ಚೆನ್ನೈ: ಕಾರು ಅಪಘಾತದ ಬಳಿಕ 20 ತಿಂಗಳ ಬಳಿಕ ಟೆಸ್ಟ್ ತಂಡಕ್ಕೆ ಮರಳಿರುವ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್(Rishabh Pant) ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಾಜಿ ದಿಗ್ಗಜ ಆಟಗಾರರಾದ ಕಪಿಲ್ ದೇವ್(kapil dev) ಮತ್ತು ಸೌರವ್ ಗಂಗೂಲಿ(Sourav Ganguly) ಅವರ ದಾಖಲೆಯೊಂದರ ಮೇಲೆ ಕಣ್ಣಿಟ್ಟಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದ ಬಳಿಕ ಪಂತ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡದ್ದು ಇದೇ ಮೊದಲು.
ಪಂತ್ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೂರು ಸಿಕ್ಸರ್ ಬಾರಿಸಿದರೆ ಭಾರತ ಪರ ಟೆಸ್ಟ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಗಂಗೂಲಿ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. 7 ಸಿಕ್ಸರ್ ಬಾರಿಸಿದರೆ ಕಪಿಲ್ ದೇವ್ ದಾಖಲೆ ಮುರಿಯಲಿದ್ದಾರೆ. ಸದ್ಯ ಕಪಿಲ್ ದೇವ್ 61 ಸಿಕ್ಸರ್ ಬಾರಿಸಿ 6ನೇ ಸ್ಥಾನದಲ್ಲಿದ್ದರೆ, ಗಂಗೂಲಿ 57 ಸಿಕ್ಸರ್‌ನೊಂದಿಗೆ 7ನೇ ಸ್ಥಾನದಲ್ಲಿದ್ದಾರೆ. ರಿಷಭ್ ಪಂತ್ 55 ಸಿಕ್ಸರ್ ಬಾರಿಸಿ 8ನೇ ಸ್ಥಾನಿಯಾಗಿದ್ದಾರೆ. ಕಪಿಲ್ ಮತ್ತು ಗಂಗೂಲಿಯನ್ನು ಹಿಂದಿಕ್ಕಿದ್ದರೆ 6ನೇ ಸ್ಥಾನಕ್ಕೇರಲಿದ್ದಾರೆ.
ಪಂತ್ ಭಾರತ ಪರ ಕೊನೆಯ ಬಾರಿಗೆ ಟೆಸ್ಟ್ ಪಂದ್ಯ ಆಡಿದ್ದು ಕೂಡ ಬಾಂಗ್ಲಾದೇಶ ವಿರುದ್ಧವೇ. ಇದಾದ ಬಳಿಕ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸುಮಾರು 14 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೇ ವರ್ಷ ನಡೆದಿದ್ದ 17ನೇ ಆವೃತ್ತಿಯ ಐಪಿಎಲ್ ಆಡುವ ಮೂಲಕ ಮತ್ತೆ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದರು. ಇದಾದ ಬಳಿಕ ಟಿ20 ವಿಶ್ವಕಪ್ ಕೂಡ ಆಡಿದ್ದರು.
ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಮಾಜಿ ಆಟಗಾರ ವೀರೇಂದ್ರ ಸೆಹವಾಗ್ ಹೆಸರಿನಲ್ಲಿದೆ. ಸೆಹವಾಗ್ ಒಟ್ಟು 103 ಟೆಸ್ಟ್ ಪಂದ್ಯಗಳನ್ನಾಡಿ 90 ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ ಶರ್ಮ 84 ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ(78) ಮತ್ತು ಸಚಿನ್ ತೆಂಡೂಲ್ಕರ್(69) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ IND vs BNG: ಚೆನ್ನೈಗೆ ಆಗಮಿಸಿದ ಟೀಮ್ ಇಂಡಿಯಾ
ಪಂತ್ ಭಾರತ ಪರ ಇದುವರೆಗೆ 33 ಟೆಸ್ಟ್ ಪಂದ್ಯಗಳನ್ನಾಡಿ 2271 ರನ್ ಬಾರಿಸಿದ್ದಾರೆ. 5 ಶತಕ ಮತ್ತು11 ಅರ್ಧಶತಕ ಬಾರಿಸಿದ್ದಾರೆ.
ಅಭ್ಯಾಸ ಆರಂಭಿಸಿದ ಭಾರತ
ಗುರುವಾರ ತಡರಾತ್ರಿ ಚೆನ್ನೈ ತಲುಪಿದ್ದ ಭಾರತ ತಂಡದ ಆಟಗಾರರು ಇಂದು(ಶುಕ್ರವಾರ) ಅಭ್ಯಾಸ ನಡೆಸಿದರು. ಮುಖ್ಯ ಕೋಚ್ ಗೌತಮ್ ಗಂಭೀರ್, ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮತ್ತು ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಮಾರ್ಗದರ್ಶನದಲ್ಲಿ ಆಟಗಾರರು ಎಂ ಚಿದಂಬರಂ ಸ್ಟೇಡಿಯಂನಲ್ಲಿ ಬ್ಯಾಟಿಂಗ್, ಬೌಲಿಂಗ್ ಅಭ್ಯಾಸ ನಡೆಸಿದರು. ಒಟ್ಟು 6 ದಿನಗಳ ಕಾಲ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.