Friday, 22nd November 2024

Pralhad Joshi: ಕೆಎಂಎಫ್‌ ಕೂಡ ಸರ್ಕಾರದಂತೆ ದಿವಾಳಿ ಹಾದಿಯಲ್ಲಿ; ನಂದಿನಿ ಹಾಲಿನ ದರ ಏರಿಕೆಗೆ ಜೋಶಿ ಆಕ್ರೋಶ

Pralhad Joshi

ಹುಬ್ಬಳ್ಳಿ: ಭ್ರಷ್ಟಾಚಾರ (Corruption) ಮತ್ತು ಹಗರಣಗಳಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಕಂಡಿದೆ. ಈಗ ಕೆಎಂಎಫ್‌ (KMF) ಕೂಡ ಅದೇ ಹಾದಿಯಲ್ಲಿ ಸಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ನಂದಿನಿ ಹಾಲಿನ (Nandini Milk) ದರ ಹೆಚ್ಚಳ ಬಗ್ಗೆ ಪ್ರತಿಕ್ರಿಯಿಸಿದರು.

ಇವರು ವರ್ಷದಲ್ಲಿ ಅದೆಷ್ಟು ಬಾರಿ ಹಾಲಿನ ದರ ಹೆಚ್ಚಳ ಮಾಡುತ್ತಾರೆ? ಎರಡು ತಿಂಗಳ ಹಿಂದಷ್ಟೇ ಬೆಲೆ ಹೆಚ್ಚಳ ಮಾಡಿದ್ದಾರೆ. ಈಗ ಮತ್ತೆ ಬೆಲೆ ಏರಿಕೆಯೇ ಎಂದು ಪ್ರಶ್ನಿಸಿದ ಅವರು, ಈ ಬಾರಿ ಹೆಚ್ಚಿಸುವ ಹಾಲಿನ ದರ ರೈತರಿಗೆ ಅನ್ನೋದು ಒಂದು ನೆಪ ಅಷ್ಟೇ. ಆರ್ಥಿಕ ದಿವಾಳಿ ಎದ್ದಿರುವ ಸರ್ಕಾರ ಆದಾಯಕ್ಕೆ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಪಾಕಿಸ್ತಾನ ಮಾದರಿ ಆಡಳಿತ, ಈ ಸರ್ಕಾರ ಬಹಳ ದಿನ ಇರಲ್ಲ: ಪ್ರಲ್ಹಾದ್‌ ಜೋಶಿ ಕಿಡಿ

ರೈತ-ಗ್ರಾಹಕರಿಗೆ ಬರೆ

ಹಿಂದೆ ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಇದ್ದ ಬೆಲೆಯಲ್ಲೇ ರೈತರಿಗೆ ಅಧಿಕ ದರ ಕೊಡುತ್ತಿದ್ದರು. ಗ್ರಾಹಕರಿಗೆ ಬರೆ ಎಳೆಯುತ್ತಿರಲಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರ ಇತ್ತ ಗ್ರಾಹಕರು ಮತ್ತು ರೈತರು ಇಬ್ಬರಿಗೂ ಬರೆ ಎಳೆಯುತ್ತಿದೆ ಎಂದು ಅವರು ಆರೋಪಿಸಿದರು.

ಪ್ರೋತ್ಸಾಹ ಧನ ಬಂದ್

ರಾಜ್ಯದಲ್ಲಿ ಯಡಿಯೂರಪ್ಪ ಅವರು 4 ರೂಪಾಯಿ ಪ್ರೋತ್ಸಾಹಧನ ಕೊಟ್ಟರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ದರವನ್ನೇ ಕೊಟ್ಟಿಲ್ಲ. ಅದನ್ನೂ ಬಂದ್ ಮಾಡಿದ್ದಾರೆ ಇವರು ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ 3 ತಿಂಗಳೂ ಹಣ ಕೊಡಲ್ಲ

ರೈತರಿಗೆಂದು ಹೆಚ್ಚಿಸುವ ಹಾಲಿನ ದರದ ಮೊತ್ತವನ್ನು ಈ ಸರ್ಕಾರ ರೈತರಿಗೆ ಮೂರು ತಿಂಗಳೂ ಕೊಡಲ್ಲ. ಸುಮ್ಮನೇ ರೈತರ ನೆಪವೊಡ್ಡಿ ಗ್ರಾಹಕರ ಕಣ್ಣಿಗೆ ಮಣ್ಣೆರೆಚುತ್ತಿದೆ ಎಂದು ದೂರಿದರು.

ಸಂಪೂರ್ಣ ಭ್ರಷ್ಟಾಚಾರ

ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಯುಪಿಎ ಸರ್ಕಾರದಂತೆ ಇದೂ ದಿನಕ್ಕೊಂದು ಹಗರಣದಲ್ಲಿ ತೊಡಗಿದೆ ಎಂದು ಕಿಡಿಕಾರಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ಬ್ರದರ್‌ಗಳ ಹಿನ್ನೆಲೆ ಜಗತ್ತಿಗೇ ಗೊತ್ತಿದೆ: ಡಿ.ಕೆ.ಸುರೇಶ್‌ಗೆ ತಿರುಗೇಟು ಕೊಟ್ಟ ಎಚ್.ಡಿ.ಕೆ

ದೇಶದಲ್ಲಿ ಭ್ರಷ್ಟಾಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೊಡೆದಾಡುತ್ತ ಶುದ್ಧ ಆಡಳಿತ ನೀಡುತ್ತಿದ್ದರೆ, ಇಲ್ಲಿ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ, ಮೂಡಾ ಹೀಗೆ ಹಗರಣಗಳ ಸರಮಾಲೆ ಹೋದ್ದುಕೊಂಡಿದೆ ಎಂದು ಪ್ರಲ್ಹಾದ್‌ ಜೋಶಿ ವಾಗ್ದಾಳಿ ನಡೆಸಿದರು.