ಬ್ರುಸೆಲ್ಸ್ (ಬೆಲ್ಜಿಯಂ): ವಿಶ್ವ ಶ್ರೇಷ್ಠ ಕ್ರೀಡಾ ತಾರೆಗಳು ಭಾಗವಹಿಸುತ್ತಿರುವ ಡೈಮಂಡ್ ಲೀಗ್ ಫೈನಲ್ಸ್(Diamond League final) ಇಂದಿನಿಂದ(ಶುಕ್ರವಾರ) ಆರಂಭಗೊಳ್ಳಲಿದೆ. ಇದೇ ಮೊದಲ ಬಾರಿ ಈ ಕೂಟ ಎರಡು ದಿನ ನಡೆಯುತ್ತಿದೆ. ಒಟ್ಟು 32 ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಭಾರತದ ಸ್ಟೀಪಲ್ ಚೇಸರ್ ಅವಿನಾಶ್ ಸಾಬ್ಳೆ(Avinash Sable) ಇಂದು ಕಣಕ್ಕಿಳಿಯಲಿದ್ದಾರೆ. ಇದು ಅವರ ಮೊದಲ ಡೈಮಂಡ್ ಲೀಗ್ ಫೈನಲ್ ಆಗಿದೆ. ಪಂದ್ಯ ತಡರಾತ್ರಿ 12:39ಕ್ಕೆ ಆರಂಭಗೊಳ್ಳಲಿದೆ.
3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಸಾಬ್ಳೆ ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನುಭವಿಸಿರುವ ನಿರಾಶೆಯನ್ನು ಮರೆಸಲು ಈ ಕೂಟ ಅವಕಾಶ ನೀಡಿದೆ. ಪ್ಯಾರಿಸ್‌ನಲ್ಲಿ ಸಾಬ್ಳೆ 11ನೇ ಸ್ಥಾನ ಗಳಿಸಿದ್ದರು. ಫೈನಲ್‌ನಲ್ಲಿ ಸಾಬ್ಳೆ ಕಠಿಣ ಸ್ಪರ್ಧೆಯನ್ನು ಎದುರಿಸಲಿದ್ದಾರೆ. ಮೊರಾಕೊದ ಸೌಫಿಯಾನ್ ಎಲ್ ಬಕ್ಕಲಿ, ಸ್ಪೇನ್‌ನ ಡೇನಿಯಲ್ ಆರ್ಸ್ ಮತ್ತು ಕೀನ್ಯಾದ ಅಬ್ರಹಾಂ ಕಿಬಿವೊಟ್ ಅವರಂತಹ ಅಗ್ರ ಅಥ್ಲೀಟ್‌ಗಳ ಪೈಪೋಟಿ ಎದುರಾಗಲಿದೆ.
ಪೋಲ್ ವಾಲ್ಡ್ ವಿಶ್ವದಾಖಲೆ ವೀರ ಅರ್ಮಾಂಡ್ ಡುಪ್ಲಾಂಟಿಸ್, ಅಮೆರಿಕದ ವೇಗದ ರಾಣಿ ಶಾ’ಕೇರಿ ರಿಚರ್ಡ್‌ಸಬ್ ಮತ್ತು ಸ್ಟಾರ್ ಹರ್ಡಲ್ಸ್ ಓಟಗಾರ ಸಿಡ್ನಿ ಮೆಕ್‌ಲಾಗ್ಲಿನ್ ಲೆವ್ರೊನ್ ಇಲ್ಲಿ ಕಣದಲ್ಲಿರುವ ಪ್ರಮುಖ ಕ್ರೀಡಾಪಟುಗಳು. ನೀರಜ್ ಚೋಪ್ರಾ ಅವರು ನಾಳೆ(ಶನಿವಾರ) ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ IND vs BNG: ಚೆನ್ನೈಗೆ ಆಗಮಿಸಿದ ಟೀಮ್ ಇಂಡಿಯಾ
ಡೈಮಂಡ್ ಲೀಗ್ ಅಂಕಪಟ್ಟಿಯಲ್ಲಿ ಸಾಬ್ಳೆ 14 ನೇ ಸ್ಥಾನವನ್ನು ಗಳಿಸಿದ್ದರು. ನಾಲ್ಕು ಅಗ್ರ ಶ್ರೇಯಾಂಕದ ಅಥ್ಲೀಟ್‌ಗಳು ಟೂರ್ನಿಯಿಂದ ಹಿಂದೆ ಸರಿದ ಕಾರಣ ಅವರಿಗೆ ಫೈನಲ್ ಅವಕಾಶ ದೊರಕ್ಕಿತ್ತು. ವಿಶ್ವ ದಾಖಲೆ ಹೊಂದಿರುವ ಇಥಿಯೋಪಿಯಾದ ಲಾಮೆಚಾ ಗಿರ್ಮಾ, ನ್ಯೂಜಿಲೆಂಡ್‌ನ ಜಿಯೋರ್ಡಿ ಬೀಮಿಶ್, ಜಪಾನ್‌ನ ರ್ಯುಜಿ ಮುರಾ ಮತ್ತು ಯುಎಸ್‌ಎಯ ಹಿಲರಿ ಬೋರ್ ಟೂರ್ನಿಯಿಂದ ಹಿಂದೆ ಸರಿದ ಅಥ್ಲೀಟ್‌ಗಳು.
ನೀರಜ್ ಚೋಪ್ರಾ 4ನೇ ಸ್ಥಾನದೊಂದಿಗೆ ಜಾವೆಲಿನ್ ಫೈನಲ್ ಅರ್ಹತೆ ಸಂಪಾದಿಸಿದ್ದಾರೆ. ಫೈನಲ್‌ನಲ್ಲಿ ಒಟ್ಟು 8 ಮಂದಿ ಪದಕಕ್ಕಾಗಿ ಸೆಣಸಾಡಲಿದ್ದಾರೆ. ಕಳೆದ ಲಾಸೆನ್ ಹಾಗೂ ದೋಹಾ ಡೈಮಂಡ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನೀರಜ್, ದ್ವಿತೀಯ ಸ್ಥಾನಿಯಾಗಿದ್ದರು. ಲಾಸೆನ್‌ನಲ್ಲಿ 89.49 ಮೀ. ಹಾಗೂ ದೋಹಾದಲ್ಲಿ 88.36 ಮೀ. ದೂರ ಜಾವೆಲಿನ್ ಎಸೆದಿದ್ದರು. ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಗೆದ್ದಿದ್ದರು.