Saturday, 23rd November 2024

Dr K Sudhakar: ಜಿಲ್ಲೆಗೆ ನೀರು ಕೊಡುವ ಉದ್ದೇಶ ಇದ್ದರೆ ಆಂಧ್ರದ ಕೃಷ್ಣಾನದಿ ನೀರು ಕೊಡಿ- ಡಾ.ಕೆ.ಸುಧಾಕರ್

ಸರ್ವಪಕ್ಷ ನಿಯೋಗ ತೆರಳಿ ಚಂದ್ರಬಾಬು ನಾಯ್ಡು ಮನವೊಲಿಸೋಣ

ಬಾಗೇಪಲ್ಲಿ: ರಾಜ್ಯ ಸರಕಾರಕ್ಕೆ ಬಾಗೇಪಲ್ಲಿ ಭಾಗಕ್ಕೆ ನೀರು ಕೊಡುವ ಉದ್ದೇಶವಿದ್ದರೆ  ಆಂಧ್ರಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡುರವರೊಂದಿಗೆ ಚರ್ಚಿಸಿ ಕೃಷ್ಣಾ ನದಿ ನೀರನ್ನು ಹರಿಸಲು ಯೋಜನೆ ರೂಪಿಸಿ. ಬೇಕಾದರೆ ಸರ್ವಪಕ್ಷ ನಿಯೋಗ ಹೋಗೋಣ ನಡೆಯಿರಿ ಎಂದು ಸಂಸದ ಡಾ.ಕೆ ಸುಧಾಕರ್ ತಿಳಿಸಿದರು.

ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬುಧವಾರ ಜೆಡಿಎಸ್ ಮತ್ತು ಬಿಜೆಪಿ ಮುಖಂಡರಿಂದ ಸಂಸದ ಡಾ.ಕೆ ಸುಧಾಕರ್ ರವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಡಾ.ಕೆ ಸುಧಾಕರ್ ರವರು, ಬಾಗೇಪಲ್ಲಿ ಸೇರಿದಂತೆ ಬಯಲು ಸೀಮೆಯ ಜನರ ಶಾಶ್ವತ ಸಮಸ್ಯೆಗಳಲ್ಲೊಂದಾದ ನೀರಿನ ಸಮಸ್ಯೆಯ ಪರಿಹಾರಕ್ಕೆ ಸುಲಭವಾದ ಉಪಾಯವೆಂದರೆ ರಾಜ್ಯ ಸರಕಾರವು ನಾರಾಯಣಪುರ ಜಲಾಶಯದಿಂದ ಆಂಧ್ರಗೆ ನೀರು ನೀಡಿ, ಪರ್ಯಾಯವಾಗಿ ಬಾಗೇಪಲ್ಲಿ ಪಕ್ಕದಲ್ಲೆ ಹರಿಯುತ್ತಿರುವ ಕೃಷ್ಣಾ ನದಿಯ ಕನಿಷ್ಟ 10 ಟಿಎಂಸಿ ನೀರನ್ನು ಈ ಭಾಗಕ್ಕೆ ಅತ್ಯಂತ ಕಡಿಮೆ ವೆಚ್ಚ ಮತ್ತು ಆರು ತಿಂಗಳಿನಲ್ಲೆ ನೀರು ಹರಿಸಬಹುದಾಗಿದೆ ಎಂದು ಸಂಸದರು ತಿಳಿಸಿದರು.

ಮೂರೇ ತಿಂಗಳಲ್ಲಿ ಅಭಿವೃದ್ಧಿಗೆ ಒತ್ತು

ಕೇವಲ ಮೂರು ತಿಂಗಳಲ್ಲಿ ಬಾಗೇಪಲ್ಲಿಯ ಚಿತ್ರಾವತಿ ಜಲಾಶಯದ ಅಭಿವೃದ್ಧಿ ಸೇರಿದಂತೆ ಕೇಂದ್ರದಿಂದ ೧೨೮ ಕೋಟಿ ಅನುದಾನ ತರಲಿದ್ದೇವೆ. ಬೆಂಗಳೂರಿನಿಂದ ಹೈದರಾಬಾದ್ ರಸ್ತೆ ಮಾರ್ಗವಾಗಿ ಬಾಗೇಪಲ್ಲಿಯಲ್ಲಿ ನೂತನ ವಾಗಿ ಕೈಗಾರಿಕಾ ಕಾರಿಡಾರ್ ತರಲಿದ್ದು, 10 ಸಾವಿರ ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ಕೈಗಾರಿಕಾ ಕಾರಿಡಾರ್ ಪ್ರಾರಂಭ ವಾದರೆ ಅನೇಕ ಕೈಗಾರಿಕೆಗಳು ಶುರುವಾಗಿ ಅನೇಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು

ಎತ್ತಿನಹೊಳೆ ರೂಪಿಸಿದ್ದು ನಮ್ಮ ಭಾಗದ ಕೆರೆಗಳಿಗೆ ನೀರು ತುಂಬಿಸಲು ಈ ಯೋಜನೆ ಜಾರಿ ತಂದಿದ್ದು ಸದಾನಂದ ಗೌಡ ಅವರು ಬೇಕಾದ್ರೆ ಇದು ಸುಳ್ಳು ಎಂದು ಯಾರಾದ್ರು ಕಾಂಗ್ರೆಸ್ ನಾಯಾಕರು ಹೇಳಲಿ ಎಂದು ಪ್ರಶ್ನಿಸಿದರು.

