Thursday, 19th September 2024

MLA Munirathna: ಬಿಜೆಪಿ ಶಾಸಕ ಮುನಿರತ್ನ 2 ದಿನ ಪೊಲೀಸ್​ ಕಸ್ಟಡಿಗೆ

Munirathna

ಬೆಂಗಳೂರು: ಕೊಲೆ ಬೆದರಿಕೆ, ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬಿಜೆಪಿ ಶಾಸಕ ಮುನಿರತ್ನ (MLA Munirathna) ಅವರನ್ನು ನ್ಯಾಯಾಧೀಶರು ಎರಡು ದಿನ ಪೊಲೀಸ್​ ಕಸ್ಟಡಿಗೆ ನೀಡಿದ್ದಾರೆ. ಶನಿವಾರ ಪೊಲೀಸರು ಮುನಿರತ್ನ ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಬಳಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದರು.

ಶನಿವಾರ ರಾತ್ರಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಬಳಿಕ ಅವರನ್ನು ಅಶೋಕನಗರ ಠಾಣೆಗೆ ಪೊಲೀಸರು ಕರೆದೊಯ್ದರು. ಅಲ್ಲಿಂದ ಜಡ್ಜ್‌ ನಿವಾಸಕ್ಕೆ ಹಾಜರುಪಡಿಸಲಾಯಿತು.

ಶಾಸಕ ಮುನಿರತ್ನರನ್ನು ಬಂಧಿಸಿರುವ ವಿಷಯ ತಿಳಿದು ಶಾಸಕರ ನೂರಾರು ಅಭಿಮಾನಿಗಳು, ವೈಯಾಲಿಕಾವಲ್‌ ಠಾಣೆ ಎದುರು ಸಂಜೆ ಜಮಾಯಿಸಿ, ಭಾರಿ ಹೈಡ್ರಾಮಾ ಸೃಷ್ಟಿಸಿದರು. ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ದೂರುದಾರರ ವಿರುದ್ಧ ಪ್ರತಿದೂರು

ಶಾಸಕ ಮುನಿರತ್ನ ಅವರ ವಿರುದ್ಧ ಸುಳ್ಳು ದೂರು ನೀಡಲಾಗಿದೆ. ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಹೀಗಾಗಿ ಮುನಿರತ್ನ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ವೈಯಾಲಿಕಾವಲ್‌ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದೇವೆ. ಪ್ರಕರಣದಲ್ಲಿ ನಾವು ಹೈಕೋರ್ಟ್‌ ಮೊರೆ ಹೋಗುತ್ತೇವೆ ಎಂದು ಮುನಿರತ್ನ ಪರ ವಕೀಲ ಸದಾನಂದ ಶಾಸ್ತ್ರಿ ಹೇಳಿದರು.

ಮುನಿರತ್ನಗೆ ಬಿಜೆಪಿ ನೋಟಿಸ್‌

ಕೊಲೆ ಬೆದರಿಕೆ, ಜಾತಿ ನಿಂದನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ಶಾಸಕ ಮುನಿರತ್ನಗೆ ನೋಟಿಸ್‌ ನೀಡಲಾಗಿದೆ. ನೀವು ಮಾತನಾಡಿರುವುದು ಎನ್ನಲಾದ ಅವಾಚ್ಯ ಪದ ಬಳಕೆಯ ಆಡಿಯೊ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಬಗ್ಗೆ 5 ದಿನಗಳಲ್ಲಿ ಸ್ಪಷ್ಟನೆ ನೀಡಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಏನಿದು ಘಟನೆ?

ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ (Munirathna) ವಿರುದ್ದ ಸೆ.14ರಂದು ವೈಯಾಲಿಕಾವಲ್‌ ಠಾಣೆಯಲ್ಲಿ ಎರಡು ಎಫ್‌ಐಆರ್‌ ದಾಖಲಾಗಿತ್ತು. ಕಸ ನಿರ್ವಹಣೆ ಹಾಗೂ ವಿಲೇವಾರಿ ಸಂಬಂಧ 30 ಲಕ್ಷ ಲಂಚ ನೀಡುವಂತೆ ಒತ್ತಾಯಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ದೂರು ನೀಡಿದ್ದರು. ಹೀಗಾಗಿ ವೈಯಾಲಿಕಾವಲ್‌ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಇನ್ನು ಜಾತಿ ನಿಂದನೆ ಮಾಡಿದ್ದಾರೆ ಎಂದು ವೇಲುನಾಯಕ್‌ ಎಂಬುವವರು ನೀಡಿದ ದೂರಿನ ಮೇರೆಗೆ ಇದೇ ಠಾಣೆಯಲ್ಲಿ ಮುನಿರತ್ನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಗುತ್ತಿಗೆದಾರ ನೀಡಿದ ದೂರಿನ ಮೇರೆಗೆ ಸರ್ಕಾರಿ ಅಧಿಕಾರಿ ವಿಜಯ್‌ ಕುಮಾರ್‌, ಕಾರ್ಯದರ್ಶಿ ಅಭಿಷೇಕ್, ಶಾಸಕರ ಆಪ್ತ ವಸಂತ ಕುಮಾರ್‌ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾದ ಮೇಲೆ ಶಾಸಕ ಮುನಿರತ್ನ ತಲೆಮರೆಸಿಕೊಂಡಿದ್ದರು. ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು, ಲೋಕೇಶನ್‌ ಆಧರಿಸಿ ತೆರಳಿ, ಕೋಲಾರದ ನಂಗಲಿ ಬಳಿ ವಶಕ್ಕೆ ಪಡೆದಿದ್ದರು. ಆಂಧ್ರದ ಚಿತ್ತೂರಿಗೆ ತೆರಳಲು ಕಾರಿನಲ್ಲಿ ಶಾಸಕ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಸುದೀರ್ಘ ವಿಚಾರಣೆ ನಡೆಸಿ ಶಾಸಕನನ್ನು ಬಂಧಿಸಿದ್ದರು.

ಈ ಸುದ್ದಿಯನ್ನೂ ಓದಿ: R Ashok: ಶಾಸಕ ಮುನಿರತ್ನ ಬಂಧನ ದ್ವೇಷದ ರಾಜಕಾರಣ ಎಂದ ಆರ್.ಅಶೋಕ್‌