Sunday, 24th November 2024

HD Kumaraswamy: ನಾಲೆಗಳಿಗೆ ಕಾವೇರಿ ನೀರು ಬಿಡದಿದ್ರೆ ನಾನೇ ಡ್ಯಾಂ ಗೇಟ್‌ ತೆರೆಯುವೆ: ಎಂಜಿನಿಯರ್‌ಗೆ ಎಚ್‌ಡಿಕೆ ಎಚ್ಚರಿಕೆ

HD Kumaraswamy

ನಾಗಮಂಗಲ: ಮಳವಳ್ಳಿ, ನಾಗಮಂಗಲ ಸೇರಿ ವಿವಿಧ ಭಾಗಗಳ ಕೆರೆ ತುಂಬಿಸದಿದ್ದರೆ, ಕೊನೆಯ ಭಾಗದ ಪ್ರದೇಶಗಳ ನಾಲೆಗೆ ನೀರು ಹರಿಸದಿದ್ದರೆ, ನಾನೇ ಬಂದು ಕೃಷ್ಣರಾಜ ಸಾಗರದ ಗೇಟ್‌ಗಳನ್ನು ಎತ್ತಿ ನೀರು ಬಿಡಬೇಕಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಎಚ್ಚರಿಕೆ ನೀಡಿದರು.

ಗಲಭೆಪೀಡಿತ ನಾಗಮಂಗಲಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು, ಮಳವಳ್ಳಿ ‌ಭಾಗಕ್ಕೆ ಇದುವರೆಗೂ ನೀರು ಕೊಟ್ಟಿಲ್ಲ. ಕುಮಾರಸ್ವಾಮಿಗೆ ವೋಟು ಹಾಕಿದ್ದೀರಿ, ನೀರು ಬೇಕಾದರೆ ಕುಮಾರಸ್ವಾಮಿಯನ್ನೇ ಹೋಗಿ ಕೇಳಿ ಎಂದು ಒಬ್ಬ ಶಾಸಕ ಹೇಳುತ್ತಿ,ದ್ದಾನೆ. ಅಣೆಕಟ್ಟೆ ಇವರ ಅಪ್ಪನ ಮನೆಯ ಆಸ್ತಿಯೇ? ರೈತರಿಗೆ ನೀರು ಕೊಡಲು ಯೋಗ್ಯತೆ ಇಲ್ಲ. ಜಲಪಾತೋತ್ಸವ ಬೇರೆ ಮಾಡುತ್ತಿದ್ದಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಕಿಡಿಕಾರಿದರು.

ಕೆರೆಕಟ್ಟೆಗಳಲ್ಲಿ ನೀರು ಇಲ್ಲ. ಮೆಟ್ಟೂರು ಜಲಾಶಯ ತುಂಬಿ ತುಳುಕುತ್ತಿದೆ. ನನ್ನನ್ನು ಭೇಟಿಯಾಗಿದ್ದ ತಮಿಳುನಾಡಿನ ಕೆಲ ನಾಯಕರು ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ ಎಂದು ಹೇಳುತ್ತಾರೆ. ನಮ್ಮಲ್ಲಿ ಮಳೆ ಇಲ್ಲದೆ ಕೆರೆಗಳು ತುಂಬಿಲ್ಲ. ಮೊದಲೇ ತುಂಬಿಸುವ ಕೆಲಸ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಸಂಜೆಯೇ ನಾನು ದೆಹಲಿಯಿಂದ ಬರುವಾಗ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಆರ್.ಎಲ್.ವೆಂಕಟೇಶ್ ಜತೆ ಮಾತನಾಡಿದ್ದೇನೆ. ಅವರಿಗೆ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದೇನೆ. ತಕ್ಷಣ ನಾಲೆಗೆ ನೀರು ಹರಿಸಿ, ಇಲ್ಲವಾದರೆ ಜನರ ಜತೆ ಬಂದು ನಾನೇ ಅಣೆಕಟ್ಟೆಯ ಗೇಟ್‌ಗಳನ್ನು, ಎತ್ತಿ ನೀರು ಬಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದೇನೆ. ತಕ್ಷಣ ಅವರು ನೀರು ಹರಿಸದಿದ್ದರೆ ನಾನೇ ರಸ್ತೆಗೆ ಇಳಿಯುತ್ತೇನೆ, ಹೇಳಿದ್ದನ್ನು ಮಾಡಿ ತೋರಿಸುತ್ತೇನೆ ಎಂದು ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟರು.

ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ: ಎಚ್‌ಡಿಕೆ ಆರೋಪ, ಸಂತ್ರಸ್ತರಿಗೆ 2 ಲಕ್ಷ ರೂ. ನೆರವು

mandya violence hd kumaraswamy 1

ಮಂಡ್ಯ: ಗಣೇಶ ಮೆರವಣಿಗೆ (Ganeshotsava) ವೇಳೆ ನಾಗಮಂಗಲ ಪಟ್ಟಣದಲ್ಲಿ (Mandya Violence, Nagamangala Violence) ನಡೆದ ಗಲಭೆ ಪೂರ್ವಯೋಜಿತ ಕೃತ್ಯ, ವ್ಯವಸ್ಥಿತ ಪಿತೂರಿ. ಅಷ್ಟೇ ಅಲ್ಲ, ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (Central Minister HD Kumaraswamy) ಅವರು ನೇರ ಆರೋಪ ಮಾಡಿದರು.

