Sunday, 15th December 2024

World First Aid Day: ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಹೇಗಿರಬೇಕು? ವೈದ್ಯರು ಹೇಳುವುದೇನು?

World First Aid Day

ಬೆಂಗಳೂರು: ಪ್ರತಿ ವರ್ಷ ಸೆಪ್ಟೆಂಬರ್‌ ತಿಂಗಳ ಎರಡನೇ ಶನಿವಾರದಂದು ವಿಶ್ವ ಪ್ರಥಮ ಚಿಕಿತ್ಸಾ ದಿನವನ್ನು (World First Aid Day) ಆಚರಿಸಲಾಗುತ್ತದೆ. ಜನರಲ್ಲಿ ಪ್ರಥಮ ಚಿಕಿತ್ಸೆಯ (First Aid) ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ನಮ್ಮ ದೈನಂದಿನ ಬದುಕಿನಲ್ಲಿ ಮಾನವನ ಜೀವಕ್ಕೆ ಕುತ್ತು ತರುವ ಅನೇಕ ಸಂದರ್ಭಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಅಂತಹ ಸಂದರ್ಭವನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ನಾವು ಮೊದಲು ತಿಳಿಯಬೇಕು.

ಘಟನೆ ಸಂಭವಿಸಿದ ನಂತರದ 1 ಗಂಟೆಯ ಅವಧಿಯನ್ನು ಗೋಲ್ಡನ್‌ ಸಮಯ/ಸುವರ್ಣ ಸಮಯ (Golden Hour) ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಸರಿಯಾದ ಕ್ರಮ ತೆಗೆದುಕೊಂಡಲ್ಲಿ ಮಾತ್ರ ಒಂದು ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ತುರ್ತುನಿಗಾ ಘಟಕದ ಮುಖ್ಯಸ್ಥೆ ಡಾ. ಶೃತಿ ಭಾಸ್ಕರನ್.

ಡಾ. ಶೃತಿ ಭಾಸ್ಕರನ್.

ನಮ್ಮ ಅನೇಕ ಹಳ್ಳಿಗಳಲ್ಲಿ, ಗುಡ್ಡಗಾಡುಗಳಲ್ಲಿ ವಾಸವಾಗಿರುವ ಜನರಿಗೆ ವೈದ್ಯಕೀಯ ಸೇವೆಗಳು ಎಲ್ಲಾ ಸಂದರ್ಭಗಳಲ್ಲೂ ಲಭ್ಯವಿರುವುದಿಲ್ಲ. ಗಾಯ, ಇತರೆ ರೋಗರುಜಿನಗಳು ಹಾಗೂ ಅನೇಕ ಅವಘಡಗಳು ಸಂಭವಿಸಿದ ವೇಳೆ ಏನು ಮಾಡಬೇಕು ಎಂದು ತೋಚದೆ ಕಂಗಾಲಾದ ಪರಿಸ್ಥಿತಿಗಳು ಎದುರಾಗಿವೆ.

ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಯಾರಿಗಾದರೂ ಗಾಯವಾದಲ್ಲಿ, ಚರ್ಮ ಹರಿದು ರಕ್ತಸ್ರಾವ ಉಂಟಾದಲ್ಲಿ ಕೂಡಲೇ ಪ್ರಥಮ ಚಿಕಿತ್ಸೆ ನೀಡುವುದು ಮುಖ್ಯ. ಒಂದು ವೇಳೆ ಚಿಕಿತ್ಸೆ ತೆಗೆದುಕೊಳ್ಳಲು ವಿಫಲವಾದಲ್ಲಿ ಅದು ದೀರ್ಘಕಾಲದ ಸಮಸ್ಯೆಗೆ ಎಡೆಮಾಡಿಕೊಡುವ ಸಾಧ್ಯತೆಗಳಿರುತ್ತವೆ.

ವಿವಿಧ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಹೇಗಿರಬೇಕು?

ನಮ್ಮ ಕಣ್ಣೆದುರು ಯಾರಾದರು ತಲೆ ಸುತ್ತಿ ಬೀಳುವಂತದ್ದು ಅಥವಾ ಮೆದುಳಿನ ರಕ್ತಸ್ರಾವವಾಗುವುದು, ಪಾರ್ಶ್ವವಾಯುಗಳಂತಹ ಸಮಸ್ಯೆಯನ್ನು ಎದುರಿಸುತ್ತಿರುವುದು ಕಂಡುಬಂದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸಮಸ್ಯೆಗೆ ಒಳಗಾದವರ ನಾಡಿ ಮಿಡಿತ ಪರೀಕ್ಷಿಸುವ ಮೂಲಕ ಉಸಿರಾಡುತ್ತಿದ್ದಾರೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ಹೃದಯಾಘಾತ ಅಥವಾ ಪಾರ್ಶ್ವವಾಯು ಪ್ರಕರಣಗಳಲ್ಲಿ ಪ್ರತಿಯೊಂದು ನಿಮಿಷವು ನಿರ್ಣಾಯಕವಾಗಿರುತ್ತದೆ. ಹೀಗಾಗಿ ರೋಗಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯವಶ್ಯಕ. ಘಟನೆ ಸಂಭವಿಸಿದ ಒಂದು ಗಂಟೆಯೊಳಗೆ ರೋಗಿಗೆ ಚಿಕಿತ್ಸೆ ನೀಡಿದರೆ ಆತನ ಪರಿಸ್ಥಿತಿಯನ್ನು ವೈದ್ಯರು ಅವಲೋಕಿಸಲು ಸಾಧ್ಯವಾಗುತ್ತದೆ. ಹೃದಯಾಘಾತ ಪ್ರಕರಣಗಳಲ್ಲಿ ಸಿಪಿಆರ್‌ ಮಾಡುವುದು ರೋಗಿಯ ಜೀವದ ನಿರ್ಣಾಯಕ ಘಟನೆಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ತಡವಾದ ಚಿಕಿತ್ಸೆ ಮತ್ತು ಮನೆಮದ್ದುಗಳಿಂದಾಗುವ ಸಮಸ್ಯೆಗಳು

