Sunday, 24th November 2024

HD Kumaraswamy: ಮಡಕಶಿರಾದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳ ಜತೆ ಚರ್ಚೆ: ಎಚ್‌ಡಿಕೆ ಭರವಸೆ

HD Kumaraswamy

ಬೆಂಗಳೂರು: ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಮಡಕಶಿರಾ (Madakashira) ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದಿಮೆದಾರರ ಜತೆ ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದರು. ನಗರದ ಜೆಡಿಎಸ್ ಕಚೇರಿಯಲ್ಲಿ (JDS Office) ಶನಿವಾರ ಬೆಳಗ್ಗೆ ತಮ್ಮನ್ನು ಭೇಟಿಯಾದ ಮಡಕಶಿರಾ ಶಾಸಕ ಎಂ.ಎಸ್. ರಾಜು ಅವರಿಗೆ ಕೇಂದ್ರ ಸಚಿವರು ಈ ಭರವಸೆ ನೀಡಿದರು.

ಮಡಕಶಿರಾದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ ಪಾವಗಡ, ಶಿರಾ, ಮಧುಗಿರಿ, ಶಿರಾ, ಹಿರಿಯೂರು ಭಾಗದ ಜನರಿಗೆ ಕೂಡ ಅನುಕೂಲ ಆಗುತ್ತದೆ. ಎಲ್ಲರಿಗೂ ಉದ್ಯೋಗ ಸಿಗುತ್ತದೆ, ಕೆಲಸಕ್ಕೆ ವಲಸೆ ಹೋಗುವುದು ತಪ್ಪುತ್ತದೆ. ಅಲ್ಲಿಗೆ ಸೂಕ್ತವಾಗುವ ಕೈಗಾರಿಕೆ ತರುವುದಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಶಾಸಕ ಎಂ.ಎಸ್. ರಾಜು ಅವರಿಗೆ ಭರವಸೆ ನೀಡಿದರು.

ಉದ್ಯಮಿಗಳ ಜತೆ ಸಮಾಲೋಚನೆ ನಡೆಸುತ್ತೇನೆ. ಹಾಗೆಯೇ ನಮ್ಮ ಇಲಾಖೆ ಹಂತದಲ್ಲಿಯೂ ಚರ್ಚೆ ಮಾಡುತ್ತೇನೆ ಎಂದ ಅವರು, ಗಡಿ ಭಾಗದಲ್ಲಿ ಕೈಗಾರಿಕೆಗಳು ಬಂದರೆ ಎಲ್ಲರಿಗೂ ಅನುಕೂಲ ಆಗುತ್ತದೆ ಎಂದು ಸಚಿವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Narendra Modi : ಪ್ರಧಾನಿ ಮೋದಿ ಮನೆಗೆ ಬಂದ ಮುದ್ದುಮುದ್ದಾದ ಹೊಸ ಅತಿಥಿ!

ಮೊದಲಿನಿಂದಲೂ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಅಭಿವೃದ್ಧಿ ಪರವಾದ ದೊಡ್ಡ ಕೊಡುಗೆ ನೀಡಿದ್ದಾರೆ. ವೈಜಾಗ್ ಉಕ್ಕು ಘಟಕದ ಪುನರುದ್ಧಾರಕ್ಕೆ ನಾನು ಪ್ರಯತ್ನ ಮಾಡುತ್ತಿರುವುದು ನಿಮಗೆ ಗೊತ್ತೇ ಇದೆ. ಹನ್ನೆರಡು ವರ್ಷ ನಿರಂತರವಾಗಿ ಲಾಭದಲ್ಲಿದ್ದ ಈ ಕಾರ್ಖಾನೆ ಈಗ ನಷ್ಟದಲ್ಲಿದೆ. ಅದಕ್ಕೆ ಮರುಜೀವ ಕೊಡುವುದಕ್ಕೆ ನಾನು ಪ್ರಯತ್ನ ಮಾಡುತ್ತಿದ್ದೇನೆ. ಅದೇ ರೀತಿ ಮಡಕಶಿರಾ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನ ನಡೆಸುವೆ ಎಂದು ತಿಳಿಸಿದರು.

ನಾನು ಕೇಂದ್ರದ ಉಕ್ಕು ಖಾತೆ ಸಚಿವನಾದ ಮೇಲೆ ಆ ಕಾರ್ಖಾನೆಯ ವೈಜಾಗ್ ಸ್ಟೀಲ್ ಪುನರುಜ್ಜೀವನಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಅದು ಸವಾಲಿನ ಕೆಲಸ ಎನ್ನುವುದು ಗೊತ್ತಿದೆ. ಆದರೂ ನರೇಂದ್ರ ಮೋದಿ ಅವರ ಬೆಂಬಲದ ಜತೆಯಲ್ಲಿ ನಾನು ಮುಂದುವರಿದಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.

ಮಡಕಶಿರಾ ಶಾಸಕ ಎಂ.ಎಸ್. ರಾಜು ಮಾತನಾಡಿ, ಮಡಕಶಿರಾ ಮತ್ತು ಸುತ್ತಮುತ್ತಲ ಪ್ರದೇಶದ ಸುಮಾರು 40,000 ಕ್ಕೂ ಹೆಚ್ಚು ನಮ್ಮ ಭಾಗದ ಬಡ ಯುವಕರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. 3000 ಎಕರೆ ಜಾಗ ಇದೆ, ಪೆನುಗೊಂಡ ಹೆದ್ದಾರಿ ಬಳಿಯೂ ಜಾಗ ಇದೆ. ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಅನುಕೂಲವಾದ ಜಾಗ ಇದೆ. ಕೈಗಾರಿಕೆ ಕ್ಲಸ್ಟರ್ ಮಾಡಿದರೆ ಮಡಕಶಿರಾ ಸೇರಿ ಅಲ್ಲಿ ನಮ್ಮ ಗಡಿಗೆ ಹೊಂದಿಕೊಂಡಿರುವ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಬಡ ಯುವಕರಿಗೆ ಅನುಕೂಲ ಆಗುತ್ತದೆ. ಮಡಕಶಿರಾ ಜತೆಗೆ ಪಾವಗಡ, ಶಿರಾ, ಮಧುಗಿರಿ, ಹಿರಿಯೂರು ಭಾಗದ ಯುವಕರಿಗೆ ಉದ್ಯೋಗ ದೊರೆಯುತ್ತದೆ ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದರು.

ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಪಾವಗಡ ಹತ್ತಿರವೇ 1600 ಎಕರೆ ಭೂಮಿ ಇದೆ. ಕೈಗಾರಿಕೆ ಸ್ಥಾಪನೆ ಮಾಡಿದರೆ ಅಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಅವರು ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ | World First Aid Day: ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಹೇಗಿರಬೇಕು? ವೈದ್ಯರು ಹೇಳುವುದೇನು?

ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಕೆ.ಎನ್. ತಿಪ್ಪೇಸ್ವಾಮಿ, ಮಾಜಿ ಶಾಸಕ ತಿಮ್ಮರಾಯಪ್ಪ, ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಂಜಿನಪ್ಪ ಸೇರಿದಂತೆ ಇತರರು ಹಾಜರಿದ್ದರು.