ನಾಗಮಂಗಲದ ಗಲಭೆ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ಅಂಗಡಿ, ಮಳಿಗೆಗಳನ್ನು ವೀಕ್ಷಿಸಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ವ್ಯವಸ್ಥಿತವಾಗಿ ಗಲಭೆಗಳನ್ನು ಸೃಷ್ಟಿ ಮಾಡುವುದು ಕಾಂಗ್ರೆಸ್‌ಗೆ ಕರತಲಾಮಲಕ. ಹಿಂದಿನಿಂದಲೂ ಅದನ್ನು ಮಾಡಿಕೊಂಡು ಬಂದಿದೆ. 1990ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಮನಗರ, ಚನ್ನಪಟ್ಟಣದಲ್ಲಿ ಕೋಮುಗಲಭೆ ಸೃಷ್ಟಿಸಿ ಬೆಂಕಿ ಹಾಕಲಾಯಿತು. ಅವಳಿ ಪಟ್ಟಣಗಳು ಹೊತ್ತಿ ಉರಿದವು. ಅದೇ ಮಾದರಿಯಲ್ಲಿ ನಾಗಮಂಗಲದಲ್ಲಿ ಗಲಭೆ ಎಬ್ಬಿಸಲಾಗಿದೆ. ಡಿಜಿ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟು ಸುಟ್ಟು ಹಾಕಲಾಯಿತು. ಅದಕ್ಕೂ ಕಾಂಗ್ರೆಸ್ ನಾಯಕರೇ ಕಾರಣ. ಆ ಪ್ರಕರಣದಲ್ಲಿ ಜೈಲಿಗೆ ಹೋದವರು ಏನಾಗಿದ್ದಾರೋ ಗೊತ್ತಿಲ್ಲ. ನಾಗಮಂಗಲದಲ್ಲಿ ಈಗ ಯಾವ ದುರುದ್ದೇಶ ಇಟ್ಟುಕೊಂಡು ಗಲಭೆ ಸೃಷ್ಟಿ ಮಾಡಲಾಗಿದೆಯೋ ಗೊತ್ತಿಲ್ಲ ಎಂದು ಕೇಂದ್ರ ಸಚಿವರು ಅನುಮಾನ ವ್ಯಕ್ತಪಡಿಸಿದರು.

ಇಂಥ ಗಲಾಟೆಗಳನ್ನು ಮಾಡಿಸುವುದರಲ್ಲಿ ಕಾಂಗ್ರೆಸ್ ಎಕ್ಸ್ ಪರ್ಟ್. ನಾಗಮಂಗಲದಲ್ಲಿಯೂ ಕಾಂಗ್ರೆಸ್ ಚಿತಾವಣೆಯ ಬಗ್ಗೆ ಅನುಮಾನ ಇದೆ. ಈಗ ಚನ್ನಪಟ್ಟಣದಲ್ಲಿ ಉಪ ಚುನಾವಣೆ ಬರುತ್ತಿದೆ. ಬೇರೆ ಬೇರೆ ಘಟನೆಗಳು ಕೂಡ ನಡೆಯುತ್ತಿವೆ. ಹೀಗಾಗಿ ಒಂದು ಸಮುದಾಯದ ಓಲೈಕೆ ಮಾಡಲು ಈ ಸಂಚು ರೂಪಿಸಿರಬಹುದು. ಇಡೀ ಘಟನೆಯನ್ನು ನೋಡಿದರೆ ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್ ಇರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದರು.

ಈ ಘಟನೆಗೆ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಹಾಗೂ ಸ್ಥಳೀಯ ಪೊಲೀಸರ ಕರ್ತವ್ಯ ಲೋಪವೂ ಕಾರಣ ಎಂದು ದೂರಿದ ಅವರು, ಪೊಲೀಸರು ನಿಜವಾದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆಯಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವರು ಆಗ್ರಹಿಸಿದರು.

ನೊಂದವರಿಗೆ ಆರ್ಥಿಕ ನೆರವು

ಇದೇ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಗಲಭೆಯಲ್ಲಿ ಆಸ್ತಿಪಾಸ್ತಿ, ಜೀವನೋಪಾಯ ಕಳೆದುಕೊಂಡ ಅನೇಕರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ಅವರು ಪರಿಹಾರವಾಗಿ ನೀಡಿದರು.

ಸರಕಾರ ಸರಿಯಾಗಿ ಅಂದಾಜು ಮಾಡಿ ಕನಿಷ್ಠ ಶೇ.70ರಿಂದ 80ರಷ್ಟು ಪರಿಹಾರ ಕೊಡಬೇಕು. ನಾನು ಕೊಡುವುದು ಆರಂಭದಲ್ಲಿ ಅವರ ಜೀವನೋಪಾಯಕ್ಕೆ ಮಾತ್ರ. ಅನೇಕ ವ್ಯಾಪಾರಿಗಳು ಇಡೀ ಅಸ್ತಿಯನ್ನೇ ಕಳೆದುಕೊಂಡಿದ್ದಾರೆ. ಅವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇನೆ. ಎರಡೂ ಸಮುದಾಯಗಳ ಜನರಿಗೂ ನೆರವಾಗಿದ್ದೇನೆ ಎಂದು ಅವರು ಹೇಳಿದರು.

ಈ ಸುದ್ದಿ ಓದಿ: Mandya Violence: ಮಂಡ್ಯದಲ್ಲಿ ಪೆಟ್ರೋಲ್‌ ಬಾಂಬ್‌, ತಲ್ವಾರ್! ಏನ್ರೀ ಇದೆಲ್ಲಾ ಎಂದು ಎಚ್‌ಡಿ ಕುಮಾರಸ್ವಾಮಿ ಗರಂ

ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಸೇರಿ ಅನೇಕ ಮುಖಂಡರು ಜತೆಯಲ್ಲಿ ಇದ್ದರು.