ಅಭಿವೃದ್ಧಿಗೆ ಹಣದ ಕೊರತೆ

ಕಾಂಗ್ರೆಸ್ ಸರಕಾರದಲ್ಲಿ ಅಭಿವೃದ್ಧಿ ಗೆ ಹಣ ಇಲ್ಲಾ ಆದರೆ ವಾಲ್ಮೀಕಿ ಅಭಿವೃದ್ಧಿ ಮಂಡಳಿಯಲ್ಲಿ 20 ಕೋಟಿ ರೂಪಾಯಿ ಬಳ್ಳಾರಿ ಲೋಕಸಭಾ ಗೆ ಖರ್ಚು ಮಾಡಿದ್ದಾರೆಂದು ಇಡಿ ಚಾರ್ಜ್ ಶೀಟ್ ಹಾಕಿದ್ದಾರೆ. ಆದರೆ ಅಭಿವೃದ್ಧಿ ಗೆ ಹಣ ಇಲ್ಲಾ ಆದರೆ ಮಜಾ ಮಾಡಕ್ಕೆ, ಭ್ರಷ್ಟಾಚಾರ ಮಾಡಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಹಣ ಇದೆ ಎಂದು ಆರೋಪ ಮಾಡಿದರು.

ಎತ್ತಿನಹೊಳೆ ಯೋಜನೆ ತಂದಿರುವುದಕ್ಕೆ ಅಭಿನಂದನೆ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಕೋಲಾರ ಚಿಕ್ಕಬಳ್ಳಾ ಪುರ ಜಿಲ್ಲೆಗೆ ಎತ್ತಿನಹೊಳೆ ನೀರು ಬಂದಿದ್ದೀಯಾ ಎಂದು ಪ್ರಶ್ನಿಸಿದರು. ನೀವು ಮೊದಲು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೊಟ್ಟು ಮೊದಲು ಎತ್ತಿನ ಹೊಳೆ ನೀರನ್ನು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವಂತೆ ಮನವಿ ಮಾಡುವಂತೆ ಸೂಚಿಸಿದರು. ಆದರೆ ಆ ಭಾಗದ ನೀರು ಚಿಕ್ಕಬಳ್ಳಾಪುರ ಕೋಲಾರ ಭಾಗದ ಜನರಿಗೆ ಬರುವುದಿಲ್ಲಾ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ. ಆದರೆ ಸರ್ಕಾರ ಆಂಧ್ರಪ್ರದೇಶದ ಜಿಲ್ಲೆಗೆ ಪಕ್ಕದಲ್ಲಿ ಇರುವುದರಿಂದ ಕೃಷ್ಣ ನದಿ ನೀರನ್ನು ಜಿಲ್ಲೆಗಳಿಗೆ ಹರಿಸಲು ಮುಂದಾಗಬೇಕು ಇದಕ್ಕೆ ನಾವು ಮುಂದೆ ಬರುತ್ತೇವೆ ಮೊದಲು ಈ ಕೆಲಸ ಮಾಡಿ ಎಂದು ತಿಳಿಸಿದರು.

ಪೊಲೀಸರಿಗೆ ಎಚ್ಚರಿಕೆ ಕೊಟ್ಟ ಸಂಸದ

ಈ ಭಾಗದಲ್ಲಿ ರಾಜಕೀಯ ಪ್ರೇರಿತರಾಗಿ ಪೊಲೀಸರು ಬಿಜೆಪಿ,ಜೆಡಿಎಸ್ ಕಾರ್ಯಕರ್ತರ ಮೇಲೆ ರೌಡಿಶೀಟರ್, ಅಟ್ರಾಸಿಟಿಯಂತಹ ಪ್ರಕರಣಗಳನ್ನು ಹಾಕಿ ಹೆದರಿಸಲು ಮುಂದಾದರೆ, ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನೌಕರಿ ಮಾಡಿ ಎಂದು ಡಾ.ಕೆ ಸುಧಾಕರ್ ರವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕೊನಪ್ಪ ರೆಡ್ಡಿ, ಆ.ನ.ಮೂರ್ತಿ, ವೆಂಕಟರೆಡ್ಡಿ, ಶಿವಾರೆಡ್ಡಿ, ರಾಜಾರೆಡ್ಡಿ, ಪಾಚೇನಪಲ್ಲಿ ನಾಗರಾಜು, ನಿರ್ಮಲಮ್ಮ, ರೂಪಾ, ವನಜಾ, ಲಕ್ಷ್ಮೀ, ಬಿ.ಎಸ್.ಎನ್.ಎಲ್. ವೆಂಕಟೇಶ್, ಬಾಬಾಜಾನ್, ಮಂಜುನಾಥ್ ರೆಡ್ಡಿ, ಇನ್ನೂ ಮುಂತಾದವರು ಪ್ರಮುಖರು ಹಾಜರಿದ್ದರು.