಭೇಟಿಯಾಗಿ ಚರ್ಚಿಸಿದ. ಅದಾದ ಬಳಿಕ ಮಾಟ್ಲಿನ್ ಮತ್ತು ಜೆಸೊನ್ ಭೇಟಿಯಾದರು. ಇಬ್ಬರೂ ಸಂಜ್ಞೆ ಭಾಷೆ ಮೂಲಕ ಸುಮಾರು ಮುಕ್ಕಾಲು ಗಂಟೆ ಮಾತಾಡಿದರು. ಜೆಸೊನ್ನ ಚಾಕಚಕ್ಯತೆ ಮಾಟ್ಲಿನ್ಗೆ ಬಹಳ ಇಷ್ಟವಾಯಿತು. ಮೊದಲ ಭೇಟಿಯಲ್ಲಿಯೇ ಜೆಸೊನ್, ಮಾಟ್ಲಿನ್ಳಿಗೆ ಮೋಡಿ ಮಾಡಿದ.
ಅಂದಿನಿಂದ ಶುರುವಾದ ಈ ಬಂಧ ಇಂದಿನವರೆಗೂ ನಡೆದುಕೊಂಡು ಬಂದಿದೆ. ಅಂದಿನಿಂದ ಜೆಸೊನ್, ಮಾಟ್ಲಿನ್
ಳ ಸಂಜ್ಞಾ ದುಭಾಷಿ, ಆಕೆಯ ಕಿವಿ, ಆಕೆಯ ಬಾಯಿ, ಆಕೆಯ ಜತೆಗಾರ, ನೆರಳು, ಆಕೆಯ ವಕ್ತಾರ ಹಾಗೂ ಬಿಜಿನೆಸ್ ಪಾರ್ಟನರ್. ಜೆಸೊನ್ ಇಲ್ಲದೇ ಮಾಟ್ಲಿನ್ ಇಲ್ಲ. ಅಪೂರ್ಣ. ಜೆಸೊನ್ ಕೇಳದೇ ಆಕೆ ಮಾತಾಡುವುದಂತೂ ಇಲ್ಲ ಬಿಡಿ. ಆತನನ್ನು ಕೇಳದೆ ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ. ಗಂಡ-ಹೆಂಡತಿ ಅಥವಾ ಪ್ರೇಮಿಗಳು ಬೇರೆ ಬೇರೆಯಾಗಿರಬಹುದು, ಆದರೆ ಮಾಟ್ಲಿನ್ -ಜೆಸೊನ್ ಮಾತ್ರ ಪರಸ್ಪರರ ಖಾಸಗಿ ಸಮಯ ಬಿಟ್ಟು ಸದಾ ಒಟ್ಟಿಗೇ ಇರುತ್ತಾರೆ. ಮಾಟ್ಲಿನ್, ಕೆವಿನ್ ಗ್ರಂಡಲ್ಸ್ಕಿ ಎಂಬ ಪೊಲೀಸ್ ಆಫೀಸರನನ್ನೂ ಮದುವೆ ಯಾಗಿದ್ದಾಳೆ.
ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಜೆಸೊನ್ ಅವಳ ಮದುವೆಯಲ್ಲೂ ಪಕ್ಕದಲ್ಲಿದ್ದ. ನಾಲ್ವರು ಮಕ್ಕಳು ಹುಟ್ಟಿದಾ ಗಲೂ ಜತೆಯಲ್ಲಿದ್ದ. ಬಹಳ ಜನ ಮಾಟ್ಲಿನ್-ಜೆಸೊನ್ ಪತಿ-ಪತ್ನಿ ಎಂದು ಭಾವಿಸಿದ್ದರೂ ಅಚ್ಚರಿಯಿಲ್ಲ. ಕಾರಣ ಸಾರ್ವಜನಿಕ ವೇದಿಕೆಗಳಲ್ಲಿ ಗಂಡನಿಗಿಂತ ಹೆಚ್ಚು ಸಲ ಜೆಸೊನ್ ಅವಳ ಪಕ್ಕ ಕಾಣಿಸಿಕೊಂಡಿದ್ದಾನೆ. ಮಾಟ್ಲಿನ್ ಮನೆಯಿಂದ ಹೊರಬಿದ್ದರೆ ಸಾಕು, ಅವಳ ಜತೆಯಲ್ಲಿ ಜೆಸೊನ್ ಇರಲೇಬೇಕಿತ್ತು. ಕೆಲವು ವೇಳೆ ಆತ ಆಕೆಯ ಕಾರು ಡ್ರೈವರ್ ಆಗಿ, ಆಕೆಯ ಬಾಡಿಗಾರ್ಡ್ ಆಗಿ, ಸಹಾಯಕನಾಗಿ, ಸೇವಕನಾಗಿ ಕೆಲಸ ಮಾಡಿದ್ದಾನೆ. ಜೆಸೊನ್ ಇಲ್ಲದಿದ್ದರೆ ಅವಳಿಗೆ ಜಗತ್ತೇ ಶೂನ್ಯ.
ಮಾಟ್ಲಿನ್ಗೆ ಹೇಳಬೇಕಾದುದನ್ನೆಲ್ಲ ಜೆಸೊನ್ಗೆ ಹೇಳಬೇಕಾಗುತ್ತಿತ್ತು. ಆತ ಅವಳಿಗೆ ಸಂಜ್ಞೆ ಮೂಲಕ ತಿಳಿಸುತ್ತಿದ್ದ. ಇಬ್ಬರೂ ಸನ್ನೆ ಭಾಷೆ ಮೂಲಕ ಮಾತಾಡಿಕೊಳ್ಳುತ್ತಿದ್ದರು. ಮಾಟ್ಲಿನ್ ಭಾಷಣ ಮಾಡುವಾಗ ಸನ್ನೆಯಲ್ಲಿ ಹೇಳಿ ದ್ದನ್ನು ಜೆಸೊನ್ ಮಾತಿನಲ್ಲಿ ಪ್ರೇಕ್ಷಕರಿಗೆ ಹೇಳುತ್ತಿದ್ದ. ಆಕೆಗೆ ಸಂಭಾಷಣೆ, ಅಭಿನಯ ವಿವರಗಳನ್ನು ಹೇಳುತ್ತಿದ್ದ ವನೂ ಅವನೇ. ಒಮ್ಮೆ ಮಾಟ್ಲಿನ್ ಟಿವಿ ಕಾರ್ಯಕ್ರಮದಲ್ಲಿ ‘ಪ್ರತಿ ಬುಧವಾರ ಬೆಳಗ್ಗೆ ೯ ರಿಂದ ೧೧ ಗಂಟೆಗೆ ನನಗೆ ಫೋನ್ ಮಾಡಿ, ನನಗೆ ಆ ಸಮಯದಲ್ಲಿ ಕಿವಿ ಕೇಳಿಸುತ್ತದೆ. ನಾನು ನಿಮ್ಮೊಂದಿಗೆ ಮಾತಾಡುತ್ತೇನೆ’ ಎಂದು ತಮಾಷೆ ಮಾಡಿದ್ದಳು. ಅದನ್ನೇ ನಿಜವೆಂದು ತಿಳಿದ ಅಸಂಖ್ಯ ಅಭಿಮಾನಿಗಳು ಫೋನ್ ಮಾಡಿದ್ದರು.