ರೋಗಿಗೆ ಕೂಡಲೇ ಪ್ರಥಮ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಮನೆಮದ್ದುಗಳ ಬಳಕೆಯಿಂದಾಗುವ ದುಷ್ಪಪರಿಣಾಮಗಳನ್ನು ತಿಳಿಯುವುದು ಕೂಡ. ನಾವೆಲ್ಲಾ ಏನಾದರು ಸಮಸ್ಯೆ ಬಂದಾಗ ಮನೆಮದ್ದುಗಳ ಮೊರೆ ಹೋಗುತ್ತೇವೆ. ಮನೆಮದ್ದುಗಳು ತಾತ್ಕಾಲಿಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಹುದು, ಆದರೆ ಅದು ದೀರ್ಘಕಾಲದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಎನ್ನುವುದೂ ಅಷ್ಟೇ ಸತ್ಯ.

ಇಂದಿನ ದಿನಗಳಲ್ಲಿ H1N1 ನಂತಹ ವೈರಲ್ ಸೋಂಕುಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಕೆಮ್ಮು, ಜ್ವರದ ಲಕ್ಷಣಗಳನ್ನು ಹೊಂದಿರುತ್ತದೆ. ಆದರೆ ಈ ಬಗ್ಗೆ ಸರಿಯಾಗಿ ತಿಳಿಯದೆ ಮನೆಮದ್ದುಗಳನ್ನು ಪ್ರಯೋಗಿಸುತ್ತೇವೆ. ಆದರೆ ಈ ವೇಳೆ ಆಮ್ಲಜನಕದ ಮಟ್ಟವು ರೋಗಿಯ ಅರಿವಿಲ್ಲದೇ ಕುಸಿಯುತ್ತಾ ಹೋಗುತ್ತದೆ. ಹಾಗಾಗಿ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳದೆ ಇದ್ದರೆ ಸಮಸ್ಯೆ ಇನ್ನಷ್ಟು ಗಂಭೀರವಾಗಲು ಕಾರಣವಾಗಬಹುದು.

ಕೆಲವೊಮ್ಮೆ ನಮ್ಮ ದೇಹದಲ್ಲಿ ಗಾಯಗಳಾದಾಗ ಅರಿಶಿಣ ಹಚ್ಚುವುದು ಅಥವಾ ಇತರೆ ಮನೆಮದ್ದುಗಳನ್ನು ಪ್ರಯೋಗಿಸುತ್ತೇವೆ ಆದರೆ ಅದೊಂದು ತಪ್ಪು ಪ್ರಕ್ರಿಯೆ. ಗಾಯಕ್ಕೆ ಯಾವುದೇ ಮನೆಮದ್ದನ್ನು ಪ್ರಯೋಗಿಸುವ ಬದಲು ಹರಿಯುವ ನೀರಿನಿಂದ ಗಾಯದ ಸ್ಥಳವನ್ನು ಮೊದಲು ಸ್ವಚ್ಛಗೊಳಿಸಬೇಕು. ತದನಂತರ ಗಾಯದ ಸ್ಥಳವನ್ನು ಸ್ವಚ್ಛವಾದ ಬಟ್ಟೆಯಿಂದ ಮುಚ್ಚಿ ವೈದ್ಯಕೀಯ ಆರೈಕೆ ಪಡೆಯುವುದು ಉತ್ತಮ. ಆರೋಗ್ಯಕ್ಕೆ ಅಪಾಯ ಒದಗಿದ ಸಂದರ್ಭಗಳಲ್ಲಿ ಯಾವುದೇ ರೀತಿಯ ಮನೆಮದ್ದುಗಳ ಬಳಕೆ ಉತ್ತಮವಲ್ಲ ಎಂದು ವೈದ್ಯೆ ಶೃತಿ ಭಾಸ್ಕರನ್ ವಿವರಿಸುತ್ತಾರೆ.

ಈ ಸುದ್ದಿಯನ್ನೂ ಓದಿ | Mpox Vaccine : ಮಂಕಿ ಪಾಕ್ಸ್‌ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಒಪ್ಪಿಗೆ

ಓದುಗರಿಗೆ ವೈದ್ಯರ ಸಲಹೆ ಏನು?

ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ರೋಗಿಯು ಅಂತರ್ಜಾಲದಲ್ಲಿ ತಮ್ಮ ರೋಗಲಕ್ಷಣಗಳ ಕುರಿತಾಗಿ ಪರಿಶೀಲಿಸಲು ಮುಂದಾಗುತ್ತಾರೆ. ತದನಂತರ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ತೊಡಗುತ್ತಾರೆ. ಆದರೆ ವಾಸ್ತವವಾಗಿ ನಿಖರವಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಸುವರ್ಣ ಸಮಯ/ಗೋಲ್ಡನ್‌ ಸಮಯದಲ್ಲಿ ಸಮಯೋಚಿತ ಪ್ರಥಮ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ತುರ್ತು ಪರಿಸ್ಥಿತಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಜತೆಗೆ ವೃತ್ತಿಪರ ತಜ್ಞರ ಸಲಹೆ ತೆಗೆದುಕೊಳ್ಳುವುದು ಮುಖ್ಯವಾದುದು ಎಂದು ವಾಸವಿ ಆಸ್ಪತ್ರೆಯ ವೈದ್ಯೆ ಶೃತಿ ಭಾಸ್ಕರನ್ ಸಲಹೆ ನೀಡಿದ್ದಾರೆ.