ಫೋನ್ ಕರೆ ಬಂದಾಗ, ಸ್ಪೀಕರ್ ಫೋನ್ ಆನ್ ಮಾಡುತ್ತಿದ್ದಳು. ಅಭಿಮಾನಿಗಳ ಮಾತುಗಳನ್ನು ಕೇಳಿ ಜೆಸೊನ್ ಸಂಜ್ಞೆ ಭಾಷೆ ಮೂಲಕ ಮಾಟ್ಲಿನ್ಗೆ ತಿಳಿಸುತ್ತಿದ್ದ. ಆಕೆ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದಳು. ಈಗ ಮಾಟ್ಲಿನ್ಗೆ ವಾರದಲ್ಲಿ ಎರಡು ಗಂಟೆ ಕಿವಿ ಕೇಳಿಸುತ್ತದೆಂದು ಅವಳ ಅಭಿಮಾನಿಗಳು ನಂಬಿದ್ದರು. ಮಾಟ್ಲಿನ್ ಬದುಕಿನಲ್ಲಿ ಜೆಸೊನ್ ಪಾತ್ರ ದೊಡ್ಡದು. ಆಕೆಗಾಗಿ ಆತ ತನ್ನ ಬದುಕನ್ನು ಧಾರೆಯೆರೆದವನು. ಆರಂಭದಲ್ಲಿ ಆಕೆಯ ಗಂಡ ಜೆಸೊನ್ ನೆರವಿ ನಿಂದಲೇ ಪತ್ನಿಯೊಂದಿಗೆ ಮಾತಾಡುತ್ತಿದ್ದ. ಕ್ರಮೇಣ ಆತನೂ ಸಂಜ್ಞೆ ಭಾಷೆ ಕಲಿಯಲೇ ಬೇಕಾಯಿತು.
ಮಾಟ್ಲಿನ್ ಸಿನಿಮಾ ನೋಡಬೇಕೆಂದು ಅನಿಸಿದಾಗಲೂ ಜೆಸೊನ್ನನ್ನು ಕರೆಯುತ್ತಿದ್ದಳು. ಆ ದಿನಗಳಲ್ಲಿ ಸಿನಿಮಾ ಗಳಿಗೆ ಸಬ್ ಟೈಟಲ್(ಅಡಿ ಟಿಪ್ಪಣಿ)ಗಳು ಇರುತ್ತಿರಲಿಲ್ಲ. ಸಿನಿಮಾದ ಡೈಲಾಗ್ಗಳನ್ನೆಲ್ಲ ಜೆಸೊನ್ ಆಕೆಗೆ ಹೇಳ ಬೇಕಾಗುತ್ತಿತ್ತು. ಎರಡು, ಎರಡೂವರೆ ಗಂಟೆಯ ಸಿನಿಮಾ ಸಂಭಾಷಣೆಯನ್ನು ನಿರಂತರವಾಗಿ ಜೆಸೊನ್ ಆಂಗಿಕ ಭಾಷೆಯಿಂದ ಹೇಳುತ್ತಿದ್ದ. ಸಿನಿಮಾ ಮುಗಿಯುವ ಹೊತ್ತಿಗೆ ಜೆಸೊನ್ ಸುಸ್ತಾಗಿ ಅಲ್ಲಿಯೇ ನೆಲಕ್ಕೊರಗುತ್ತಿದ್ದರೆ, ಮಾಟ್ಲಿನ್ ಅವನಿಗೆ ಸೇವೆ ಮಾಡುತ್ತಿದ್ದಳು. ಕೆಲವು ಸಂದರ್ಭಗಳಲ್ಲಿ ಆಕೆ ಒಂದೇ ದಿನದಲ್ಲಿ ಎರಡನೆಯ ಸಿನಿಮಾ ನೋಡುವ ಆಸೆ ವ್ಯಕ್ತಪಡಿಸಿದರೆ, ಜೆಸೊನ್ ಇಲ್ಲವೆನ್ನುತ್ತಿರಲಿಲ್ಲ. ಅದೇ ಉತ್ಸಾಹದಿಂದ ಎದ್ದು ನಿಂತು ಶುರು ಹಚ್ಚಿಕೊಳ್ಳುತ್ತಿದ್ದ.
ಕಿವುಡು ತಂದೆ-ತಾಯಿಯ ಮಗನಾಗಿ ಹುಟ್ಟಿದ ಜೆಸೊನ್, ಮನೆಯಲ್ಲಿ ಮಾತು, ಹಾಡು, ಶಬ್ದಗಳನ್ನು ಕೇಳದೇ ಬೆಳೆದವ. ಐದು ವರ್ಷವಾಗುವ ತನಕ ಮನೆಯ ಹೊರಗಿನ ಶಬ್ದ ಬಿಟ್ಟರೆ, ಮೌನವೇ ಜಗತ್ತು ಎಂದು ಭಾವಿಸಿದವ. ಹೀಗಾಗಿ ಸಂಜ್ಞಾ ಭಾಷೆಯನ್ನು ಚಿಕ್ಕಮಗುವಾಗಿದ್ದಾಗಲೇ ಕಲಿಯುವುದು ಅನಿವಾರ್ಯವಾಯಿತು. ಸ್ಕೂಲ್ ನಲ್ಲಿ ಸಂಜ್ಞಾಭಾಷೆಯನ್ನು ಶಿಷ್ಟವಾಗಿ ಕಲಿತ. ಜತೆಯಲ್ಲಿ ಸ್ಪಾನಿಶ್ ಭಾಷೆಯನ್ನೂ ಕಲಿತ.
ಮಾಟ್ಲಿನ್ಳ ಇಂಟರ್ಪ್ರಿಟರ್ ಆಗಿ ಸೇರಿದ ನಂತರ, ಅವಳು ಸನ್ನೆಭಾಷೆಯಲ್ಲಿ ಹೇಳಿದ್ದನ್ನು ಇತರರಿಗೆ ಇಂಗ್ಲಿಷ್
ನಲ್ಲಿ ಹೇಳಬೇಕಾಗುತ್ತಿತ್ತು. ಹೀಗಾಗಿ ಆತ ಇಂಗ್ಲಿಷ್ ಅನ್ನೂ ಸುಧಾರಿಸಿಕೊಂಡ. ಆತ ಕೇವಲ ದುಭಾಷಿಯಷ್ಟೇ ಆಗಿರಲಿಲ್ಲ. ಭಾವನೆಗಳ ಭಾಷಿಯೂ ಆಗಿದ್ದ. ಎಷ್ಟೋ ವೇಳೆ ಮಾಟ್ಲಿನ್ ಆಂಗಿಕವಾಗಿ ಹೇಳಿದ್ದನ್ನು ಜೆಸೊನ್ ಮಾತಿನಲ್ಲಿ ಕೇಳಿ ಪ್ರೇಕ್ಷಕರು ಅತ್ತಿದ್ದುಂಟು. ಸಭೆಯಲ್ಲಿ ಶ್ರವಣದೋಷವಿರುವ ಪ್ರೇಕ್ಷಕರಿಗಾಗಿ ಸಂಜ್ಞೆಯ ಮೂಲಕ ಹೇಳಲು ಜೆಸೊನ್ ಎಲ್ಲಿಲ್ಲದ ಬೇಡಿಕೆಯ ದುಭಾಷಿ. ಆತ ಲ್ಯಾರಿ ಕಿಂಗ್, ಎಲೆನ್, ಡೊನಾಲ್ಡ್ ಟ್ರಂಪ್, ಬರಾಕ್ ಒಬಾಮ ಮುಂತಾದವರಿಗೆ ಆಂಗಿಕ ದುಭಾಷಿಯಾಗಿದ್ದುಂಟು.
ಆದರೂ ಆತ ಮಾಟ್ಲಿನ್ಳನ್ನು ಬಿಟ್ಟಿಲ್ಲ. ಆಕೆ ಬಿಡುವಿದ್ದಾಗ, ವಿಹಾರ ಅಥವಾ ವಿಶ್ರಾಂತಿಗೆ ತೆರಳಿದಾಗ, ಇಂಥ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುತ್ತಾನೆ. ಇಲ್ಲದಿದ್ದರೆ ಅವನ ಸೇವೆಯೇನಿದ್ದರೂ ಮಾಟ್ಲಿನ್ಳಿಗೆ ಮೀಸಲು.
ತನ್ನ ಯಶಸ್ಸಿನಲ್ಲಿ ಬಹುಮುಖ್ಯ ದೊಡ್ಡ ಪಾತ್ರವನ್ನು ವಹಿಸಿದ ಜೆಸೊನ್ನನ್ನು ಆಕೆ ತನ್ನ ವ್ಯವಹಾರದಲ್ಲಿ
ಪಾರ್ಟ್ನರ್ ಆಗಿ ಸೇರಿಸಿಕೊಂಡಿರುವುದು ಮಾಟ್ಲಿನ್ಳ ದೊಡ್ಡಗುಣ. ಮೂವತ್ತು ವರ್ಷಗಳಾದರೂ ಅವರ ಈ
ವಿಚಿತ್ರ, ಅನೂಹ್ಯ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿಲ್ಲ.
ಎಷ್ಟೋ ವೇಳೆ ಮಾಟ್ಲಿನ್ ಹೇಳದಿರುವುದನ್ನೂ ಜೆಸೊನ್ ಹೇಳುತ್ತಾನೆಂಬ ಆರೋಪಗಳಿವೆ. ಆದರೆ ಅದು ಅವರ
ಸಂಬಂಧಕ್ಕೆ ಮಾರಕವಾಗಿಲ್ಲ. ‘ನನ್ನ ವಿರುದ್ಧ ಮಾಟ್ಲಿನ್ಗೆ ಚಾಡಿ ಹೇಳುವವರಿಗೆ ಒಂದೋ ಸಂಜ್ಞೆ ಭಾಷೆ ಗೊತ್ತಿರ ಬೇಕು. ಇಲ್ಲವೇ ಅದನ್ನೂ ನನ್ನ ಮೂಲಕವೇ ಆಕೆಗೆ ತಲುಪಿಸಬೇಕು’ ಎಂದು ಜೆಸೊನ್ ಅನೇಕ ಸಲ ತಮಾಷೆಗೆ ಹೇಳಿದ್ದುಂಟು. ಇತ್ತೀಚೆಗೆ ನಾನು ಮಾರ್ಲಿ ಮಾಟ್ಲಿನ್ ಬರೆದ ‘I Will Screem Later’ ಎಂಬ ಆತ್ಮಕಥೆಯನ್ನು ಓದುತ್ತಿದ್ದೆ. ಪುಸ್ತಕದ ಮೊದಲರ್ಧದ ಬಳಿಕ ಇದು ಅವಳ ಕತೆಯೋ, ಜೆಸೊನ್ ಕತೆಯೋ ಎಂದು ಗೊಂದಲ ವಾಗುವಷ್ಟು ಎರಡೂ ಪಾತ್ರಗಳು ಒಬ್ಬರೊಳಗೇ ಬೆಸೆದುಕೊಂಡಿದೆ.. ಅಲ್ಲಲ್ಲಿ ಮಾಟ್ಲಿನ್ ಮಾತುಗಳನ್ನು ಕೇಳುತ್ತಿದ್ದರೆ ಆಕೆ ಮರೆಯಾಗಿ ಜೆಸೊನ್ ಆವರಿಸಿಕೊಳ್ಳುತ್ತಿದ್ದ.
ನಾವು ಮತ್ತೊಬ್ಬರ ಜೀವನದಲ್ಲಿ ಬದುಕು ಕಟ್ಟಿಕೊಂಡು, ಅವರ ಜೀವನವನ್ನೂ ಬೆಳೆಸುತ್ತಾ, ನಮ್ಮ ಬದುಕಿನ ಸಾರ್ಥಕ್ಯ ಕಾಣುವುದೆಂದರೆ ಇದೇನಾ?